ಬಿಜೆಪಿಯ ವ್ಯೂಹಕ್ಕೆ ಈಗ ಪ್ರತಿವ್ಯೂಹ ರಚಿಸುವ ಪ್ರಯತ್ನ ಅಖಿಲೇಶ್ ಯಾದವ್ ಅವರದು. ಈ ಯಾದವೇತರ ಹಿಂದುಳಿದ ಜಾತಿಗಳ ಪಕ್ಷಗಳೊಂದಿಗೆ ಮೈತ್ರಿಯ ಚೌಕಾಸಿಗೆ ಇಳಿಯುವ ಗೋಜಿಗೆ ಹೋಗಿಲ್ಲ. ಈ ಪಕ್ಷಗಳ ನಾಯಕರ ವರ್ಚಸ್ಸು ಆಯಾ ಜಾತಿಗಳಲ್ಲಿ ಸವೆಯುತ್ತಿದೆ ಎಂಬುದು ಅವರ ಗ್ರಹಿಕೆ. ಹೀಗಾಗಿ ನೇರವಾಗಿ ಆಯಾ ಜಾತಿಗಳ ಜನರನ್ನೇ ಒಲಿಸಿಕೊಳ್ಳಲು ಮುಂದಾಗಿದ್ದಾರೆ.
ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶವನ್ನು ಹೆಚ್ಚು ಕಡಿಮೆ ಗುಡಿಸಿ, ಬಹುತೇಕ ಸೀಟುಗಳನ್ನು ತನ್ನ ಉಡಿಗೆ ಹಾಕಿಕೊಂಡಿತ್ತು ಮೋದಿ-ಶಾ ಬಿಜೆಪಿ. ಈ ಸಲ ಮೂರನೆಯ ಬಾರಿಗೆ ಎಲ್ಲ 80 ಸೀಟುಗಳನ್ನೂ ಗೆಲ್ಲುತ್ತೇನೆಂದು ಹೊರಟಿದೆ.
2019ರಲ್ಲಿ ಬಿಜೆಪಿ 62 ಮತ್ತು ಅದರ ಮಿತ್ರಪಕ್ಷ ಅಪನಾದಳ (ಅನುಪ್ರಿಯಾ ಪಟೇಲ್) ಎರಡು ಸೀಟುಗಳನ್ನು ಗೆದ್ದು ಜೈತ್ರಯಾತ್ರೆ ಮುಂದುವರೆಸಿದ್ದವು. 2014ರಲ್ಲಿ ಬಿಜೆಪಿ 71 ಸೀಟು, ಅಪನಾದಳ 2 ಸೀಟುಗಳ ಗೆದ್ದು ಮೆರೆದಿದ್ದವು.
ಜನಸಂಖ್ಯೆಯ ಪ್ರಕಾರ ಅತಿ ದೊಡ್ಡದಾಗಿರುವ ಈ ರಾಜ್ಯ ಅತಿ ಹೆಚ್ಚು ಮಂದಿ ಸದಸ್ಯರನ್ನು ಲೋಕಸಭೆಗೆ ಆರಿಸಿ ಕಳಿಸುತ್ತದೆ. ಹೀಗಾಗಿಯೇ ದೆಹಲಿ ಗದ್ದುಗೆಯ ಹಾದಿ ಮುಖ್ಯವಾಗಿ ಉತ್ತರಪ್ರದೇಶದಿಂದ ಹಾದು ಬರುತ್ತದೆ ಎಂಬ ಮಾತು ಉಂಟು.
ಕಾಂಗ್ರೆಸ್ ಪಕ್ಷದ ಅವನತಿಯ ನಂತರ ಈ ರಾಜ್ಯದ ರಾಜಕಾರಣವನ್ನು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಾರ್ಟಿ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ನಿಯಂತ್ರಿಸುತ್ತಿದ್ದವು. ಈ ಚಿತ್ರ ಬದಲಾದದ್ದು 2014ರಲ್ಲಿ. ಹಿಂದೂ ಮುಸ್ಲಿಮ್ ಧೃವೀಕರಣವನ್ನು ತುತ್ತ ತುದಿಗೆ ಕೊಂಡೊಯ್ದ ಮೋದಿ-ಶಾ ಬಿಜೆಪಿ ಕೋಮುವಾದದ ಸಮೃದ್ಧ ಫಸಲನ್ನು ಕಟಾವು ಮಾಡಿಕೊಳ್ಳುತ್ತಿದೆ.
