ಮಧ್ಯಪ್ರದೇಶ ಚುನಾವಣೆ | ‘ಮಾಮಾ’ ಕೈಬಿಟ್ಟ ಬಿಜೆಪಿ; ಕಾಂಗ್ರೆಸ್‌ಗೆ ಒಬಿಸಿ, ಮಹಿಳೆಯರೇ ಶಕ್ತಿ  

Date:

2023ರ ಮೇನಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೂ ಹಲವು ಸಾಮ್ಯತೆಗಳಿವೆ. ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಹಾಗೆ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಚುನಾವಣೆಯ ಸಮಯದಲ್ಲಿ ರಾಜ್ಯ ನಾಯಕರನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷ್ಯ ಮಾಡಿ, ವಿಚಿತ್ರ ಪ್ರಯೋಗಗಳಿಗೆ ಕೈ ಹಾಕಿತು. ಚುನಾವಣೆಗೆ ಟಿಕೆಟ್ ಹಂಚುವಾಗ ಹೊಸ ಮುಖಗಳಿಗೆ ಮಣೆ ಹಾಕಿತು. ನಾಯಕತ್ವದಲ್ಲಿ ಮನಸೋ ಇಚ್ಛೆ ಬದಲಾವಣೆ ಮಾಡಿತು. ಇದೆಲ್ಲದರ ಪರಿಣಾಮವಾಗಿ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಸೋಲು ಕಂಡಿತು.

ಮಧ್ಯಪ್ರದೇಶದಲ್ಲಿಯೂ ಇಂಥವೇ ಬೆಳವಣಿಗೆಗಳು ನಡೆಯುತ್ತಿವೆ. 2008 ಮತ್ತು 2013ರ ಚುನಾವಣೆಗಳಲ್ಲಿ ಬಿಜೆಪಿಯ ಭಾರಿ ಗೆಲುವಿಗೆ ಕಾರಣರಾಗಿದ್ದವರು ಶಿವರಾಜ್ ಸಿಂಗ್ ಚೌಹಾಣ್. ಆದರೆ, 2018ರ ಚುನಾವಣೆಯಲ್ಲಿ ಮಧ್ಯಪ್ರದೇಶ ಮತದಾರರು ಚೌಹಾಣ್‌ ನೇತೃತ್ವದ ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದರು. ಬಿಜೆಪಿ 109 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 114 ಸ್ಥಾನ ಗಳಿಸಿತ್ತು. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಸ್ವತಂತ್ರ ಶಾಸಕರ ನೆರವಿನಿಂದ ಕಾಂಗ್ರೆಸ್‌ನ ಕಮಲ್‌ನಾಥ್ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ್ದರು. ಆದರೆ, 15 ತಿಂಗಳ ನಂತರ, 2020ರ ಮಾರ್ಚ್‌ನಲ್ಲಿ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಅವರ 22 ಬೆಂಬಲಿಗರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿತು. ಕಮಲ್‌ನಾಥ್ ಸರ್ಕಾರ ಪತನಗೊಂಡಿತು. ಶಿವರಾಜ್‌ಸಿಂಗ್ ಚೌಹಾಣ್ ಮತ್ತೆ ಮುಖ್ಯಮಂತ್ರಿಯಾದರು. ಜ್ಯೋತಿರಾಧಿತ್ಯ ಸಿಂಧಿಯಾಗೆ ಕೇಂದ್ರ ಸಚಿವ ಹುದ್ದೆಯ ಬಳುವಳಿ ದಕ್ಕಿತು.

