ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಗರ್ಭಪಾತಕ್ಕೆ ಇರುವ ಗರಿಷ್ಠ ಕಾಲಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಪ್ರಸ್ತುತ ಕಾನೂನಿಗೆ ಸೂಕ್ತ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.
ಅತ್ಯಾಚಾರದಿಂದ ಸಂಭವಿಸುವ ಗರ್ಭಧಾರಣೆಯನ್ನು ವಿಳಂಬವಾದರೂ ಯಾವುದೇ ಹಂತದಲ್ಲಿ ಅಂತ್ಯಗೊಳಿಸಲು ಸಂತ್ರಸ್ತೆಯರಿಗೆ ಮುಕ್ತ ಅವಕಾಶವಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ವಿಭಾಗೀಯ ಪೀಠವು ಗುರುವಾರ ಈ ಸೂಚನೆ ನೀಡಿದೆ.
15 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳ 30 ವಾರಗಳ ಗರ್ಭವನ್ನು ತೆಗೆಯಲು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ನವದೆಹಲಿಯ ‘ಏಮ್ಸ್’ (AIIMS) ಆಸ್ಪತ್ರೆಯು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯ(ತಪ್ಪು ತೀರ್ಪು ನೀಡಿ ನ್ಯಾಯ ದೊರಕದಿದ್ದರೆ ಕೊನೆಯ ಬಾರಿ ಕೇಳುವ ಅವಕಾಶ) ವಿಚಾರಣೆ ವೇಳೆ ಪೀಠವು ಈ ನಿರ್ಣಯ ವ್ಯಕ್ತಪಡಿಸಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಕಾನೂನುಗಳು ಸಹ ವಿಕಾಸಗೊಳ್ಳಬೇಕು. ಕೇವಲ ಭ್ರೂಣದ ರಕ್ಷಣೆಗಿಂತ, ಅಮಾನವೀಯ ಕೃತ್ಯದಿಂದ ಅಪಾರ ನೋವು ಅನುಭವಿಸಿದ ತಾಯಿಯ ಹಕ್ಕುಗಳು ಮತ್ತು ಘನತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಿಜೆಐ ಸೂರ್ಯ ಕಾಂತ್ ಒತ್ತಿ ಹೇಳಿದರು.
ಇದನ್ನು ಓದಿದ್ದೀರಾ? ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲು; ಪಶ್ಚಿಮ ಬಂಗಾಳದಲ್ಲಿ ಮಣ್ಣುಮುಕ್ಕಿದ್ದ ‘ಎಕ್ಸಿಟ್ ಪೋಲ್’
ಗರ್ಭಧಾರಣೆಯನ್ನು ಇನ್ನಷ್ಟು ದಿನ ಮುಂದುವರಿಸಿದರೆ ಭ್ರೂಣದ ಬೆಳವಣಿಗೆಗೆ ಒಳ್ಳೆಯದು ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಸ್ಪಷ್ಟವಾಗಿ ತಳ್ಳಿಹಾಕಿತು. ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭ ಧರಿಸುವಂತೆ ಒತ್ತಾಯಿಸಲು ಸಾಧ್ಯವೇ ಇಲ್ಲ. ಕಾನೂನಿನಲ್ಲಿ ಸಂತ್ರಸ್ತೆಯ ಮಾನಸಿಕ ಆರೋಗ್ಯವನ್ನು ಗೌರವಿಸಬೇಕು ಎಂದು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ತಿಳಿಸಿದರು. ಪೋಷಕರಿಗೆ ವೈದ್ಯಕೀಯ ಮಾಹಿತಿಯನ್ನು ಒದಗಿಸಿ, ಮಗುವನ್ನು ಉಳಿಸಿಕೊಳ್ಳುವುದು ಅಥವಾ ಗರ್ಭಪಾತ ಮಾಡಿಸುವುದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಪ್ರಸ್ತುತ ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ, ಅತ್ಯಾಚಾರದಂತಹ ಕೆಲವು ವಿಶೇಷ ಪ್ರಕರಣಗಳಲ್ಲಿಯೂ ಗರಿಷ್ಠ 24 ವಾರಗಳವರೆಗೆ ಮಾತ್ರ ಗರ್ಭಪಾತಕ್ಕೆ ಕಾನೂನುಬದ್ಧ ಅವಕಾಶವಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಗಡುವನ್ನು ಸಂಪೂರ್ಣವಾಗಿ ಸಡಿಲಿಸಬೇಕು. ಕಾನೂನು ಸದಾ ಪ್ರಸ್ತುತವಾಗಿರಬೇಕು ಹಾಗೂ ಪ್ರಜೆಗಳ ಘನತೆಯನ್ನು ಎತ್ತಿಹಿಡಿಯುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.




