ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ರಾಜಕೀಯ ಕಂಪನ ಸಂಭವಿಸುವ ಸೂಚನೆಗಳಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷವನ್ನು ಮತ್ತೊಮ್ಮೆ ಇಭ್ಭಾಗ ಮಾಡಲು ಬಿಜೆಪಿ ಬೃಹತ್ ಸಂಚು ರೂಪಿಸಿದೆ. ‘ಆಪರೇಷನ್ ಟೈಗರ್’ ಹೆಸರಿನಲ್ಲಿ ನಡೆಯುತ್ತಿರುವ ಈ ಹೊಸ ರಾಜಕೀಯ ಕುತಂತ್ರವು ಮುಂಬೈನಿಂದ ದೆಹಲಿಯವರೆಗೆ ಸಂಚಲನ ಸೃಷ್ಟಿಸಿದೆ. ಶಿವಸೇನೆ (ಯುಬಿಟಿ)ಯ 9 ಸಂಸದರ ಪೈಕಿ ಆರು ಸಂಸದರನ್ನು ಹೊತ್ತೋಯ್ದು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಗಳು ಚರ್ಚೆಯಲ್ಲಿವೆ.
ಈ ಚರ್ಚೆ ಮುನ್ನೆಲೆ ಬರುತ್ತಿದ್ದಂತೆಯೇ, ಶಿವಸೇನೆ (ಯುಬಿಟಿ) ಹಿರಿಯ ನಾಯಕ ಸಂಜಯ್ ರಾವತ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಪ್ರತಿಯೊಬ್ಬ ಸಂಸದನಿಗೆ 50 ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗಿದೆ. ಈಗಾಗಲೇ 15 ಕೋಟಿ ರೂಪಾಯಿಗಳ ಮುಂಗಡ ಹಣವನ್ನು ತಲುಪಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಹಣಬಲ ಮತ್ತು ತಂತ್ರಗಾರಿಕೆಯ ಮೂಲಕ ವಿರೋಧ ಪಕ್ಷಗಳನ್ನು ನುಚ್ಚುನೂರು ಮಾಡಲು ಬಿಜೆಪಿ ಮತ್ತು ಅದರ ಮೈತ್ರಿಕೂಟ ನಿರಂತರವಾಗಿ ಯತ್ನಿಸುತ್ತಿದೆ” ಎಂದು ಅವರು ಆರೋಪಿದ್ದಾರೆ. ಆದರೂ, ಮಹಾರಾಷ್ಟ್ರ ಬಿಜೆಪಿ ನಾಯಕರು ಈ ಆರೋಪಗಳನ್ನು ನಿರಾಕರಿಸಿದ್ದು, ಉದ್ಧವ್ ಠಾಕ್ರೆ ಅವರ ನಾಯಕತ್ವದ ಮೇಲಿನ ಅಸಮಾಧಾನದ ಕಾರಣಕ್ಕಾಗಿ ಅವರದೇ ನಾಯಕರು ಪಕ್ಷ ತೊರೆಯುತ್ತಿದ್ದಾರೆ ಸಮಜಾಯಿಷಿ ನೀಡುತ್ತಿದೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ದಶಕಗಳಿಂದಲೂ ಇಂತಹ ಮೇಲಾಟ, ಸಖ್ಯತೆ ಹಾಗೂ ಹಠಾತ್ ಬದಲಾವಣೆಗಳು ನಡೆಯುತ್ತಲೇ ಇವೆ. ಅಂತೆಯೇ, ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರವು ಇಡೀ ದೇಶದಲ್ಲೇ ರಾಜಕೀಯ ವಿದ್ವಂಸಕತೆಯ ಪ್ರಮುಖ ಪ್ರಯೋಗಶಾಲೆಯಾಗಿಯೂ ಮಾರ್ಪಟ್ಟಿದೆ.