ಚೌಹಾಣ್

ಮಧ್ಯಪ್ರದೇಶದಲ್ಲಿ ಈಗ ಮತ್ತೊಂದು ವಿಧಾನಸಭಾ ಚುನಾವಣೆ ಬಂದಿದೆ. ನವೆಂಬರ್ 17ರಂದು 230 ಸ್ಥಾನಗಳಿಗೆ ಮತದಾನ ನಡೆಯಲಿದೆ. 19 ವರ್ಷಗಳ ಆಡಳಿತದ ನಂತರ ಬಿಜೆಪಿ ತೀವ್ರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಜನ ಅದನ್ನು ಮರೆಯುವಂತೆ ಮಾಡಲು ಕೇಸರಿ ಪಕ್ಷ ನಾನಾ ತಂತ್ರ ಹೂಡುತ್ತಿದೆ. ಹಲವು ಸಂಸದರನ್ನು ಹಾಗೂ ಕೇಂದ್ರ ಸಚಿವರನ್ನು ಕಣಕ್ಕಿಳಿಸಿದೆ. ಆದರೆ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಮಾಡಿದಂತೆ, ಅನೇಕ ಹಾಲಿ ಶಾಸಕರಿಗೆ, ಮಂತ್ರಿಗಳಿಗೆ ಟಿಕೆಟ್ ನಿರಾಕರಿಸಿದೆ. ಅವರ ಈ ಪ್ರಯೋಗ ಗುಜರಾತ್‌ನಲ್ಲಿ ಯಶಸ್ಸು ಕಂಡಿತ್ತು. ಆದರೆ, ಕರ್ನಾಟಕದಲ್ಲಿ ದಯನೀಯವಾಗಿ ಸೋತಿತ್ತು. ಆದರೂ ಅದು ತನ್ನ ಬಳಿ ಇರುವ ಮಹಾ ಅಸ್ತ್ರ ಎನ್ನುವಂತೆ ಬಿಜೆಪಿ ಮಧ್ಯಪ್ರದೇಶದಲ್ಲಿಯೂ ಅದನ್ನು ಪ್ರಯೋಗಿಸುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಜೆಪಿ ಈಗಾಗಲೇ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಐದನೆಯ ಪಟ್ಟಿಯು ಸ್ಫೋಟಕವಾಗಿರಲಿದ್ದು, 25-30 ಹಾಲಿ ಶಾಸಕರು ಟಿಕೆಟ್‌ವಂಚಿತರಾಗುವ ಸಾಧ್ಯತೆಯಿದೆ, ಗೆಲ್ಲುವ ಸಾಮರ್ಥ್ಯವಿರುವ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಇಷ್ಟಾದರೂ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದ ಬಹುತೇಕ ಸಚಿವರಿಗೆ ಅವರದೇ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಆದರೆ, ಚೌಹಾಣ್ ಅವರಿಗೇ ಟಿಕೆಟ್ ಸಿಗುವುದು ಅನುಮಾನವಿತ್ತು. ಮೊದಲ ಮೂರು ಪಟ್ಟಿಗಳಲ್ಲಿ ಅವರ ಹೆಸರೇ ಇರಲಿಲ್ಲ. ಕೊನೆಗೆ ಚೌಹಾಣ್ ಅವರಿಗೆ ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿತು. ಇನ್ನೊಮ್ಮೆ, ಚೌಹಾಣ್ ಅವರ ಸ್ವಕ್ಷೇತ್ರ ಬುಧ್ನಿಯಲ್ಲಿ ಜನಾಶೀರ್ವಾದ ಯಾತ್ರೆ ಮಾಡುವಾಗಲೂ ಅದರ ನೇತೃತ್ವ ವಹಿಸಿದ್ದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್. ಚೌಹಾಣ್ ಅವರ ಮಗ ಕಾರ್ತಿಕೇಯ ಅವರ ಪಕ್ಕದಲ್ಲಿದ್ದರು; ಚೌಹಾಣ್ ಇರಲಿಲ್ಲ.

