ಆಮ್ ಆದ್ಮಿ ಪಕ್ಷ (ಎಎಪಿ) ತೊರೆದು ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ, ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರ ವಿರುದ್ಧ ಪಂಜಾಬ್ ಪೊಲೀಸರು ಎರಡು ಪ್ರತ್ಯೇಕ ಜಾಮೀನು ರಹಿತ ಪ್ರಕರಣಗಳನ್ನು (ಎಫ್‌ಐಆರ್) ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ, ಏಪ್ರಿಲ್ 24ರಂದು ಸಂದೀಪ್ ಪಾಠಕ್ ಸೇರಿದಂತೆ ಎಎಪಿಯ ಒಟ್ಟು ಏಳು ಮಂದಿ ರಾಜ್ಯಸಭಾ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ ಮೂಲ ತತ್ವ ಮತ್ತು ಮೌಲ್ಯಗಳಿಂದ ವಿಮುಖವಾಗಿದೆ ಎಂದು ಆರೋಪಿಸಿ ಅವರು ಈ ನಿರ್ಧಾರ ಕೈಗೊಂಡಿದ್ದರು. ರಾಘವ್ ಚಡ್ಡಾ, ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್ ಸೇರಿದಂತೆ ಪ್ರಮುಖ ಸಂಸದರ ಪಕ್ಷಾಂತರದಿಂದಾಗಿ ರಾಜ್ಯಸಭೆಯಲ್ಲಿ ಎಎಪಿ ಸಂಖ್ಯಾಬಲ ತೀವ್ರವಾಗಿ ಕುಸಿದಿತ್ತು. ಈ ಮಹತ್ವದ ರಾಜಕೀಯ ಪಲ್ಲಟದ ಬೆನ್ನಲ್ಲೇ ಇದೀಗ ಪಂಜಾಬ್‌ನ ಎರಡು ವಿಭಿನ್ನ ಜಿಲ್ಲೆಗಳಲ್ಲಿ ಪಾಠಕ್ ವಿರುದ್ಧ ದಿಢೀರ್ ಎಫ್‌ಐಆರ್‌ಗಳು ದಾಖಲಾಗಿವೆ.
ಇದನ್ನು ಓದಿದ್ದೀರಾ? ಗಾಯದ ಮೇಲೆ ಬರೆ: ಇಂಧನ ಲೀಟರ್‌ಗೆ 5 ರೂ., ಸಿಲಿಂಡರ್‌ಗೆ 50ರೂ. ಏರಿಕೆ ಸಾಧ್ಯತೆ!
ಪೊಲೀಸ್ ಮೂಲಗಳ ಪ್ರಕಾರ, ಭ್ರಷ್ಟಾಚಾರ ಹಾಗೂ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಜಾಮೀನು ರಹಿತ ಸೆಕ್ಷನ್‌ಗಳನ್ನು ಬಳಸಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣದ ಕುರಿತು ಶನಿವಾರ ಮಾಧ್ಯಮಗಳಲ್ಲಿ ಮಾಹಿತಿ ಹೊರಬೀಳುತ್ತಿದ್ದಂತೆಯೇ, ದೆಹಲಿಯಲ್ಲಿರುವ ಪಾಠಕ್ ಅವರ ನಿವಾಸಕ್ಕೆ ಪೊಲೀಸರು ಭೇಟಿ ನೀಡುವ ಮುನ್ನವೇ ಅವರು ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ತಮಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ ಎಂದು ಸ್ವತಃ ಸಂದೀಪ್ ಪಾಠಕ್ ಸುದ್ದಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸಂಸದರ ವಿರುದ್ಧದ ಈ ಪೊಲೀಸ್ ಕ್ರಮವನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ತೀವ್ರವಾಗಿ ಖಂಡಿಸಿವೆ. “ಇದೊಂದು ಸಂಪೂರ್ಣ ರಾಜಕೀಯ ಪ್ರೇರಿತ ದ್ವೇಷದ ಕ್ರಮ. ಎಎಪಿ ತೊರೆದ ತಕ್ಷಣವೇ ಪಾಠಕ್ ಅವರನ್ನು ಗುರಿಯಾಗಿಸಿಕೊಂಡು, ವಿರೋಧ ಪಕ್ಷದ ದನಿ ಅಡಗಿಸುವ ನಿಟ್ಟಿನಲ್ಲಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಪೊಲೀಸರನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ” ಎಂದು ಪಂಜಾಬ್ ಬಿಜೆಪಿ ಕಾರ್ಯಾಧ್ಯಕ್ಷ ಅಶ್ವಿನಿ ಶರ್ಮಾ ಆರೋಪಿಸಿದ್ದಾರೆ.




