ಕಳೆದ ಚುನಾವಣೆಯಲ್ಲಿ ʼವಿಕಸಿತ ಭಾರತ್ʼ ಎಂದು ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಯಾವತ್ತಿಗೂ ಬಡವರ ಪರ ಕೆಲಸಗಳನ್ನಾಗಲಿ ಬಡವರ ಪರ ಯೋಜನೆಗಳನ್ನಾಗಲೀ ಮಾಡಲೇ ಇಲ್ಲ. ವಿಕಸಿತ ಭಾರತ(ಬಡತನ ನಿರ್ಮೂಲನೆ)ವೆಂದು ಕೇವಲ ಘೋಷಣೆಗಳನ್ನು ಕೂಗುವ ಮೋದಿ, ಯೋಜನೆಯನ್ನೂ ಸರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ.
2024ರ ಲೋಕಸಭಾ ಚುನಾವಣೆಯ ಉತ್ಸಾಹಭರಿತ ಶಕ್ತಿಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, “ನನ್ನ ಗುರಿ ಕೇವಲ ಪ್ರಧಾನ ಮಂತ್ರಿಯ ಸ್ಥಾನವನ್ನು ಅಲಂಕರಿಸುವುದು, ಅದರ ಸವಲತ್ತುಗಳನ್ನು ಅನುಭವಿಸುವುದು ಆಗಿದ್ದರೆ, ನಾನು ಅದನ್ನು ಕೇವಲ ಒಂದು ತಿಂಗಳಲ್ಲಿ ಸಾಧಿಸಬಹುದಿತ್ತು. ಆದರೆ ನಾನು ನಿಮ್ಮ ಸೇವೆ ಮಾಡಲು, ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಏಕೈಕ ಸಂಕಲ್ಪದೊಂದಿಗೆ ಇಲ್ಲಿದ್ದೇನೆ” ಎಂದು ಪ್ರಧಾನಿ ಮೋದಿ ತಮ್ಮ ಅಪ್ಪಟ ಸುಳ್ಳಿನೊಂದಿಗೆ ತಮ್ಮ ಭಾಷಣ ಪ್ರಾರಂಭಿಸಿದರು.
“ನಿಮ್ಮ ಕನಸುಗಳನ್ನು ಈಡೇರಿಸುವುದು ನನ್ನ ಜೀವನದ ಉದ್ದೇಶ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ, ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೇವೆ ಸಲ್ಲಿಸಲು ನಾನು ಇಲ್ಲಿದ್ದೇನೆ. ನಿಮ್ಮ ಮಕ್ಕಳು ಕೇವಲ ನಿಮ್ಮ ಭವಿಷ್ಯವಲ್ಲ, ಅವರು ನಮ್ಮ ರಾಷ್ಟ್ರದ ಭವಿಷ್ಯ. ಹಾಗಾಗಿ ನಿಮ್ಮೊಂದಿಗೆ ಆ ಭವಿಷ್ಯವನ್ನೂ ರೂಪಿಸಲು ನಾನು ಬದ್ಧನಾಗಿದ್ದೇನೆ” ಎಂದು ಸುಳ್ಳಿನ ಸುರಿಮಳೆ ಸುರಿಸಿದರು.
ಕಳೆದ ಹತ್ತು ವರ್ಷಗಳಿಂದ ಜನರ ಭವಿಷ್ಯದ ಬಗ್ಗೆ ಅವರ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿದ ಮೋದಿ ಈಗ ಮತಕ್ಕಾಗಿ ನಿಮ್ಮೊಂದಿಗೆ ನಿಮ್ಮ ಮಕ್ಕಳ ಭವಿಷ್ಯವನ್ನೂ ರೂಪಿಸಲು ನಾನು ಬದ್ಧನಾಗಿದ್ದೇನೆಂದು ಬಂಡಲ್ ಬಿಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಮಕ್ಕಳಿಗಾಗಿ ಮೋದಿಯವರ ಸಾಧನೆ ಏನು?. ಕಳೆದ 10 ವರ್ಷಗಳಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜನರು ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಿರುವಾಗ ಮೋದಿಯಿಂದ ಭವಿಷ್ಯದ ಬಗ್ಗೆ ನಿರೀಕ್ಷೆ ಮಾಡಲು ಸಾಧ್ಯವೇ? ಮೋದಿ ಆಡಳಿತ ಕೇವಲ ಮಾತಿಗಷ್ಟೇ ಸೀಮಿತವಾಗಿದಿಯೇ ಹೊರತು, ದೇಶದ ಅಭಿವೃದ್ಧಿಗಲ್ಲ.