ಕಳೆದ ದಶಕದಲ್ಲಿ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿದ್ದವು. 2019ರಲ್ಲಿ ಉದ್ಧವ್ ಠಾಕ್ರೆಯವರು ಸೈದ್ಧಾಂತಿಕ ವಿರೋಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ರಚಿಸಿದಾಗ ಬಿಜೆಪಿ-ಶಿವಸೇನೆಯ ದೀರ್ಘಕಾಲದ ಮಿತ್ರತ್ವಕ್ಕೆ ಮುರಿದುಬಿದ್ದಿತು. ತದನಂತರ, ‘ಆಪರೇಷನ್ ಕಮಲ’ ನಡೆಸಿದೆ ಬಿಜೆಪಿ, 2022ರಲ್ಲಿ ಏಕ್ನಾಥ್ ಶಿಂಧೆಯವರ ನೇತೃತ್ವದಲ್ಲಿ ಬಹುಸಂಖ್ಯೆಯ ಶಿವಸೇನಾ ಶಾಸಕರನ್ನು ಹೊತ್ತೋಯ್ದು, ಅವರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ಇದು ಶಿವಸೇನೆಯನ್ನು ಎರಡು ಭಾಗಗಳಾಗಿ ಒಡೆಯಿತು. ಶಿಂಧೆಯವರ ಬಣದಲ್ಲಿ ಹೆಚ್ಚು ಶಾಸಕರಿದ್ದ ಕಾರಣ, ತಾವೇ ಮೂಲ ಪಕ್ಷವೆಂದು ಹೇಳಿಕೊಂಡಿತು. ಮೂಲ ಪಕ್ಷದ ಬಾವುಟ ಮತ್ತು ಚಿಹ್ನೆಯನ್ನು ತನ್ನ ವಶಕ್ಕೆ ಪಡೆಯಿತು. ಬಿಜೆಪಿಯ ಕೈಗೊಂಡೆಯಾಗಿರುವ ಚುನಾವಣಾ ಆಯೋಗ ಕೂಡ ಶಿಂಧೆ ಬಣವನ್ನೇ ಮೂಲ ಪಕ್ಷವೆಂದು ಅಧಿಕೃತವಾಗಿ ಗುರುತಿಸಿತು. ಉದ್ಧವ್ ಠಾಕ್ರೆಯವರ ಬಣವು ಶಿವಸೇನಾ (ಯುಬಿಟಿ) ಆಗಿ ಗುರುತಿಸಿಕೊಂಡಿತು.
2022ರ ಶಿವಸೇನೆಯನ್ನು ಒಡೆದ ಬೆನ್ನಲ್ಲೇ, 2023ರಲ್ಲಿ ಶರದ್ ಪವಾರ್ ಅವರ ಆಪ್ತ, ಸೋದರಸಂಬಂಧಿ ಅಜಿತ್ ಪವಾರ್ ಅವರನ್ನು ಹೆದರಿಸಿ-ಬೆದರಿಸಿ ಎನ್‌ಸಿಪಿಯನ್ನು ಬಿಜೆಪಿ ಇಭ್ಭಾಗ ಮಾಡಿತು. ಅಜಿತ್ ಬಣವನ್ನು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಯಿತು.
ಪಕ್ಷಾಂತರ ನಿರೋಧಕ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಕನಿಷ್ಠ ಮೂರನೇ ಎರಡರಷ್ಟು ಶಾಸಕರನ್ನು ಒಟ್ಟಿಗೆ ಸೆಳೆಯುವ ಮತ್ತು ಮೂಲ ಪಕ್ಷದ ಚಿಹ್ನೆಯನ್ನೇ ಕಾನೂನುಬದ್ಧವಾಗಿ ವಶಪಡಿಸಿಕೊಳ್ಳುವ ಮಟ್ಟಿಗೆ ಬಿಜೆಪಿ ತನ್ನ ಕುತಂತ್ರಗಳನ್ನು ಯಶಸ್ವಿಗೊಳಿಸಿತು.
ಇದೀಗ, ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಶಿವಸೇನೆ (ಯುಬಿಟಿ)ಯಲ್ಲಿರುವ ಸಂಸದರನ್ನೂ ಹೊತ್ತೊಯ್ಯಲು ಕುತಂತ್ರ ಹೆಣೆದಿದೆ. ‘ಆಪರೇಷನ್ ಟೈಗರ್’ ಎಂಬ ಬಲೆ ಬೀಸಿದೆ. ಮುಂಗಾರು ಅಧಿವೇಶನಕ್ಕೂ ಮುಂಚೆಯೇ ಉದ್ಧವ್ ಅವರ ಸಂಸದರನ್ನು ಶಿಂಧೆ ಬಣಕ್ಕೆ ಸೇರಿಸುವ ಹುನ್ನಾರ ಬಿಜೆಪಿಗಿದೆ.
