ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಸರ್ಕಾರದ ಚೊಚ್ಚಲ ಪೂರ್ಣ ಪ್ರಮಾಣದ ಬಜೆಟ್ ಅನ್ನು ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖ ಆರ್ಥಿಕ ಬೆಂಬಲವನ್ನು ಘೋಷಿಸಿದೆ. ಮೀನುಗಾರಿಕೆ ಇಲ್ಲದ ಮಂದಗತಿಯ (Lean-period) ಕಠಿಣ ಅವಧಿಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಿಶೇಷ ಆರ್ಥಿಕ ಸಹಾಯಧನವನ್ನು ₹7,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ.
ಸಮುದ್ರದಲ್ಲಿ ಹವಾಮಾನ ವೈಪರೀತ್ಯ, ಕಠಿಣ ವಾತಾವರಣ ಅಥವಾ ಮೀನುಗಾರಿಕೆಗೆ ಸಂಪೂರ್ಣ ತಡೆ ಇರುವ ದಿನಗಳಲ್ಲಿ ಕರಾವಳಿ ಸಮುದಾಯದ ಜೀವನೋಪಾಯ ತೀವ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ದಿನಗಳಲ್ಲಿ ಮೀನುಗಾರ ಕುಟುಂಬಗಳ ನಿತ್ಯದ ವೆಚ್ಚ ಮತ್ತು ನಿರ್ವಹಣೆಗೆ ಆಸರೆಯಾಗಲು ಈ ಹಿಂದೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಪರಿಷ್ಕರಿಸಿ, ಪ್ರಸ್ತುತ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯ ಬಜೆಟ್-2025 | ಹೊಸ ಯೋಜನೆಗಳೇನು, ಎತ್ತಿಟ್ಟ ಹಣವೆಷ್ಟು?
ಈ ಯೋಜನೆಯಡಿ ನೀಡಲಾಗುವ ಪರಿಹಾರ ಧನವು ರಾಜ್ಯದ ಲಕ್ಷಾಂತರ ಮೀನುಗಾರ ಕುಟುಂಬಗಳ ಬದುಕಿಗೆ ನೇರ ಭದ್ರತೆ ಒದಗಿಸಲಿದೆ. ಕಠಿಣ ಅವಧಿಯಲ್ಲಿಯೂ ಕರಾವಳಿ ಜನರ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಹಾಗೂ ಅವರ ಕುಟುಂಬಗಳ ಕನಿಷ್ಠ ಅಗತ್ಯಗಳನ್ನು ಪೂರೈಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಬಜೆಟ್ ಮಂಡನೆ ವೇಳೆ ತಿಳಿಸಲಾಗಿದೆ.
ತಮಿಳುನಾಡು ಬಜೆಟ್ ರಾಜ್ಯವನ್ನು 2031ರ ವೇಳೆಗೆ 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. ತಮಿಳುನಾಡು ಸರ್ಕಾರದ ಒಟ್ಟು ವೆಚ್ಚವನ್ನು ₹4,67,264 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 7.30 ರಷ್ಟು ಹೆಚ್ಚಾಗಿದೆ. ಒಟ್ಟು ರಾಜಸ್ವ ಸ್ವೀಕೃತಿ ₹3,44,575 ಕೋಟಿ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಶೇ. 74.67ರಷ್ಟು ರಾಜ್ಯದ ಸ್ವಂತ ಆದಾಯವಾಗಿದೆ.
ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ₹59,562 ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿ (GSDP) ಯ ಶೇ. 3 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಶಿಕ್ಷಣ ವಲಯದ ಆಧುನೀಕರಣಕ್ಕಾಗಿ ಬಜೆಟ್‌ನಲ್ಲಿ ಗರಿಷ್ಠ ಮೊತ್ತವಾಗಿ ₹48,534 ಕೋಟಿ ಹಂಚಿಕೆ ಮಾಡಲಾಗಿದೆ. ಸರ್ಕಾರಿ ಶಾಲೆಗಳ ನವೀಕರಣಕ್ಕೆ ₹300 ಕೋಟಿ ನೀಡಲಾಗಿದೆ.