ಈ ನೆಲದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ದೇಶ. ಆದರೆ, ಮೋದಿ ನಾನೇ ದೇಶ ಎಂದು ಕೊಚ್ಚಿಕೊಳ್ಳುತ್ತಾರೆ. ಹತ್ತು ವರ್ಷಗಳ ಅವಧಿಯಲ್ಲಿ ಪ್ರತೀ ರಾಜ್ಯಗಳಲ್ಲಿಯೂ ಪ್ರವಾಹ ಬಂದಾಗ ತಿರುಗಿ ನೋಡದ ಮೋದಿ, ಬರಗಾಲದಲ್ಲಿ ತಿರುಗಿ ನೋಡದ ಮೋದಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದರೂ ತುಟಿ ಬಿಚ್ಚದ ಮೋದಿಯಿಂದ ನಾವು ಭವಿಷ್ಯದ ಕನಸು ಕಾಣಲು ಸಾಧ್ಯವೇ?
“ಬಡತನವನ್ನು ನೋಡುವುದು ನನ್ನ ಆತಂಕವನ್ನು ಹೆಚ್ಚಿಸುತ್ತದೆ. ಆದರೆ ಭಾರತದ ಪ್ರಗತಿಗೆ ನಾನು ಬದ್ಧನಾಗಿದ್ದೇನೆ. ಒಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆತ್ತಿರುವುದು ನಾವು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂಬುದನ್ನು ಸಾಬೀತುಪಡಿಸುತ್ತದೆ. ಅದಕ್ಕಾಗಿಯೇ ನಾನು ಬಡತನ ಮುಕ್ತ ಭಾರತಕ್ಕಾಗಿ ಅವಿರತವಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ʼವಿಕಸಿತ ಭಾರತ್ʼ ಎಂದು ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಯಾವತ್ತಿಗೂ ಬಡವರ ಪರ ಕೆಲಸಗಳನ್ನಾಗಲಿ ಬಡವರ ಪರ ಯೋಜನೆಗಳನ್ನಾಗಲೀ ಮಾಡಲೇ ಇಲ್ಲ. ವಿಕಸಿತ ಭಾರತ(ಬಡತನ ನಿರ್ಮೂಲನೆ)ವೆಂದು ಕೇವಲ ಘೋಷಣೆಗಳನ್ನು ಕೂಗುವ ಮೋದಿ, ಯೋಜನೆಯನ್ನೂ ಸರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ.
ಎಷ್ಟೋ ಕುಟುಂಬಗಳು ಇಂದಿಗೂ ವಾಸಕ್ಕೆ ಮನೆಗಳಿಲ್ಲದೆ ಬೀದಿಗಳಲ್ಲಿದ್ದಾರೆ. ಒಂದೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗಗಳಿಲ್ಲದೆ ನಿರುದ್ಯೋಗಿ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ರಮದ ದಾರಿಗಳನ್ನು ಹಿಡಿಯುತ್ತಿದ್ದಾರೆ. ಮೋದಿಯ ವಿಕಸಿತ ಭಾರತ ನಿಜವೇ ಆಗಿದ್ದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದಾದರೂ ಏಕೆ?