ಆದಾಗ್ಯೂ, ತಮ್ಮ ಸಂಸದರನ್ನು ಉಳಿಸಿಕೊಳ್ಳಲು ಉದ್ಧವ್ ಬಣ ಹರಸಾಹಸ ಪಡುತ್ತಿದೆ. ಸಂಜಯ್ ರಾವತ್ ಅವರು ‘ಆಪರೇಷನ್ ವುಲ್ಫ್’ ಎಂಬ ಹೆಸರಿನಲ್ಲಿ ತಮ್ಮ ಸಂಸದರನ್ನು ಪಕ್ಷ ತೊರೆಯದಂತೆ ತಡೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ‘ನಮ್ಮ ಎಲ್ಲ ಸಂಸದರೂ ಉದ್ಧವ್ ಠಾಕ್ರೆಯವರೊಂದಿಗೇ ಇದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ. ಆದರೂ, ಉದ್ಧವ್ ಅವರು ಸಂಸದರು ತಮ್ಮನ್ನು ತೊರೆಯಲು ಬಯಸಿದರೆ ಹೋಗಲು ಸ್ವತಂತ್ರರೆಂದು ಹೇಳುವ ಮೂಲಕ ಗಂಭೀರತೆ ಪ್ರದರ್ಶಿಸಿದ್ದಾರೆ.
ಬಿಜೆಪಿ ‘ಆಪರೇಷನ್ ಕಮಲ’ದ ಕರಾಳ ಇತಿಹಾಸ
ವಿರೋಧ ಪಕ್ಷಗಳನ್ನು ಒಡೆಯುವ, ಇಬ್ಭಾಗ ಮಾಡುವ, ಶಾಸಕರು ಮತ್ತು ಸಂಸದರನ್ನು ಅಪಹರಿಸುವ ಬಿಜೆಪಿ ಕೃತ್ಯಗಳು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವೇ ನಡೆದಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ವಿರೋಧ ಪಕ್ಷಗಳನ್ನು ಬಿಜೆಪಿ ಒಡೆದಿದೆ.
ಅಂದಹಾಗೆ, ಬಿಜೆಪಿಯ ಈ ‘ಆಪರೇಷನ್ ಕಮಲ’ ಎಂಬ ಕುತಂತ್ರ ರೂಪುಗೊಂಡಿದ್ದೇ ಕರ್ನಾಟಕದಲ್ಲಿ. 2008ರಲ್ಲಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಇಂತಹದೊಂದು ಕೃತ್ಯಕ್ಕೆ ಕೈಹಾಕಿತು. ಯಶಸ್ಸನ್ನೂ ಕಂಡಿತು. ನಂತರ, ಆಪರೇಷನ್ ಕಮಲ ಎಂಬುದು ರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆ ಬಂದಿತು. ಆದಾಘ್ಯೂ, 2019ರಲ್ಲಿ ಕರ್ನಾಟಕದಲ್ಲಿಯೇ ಮತ್ತೆ ‘ಆಪರೇಷನ್ ಕಮಲ’ವನ್ನು ಬಿಜೆಪಿ ಯಶಸ್ವಿಗೊಳಿಸಿತು. ಆಗ, ರಾಜ್ಯದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಉಭಯ ಪಕ್ಷಗಳ 17 ಶಾಸಕರಿಂದ ರಾಜೀನಾಮೆ ಕೊಡಿಸಿ, ರೆಸಾರ್ಟ್ ರಾಜಕಾರಣದ ಮೂಲಕ ಸರ್ಕಾರವನ್ನು ಬಿಜೆಪಿ ಪತನಗೊಳಿಸಿತು. ಸರ್ಕಾರದ ಚುಕ್ಕಾಣಿ ಹಿಡಿಯಿತು.
ಈ ಲೇಖನ ಓದಿದ್ದೀರಾ?: ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!
ಇದೇ ರೀತಿಯ ಮತ್ತೊಂದು ದೊಡ್ಡ ರಾಜಕೀಯ ಸ್ಥಿತ್ಯಂತರ ಕಂಡಿದ್ದು ಮಧ್ಯಪ್ರದೇಶ. ಅಲ್ಲಿ, 2020ರಲ್ಲಿ ಕಾಂಗ್ರೆಸ್‌ನ ಯುವ ನಾಯಕನಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಭಾರಿ ಬಂಡಾಯ ಸೃಷ್ಟಿಸಿ, ಅವರೊಂದಿಗೆ 22 ಶಾಸಕರನ್ನು ಬಿಜೆಪಿ ಕರೆದೊಯ್ಯಿತು. ಪರಿಣಾಮವಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪತನಗೊಂಡು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಈ ಕಾರ್ಯಾಚರಣೆಯು ಕೇವಲ ಒಂದು ರಾಜ್ಯದ ಸರ್ಕಾರವನ್ನು ಬದಲಾಯಿಸಲಿಲ್ಲ, ಬದಲಿಗೆ ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಭಾರಿ ಸಾಂಸ್ಥಿಕ ಹೊಡೆತವನ್ನೂ ನೀಡಿತು.
