ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 83.22 ಲಕ್ಷ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಗಲಕೋಟೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಚಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
“ಫೆಬ್ರವರಿ 22ರಂದು ಸಂತ್ರಸ್ತರಿಗೆ ವಾಟ್ಸ್ಯಾಪ್ ಮೂಲಕ ಕರೆ ಬಂದಿದ್ದು, ತಾವು ಟ್ರಾಯ್(TRAI) ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ವಂಚಕರು, ಸಂತ್ರಸ್ತರ ಆಧಾರ್ ಕಾರ್ಡ್ ಬಳಸಿ ಅಕ್ರಮ ಸಿಮ್ ಕಾರ್ಡ್ ಪಡೆದು ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಮುಂಬೈ ಪೊಲೀಸರ ಹೆಸರಿನಲ್ಲಿ ಮಾತನಾಡಿ, ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಕಳುಹಿಸಿ ಭಯ ಹುಟ್ಟಿಸಿದ್ದಾರೆ” ಎಂದು ಮಾಧ್ಯಮದವರಿಗೆ ವಿವರಿಸಿದರು.
“ಮುಂದೆ ಜೆಟ್ ಏರ್‌ವೇಸ್ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಂತ್ರಸ್ತರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆ ತೆರೆಯಲಾಗಿದ್ದು, 25 ಲಕ್ಷ ಹಣ ವರ್ಗಾವಣೆಯಾಗಿದೆಯೆಂದು ಸುಳ್ಳು ಆರೋಪ ಮಾಡಲಾಗಿದೆ. ಬಳಿಕ ಐಪಿಎಸ್ ಅಧಿಕಾರಿಗಳ ಹೆಸರನ್ನು ಬಳಸಿ ನಿರಂತರ ಒತ್ತಡ ಹೇರಿ, ಯಾರಿಗೂ ವಿಷಯ ತಿಳಿಸಬಾರದೆಂದು ಸೂಚಿಸಿದ್ದರು” ಎಂದರು.
“ಫೆಬ್ರವರಿ 25ರಂದು ನಕಲಿ ವರ್ಚುಯಲ್ ಕೋರ್ಟ್ ವಿಚಾರಣೆಯನ್ನು ಆಯೋಜಿಸಿ, ನ್ಯಾಯಾಧೀಶರು, ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳಂತೆ ನಟಿಸಿದ ವ್ಯಕ್ತಿಗಳ ಮೂಲಕ ಜಾಮೀನು ಮತ್ತು ಪ್ರಕರಣ ಮುಕ್ತಾಯದ ಹೆಸರಿನಲ್ಲಿ ಹಣ ಠೇವಣಿ ಮಾಡಲು ಒತ್ತಾಯಿಸಲಾಗಿದೆ. ಇದರ ಪರಿಣಾಮವಾಗಿ ಸಂತ್ರಸ್ತರು ಎಸ್‌ಬಿಐ ಖಾತೆಯಿಂದ 14.61 ಲಕ್ಷ ಹಾಗೂ ಮಾರ್ಚ್ 6ರಂದು ಮತ್ತೊಂದು 30.61 ಲಕ್ಷವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಇದಾದ ಬಳಿಕ ವಂಚಕರು ಸಂತ್ರಸ್ತರಿಂದ ಚಿನ್ನ ಹಾಗೂ ಹೂಡಿಕೆಗಳನ್ನು ಮಾರಾಟ ಮಾಡಿಸಿ, ಕ್ರಿಪ್ಟೋ ಕರೆನ್ಸಿ ಖಾತೆಗಳನ್ನು ತೆರೆಯಿಸಿ ಸುಮಾರು 38 ಲಕ್ಷವನ್ನು ಡಿಜಿಟಲ್ ಕರೆನ್ಸಿ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಒಟ್ಟಾರೆ 83.22 ಲಕ್ಷ ವಂಚನೆ ನಡೆದಿದೆ” ಎಂದು ತಿಳಿಸಿದರು.
“ಬಳಿಕ ಪ್ರಕರಣ ಬಗೆಹರಿಯಲಿದೆ ಎಂದು ನಂಬಿಸಿ ಸಂತ್ರಸ್ತರನ್ನು ಕಾಯಿಸಿದ್ದಾರೆ. ಬಳಿಕ ಸಂಬಂಧಿತ ಐಪಿಎಸ್ ಅಧಿಕಾರಿಗೆ ನೇರವಾಗಿ ಇ-ಮೇಲ್ ಕಳುಹಿಸಿದಾಗ, ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚನೆ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ. ನಂತರ ಮೇ 29ರಂದು ಸಂತ್ರಸ್ತರು ವಂಚನೆಗೊಳಗಾಗಿರುವುದು ಖಚಿತಪಡಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹಣದ ವರ್ಗಾವಣೆ, ಬಳಸಿದ ಮೊಬೈಲ್ ಸಂಖ್ಯೆಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ” ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ಮೈಸೂರು | ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ-ಮನವಿ ಸಲ್ಲಿಕೆ
“ಸಾರ್ವಜನಿಕರು ಇಂತಹ ಕರೆಗಳು ಬಂದಾಗ ಭಯಪಡದೇ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ಸಹಾಯವಾಣಿಯನ್ನು ಸಂಪರ್ಕಿಸಬೇಕು. ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸರ್ಕಾರಿ ಸಂಸ್ಥೆ ವಾಟ್ಸ್ಯಾಪ್ ಕರೆಗಳ ಮೂಲಕ ಹಣ ವರ್ಗಾಯಿಸಲು ಸೂಚಿಸುವುದಿಲ್ಲ. ಡಿಜಿಟಲ್ ಅರೆಸ್ಟ್, ವರ್ಚುವಲ್ ಕೋರ್ಟ್ ಹಾಗೂ ನಕಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ಸಲಹೆ ನೀಡಿದರು.




