ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯತೆಯಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಹೇಳಿದರು.
ಮಡಿಕೇರಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸ್ಪಂದನೆ ದೊರೆಯದಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದರು.
ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳಲ್ಲಿ 237 ಪ್ರಕರಣಗಳನ್ನು ದಾಖಲಿಸಿ, 333 ಆರೋಪಿಗಳನ್ನು ಬಂಧಿಸಲಾಗಿದೆ. ಹಾಡಿ ಪ್ರದೇಶಗಳು ಸೇರಿದಂತೆ ವಿವಿಧೆಡೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ತಿಂಗಳು ಪೊಲೀಸ್ ಠಾಣೆಗಳಲ್ಲಿ ಪ್ಲಾಂಟರ್ಸ್ ಮತ್ತು ತೋಟ ಮಾಲೀಕರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಹೊರ ರಾಜ್ಯಗಳಿಂದ ಆಗಮಿಸುವ ಕೂಲಿ ಕಾರ್ಮಿಕರ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಜನಾರ್ದನ ಜೆ.ಎಲ್., ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ನಿಗಾ ವಹಿಸುವಂತೆ ಮನವಿ ಮಾಡಿದರು. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದರು.
ಕೆಲವು ಪೊಲೀಸ್ ಠಾಣೆಗಳಲ್ಲಿ ಸೂಕ್ತ ವಿಚಾರಣೆ ನಡೆಸದೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ವೀರೇಂದ್ರ ಆರೋಪಿಸಿ, ದೂರು ಬಂದ ತಕ್ಷಣ ಪ್ರಕರಣ ದಾಖಲಿಸುವ ಬದಲು ಸಮಗ್ರ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಕೆ.ಬಿ. ರಾಜು ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸುವಂತೆ ಸಲಹೆ ನೀಡಿದರು. ಇದರಿಂದ ಜನರು ಪ್ರತಿಯೊಂದು ಸಮಸ್ಯೆಗೂ ಜಿಲ್ಲಾ ಕೇಂದ್ರಕ್ಕೆ ಬರುವ ಅಗತ್ಯ ತಪ್ಪುತ್ತದೆ ಎಂದರು. ವಿವಿಧ ಹೋರಾಟಗಳಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಪರಿಶೀಲಿಸಿ ಹಿಂಪಡೆಯುವಂತೆ ಮನವಿ ಮಾಡಿದರು.
ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿ, ಲೈನ್ಮನೆಗಳು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದ ಕಾರ್ಮಿಕರ ಮಾಹಿತಿ ಪಡೆಯುವುದರ ಜೊತೆಗೆ ತೋಟ ಮಾಲೀಕರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಸಹಾಯಕ ಸಬ್ಇನ್ಸ್ಪೆಕ್ಟರ್ ಸುಮತಿ ಮಾತನಾಡಿ, ಹಾಡಿ ನಿವಾಸಿಗಳಿಗೆ ಆಧಾರ್ ಸೇರಿದಂತೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯಲು ನೆರವು ನೀಡಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. 112 ಪೊಲೀಸ್ ಸಹಾಯವಾಣಿ, 181 ಮಹಿಳಾ ಸಹಾಯವಾಣಿ ಹಾಗೂ 1098 ಮಕ್ಕಳ ಸಹಾಯವಾಣಿಗೆ ದೂರು ನೀಡಿದರೆ ಅಕ್ಕಪಡೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿದೆ ಎಂದು ತಿಳಿಸಿದರು. ಪಿಎಸ್ಐ ನವೀನ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಕ್ಕೆ ಇರುವ ಕಾನೂನುಗಳ ಅವಕಾಶವನ್ನು ಸಮುದಾಯದವರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?
ಡಿವೈಎಸ್ಪಿಗಳಾದ ಚಂದ್ರಶೇಖರ್, ಸೂರಜ್ ಹಿರಿಯ ಪೊಲೀಸ್ ಅಧಿಕಾರಿ ಐ.ಪಿ. ಮೇದಪ್ಪ, ದಸಂಸ ಮುಖಂಡ ಎಚ್.ಎಲ್. ದಿವಾಕರ ಸೇರಿದಂತೆ ಸಮಿತಿ ಸದಸ್ಯರು ಇದ್ದರು.