ಎನ್.ಡಿ.ಎ.ಮೈತ್ರಿಕೂಟದ ಮೂಲಕ ಈ ಸಲ ಎಲ್ಲ 80 ಸೀಟುಗಳನ್ನೂ ಗೆಲ್ಲುವ ಇರಾದೆ ಹೊಂದಿದೆ. ಆದರೆ ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಸಮಾಜವಾದಿ ಪಾರ್ಟಿ ಈ ಸಲ ತನ್ನ ತಂತ್ರ ಬದಲಿಸಿದೆ. ಮುಸಲ್ಮಾನ-ಯಾದವರ ಪಾರ್ಟಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿದೆ. ಬಿಜೆಪಿಯತ್ತ ವಾಲಿರುವ ಯಾದವೇತರ ಹಿಂದುಳಿದ ಜಾತಿಗಳನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಯಾದವರು ಮತ್ತು ಮುಸಲ್ಮಾನರಿಗೆ ಅತಿ ಕಡಿಮೆ ಟಿಕೆಟ್ ಗಳನ್ನು ನೀಡಿದ್ದು, ಹೀಗೆ ಉಳಿಸಿದ ಟಿಕೆಟುಗಳನ್ನು ಯಾದವೇತರ ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ಹಂಚಿಕೆ ಮಾಡಿದೆ.
ಸಮಾಜವಾದಿ ಪಾರ್ಟಿಯ ಆಡಳಿತಾವಧಿಗಳಲ್ಲಿ ಕಾಲಕ್ರಮೇಣ ಅಂಕೆ ಮೀರಿದ ಯಾದವರ ಅಬ್ಬರವನ್ನು ಯಾದವೇತರ ಜಾತಿಗಳು ಸಹಿಸಲಾರದೆ ಹೋದವು. ಆ ಹೊತ್ತಿಗೆ ಮೋದಿ-ಅಮಿತ್ ಶಾ ಜೋಡಿ ಉತ್ತರಪ್ರದೇಶದ ಚುನಾವಣಾ ಭೂಮಿಕೆಯನ್ನು ತನ್ನ ಅನುಕೂಲಕ್ಕೆ ಮುರಿದು ಕಟ್ಟತೊಡಗಿತ್ತು. ಕುರ್ಮಿಗಳ ಪಕ್ಷ ಅಪನಾದಳ, ಅಂಬಿಗರು ಮತ್ತು ಬೆಸ್ತರ ಪಕ್ಷ ನಿಶಾದ್ ಪಾರ್ಟಿ, ರಾಜಭರ್ ಗಳ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿಗಳೊಂದಿಗೆ ಸೇತುವೆ ಕಟ್ಟಿತು. ಉಳಿದ ಸಣ್ಣಪುಟ್ಟ ಯಾದವೇತರ ಹಿಂದುಳಿದ ಜಾತಿಗಳನ್ನೂ ಸಾಂಸ್ಕೃತಿಕವಾಗಿ ಸೆಳೆದು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ರಣತಂತ್ರದ ಸಮೃದ್ಧ ಫಸಲನ್ನೂ ಕಟಾವು ಮಾಡಿತು 2014ರಲ್ಲಿ. 2019ರಲ್ಲೂ ಬಿಜೆಪಿಯ ಈ ಇಳುವರಿ ತೀವ್ರ ಕುಸಿತವೇನೂ ಕಾಣಲಿಲ್ಲ.
