ಲಿಂಗಾಂಬುಧಿ ಕೆರೆ ಮತ್ತು ಉದ್ಯಾನವನಕ್ಕೆ ಪ್ರವೇಶ ಶುಲ್ಕ ವಿಧಿಸುವ ಅರಣ್ಯ ಇಲಾಖೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಮೈಸೂರಿನ ಲಿಂಗಾಂಬುಧಿ ಮಿತ್ರರ ಬಳಗ ಹಾಗೂ ಎಐಡಿವೈಒ ನೇತೃತ್ವದಲ್ಲಿ ಶನಿವಾರ ಉದ್ಯಾನವನದ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ವಾಯುವಿಹಾರಿಗಳಿಗೆ ತೊಂದರೆಯಾಗದಂತೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಪ್ರವೇಶ ಶುಲ್ಕ ವಿಧಿಸುವುದನ್ನು ಕೈಬಿಡಲಾಗಿದೆ. ಉಳಿದ ಸಮಯದಲ್ಲಿ ಶುಲ್ಕ ಕೈಬಿಡುವ ಕುರಿತು ಹಾಗೂ ಬೆಳಿಗ್ಗೆ 7ರಿಂದ 10.30ರವರೆಗೆ ಮತ್ತು ಸಂಜೆ 4ರಿಂದ 7ರವರೆಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸುವ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಲಿಂಗಾಂಬುಧಿ ನಗರ ವಾಯುವಿಹಾರಿಗಳ ಸಮಿತಿಯ ಸಂಧ್ಯಾ ಪಿ.ಎಸ್. ಮಾತನಾಡಿ, ವಾಯುವಿಹಾರಿಗಳಿಗೆ ಮಾತ್ರ ಶುಲ್ಕದಿಂದ ವಿನಾಯಿತಿ ನೀಡುವುದು ಪರಿಹಾರವಲ್ಲ. ಲಿಂಗಾಂಬುಧಿ ಕೆರೆಗೆ ಯಾವುದೇ ಸಮಯದಲ್ಲೂ ಪ್ರವೇಶ ಶುಲ್ಕ ವಿಧಿಸುವ ನೀತಿಯನ್ನೇ ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮಾತ್ರ ಶುಲ್ಕ ವಿಧಿಸುವ ಕ್ರಮಕ್ಕೂ ಅವಕಾಶ ನೀಡಬಾರದು. ಒಂದು ಅವಧಿಗೆ ಶುಲ್ಕ ವಿಧಿಸಲು ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಇತರ ಅವಧಿಗಳಿಗೂ ಶುಲ್ಕ ವಿಸ್ತರಿಸುವ ಸಾಧ್ಯತೆ ಇದೆ. ಆದ್ದರಿಂದ ಪ್ರವೇಶ ಶುಲ್ಕ ವಿಧಿಸುವ ನೀತಿಯನ್ನೇ ಸಂಪೂರ್ಣವಾಗಿ ವಿರೋಧಿಸಲಾಗುವುದು ಎಂದರು.
ಲಿಂಗಾಂಬುಧಿ ಮಿತ್ರರ ಬಳಗದ ಅಧ್ಯಕ್ಷ ನಾಗೇಶ್ ಮಾತನಾಡಿ, ವಾಯುವಿಹಾರಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಿ, ಉಳಿದ ಸಾರ್ವಜನಿಕರಿಗೆ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಶುಲ್ಕ ವಿಧಿಸುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧವಿದೆ. ಉದ್ಯಾನವನದಲ್ಲಿ ಸೂಕ್ತ ರಕ್ಷಣೆ ಹಾಗೂ ಭದ್ರತಾ ವ್ಯವಸ್ಥೆ ಇಲ್ಲದಿರುವ ಸಂದರ್ಭದಲ್ಲಿ ಶುಲ್ಕದ ನೆಪದಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸುವುದು ಸೂಕ್ತವಲ್ಲ. ತಕ್ಷಣವೇ ಪ್ರವೇಶ ಶುಲ್ಕ ಹಾಗೂ ಸಮಯ ನಿಗದಿ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಿದ್ದೇಶ್ ಹಾಗೂ ಭರತ್ ಡೀನ್ ಮಾತನಾಡಿ, ಲಿಂಗಾಂಬುಧಿ ಕೆರೆ ಮತ್ತು ಉದ್ಯಾನವನವು ಸಾರ್ವಜನಿಕರಿಗೆ ಮುಕ್ತವಾಗಿರುವ ಪ್ರಕೃತಿ ತಾಣವಾಗಿದ್ದು, ಪ್ರತಿದಿನ ನೂರಾರು