ಬಿಜೆಪಿಯ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯ ತನ್ನನ್ನು ಪಕ್ಷ ಮರ್ಯಾದೆಯಿಂದ ನಡೆಸಿಕೊಳ್ಳುತ್ತಿಲ್ಲ ಎನ್ನುವ ನೋವು ಅವರಲ್ಲಿ ಹುಟ್ಟಿಕೊಂಡಿದೆ. ‘ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಹೇಳಿದ್ದು ಚೌಹಾಣ್ ಅವರ ಸಂಕಟವನ್ನು ಹೆಚ್ಚಿಸಿತ್ತು. ಆ ನೋವನ್ನು ಶಿವರಾಜ್‌ ಸಿಂಗ್ ಚೌಹಾಣ್ ಜನರ ಮುಂದಿಟ್ಟಿದ್ದರು; ‘ನಾನು ಚುನಾವಣೆಗೆ ನಿಲ್ಲಬೇಕೋ ಬೇಡವೋ, ನಿಮ್ಮ ಮಾಮಾ ಮುಖ್ಯಮಂತ್ರಿ ಆಗಬೇಕೋ ಬೇಡವೋ’ ಎಂದು ಸಾರ್ವಜನಿಕ ಸಭೆಯಲ್ಲಿ ಜನರನ್ನು ಪ್ರಶ್ನಿಸಿದ್ದರು. ಚೌಹಾಣ್ ಅವರನ್ನು ಅಲ್ಲಿನ ಜನ ಪ್ರೀತಿಯಿಂದ ಮಾಮಾ ಎಂದು ಕರೆಯುತ್ತಾರೆ. ಜನ ಮಾಮಾ ಬೇಕು ಎಂದು ಹೇಳಿದರೂ, ಪಕ್ಷಕ್ಕೆ ಮಾಮಾ ಬೇಡ. ಬಿಜೆಪಿ ಅಧಿಕಾರಕ್ಕೆ ಬಂದರೂ ಚೌಹಾಣ್ ಮತ್ತೆ ಮುಖ್ಯಮಂತ್ರಿಯಾಗುವುದು ಕಷ್ಟ.

ಮೋದಿ

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ 1998ರ ನಂತರ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮತಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಅದರಿಂದ ಎಚ್ಚೆತ್ತಿರುವ ಬಿಜೆಪಿ, ಈ ಬಾರಿ ಮತ್ತೆ ಅಧಿಕಾರಕ್ಕೇರಲು ಹರಸಾಹಸ ಮಾಡುತ್ತಿದೆ. ರಾಜ್ಯದಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಿಸುವ ಬಗ್ಗೆ ಜನಾಶೀರ್ವಾದ್ ಯಾತ್ರೆಯ ವೇಳೆ ಸೂಚನೆಯನ್ನೂ ನೀಡಿದೆ. ಉಜ್ಜಯಿನಿಯ ಧಾರ್ಮಿಕ ಪ್ರವಾಸ ಸರ್ಕ್ಯೂಟ್ ಮತ್ತು ಓಂಕಾರೇಶ್ವರದಲ್ಲಿ ಆದಿಶಂಕರಾಚಾರ್ಯ ಪ್ರತಿಮೆ ಸ್ಥಾಪನೆಯನ್ನೇ ದೊಡ್ಡ ಸಾಧನೆಗಳೆಂದು ಬಿಜೆಪಿ ಬಿಂಬಿಸುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಜನರ ಪಾಲು ಶೇ.50. ಅವರು ಪಾರಂಪರಿಕವಾಗಿ ಬಿಜೆಪಿಯ ಬೆಂಬಲಿಗರಾಗಿದ್ದಾರೆ. ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ತೀರಾ ಕೈಬಿಡದೇ ಇರಲು ಅವರು ಹಿಂದುಳಿದ ವರ್ಗದ ನಾಯಕ ಎನ್ನುವುದೂ ಒಂದು ಕಾರಣ. ಪಕ್ಷದ ನಾಯಕಿ ಉಮಾಭಾರತಿ ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಗೆ ಒತ್ತಾಯಿಸುತ್ತಿರುವುದೂ ಕೂಡ ಬಿಜೆಪಿಗೆ ನುಂಗಲಾಗದ ತುತ್ತಾಗಿದೆ.