ಬಿಜೆಪಿಯ ಈ ವ್ಯೂಹಕ್ಕೆ ಈಗ ಪ್ರತಿವ್ಯೂಹ ರಚಿಸುವ ಪ್ರಯತ್ನ ಅಖಿಲೇಶ್ ಯಾದವ್ ಅವರದು. ಈ ಯಾದವೇತರ ಹಿಂದುಳಿದ ಜಾತಿಗಳ ಪಕ್ಷಗಳೊಂದಿಗೆ ಮೈತ್ರಿಯ ಚೌಕಾಸಿಗೆ ಇಳಿಯುವ ಗೋಜಿಗೆ ಹೋಗಿಲ್ಲ. ಈ ಪಕ್ಷಗಳ ನಾಯಕರ ವರ್ಚಸ್ಸು ಆಯಾ ಜಾತಿಗಳಲ್ಲಿ ಸವೆಯುತ್ತಿದೆ ಎಂಬುದು ಅವರ ಗ್ರಹಿಕೆ. ಹೀಗಾಗಿ ನೇರವಾಗಿ ಆಯಾ ಜಾತಿಗಳ ಜನರನ್ನೇ ಒಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಜಾತಿಗಳ ಶೇ.50ರಷ್ಟು ಮತಗಳನ್ನು ಸೆಳೆಯಲು ಸಾಧ್ಯವಾದರೂ ಅಖಿಲೇಶ್ ತಂತ್ರ ಫಲ ನೀಡಿದಂತೆಯೇ ಲೆಕ್ಕ. ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಾರ್ಟಿ ತಾನು 62 ಸೀಟುಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ಸಿಗೆ 17ನ್ನು ಬಿಟ್ಟುಕೊಟ್ಟಿದೆ. ಮತ್ತೊಂದನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಪಕ್ಷಕ್ಕೆ ನೀಡಿದೆ.
ಮಾಯಾವತಿ ಅವರು ಈ ಮೈತ್ರಿಯಿಂದ ದೂರ ಉಳಿದಿದ್ದಾರೆ. ಗಟ್ಟಿ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ತಂತ್ರಗಾರಿಕೆಯ ಭಾಗವಾಗಿ ‘ಮೇಲ್ಜಾತಿ’ಗಳಿಗೆ ಹೆಚ್ಚಿನ ಟಿಕೆಟುಗಳನ್ನು ಹಂಚಿದೆ. ಇಬ್ಬರು ಮುಸ್ಲಿಮರನ್ನೂ ಸ್ಪರ್ಧೆಗಿಳಿಸಿದೆ.
ಇದನ್ನೂ ಓದಿ ಲೋಕಸಭಾ ಸಮರ | ಗುಜರಾತ್ ಮತ್ತು ಯುಪಿಯಲ್ಲಿ ಬಿಜೆಪಿ ವಿರುದ್ಧ ಸೆಟೆದು ನಿಂತರು ರಜಪೂತರು!
ಸಮಾಜವಾದಿ ಪಾರ್ಟಿ ತನ್ನ ಪಾಲಿನ 62ರ ಪೈಕಿ 26 ಟಿಕೆಟುಗಳನ್ನು ಯಾದವೇತರರಿಗೆ ಬಿಟ್ಟುಕೊಟ್ಟಿದೆ. ಕುರ್ಮಿಗಳಿಗೆ ಒಂಬತ್ತು, ಮೌರ್ಯ, ಸೈನಿ, ಶಾಕ್ಯ, ಕುಶವಾಹ ಸಮುದಾಯಗಳಿಗೆ ಆರು, ನಿಶಾದರಿಗೆ ನಾಲ್ಕು. ಪರಿಶಿಷ್ಟರಿಗೆ ಮೀಸಲಾದ 17 ಸೀಟುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾಟವೇತರ ದಲಿತರನ್ನೇ ಆರಿಸಿದೆ. ಅಂದ ಹಾಗೆ ಬಿ.ಎಸ್.ಪಿ.ಯ ನಾಯಕಿ ಮಾಯಾವತಿ ಅವರು ಬಹುಸಂಖ್ಯಾತ ಜಾಟವ ಜನಾಂಗಕ್ಕೆ ಸೇರಿದವರು. ಜಾಟವೇತರ ದಲಿತರಿಗೆ ಜಾಟವರ ಕುರಿತು ಇದ್ದ ಅಸಮಾಧಾನವನ್ನು ಬಿಜೆಪಿ ಕೂಡ ನಗದು ಮಾಡಿಕೊಂಡಿದ್ದು ಹೌದು.