ಮಂದಿ ವಾಯುವಿಹಾರ, ಆರೋಗ್ಯ ಹಾಗೂ ಪರಿಸರದ ಅನುಭವಕ್ಕಾಗಿ ಆಗಮಿಸುತ್ತಾರೆ. ಇಂತಹ ಸಾರ್ವಜನಿಕ ಬಳಕೆಯ ಸ್ಥಳಕ್ಕೆ ಪ್ರವೇಶ ಶುಲ್ಕ ವಿಧಿಸುವುದು ಜನರ ಮೇಲೆ ಅನಗತ್ಯ ಹೊರೆ ಹಾಕಿದಂತಾಗುತ್ತದೆ. ಅರಣ್ಯ ಇಲಾಖೆಯಿಂದ ಈ ಕುರಿತು ಯಾವುದೇ ಅಧಿಕೃತ ಲಿಖಿತ ಆದೇಶ ಇನ್ನೂ ಬಂದಿಲ್ಲ. ಲಿಖಿತ ಆದೇಶ ಹೊರಬರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಎಐಡಿವೈಒ ಮೈಸೂರು ಜಿಲ್ಲಾ ಅಧ್ಯಕ್ಷ ಸುನಿಲ್ ಟಿ.ಆರ್. ಮಾತನಾಡಿ, 2020ರ ಸರ್ಕಾರದ ನಿರ್ದೇಶನದಂತೆ ಲಿಂಗಾಂಬುಧಿ ವೃಕ್ಷೋದ್ಯಾನ ನಿರ್ವಹಣೆ ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 1ರಿಂದ ಪ್ರವೇಶ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಖಂಡನೀಯ. ಮೈಸೂರು ನಗರದ ನಿವಾಸಿಗಳು ಆಸ್ತಿ ತೆರಿಗೆಯೊಂದಿಗೆ ಉದ್ಯಾನಗಳ ನಿರ್ವಹಣೆಗೆ ಸಂಬಂಧಿಸಿದ ತೆರಿಗೆಯನ್ನೂ ಪಾವತಿಸುತ್ತಿದ್ದಾರೆ. ಹೀಗಿರುವಾಗ ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಎಲ್ಲರಿಗೂ ಮತ್ತೆ ಪ್ರವೇಶ ಶುಲ್ಕ ವಿಧಿಸುವುದು ಸರಿಯಲ್ಲ ಎಂದರು.
ಅರಣ್ಯ ಇಲಾಖೆಗೆ ನಿರ್ವಹಣೆಗೆ ಹಣದ ಕೊರತೆ ಇದ್ದರೆ ಸರ್ಕಾರದಿಂದ ಅನುದಾನ ಪಡೆಯಬೇಕು ಅಥವಾ ಉದ್ಯಾನವನದ ನಿರ್ವಹಣೆಯನ್ನು ಮಹಾನಗರ ಪಾಲಿಕೆಗೆ ವಹಿಸಬೇಕು. ಜನರ ಮೇಲೆ ಪ್ರವೇಶ ಶುಲ್ಕದ ಹೊರೆ ಹಾಕುವ ಬದಲು ಇಲಾಖೆಗೆ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲಿ ಮಾಡಿ ಇಂತಹ ಸಾರ್ವಜನಿಕ ಉದ್ಯಾನಗಳನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ನಾಲ್ಕು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಇದೇ ರೀತಿಯ ಪ್ರಸ್ತಾವನೆ ವಿರುದ್ಧ ಹೋರಾಟ ನಡೆಸಿದ ಬಳಿಕ ಅದನ್ನು ಹಿಂಪಡೆಯಲಾಗಿತ್ತು. ಈ ಬಾರಿಯೂ ಸಾರ್ವಜನಿಕರ ಹಿತದೃಷ್ಟಿಯಿಂದ ಲಿಂಗಾಂಬುಧಿ ಉದ್ಯಾನವನಕ್ಕೆ ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಕೂಡಲೇ ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?
ಪ್ರತಿಭಟನೆಯಲ್ಲಿ ಲಿಂಗಾಂಬುಧಿ ನಗರ ವಾಯುವಿಹಾರಿಗಳ ಸಮಿತಿಯ ಸಂಧ್ಯಾ ಪಿ.ಎಸ್., ನಂದೀಶ್, ಸಿದ್ದೇಶ್, ಸವಿತಾ, ಎಐಡಿವೈಒ ಜಿಲ್ಲಾ ಅಧ್ಯಕ್ಷ ಸುನಿಲ್ ಟಿ.ಆರ್., ಜಿಲ್ಲಾ ಸಮಿತಿ ಸದಸ್ಯರಾದ ರಣಜಿತ್, ಪೂರ್ಣಿಮಾ, ಮಂಜು, ಲಿಂಗಾಂಬುಧಿ ಮಿತ್ರರ ಬಳಗದ ಅಧ್ಯಕ್ಷ ನಾಗೇಶ್, ಹಿರಿಯ ಸದಸ್ಯ ಶಿವಕುಮಾರ್, ಖಜಾಂಚಿ ಭರತ್ ಡೀನ್, ಅವಿನಾಶ್, ರಾಜಣ್ಣ ಸೇರಿದಂತೆ 300ಕ್ಕೂ ಹೆಚ್ಚು ವಾಯುವಿಹಾರಿಗಳು ಇದ್ದರು.



