ವಂದೇ ಮಾತರಂ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ನಿರ್ಣಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಟೆಲಿಪ್ರಾಂಪ್ಟರ್ ಸಹಾಯವಿಲ್ಲದೆ ಬಿಜೆಪಿ ಸಂಪುಟದ ಎಲ್ಲ ಸಚಿವರು ಸಂಪೂರ್ಣ ರಾಷ್ಟ್ರಗೀತೆಯನ್ನು ಹಾಡಲಿ. ಹಾಗೆ ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ, ಆರ್‌ಎಸ್‌ಎಸ್‌ನ ಆತಂಕ, ನಿರುದ್ಯೋಗ ಹಾಗೂ ದೇಶದ ಆರ್ಥಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ.
ರೂಪಾಯಿ ಮೌಲ್ಯ ಕುಸಿತದ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ₹98ಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಭಾರತವು ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಬೇಕಿದೆ. ಈ ವಿಚಾರಗಳಿಂದಲೂ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದಿ ಟೆಲಿಪ್ರಾಂಪ್ಟರ್ ಇಲ್ಲದೆ ಸಂಪೂರ್ಣ ʼವಂದೇ ಮಾತರಂʼ ಹಾಡಿದರೆ ಸನ್ಮಾನಿಸುತ್ತೇನೆ: ಸಂಜಯ್ ಸಿಂಗ್
‘ವಂದೇ ಮಾತರಂ ಕುರಿತು ನಮಗೆ ಹೇಳಲು ಇವರು ಯಾರು?’ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರು ನಿಜವಾಗಿಯೂ ದೇಶಭಕ್ತರಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಗಪುರಕ್ಕೆ ತೆರಳಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಇನ್ನು ಮುಂದೆ ಆರ್‌ಎಸ್‌ಎಸ್ ಶಾಖೆಗಳಲ್ಲಿ ಸಂಘದ ಗೀತೆಯನ್ನು ಹಾಡದಂತೆ ಸೂಚಿಸಬೇಕು. ಅದರ ಬದಲು ಎಲ್ಲಾ ಆರ್‌ಎಸ್‌ಎಸ್ ಶಾಖೆಗಳಲ್ಲಿ ವಂದೇ ಮಾತರಂ ಹಾಡಿಸುವಂತೆ ಮಾಡಬೇಕು ಎಂದು ಸವಾಲು ಹಾಕಿದರು.