ಉತ್ತರಪ್ರದೇಶದ ಜನಸಂಖ್ಯೆಯಲ್ಲಿ ಮುಸಲ್ಮಾನರ ಪ್ರಮಾಣ ಶೇ.20ರಷ್ಟು. ಆದರೂ ಅವರ ಟಿಕೆಟುಗಳನ್ನು ಸಮಾಜವಾದಿ ಪಾರ್ಟಿ ನಾಲ್ಕಕ್ಕೆ ಮೊಟಕುಗೊಳಿಸಿದೆ. ಶೇ.30ಕ್ಕಿಂತ ಹೆಚ್ಚು ಮುಸಲ್ಮಾನ ಮತದಾರರಿರುವ ಕ್ಷೇತ್ರಗಳಿಂದ ಹಿಂದೂ ಅಭ್ಯರ್ಥಿಗಳನ್ನು ಹೂಡಿರುವುದು ಅಖಿಲೇಶ್ ಅವರ ಮತ್ತೊಂದು ತಂತ್ರವೆಂದು ಬಗೆಯಲಾಗುತ್ತಿದೆ. ಮೊರಾದಾಬಾದ್ ಮತ್ತು ಮೇರಠ್ ಈ ಮಾತಿಗೆ ಉದಾಹರಣೆಗಳು. ಜನರಲ್ ಕ್ಷೇತ್ರವಾದ ಮೇರಠ್ ನಿಂದ ದಲಿತ ಹುರಿಯಾಳನ್ನು ಕಣಕ್ಕೆ ಇಳಿಸಲಾಗಿದೆ.
ಹಿಂದು-ಮುಸ್ಲಿಮ್ ಮತಗಳನ್ನು ಧೃವೀಕರಿಸುವ ಆಝಮ್ ಖಾನ್ ಅವರಂತಹ ರಾಜಕಾರಣಿಯನ್ನು ಅಖಿಲೇಶ್ ಚುನಾವಣೆ ಕಣದಿಂದ ದೂರವಿಟ್ಟಿದ್ದಾರೆ. ಖಾನ್ ಅವರ ಪಾಳೆಯಪಟ್ಟಿನಂತಿರುವ ರಾಂಪುರ ಕ್ಷೇತ್ರಕ್ಕೆ ಜೈಲಿನಲ್ಲಿರುವ ಖಾನ್ ತಮ್ಮದೇ ಅಭ್ಯರ್ಥಿಯನ್ನು ಸೂಚಿಸಿದ್ದರು.ಈ ಸೂಚನೆಯನ್ನು ತಿರಸ್ಕರಿಸಿರುವ ಅಖಿಲೇಶ್ ತಮ್ಮದೇ ಆಯ್ಕೆಗೆ ಅಂಟಿಕೊಂಡಿದ್ದಾರೆ.
ಯಾದವ ಕೇಂದ್ರಿತ ಪಕ್ಷ ಎಂಬ ಆಪಾದನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ಅವರದಾಗಿದೆ. ಮುಲಾಯಂ ಸಿಂಗ್ ಯಾದವ್ ಕುಟುಂಬದ ಹೊರಗೆ ಯಾವ ಯಾದವರಿಗೂ ಟಿಕೆಟ್ ದಕ್ಕಿಲ್ಲ. ಅಖಿಲೇಶ್ ಮತ್ತು ಅವರ ಪತ್ನಿ ಡಿಂಪಲ್ ಅವರು ಕನ್ನೌಜ್ ಮತ್ತು ಮೈನ್ಪುರಿಯಿಂದ ಕಣಕ್ಕಳಿದಿದ್ದಾರೆ. ಇವರನ್ನು ಬಿಟ್ಟರೆ ಕುಟುಂಬಕ್ಕೆ ಸೇರಿದವರೆಂದು ಹೇಳಬಹುದಾದ ಹೆಸರುಗಳು ಮೂರು ಮಾತ್ರ. ಬದಾಂಯು, ಫಿರೋಜೋಬಾದ್ ಹಾಗೂ ಆಝಮ್ ಗಢದಿಂದ ಆದಿತ್ಯ ಯಾದವ್, ಅಕ್ಷಯ ಯಾದವ್ ಹಾಗೂ ಧರ್ಮೇಂದ್ರ ಯಾದವ್ ಸ್ಪರ್ಧಿಸಿದ್ದಾರೆ.
ತಮ್ಮ ತಂತ್ರಗಾರಿಕೆಯನ್ನು ಬೇರು ಮಟ್ಟದಲ್ಲಿ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಇಳಿಸಬಲ್ಲರು ಎಂಬುದನ್ನು ಅವಲಂಬಿಸಿರುತ್ತದೆ ಅಖಿಲೇಶ್ ಯಶಸ್ಸು