ಕಾಂಗ್ರೆಸ್ ಕೂಡ ಹಿಂದುತ್ವದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ. ಕಮಲ್‌ನಾಥ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರುವ ಕಾಂಗ್ರೆಸ್, ಅವರನ್ನು ಹನುಮನ ಭಕ್ತನೆಂದು ಪ್ರಚಾರ ಮಾಡುತ್ತಿದೆ. 2019ರಲ್ಲಿ ಕಮಲ್‌ನಾಥ್ ಸರ್ಕಾರ ಸರ್ಕಾರಿ ಉದ್ಯೋಗದಲ್ಲಿ ಒಬಿಸಿ ಮೀಸಲಾತಿಯನ್ನು ಶೇ. 27ಕ್ಕೆ ಹೆಚ್ಚಿಸಿತ್ತು. ಆದರೆ, ನಂತರ ಹೈಕೋರ್ಟ್ ಅದನ್ನು ರದ್ದುಪಡಿಸಿತ್ತು. ರಾಜ್ಯದ ಒಟ್ಟು 5.52 ಮತದಾರರಲ್ಲಿ 2.67 ಕೋಟಿ ಮಹಿಳಾ ಮತದಾರರಿದ್ದಾರೆ. ಹೀಗಾಗಿ ಕಮಲ್‌ನಾಥ್ ಮಹಿಳೆಯರ ವಿರುದ್ಧದ ದೌರ್ಜನ್ಯಗಳಲ್ಲಿ ಮಧ್ಯಪ್ರದೇಶ ಅಗ್ರಸ್ಥಾನಕ್ಕೇರಿರುವುದನ್ನು ಬೊಟ್ಟು ಮಾಡಿ ತೋರಿಸಿ, ಬಿಜೆಪಿ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ.

ಪ್ರಿಯಾಂಕಾ

ಕರ್ನಾಟಕದ ಮಾದರಿಯಲ್ಲಿಯೇ ಕಾಂಗ್ರೆಸ್ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆಂದೋಲನಗಳನ್ನು ಆರಂಭಿಸಿದೆ. ‘ಚೌಹಾಣ್ ಅವರದ್ದು 50% ಸರ್ಕಾರ’ ಎಂದು ಕಾಂಗ್ರೆಸ್ ಪ್ರಚಾರಾಂದೋಲನ ನಡೆಸುತ್ತಿದೆ. ನಿರುದ್ಯೋಗವೂ ಅಲ್ಲಿ ಈ ಬಾರಿಯ ಚುನಾವಣಾ ವಸ್ತುವಾಗಿವೆ. ಮಾರ್ಚ್‌ನಲ್ಲಿ ರಾಜ್ಯ ವಿಧಾನಸಭೆ ನೀಡಿದ ನಿರುದ್ಯೋಗದ ಮಾಹಿತಿಯ ಪ್ರಕಾರ, 39,93,149 ನಿರುದ್ಯೋಗಿಗಳು ಉದ್ಯೋಗ ಕಚೇರಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಸರ್ಕಾರಿ ಉದ್ಯೋಗಗಳ ಕೊರತೆ ಮತ್ತು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳ ಆತ್ಮಹತ್ಯೆಗಳನ್ನು ಎತ್ತಿ ತೋರಿಸುತ್ತಿದೆ. ಜೂನ್ 12 ರಂದು ಜಬಲ್ಪುರ್ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ, ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಕೇವಲ 21 ಸರ್ಕಾರಿ ಉದ್ಯೋಗಗಳನ್ನು ಮಾತ್ರ ನೀಡಿದೆ ಎಂದು ಹೇಳಿದ್ದರು. ‘ಪೈಸಾ ದೋ, ಕಾಮ್ ಲೋ’ (ಹಣ ಕೊಡಿ, ಕೆಲಸ ತಗೊಳ್ಳಿ) ಎನ್ನುವುದು ಕಾಂಗ್ರೆಸ್‌ನ ಚುನಾವಣೆಯ ಘೋಷಣೆಯಾಗಿದೆ.