“ಟಿಎಂಸಿ-ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷದವರು ಏನು ಮಾಡುತ್ತಿದ್ದಾರೆ? ಮೋದಿಯ ತಲೆಗೆ ಬಡಿಯಿರಿ, ಮೋದಿಯನ್ನು ಗುಂಡಿಕ್ಕಿ ಕೊಲ್ಲಿರಿ ಎಂದು ಅವರು ಹೇಳುತ್ತಾರೆ. ಆದರೆ ನಾನು ದೃಢ ನಿಶ್ಚಯದಿಂದ ಇದ್ದೇನೆ. ಅವರು ನನ್ನನ್ನು ಹೆಚ್ಚು ದ್ವೇಷಿಸಿದಷ್ಟೂ ನಾನು ನನ್ನ ದೇಶವಾಸಿಗಳಿಗೆ ಹೆಚ್ಚು ಸೇವೆ ಸಲ್ಲಿಸುತ್ತೇನೆ” ಎಂದು ದ್ಷೇಷದ ಕಿಚ್ಚು ಹಚ್ಚಿದ್ದಾರೆ.
ಮೋದಿ ಸೋಲಿನ ಭಯದಿಂದ ಆರಂಭಿಸಿದ ದ್ವೇಷ ಭಾಷಣಗಳು ದಿನದಿಂದ ದಿನಕ್ಕೆ ವ್ಯತಿರಿಕ್ತವಾಗುತ್ತಿವೆಯೇ ಹೊರತು, ಅಂತ್ಯವಾಗುತ್ತಿಲ್ಲ. ಇಷ್ಟುದಿನ ಮುಸಲ್ಮಾನರ ಮೀಸಲಾತಿ, ಭ್ರಷ್ಟ ಕಾಂಗ್ರೆಸ್, ಪಿತ್ರಾರ್ಜಿತ ತೆರಿಗೆ ಎಲ್ಲದರ ಕುರಿತು ಮಾತನಾಡಿದ ಮೋದಿ ಈಗ ಮೋದಿಯನ್ನೇ ಕೊಲ್ಲಿರೆನ್ನುತ್ತಿದ್ದಾರೆಂಬ ಹೊಸ ಸುಳ್ಳನ್ನು ಹೆಣೆಯುತ್ತಿದ್ದಾರೆ. ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗಟ್ಟುವ ಮೂಲಕ ಪ್ರಜಾಪ್ರಭುತ್ವವವನ್ನೇ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ. ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಮೂಲಕ ಜನರನ್ನು ಬೇರೆಡೆಗೆ ಸೆಳೆಯುವ ತಂತ್ರ ನಡೆಸುತ್ತಿದ್ದಾರೆ.
“ಎಡ-ಕಾಂಗ್ರೆಸ್ ಮತ್ತು ಟಿಎಂಸಿಗೆ ಅಭಿವೃದ್ಧಿಯ ದೃಷ್ಟಿಕೋನವಿಲ್ಲ ಮತ್ತು ಮತಗಳಿಗಾಗಿ ಸಮಾಜವನ್ನು ವಿಭಜಿಸುವತ್ತ ಗಮನ ಹರಿಸಿವೆ. ಬಂಗಾಳದಲ್ಲಿ, ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗಿದೆ. ದೇವಾಲಯಗಳು ಮತ್ತು ರಾಮನವಮಿ ಮೆರವಣಿಗೆಗಳಿಗೆ ಆಕ್ಷೇಪಣೆಗಳಿವೆ. ದೇಶದ ಕ್ರಮದ ಬೇಡಿಕೆಯ ಹೊರತಾಗಿಯೂ ಟಿಎಂಸಿ ಸರ್ಕಾರವು ಸಂದೇಶ್ ಖಾಲಿಯಲ್ಲಿ ಅಪರಾಧಿ ಶಹಜಹಾನ್ ಶೇಖ್ ಅವರನ್ನು ರಕ್ಷಿಸುತ್ತಿದೆ. ತುಷ್ಟೀಕರಣವು ಜನರಿಗೆ ಮನುಷ್ಯನಿಗಿಂತ ಹೆಚ್ಚಿನದಾಗಿದೆ” ಎಂದು ಉದ್ದುದ್ದ ಭಾಷಣಗಳನ್ನು ಬಿಗಿಯುತ್ತಿದ್ದಾರೆ.
‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದೆಲ್ಲ ದೊಡ್ಡ ದೊಡ್ಡ ಭಾಷಣ ಮಾಡುವ ಮೋದಿ ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ಮೌನ ಮುರಿಯಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನವನ್ನೂ ಹೇಳಲಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದವರ ಬದುಕು ಬೀದಿಗೆ ಬಂದಾಗಲೇ, ಮಹಾನ್ ದೇಶಾಭಿಮಾನಿ ಮತ್ತು ತಾನೇ ದೇಶ ಎಂದುಕೊಳ್ಳುವ ಸರ್ಕಾರದ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಕ್ರೀಡಾ ಲೋಕದಲ್ಲಿ ತಮ್ಮದೇ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ, ಗೌರವ ಹೆಚ್ಚಿಸಿದವರಿಗಾದ ಅನ್ಯಾಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಪರವಾಗಿ ಇದೇ ಪ್ರಧಾನಿ ಒಂದೇ ಒಂದು ಮಾತನ್ನೂ ಆಡದೆ ಸಂಸತ್ ಭವನದ ಉದ್ಘಾಟನೆಯ ಪೂಜೆ ಪುನಸ್ಕಾರಗಳಲ್ಲಿ ನಿರತರಾಗಿದ್ದರು. ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಒಂದೇ ಒಂದು ಮಾತು ಆಡದೆ ಜಾಣ ಕುರುಡು ಪ್ರದರ್ಶಿಸಿದ್ದರು. ಇದೀಗ ವಿಪಕ್ಷಗಳು ಅಪರಾಧಿಯನ್ನು ರಕ್ಷಿಸುತ್ತಿರುವುದಾಗಿ ಸುಳ್ಳು ಸುಳ್ಳು ಬೊಗಳೆ ಬಿಡುತ್ತಿದ್ದಾರೆ.
“ಮಾಧ್ಯಮಗಳು ಮತ್ತು ತಜ್ಞರು ಇನ್ನೂ ಚುನಾವಣಾ ಫಲಿತಾಂಶದ ಬಗ್ಗೆ ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಆದರೆ ಅಭಿಪ್ರಾಯ ಅಥವಾ ನಿರ್ಗಮನ ಸಮೀಕ್ಷೆಗಳ ಅಗತ್ಯವಿಲ್ಲ. ಫಲಿತಾಂಶ ಸ್ಪಷ್ಟವಾಗಿದೆ. ಸೋಲಿನ ಭಯದಿಂದಾಗಿ ಕಾಂಗ್ರೆಸ್‌ನ ದೊಡ್ಡ ನಾಯಕ ರಾಜ್ಯಸಭೆಗೆ ಆಯ್ಕೆ ಮಾಡುತ್ತಾರೆಂದು ನಾನು ಭವಿಷ್ಯ ನುಡಿದಿದ್ದೆ, ಹಾಗೆಯೇ ಆಯಿತು. ಅಂತೆಯೇ, ವಯನಾಡಿನಲ್ಲಿ ಸೋಲುವ ಭಯದಿಂದ ಶೆಹಜಾದಾ(ರಾಹುಲ್ ಗಾಂಧಿ) ಮತ್ತೊಂದು