ದಿಢೀರ್ ಆಗಿ ಇಡೀ ಜಗತ್ತನ್ನೇ ಕಣ್ಣೀರಿಡುವಂತೆ ಮಾಡಿದ್ದ ಐದು ವರ್ಷದ ಪ್ಯಾಲೇಸ್ತಿನ್ ಮಗು ಹಿಂದ್ ರಜಬ್ ಹತ್ಯೆಯ ಘಟನೆಯಲ್ಲಿ ಇಸ್ರೇಲ್ ಸೇನೆ ಕೊನೆಗೂ ತನ್ನ ಅಪರಾಧವನ್ನು ಅರೆಬರೆಯಾಗಿ ಒಪ್ಪಿಕೊಂಡಿದೆ. ಜಾಗತಿಕ ಆಕ್ರೋಶಕ್ಕೆ ಕೊನೆಗೂ ಮಣಿದಿದೆ.
ಆರಂಭದಲ್ಲಿ “ನಾವು ಆ ಜಾಗದಲ್ಲೇ ಇರಲಿಲ್ಲ” ಎಂದು ಸಾರಾಸಾಗಟಾಗಿ ಸುಳ್ಳು ಹೇಳಿ ಕೈತೊಳೆದುಕೊಂಡಿದ್ದ ಇಸ್ರೇಲ್ ರಕ್ಷಣಾ ಪಡೆ (IDF), ಜಾಗತಿಕ ಮಟ್ಟದ ಸ್ವತಂತ್ರ ತನಿಖೆಗಳು ಮತ್ತು ಸ್ಯಾಟಲೈಟ್ ಸಾಕ್ಷ್ಯಾಧಾರಗಳು ಬೆನ್ನತ್ತಿದ ಮೇಲೆ ಈಗ ತನ್ನ ಸೈನಿಕರ ವಿರುದ್ಧ ಅಪರಾಧ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: 12 ದಿನಗಳ ಹಿಂದೆ ಸಹಾಯಕ್ಕಾಗಿ ಕರೆ ಮಾಡಿದ್ದ ಬಾಲಕಿ ಶವವಾಗಿ ಪತ್ತೆ
ಏನಿದು ಭೀಕರ ಹತ್ಯಾಕಾಂಡ?
2024ರ ಜನವರಿಯಲ್ಲಿ ಗಾಜಾ ನಗರದಿಂದ ಹೊರಹೋಗುತ್ತಿದ್ದ ಹಿಂದ್ ರಜಬ್ ಹಾಗೂ ಆಕೆಯ ಕುಟುಂಬದ ಮೇಲೆ ಇಸ್ರೇಲ್ ಮಿಲಿಟರಿ ಟ್ಯಾಂಕ್‌ಗಳು ಮತ್ತು ಸೈನಿಕರು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ಕಾರಿನಲ್ಲಿದ್ದ ಕುಟುಂಬದ ಆರೂ ಜನ ಹತ್ಯೆಗೀಡಾಗಿದ್ದರು.
ಐದು ವರ್ಷದ ಮಗು ಹಿಂದ್ ರಜಬ್ ರಕ್ತಸಿಕ್ತ ಕಾರಿನಲ್ಲಿ ತನ್ನ ಸಂಬಂಧಿಕರ ಶವಗಳ ನಡುವೆ ಸಿಲುಕಿ, ಸುಮಾರು ಮೂರು ಗಂಟೆಗಳ ಕಾಲ ‘ರೆಡ್ ಕ್ರೆಸೆಂಟ್’ ರಕ್ಷಣಾ ಪಡೆಗೆ ಕರೆ ಮಾಡಿ, “ಪ್ಲೀಸ್ ನನ್ನನ್ನು ಕಾಪಾಡಿ, ಟ್ಯಾಂಕ್ ನನ್ನ ಪಕ್ಕದಲ್ಲೇ ಇದೆ” ಎಂದು ಜೀವಭಯದಿಂದ ರೋದಿಸಿದ್ದಳು.
ಮಗುವನ್ನು ರಕ್ಷಿಸಲು ಧಾವಿಸಿದ ‘ರೆಡ್ ಕ್ರೆಸೆಂಟ್’ ಆಂಬ್ಯುಲೆನ್ಸ್ ಮೇಲೆ ಕೂಡ ಇಸ್ರೇಲ್ ಸೈನಿಕರು ಶೆಲ್ ದಾಳಿ ನಡೆಸಿ, ರಕ್ಷಣೆಗೆ ಬಂದ ಇಬ್ಬರು ವೈದ್ಯಕೀಯ ಸಿಬ್ಬಂದಿಯನ್ನೂ ಕ್ರೂರವಾಗಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಭಾರತದಲ್ಲಿ ನಿಷೇಧ: ಇಸ್ರೇಲ್ ಸಂಬಂಧದ ನೆಪದಲ್ಲಿ ತಡೆಯೇ?
ವಾಷಿಂಗ್ಟನ್ ಪೋಸ್ಟ್, ಫೋರೆನ್ಸಿಕ್ ಆರ್ಕಿಟೆಕ್ಚರ್ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳು ಇಸ್ರೇಲಿ ಟ್ಯಾಂಕ್ ಕಾರಿನಿಂದ ಕೇವಲ ಕೆಲವು ಮೀಟರ್ ದೂರದಲ್ಲೇ ಇತ್ತು ಮತ್ತು 300ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಗಿತ್ತು ಎಂಬುದನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದವು.
ಆದರೆ ಇಸ್ರೇಲ್ ಮಾತ್ರ ಇಷ್ಟು ದಿನ ಸತ್ಯ ಮುಚ್ಚಿಡಲು ಯತ್ನಿಸಿತ್ತು. ಈಗ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಮಿಲಿಟರಿ ಪೊಲೀಸ್ ತನಿಖೆಗೆ ಆದೇಶಿಸಿದೆ. ಆದರೆ, “ಇದು ಕೇವಲ ಜಗತ್ತಿನ ಕಣ್ಣಿಗೆ ಮಣ್ಣೆರಚುವ ನಾಟಕ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯಾಗದ ಹೊರತು ಈ ಕ್ರೂರ ಹತ್ಯೆಗೆ ನ್ಯಾಯ ಸಿಗುವುದಿಲ್ಲ” ಎಂದು ಮಾನವ ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.




