ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜಕೀಯ ಹೈಡ್ರಾಮವು ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರದೊಂದಿಗೆ ಅಂತ್ಯಗೊಂಡಿದ್ದು, ಆಡಳಿತರೂಢ ಬಿಜೆಪಿ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯುವ ಗಡುವು ಮುಕ್ತಾಯಗೊಂಡಿದ್ದು, ತಿರಸ್ಕೃತಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವು ಮರುಸ್ಥಾಪನೆಯಾಗಲಿಲ್ಲ. ಇದರ ಪರಿಣಾಮವಾಗಿ, ಕಣದಲ್ಲಿದ್ದ ಬಿಜೆಪಿಯ ಮೂವರು ಅಭ್ಯರ್ಥಿಗಳಾದ ತರುಣ್ ಚುಗ್, ರಜನೀಶ್ ಅಗರ್ವಾಲ್ ಮತ್ತು ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಗಳು ಘೋಷಿಸಿದರು. ಆಯ್ಕೆಯ ಪ್ರಮಾಣಪತ್ರ ಸ್ವೀಕರಿಸಿದ ಕೂಡಲೇ ನೂತನ ಸಂಸದರು ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಂಡೇಲ್‌ವಾಲ್ ಅವರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದರು.
ತೆಲಂಗಾಣದ ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ವೇಳೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಈ ಬೆಳವಣಿಗೆಯಿಂದ ಕಂಗಾಲಾದ ಕಾಂಗ್ರೆಸ್, ನಾಮಪತ್ರವನ್ನು ಮರುಸ್ಥಾಪಿಸುವಂತೆ ಕೋರಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಹಾಗೂ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು. ಆದರೆ, ಗುರುವಾರ ಸಂಜೆಯವರೆಗೂ ಚುನಾವಣಾ ಆಯೋಗದಿಂದ ಯಾವುದೇ ನಿರ್ಧಾರ ಪ್ರಕಟವಾಗಲಿಲ್ಲ.
ಇದನ್ನು ಓದಿದ್ದೀರಾ? ನಾಯಕತ್ವ ಕೈತಪ್ಪಿದರೂ ಕ್ರೀಡಾಸ್ಫೂರ್ತಿ ಮೆರೆದ ಸೂರ್ಯಕುಮಾರ್ ಯಾದವ್
ಮತ್ತೊಂದೆಡೆ, ಈ ಪ್ರಕರಣದ ತುರ್ತು ವಿಚಾರಣೆ ನಡೆಸಲು ಸಮ್ಮತಿಸಿರುವ ಸುಪ್ರೀಂ ಕೋರ್ಟ್, ಶುಕ್ರವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಕಾಗದದ ಮೇಲಿನ ಸಂಖ್ಯಾಬಲದ ಕೊರತೆಯ ನಡುವೆಯೂ ಮೂರನೇ ಅಭ್ಯರ್ಥಿಯಾಗಿ ಮಹೇಶ್ ಕೇವತ್ ಅವರನ್ನು ಬಿಜೆಪಿ ಅಚ್ಚರಿಯ ರೀತಿಯಲ್ಲಿ ಕಣಕ್ಕಿಳಿಸಿದ ನಂತರವೇ ರಾಜ್ಯದಲ್ಲಿ ಕುದುರೆ ವ್ಯಾಪಾರ ಹಾಗೂ ಅಡ್ಡಮತದಾನದ ಭೀತಿ ಎದುರಾಗಿ ಈ ರಾಜಕೀಯ ಹೈಡ್ರಾಮ ಶುರುವಾಗಿತ್ತು.
ಕಳೆದ ಮೂರು ದಿನಗಳಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಅಕ್ಷರಶಃ ಅಭೂತಪೂರ್ವ ರಾಜಕೀಯ ಕಾಳಗಕ್ಕೆ ಸಾಕ್ಷಿಯಾಯಿತು. ತಮ್ಮ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಚುನಾವಣಾ ಅಧಿಕಾರಿಯ (ಸಿಇಒ) ಕಚೇರಿ ಎದುರು ರಾತ್ರಿಯಿಡೀ ಧರಣಿ ನಡೆಸಿದರು. ಶಾಸಕರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರೆ, ಪಕ್ಷದ ಕಾರ್ಯಕರ್ತರು ಚುನಾವಣಾ ಕಚೇರಿಯ ಬೀಗ ಹಾಕಿದ ಗೇಟ್‌ಗೆ ಆರ್‌ಎಸ್‌ಎಸ್ ಸಮವಸ್ತ್ರವನ್ನು ನೇತುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಾಂವಿಧಾನಿಕ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುತ್ತಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ನೇರ ಆರೋಪ ಮಾಡಿದ್ದು, ಚುನಾವಣಾ ಕಣವು ಹೋರಾಟದ ಸ್ವರೂಪ ಪಡೆದುಕೊಂಡಿತ್ತು.