ಈ ಸುದ್ದಿ ಓದಿದ್ದೀರಾ: ಇಸ್ರೇಲ್ ಮೇಲೇಕೆ ಮೋದಿ ಪ್ರೀತಿ: ಸುಬ್ರಹ್ಮಣ್ಯನ್ ಸ್ವಾಮಿ ಪ್ರಶ್ನೆ

ಬಿಜೆಪಿ ಪರವಾಗಿ ಮೋದಿ ಕಳೆದ ಏಳು ತಿಂಗಳಲ್ಲಿ ಏಳು ರ್‍ಯಾಲಿಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪರವಾಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ರ್‍ಯಾಲಿಗಳನ್ನು ಮಾಡುತ್ತಾ, ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಬುಡಕಟ್ಟು, ಒಬಿಸಿ, ಮಹಿಳಾ ಮತಗಳನ್ನು ಸೆಳೆಯಲು ಕಾಂಗ್ರೆಸ್ ನಾನಾ ತಂತ್ರಗಾರಿಕೆ ಮಾಡುತ್ತಿದೆ. ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದೆ. ಕರ್ನಾಟಕದ ಮಾದರಿಯಲ್ಲಿಯೇ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಕಾಂಗ್ರೆಸ್, ಬಿಜೆಪಿಯ ಜೊತೆಗೆ ಸಮಾಜವಾದಿ ಪಕ್ಷ, ಆಮ್ ಆದ್ಮಿ ಮತ್ತು ಬಿಎಸ್‌ಪಿ ಇದ್ದರೂ ಅವುಗಳಿಂದ ಹೆಚ್ಚಿನ ನಿರೀಕ್ಷೆ ಇಲ್ಲ. ಸರ್ಕಾರ ರಚನೆಗೆ ಕೆಲವೇ ಸ್ಥಾನಗಳ ಕೊರತೆ ಬಿದ್ದರೆ ಮಾತ್ರ ಅವರು ನಿರ್ಣಾಯಕವಾಗುತ್ತಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ, ಮಂಡ್ಯದಲ್ಲಿ ಬಿಜೆಪಿ ನಾಯಕರ ಸಹಕಾರ ದೊರೆತಿಲ್ಲ: ಹೆಚ್‌ ಡಿ ದೇವೇಗೌಡ

ಹಾಸನದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರು...

ಶುಕ್ಲಾ ಜೊತೆ ಕರಣ್ ಥಾಪರ್ ಮಾತುಕತೆ: ಮಹಾನಾಯಕನ ಐಬು ಮತ್ತು ಅಂಧಭಕ್ತರ ಹೂಂಕಾರ

ಭಾರತ ದೇಶ ಕಳೆದ ಹತ್ತು ವರ್ಷಗಳಿಂದ ಅದೆಂಥ ಕರಾಳಕೂಪಕ್ಕೆ ಜಾರುತ್ತಿದೆ ಎಂಬುದರ...

ದೇಶದ ಶೇ.90 ರಷ್ಟಿರುವ ಬಡಜನತೆಗೆ ನ್ಯಾಯ ಒದಗಿಸುವುದೇ ನಮ್ಮ ಯೋಜನೆ: ರಾಹುಲ್ ಗಾಂಧಿ

ಬಡತನದ ಬೇಗೆಯಲ್ಲಿ ನಲುಗುತ್ತಿರುವ ದೇಶದ ಶೇ.90 ರಷ್ಟು ಬಡವರಿಗೆ ನ್ಯಾಯ ಒದಗಿಸುವ...

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...