- ಪಂಜಾಬ್- ಹರಿಯಾಣ ಹೈಕೋರ್ಟ್ ಮೂಲಕ ಮೇಲ್ಮನವಿ ಸಲ್ಲಿಸಿದ್ದ ಪತಿ
- ಪತ್ನಿಗೆ ಪ್ರತಿ ತಿಂಗಳು ₹5 ಸಾವಿರ ನೀಡಲು ಆದೇಶಿಸಿದ್ದ ವಿಚಾರಣಾ ನ್ಯಾಯಾಲಯ
ವಿಚ್ಛೇದನ ಪ್ರಕರಣವೊಂದರಲ್ಲಿ ಪಂಜಾಬ್- ಹರಿಯಾಣ ಹೈಕೋರ್ಟ್ ಶನಿವಾರ (ಏಪ್ರಿಲ್ 1) ಮಹತ್ತರ ತೀರ್ಪೊಂದನ್ನು ನೀಡಿದೆ.
ಸಂದೀಪ್ ವಿ ಸುಮನ್ ಎಂಬುವವರ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಎಸ್ ಮದನ್ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದೆ.
ಭಿಕ್ಷುಕ ಸಂದೀಪ್ ತನ್ನ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪರಿಷ್ಕರಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಬದುಕನ್ನು ನಡೆಸಲು ಸಾಧ್ಯವಾಗದ ಪತ್ನಿಗೆ ಪತಿಯು ತನ್ನ ವೃತ್ತಿಯನ್ನು ಪರಿಗಣಿಸದೆ ಆಕೆಯನ್ನು ಸಲಹುವ ನೈತಿಕ ಮತ್ತು ಕಾನೂನಾತ್ಮಕ ಬದ್ಧತೆ ಹೊಂದಿರುತ್ತಾನೆ ಎಂದು ಅಭಿಪ್ರಾಯಪಟ್ಟ ಪಂಜಾಬ್-ಹರಿಯಾಣ ಹೈಕೋರ್ಟ್ ಪೀಠ ಪತಿಯ ಅರ್ಜಿಯನ್ನು ವಜಾಗೊಳಿಸಿತು.
ಇತ್ತೀಚಿನ ದಿನಗಳಲ್ಲಿ ಒಬ್ಬ ಕೂಲಿ ಕಾರ್ಮಿಕ ಸಹ ದಿನಕ್ಕೆ ₹500 ಅಥವಾ ಹೆಚ್ಚಿನ ಹಣ ಸಂಪಾದಿಸಬಹುದು. ಆದ್ದರಿಂದ ಪತ್ನಿ ಜೀವನಾಂಶಕ್ಕೆ ಆದೇಶಿಸಿರುವ ಮೊತ್ತವು ಹೆಚ್ಚಿನದಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಪತ್ನಿಗೆ ಆದಾಯದ ಯಾವುದೋ ಮೂಲವಿದೆ ಅಥವಾ ಜೀವನ ನಡೆಸುವಷ್ಟು ಆಸ್ತಿಯಿದೆ ಎಂದು ಸಾಬೀತುಪಡಿಸಲು ಪತಿ ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಉಲ್ಲೇಖಿಸಿತು.
ಪತ್ನಿಯನ್ನು ಸಲಹಲು ಪತಿಯು ಕಾನೂನು ಮತ್ತು ನೈತಿಕ ಹೊಣೆಗಾರನಾಗಿರುತ್ತಾನೆ. ಈ ನಿಟ್ಟಿನಲ್ಲಿ ಪತ್ನಿಗೆ ಜೀವನಾಂಶ ನೀಡಲು ಹೇಳುವ ವಿಚಾರಣಾ ನ್ಯಾಯಾಲಯದ ಆದೇಶ ಸಮಂಜಸವಾಗಿದೆ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್ ಪೀಠ ತಿಳಿಸಿದೆ.
ಏನಿದು ಪ್ರಕರಣ ?
ವಿಚ್ಛೇದನ ಅರ್ಜಿ ಸಲ್ಲಿಸಿದ್ದ ಪತ್ನಿ, 1955ರ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24ರ ಅಡಿ ತಮಗೆ ಪತಿ ಜೀವನಾಂಶ ರೂಪದಲ್ಲಿ ಪ್ರತಿ ತಿಂಗಳು ₹ 15 ಸಾವಿರ ಮತ್ತು ವಿಚ್ಛೇಧನ ಪ್ರಕರಣದಲ್ಲಿ ವ್ಯಾಜ್ಯಗಳ ವೆಚ್ಚವಾಗಿ ₹11 ಸಾವಿರ ನೀಡಬೇಕು ಎಂದು ಕೋರಿದ್ದರು.
ಈ ಸುದ್ದಿ ಓದಿದ್ದೀರಾ? ಅದಾನಿ ಸಮೂಹ ವಹಿವಾಟಿನಲ್ಲಿ ನಿಯಮಗಳ ಉಲ್ಲಂಘನೆ; ಸೆಬಿ ತನಿಖೆ
ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಪತ್ನಿಗೆ ಪ್ರತಿ ತಿಂಗಳು ₹5 ಸಾವಿರ ಜೀವನಾಂಶ ನೀಡಲು ಪತಿಗೆ ಸೂಚಿಸಿತ್ತು. ಪ್ರತಿ ಬಾರಿ ವಿಚಾರಣೆಗೆ ಹಾಜರಾತಿಗಾಗಿ ₹500 ಸೇರಿದಂತೆ ವ್ಯಾಜ್ಯ ವೆಚ್ಚವಾಗಿ ಆಕೆಗೆ ₹5,500 ಪಾವತಿಸುವಂತೆ ಪತಿಗೆ ವಿಚಾರಣಾ ನ್ಯಾಯಾಲಯ ನಿರ್ದೇಶಿಸಿತ್ತು.
ಈ ಆದೇಶವನ್ನು ಪತಿ ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.