ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ.
ಈವರೆಗೆ ದೇಶದಲ್ಲಿ ಶೇ.10 ರಿಂದ ಶೇ. 20ರಷ್ಟು ಮಾತ್ರ ಎಥೆನಾಲ್ ಮಿಶ್ರಣ ಮಾಡಲು (E20) ಅವಕಾಶವಿತ್ತು. ಆದರೆ ಹೊಸ ನಿಯಮಾವಳಿಗಳ ಪ್ರಕಾರ, ಇನ್ನು ಮುಂದೆ ವಾಹನಗಳು ಯಾವುದೇ ಪೆಟ್ರೋಲ್ ಮಿಶ್ರಣವಿಲ್ಲದೆ ಸಂಪೂರ್ಣವಾಗಿ ಎಥೆನಾಲ್ ಇಂಧನದಿಂದಲೇ ಚಲಿಸಬಹುದಾಗಿದೆ.
ಇದನ್ನು ಓದಿದ್ದೀರಾ? ಪೆಟ್ರೋಲ್ -ಡೀಸೆಲ್ ಎಥೆನಾಲ್ ಮಿಶ್ರಣ ಶೇ. 20ಕ್ಕೆ ಹೆಚ್ಚಳ; ಆರ್ಥಿಕ ಲಾಭವೋ, ಪರೋಕ್ಷ ನಷ್ಟವೋ?
ದೇಶವು ಪ್ರತಿವರ್ಷ ಸುಮಾರು 22 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. 100% ಎಥೆನಾಲ್ ಬಳಕೆಯಿಂದಾಗಿ ವಿದೇಶಿ ಇಂಧನದ ಮೇಲಿನ ಅವಲಂಬನೆ ಮತ್ತು ದೇಶದ ಹಣ ಹೊರಹೋಗುವುದು ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ.
ಇನ್ನೊಂದೆಡೆ ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ, ಬಿದಿರು ಮತ್ತು ಹೆಚ್ಚುವರಿ ಧಾನ್ಯಗಳಿಂದ ಉತ್ಪಾದಿಸುವುದರಿಂದ, ದೇಶದ ರೈತರ ಆದಾಯ ಹೆಚ್ಚಾಗಲಿದೆ ಮತ್ತು ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ. ಆದರೆ ಇಂಧನಕ್ಕಾಗಿ ಇವುಗಳನ್ನು ಭಾರಿ ಪ್ರಮಾಣದಲ್ಲಿ ಬಳಸಲಾರಂಭಿಸಿದರೆ, ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಬಹುದು ಮತ್ತು ಕಬ್ಬು, ಜೋಳದಂತಹ ನಿತ್ಯೋಪಯೋಗಿ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಬಹುದು ಎಂಬ ಆತಂಕವೂ ಇದೆ.
ಎಥೆನಾಲ್ ಗಾಳಿಯಲ್ಲಿರುವ ತೇವಾಂಶವನ್ನು (ನೀರನ್ನು) ಬೇಗನೆ ಹೀರಿಕೊಳ್ಳುತ್ತದೆ. ಇದು ಇಂಜಿನ್ ಒಳಗಡೆ ನೀರು ಸೇರಿಕೊಳ್ಳಲು ಕಾರಣವಾಗಿ, ಇಂಜಿನ್ ಭಾಗಗಳು ತುಕ್ಕು ಹಿಡಿಯುವಂತೆ ಮಾಡುತ್ತದೆ. ಎಥೆನಾಲ್ ಒಂದು ಪ್ರಬಲ ದ್ರಾವಕ (Solvent) ಆಗಿರುವುದರಿಂದ, ಹಳೆಯ ವಾಹನಗಳಲ್ಲಿರುವ ರಬ್ಬರ್ ಪೈಪ್‌ಗಳು, ಪ್ಲಾಸ್ಟಿಕ್ ಬಿಡಿಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಇದು ಬೇಗನೆ ಕರಗಿಸುತ್ತದೆ ಅಥವಾ ಹಾಳು ಮಾಡುತ್ತದೆ.
ಎಥೆನಾಲ್‌ನಲ್ಲಿರುವ ಶಕ್ತಿ ಸಾಮರ್ಥ್ಯ (Energy Density) ಪೆಟ್ರೋಲ್‌ಗಿಂತ ಸುಮಾರು ಶೇ. 30 ರಷ್ಟು ಕಡಿಮೆ ಇರುತ್ತದೆ. ಇದರರ್ಥ, 1 ಲೀಟರ್ ಪೆಟ್ರೋಲ್ ನೀಡುವ ಮೈಲೇಜ್‌ಗೆ ಹೋಲಿಸಿದರೆ, 1 ಲೀಟರ್ ಎಥೆನಾಲ್ ಕಡಿಮೆ ಮೈಲೇಜ್ ನೀಡುತ್ತದೆ. ವಾಹನ ಸವಾರರು ಹೆಚ್ಚು ಬಾರಿ ಇಂಧನ ತುಂಬಿಸಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್‌ಗೆ ಪರ್ಯಾಯವಾಗಿ ಎಥೆನಾಲ್ ಎನ್ನುತ್ತಿದೆ.
ಸದ್ಯ ದೇಶದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರಾದ WagonR ನ 100% ಎಥೆನಾಲ್ ಆವೃತ್ತಿಯನ್ನು (Flex-Fuel) ಈಗಾಗಲೇ ಪ್ರದರ್ಶಿಸಿದೆ. ದ್ವಿಚಕ್ರ ವಾಹನ ವಲಯದಲ್ಲಿ ಹೀರೋ ಮೊಟೊಕಾರ್ಪ್ ಈಗಾಗಲೇ ತನ್ನ ಎರಡು ಫ್ಲೆಕ್ಸ್-ಫ್ಯುಯೆಲ್ ಮಾದರಿಗಳನ್ನು ಪರಿಚಯಿಸಿದೆ.
ಮುಂಬರುವ ಒಂದೂವರೆ ತಿಂಗಳಲ್ಲಿ ಟೊಯೋಟಾ, ಸುಜುಕಿ, ಎಂಜಿ ಮತ್ತು ಹ್ಯುಂಡೈ ಕಂಪನಿಗಳು ಸಹ ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ ಎಂದು ಗಡ್ಕರಿ ತಿಳಿಸಿದ್ದಾರೆ.