ತದನಂತರ, ರಾಜಸ್ಥಾನದಲ್ಲೂ ಸಚಿನ್ ಪೈಲಟ್ ಅವರ ಮೂಲಕ ಇಂತಹದ್ದೇ ಬಂಡಾಯ ಎಬ್ಬಿಸಿಲು ಬಿಜೆಪಿ ಪ್ರಯತ್ನಿಸಿದರು. ಆದರೆ, ಅದು ಯಶಸ್ವಿಯಾಗಲಿಲ್ಲ. ಸಚಿನ್ ಪೈಲಟ್ ಅವರು ಪಕ್ಷ ತೊರೆಯದಂತೆ ತಡೆಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಯಿತು.
ಗೋವಾ ರಾಜ್ಯದಲ್ಲೂ ಸಹ ಬಿಜೆಪಿ ಇಂತಹದ್ದೇ ತಂತ್ರವನ್ನು ಹಲವು ಬಾರಿ ಪ್ರಯೋಗಿಸಿದೆ. 2019ರಲ್ಲಿ 10 ಮಂದಿ ಕಾಂಗ್ರೆಸ್ ಶಾಸಕರನ್ನು ಮತ್ತು 2022ರಲ್ಲಿ 8 ಮಂದಿ ಹಿರಿಯ ಕಾಂಗ್ರೆಸ್ ಶಾಸಕರನ್ನು ಒಟ್ಟಾಗಿ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಇಡೀ ಶಾಸಕಾಂಗ ಪಕ್ಷವನ್ನೇ ಬಿಜೆಪಿಯೊಳಗೆ ವಿಲೀನ ಮಾಡಲಾಯಿತು. ಈ ಮೂಲಕ ಚುನಾವಣೆಯಲ್ಲಿ ಬಹುಮತ ಗಳಿಸದಿದ್ದರೂ, ನಂತರದ ದಿನಗಳಲ್ಲಿ ವಿರೋಧ ಪಕ್ಷದ ಬಲವನ್ನು ಸಂಪೂರ್ಣವಾಗಿ ಕುಗ್ಗಿಸಿ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುವ ತಂತ್ರವನ್ನು ಪ್ರದರ್ಶಿಸಲಾಯಿತು.
ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ ಹಾಗೂ ಮೇಘಾಲಯಗಳಲ್ಲೂ ಕಾಂಗ್ರೆಸ್ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ಶಾಸಕರನ್ನು ಸಾರಾಸಗಟಾಗಿ ವಿಲೀನಗೊಳಿಸಿಕೊಳ್ಳುವ ಮೂಲಕ ಇಡೀ ರಾಜ್ಯ ಘಟಕಗಳನ್ನೇ ಬಿಜೆಪಿ ತನ್ನದಾಗಿಸಿಕೊಂಡ ಇತಿಹಾಸವಿದೆ.
ಬಿಹಾರದ ರಾಜಕೀಯದಲ್ಲೂ ಸಹ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷಗಳ ಮೈತ್ರಿಯನ್ನು ಮುರಿಯಲು ಬಿಜೆಪಿ ನಿರಂತರ ರಾಜಕೀಯ ಒತ್ತಡ ಹಾಗೂ ಕಾರ್ಯತಂತ್ರಗಳನ್ನು ಬಳಸಿತ್ತು. ಇತ್ತೀಚೆಗೆ, ದೆಹಲಿಯಲ್ಲೂ ಸಹ ಆಮ್ ಆದ್ಮಿ ಪಕ್ಷದೊಳಗೆ ಇಂತಹದ್ದೇ ಅಸಮಾಧಾನಗಳು ಕಾಣಿಸಿಕೊಂಡಿವೆ. ಇದರ ಹಿಂದೆ ಬಿಜೆಪಿಯೇ ಇದೆ ಎಂಬ ಆರೋಪಗಳೂ ಇವೆ.
ಬಿಜೆಪಿ ತನ್ನ ಅಧಿಕಾರ ಬಲ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ಚುನಾವಣಾ ಕುತಂತ್ರಗಳ ಮೂಲಕ ವಿಪಕ್ಷಗಳನ್ನು ಹಣಿಯುವ ಮತ್ತು ಒಡೆಯುವಲ್ಲಿ ಯಶಸ್ಸು ಕಾಣುತ್ತಿದೆ. ಇಂತಹ ತಂತ್ರಗಳು ಭಾರತೀಯ ರಾಜಕೀಯದಲ್ಲಿ ಅಸ್ಥಿರತೆಯನ್ನು ಹೆಚ್ಚಿಸುತ್ತವೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.



