ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP-SP) ಮುಖ್ಯಸ್ಥ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹೋಲಿಸುವುದನ್ನು ಬಲವಾಗಿ ಆಕ್ಷೇಪಿಸಿದ್ದಾರೆ. ನೆಹರೂ ಅವರ ಸ್ಥಾನ ಇತಿಹಾಸದಲ್ಲಿ ವಿಶಿಷ್ಟವಾಗಿದ್ದು, ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ತಮ್ಮ ಪಕ್ಷದ 27ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಪವಾರ್, “ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತ್ಯಾಗ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಹರೂ ಅವರಿಗೆ ಹೋಲಿಸುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನೆಹರೂ ನಿಂದನೆಗೆ ಅವಕಾಶ ಹುಡುಕುವ ಮೋದಿ ಮುಂದೆಯೇ ದೇಶದ ಮೊದಲ ಪ್ರಧಾನಿ ಗುಣಗಾನ ಮಾಡಿದ ವಿಯೆಟ್ನಾಂ ಅಧ್ಯಕ್ಷ!
“ನೆಹರೂ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹಲವು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರ್ಯದ ನಂತರದ ಅತ್ಯಂತ ಕಠಿಣ ಹಾಗೂ ಸವಾಲಿನ ದಿನಗಳಲ್ಲಿ ಅವರು ದೇಶವನ್ನು ಮುನ್ನಡೆಸಿದವರು ನೆಹರೂ. ಇದೀಗ ಮೋದಿ ಅವರು ದೀರ್ಘಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವುದು ಒಳ್ಳೆಯ ವಿಷಯ. ಪ್ರಧಾನಿ ಹುದ್ದೆಗೆ ನಾವು ಗೌರವ ನೀಡಬೇಕು. ಆದರೆ ಕೇವಲ ಸುದೀರ್ಘ ಅಧಿಕಾರಾವಧಿಯ ಕಾರಣಕ್ಕೆ ಇತಿಹಾಸದ ಮಹಾನ್ ನಾಯಕರ ತ್ಯಾಗವನ್ನು ಮರೆತು ಹೋಲಿಕೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಆಡಳಿತಾವಧಿಯ ಹಿನ್ನೆಲೆಯಲ್ಲಿ ಅವರ ಸುತ್ತಲೂ ‘ಅವರಿಗಿಂತ ದೊಡ್ಡ ನಾಯಕನೇ ಇಲ್ಲ’ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇತಿಹಾಸದ ಸತ್ಯಗಳನ್ನು ಮತ್ತು ನೆಹರೂ-ಗಾಂಧಿ ಕುಟುಂಬದ ಐತಿಹಾಸಿಕ ಕೊಡುಗೆಗಳನ್ನು ಯಾರು ಕೂಡ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಪವಾರ್ ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದ ಬಿಜೆಪಿ ಸಚಿವ ಗಿರೀಶ್ ಮಹಾಜನ್ ಅವರು ಆಪರೇಷನ್ ಬ್ಲೂ ಸ್ಟಾರ್ ಕುರಿತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ಪವಾರ್ ಖಂಡಿಸಿದ್ದಾರೆ. ಇಂದಿರಾ ಗಾಂಧಿಯವರು ದೇಶದ ಹೆಮ್ಮೆ ಮತ್ತು ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ಪವಾರ್ ಸಮರ್ಥಿಸಿಕೊಂಡಿದ್ದಾರೆ.