ಸ್ಥಾನವನ್ನು ಬಯಸುತ್ತಾರೆಂದು ನಾನು ಹೇಳಿದೆ. ಈಗ ಅವರು ಅಮೇಥಿಯಿಂದ ರಾಯ್ ಬರೇಲಿಗೆ ಪಲಾಯನ ಮಾಡಿದ್ದಾರೆ. ಕಾಂಗ್ರೆಸ್ ಈ ಬಾರಿ ಕಡಿಮೆ ಸ್ಥಾನಗಳನ್ನು ಪಡೆಯಲಿದೆ. ಅವರು ದೇಶವನ್ನು ಗೆಲ್ಲಲು ಮತ್ತು ವಿಭಜಿಸಲು ಸ್ಪರ್ಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ” ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಭಾಷಣ ಬಿಗಿಯುತ್ತಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಗೆ ಉತ್ತರ ಪ್ರದೇಶದ ಕೈಸರ್‌ಜಂಗ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದಾದರೂ ಏಕೆ? ಸೋಲುವ ಭಯದಿಂದಲೇ. ಈ ಬಾರಿ ಮೋದಿಜಿ ತಮ್ಮ ಪಕ್ಷದ ಘಟಾನುಗಟಿ ನಾಯಕರಿಗೆ ಟಿಕೆಟ್ ತಪ್ಪಿಸಿರುವುದಾದರೂ ಏಕೆ? ದ್ವೇಷದ ಕಿಚ್ಚು ಹಚ್ಚಿರುವ ನಾಯಕರು ಜನರ ಕಂಗಣ್ಣಿಗೆ ಗುರಿಯಾಗಿದ್ದಾರೆ. ಮತದಾರರು ಅವರ ಸೊಕ್ಕನ್ನು ತಮ್ಮ ಮತಗಳ ಮೂಲಕ ಮೋಟಕುಗೊಳಿಸುವರೆಂದು ಹೆದರಿ ಸೋಲಿನ ಭಯದಿಂದ ಮೋದಿ ಅಂತಹ ನಾಯಕರಿಗೆ ಟಿಕೆಟ್ ತಪ್ಪಿಸಿದ್ದಾರಲ್ಲವೇ?
ಮತ್ತೆ ಅಧಿಕಾರ ಪಡೆಯುವುದಕ್ಕಾಗಿ ದ್ವೇಷ ಭಾಷಣಗೈದು, ದೇಶ ವಿಭಜನೆಯ ಮಾಡುತ್ತಿರುವವವರು ಮೋದಿಯವರು ಎಂಬ ಆರೋಪ ಅವರ ಮೇಲಿದೆ. ಕಾಂಗ್ರೆಸ್ ದೇಶಾದ್ಯಂತ ʼಭಾರತ್ ಜೋಡೋʼದಂತಹ ಅಭಿಯಾನಗಳನ್ನು ನಡೆಸಿದ್ದು, ಛಿದ್ರವಾಗಿರುವ ಭಾರತೀಯರನ್ನು ಅವರ ಮನಸ್ಥಿತಿಗಳನ್ನು ಬೆಸೆಯುವಂತಹ ಸಾಹಸ ಮಾಡಿದ್ದು, ಕಾಂಗ್ರೆಸ್ ನಾಯಕರೇ. ಅವರು ರಾಷ್ಟ್ರೀಯತೆ, ಐಕ್ಯತೆ, ಸಾಮರಸ್ಯವನ್ನು ಬೆಸೆಯುತ್ತಿದ್ದಾರೆ. ಆದರೆ, ಮೋದಿಜಿ ಬಾಯಿಬಿಟ್ಟರೆ ಮುಸಲ್ಮಾನ್, ಹಿಂದೂಗಳ ವಿಭಜನೆ, ರಾಜಮನೆತನ ಎಂದೆಲ್ಲ ಬಂಡಲ್ ಬಿಡುತ್ತಿದ್ದಾರೆ. ದೇಶದೆಲ್ಲೆಡೆ ಮತಕ್ಕಾಗಿ ವಿಷದ ಬೀಜ ಬಿತ್ತುತ್ತಿದ್ದಾರೆ. ಇದರ ಫಲ ಯಾರಿಗೆ ದೊರೆಯುವುದೆಂದು ಕಾದು ನೋಡಬೇಕು.