ಪಶ್ಚಿಮ ಬಂಗಾಳದ ಕೋಲ್ಕತಾದ ನಗರದ ಕೆಮ್ಯಾಕ್ ಸ್ಟ್ರೀಟ್ನಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಯಲ್ಲಿ ಅನಧಿಕೃತ ಬೋರ್ಡ್ ತೆರವುಗೊಳಿಸುವ ವೇಳೆ ನಡೆದ ಗಲಾಟೆ ಮತ್ತು ಸಂಘರ್ಷಕ್ಕೆ ಸಂಬಂಧಿಸಿದಂತೆ, ಕೋಲ್ಕತಾ ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಆಗಸ್ಟ್ 27 ರಂದು ಕೋಲ್ಕತಾ ಪಾಲಿಕೆ (ಕೆಎಂಸಿ) ಅಧಿಕಾರಿಗಳು ಹಾಗೂ ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಕಟ್ಟಡದ ಮೇಲಿದ್ದ ಟಿಎಂಸಿ ಜಾಹೀರಾತು ಫ್ಲೆಕ್ಸ್ ಅನ್ನು ಅನಧಿಕೃತವೆಂದು ತೆರವುಗೊಳಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿ, ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು.
ಇದನ್ನೂ ಓದಿ: ಅಭಿಷೇಕ್ ನನ್ನ ಮಗನಂತೆ, ಕ್ಷಮಿಸುವುದು ತಂದೆಯ ಕರ್ತವ್ಯ: ಕಲ್ಯಾಣ್ ಬ್ಯಾನರ್ಜಿ ಯೂಟರ್ನ್
ಘಟನೆಗೆ ಸಂಬಂಧಿಸಿದಂತೆ ಶೇಕ್ಸ್ಪಿಯರ್ ಸರಣಿ ಪೊಲೀಸ್ ಠಾಣೆಯಲ್ಲಿ ಒಟ್ಟು 3 ಎಫ್ಐಆರ್ಗಳು ದಾಖಲಾಗಿದ್ದು, ಇದರಲ್ಲಿ ಎರಡರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಆರೋಪಿಯನ್ನಾಗಿ ಸೇರಿಸಲಾಗಿದೆ. ರಾಜ್ಯಸಭಾ ಸಂಸದ ಡೆರೆಕ್ ಒಬ್ರೇನ್ ಸೇರಿದಂತೆ ಹಲವು ಪ್ರಮುಖ ನಾಯಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಸಾಂಘಿಕ ಘರ್ಷಣೆ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಮಂದಿಯನ್ನು ಬಂಧಿಸಲಾಗಿದೆ.
ಶನಿವಾರ ತಡರಾತ್ರಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿದ ಪೊಲೀಸರು ನೋಟಿಸ್ ತಲುಪಿಸಿದ್ದು, ಸೆಪ್ಟೆಂಬರ್ 1ರಂದು ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇನ್ನೊಂದೆಡೆ ಈ ಕ್ರಮವನ್ನು ವಿರೋಧಿಸಿರುವ ಟಿಎಂಸಿ ನಾಯಕರು, ಯಾವುದೇ ಸೂಕ್ತ ಮುನ್ಸೂಚನೆ ಇಲ್ಲದೆ ಪೊಲೀಸರು ಕಚೇರಿಗೆ ಅಕ್ರಮವಾಗಿ ನುಗ್ಗಿದ್ದಾರೆ ಹಾಗೂ ಇದು ಬಿಜೆಪಿ ಸರ್ಕಾರದ ರಾಜಕೀಯ ಸೇಡಿನ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಕಾನೂನುಬದ್ಧವಾಗಿಯೇ ತೆರವು ಕಾರ್ಯಾಚರಣೆಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.




