ರಾಮ ಮಂದಿರ | ಮೊಸರಿನಲ್ಲಿ ಕಲ್ಲು ಹಾಕಿದವರು ಯಾರು?

Date:

ಕಾರ್ಯಕ್ರಮ ಸಂಘ ಪ್ರಾಯೋಜಿತ ಟ್ರಸ್ಟ್ ನದು. ನಾಯಕತ್ವವ ಬಿಜೆಪಿಯದು ಅಂದ ಮೇಲೆ ಅದು ಬಿಜೆಪಿ ಹಿಂದೂಗಳ ದೇವಸ್ಥಾನ ಆದಂತಾಯಿತು. ಮತ್ತೆ ಬೇರೆ ಪಕ್ಷದವರು ಅಲ್ಲಿ ಬರುವುದು, ಬಿಡುವುದು ಅವರಿಗೆ ಬಿಟ್ಟದ್ದಲ್ಲವಾ?  ಮೊಸರಿಗೆ ಮತ್ತೊಂದು ಕಲ್ಲು ಹಾಕಿದ್ದು ಯಾರು?

 

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ದೇವರ ಪ್ರತಿಷ್ಠಾಪನೆ, ವಿಷಯದಲ್ಲಿ, ಧರ್ಮ ಶಾಸ್ತ್ರದ ಕುರಿತು, ರಾಜಕೀಯದ ಕುರಿತು ಚರ್ಚೆಗಳು ಪ್ರಾರಂಭವಾಯಿತು. ನಾನೂ ಅದರಲ್ಲಿದ್ದೆ. ಬರೀ ಚರ್ಚೆಯಾದದ್ದು, ಪ್ರಾಣ ಪ್ರತಿಷ್ಠೆಗೆ ವಿರೋಧ ಯಾರೂ ಮಾಡಿದ್ದಲ್ಲ. ಈ ಚರ್ಚೆ ಮಾಡಿಸಿದ್ದು ಮಾತ್ರ ಸಂಘ ಪರಿವಾರ!

ಸಂವಾದಗಳು ಪ್ರಾರಂಭವಾದ ತಕ್ಷಣ ಪ್ರಶ್ನಿಸಿದವರು ರಾಮ ವಿರೋಧಿಗಳೆಂದೂ, ಕಾಂಗ್ರೆಸ್ ರಾಮ ಮಂದಿರ ವಿರೋಧಿಯೆಂದು ಬಿಜೆಪಿ ಪರಿವಾರ ಹಿಂದುಗಳು ಪ್ರತಿಕ್ರಿಯೆ ಮಾಡತೊಡಗಿದರು. ನನಗೂ ಕೂಡಾ ನೀನು ಮೊಸರಲ್ಲಿ ಕಲ್ಲು ಹುಡುಕುವವ, ನೀನು ಇತಿಹಾಸ ಓದಿದಿಯಾ, ಪುರಾಣ ಗೊತ್ತುಂಟಾ ಹೀಗೆ ಪ್ರಶ್ನೆಗಳೂ ಬಂತು. ಈಗ ಮೊಸರಿನಲ್ಲಿ ಕಲ್ಲು ವಿಷಯಕ್ಕೆ ಬರೋಣ.

1. ಅಲ್ಲಿ ದೇವಸ್ಥಾನ ಆಗುತ್ತದೆ ಎಂದು ವರ್ಷಗಳ ಹಿಂದೆ ಗೊತ್ತಾದ ಸಂಗತಿ. ಕೆಲಸ ಪ್ರಾರಂಭವಾಗಿಯೂ ವರ್ಷಗಳೇ ಕಳೆದಿದೆ. ಹೀಗಿರುವಾಗ ಯಾರೂ ಯಾವುದೇ ತಕರಾರು ಮಾಡಿದ್ದಿಲ್ಲ. ಆ ಬಗ್ಗೆ ಒಂದೇ ಒಂದು ಒಡಕು ಧ್ವನಿಯ ಸಂವಾದ ಆಗಿದ್ದೂ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಮಸ್ಯೆ ಪ್ರಾರಂಭವಾಗಿದ್ದು, ಸುಮಾರು ಹತ್ತರಿಂದ ಹದಿನೈದು ದಿನಗಳ ಹಿಂದೆ. ಎಲ್ಲಿಂದ ಶುರುವಾದದ್ದು? ಕಾಂಗ್ರೆಸ್ ಎಲ್ಲಿ ಯಾವಾಗ ಇವರ ಕೆಲಸದಲ್ಲಿ ಮೂಗು ತೂರಿಸಿದೆ?

2. ಮನೆ ಮನೆಗೆ ಅಯೋಧ್ಯೆ ಮಂತ್ರಾಕ್ಷತೆ ಎಂದು ಕಾರ್ಯಕ್ರಮ ಶುರುಮಾಡಿದರು. ನಾನೂ ಹತ್ತಾರು ಬಾರಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಕ್ಷತೆ ಕೊಟ್ಟು ಕರೆದವನೆ. ಅಕ್ಷತೆಯನ್ನು ದೇವರ ಎದುರು ಮನೆಯ ಮಹಿಳೆಯರು ತಯಾರಿಸುತ್ತಾರೆ. ಇದು ಆಮಂತ್ರಣ ನೀಡುವಾಗ ಗೌರವ ಪೂರ್ವಕ ಕರೆಯುವ ವಿಧಾನ. ತೀರಾ ಹಿಂದಿನ ಕಾಲದಲ್ಲಿ ಆಮಂತ್ರಣ ಪತ್ರಿಕೆ ಇರಲಿಲ್ಲ. ಆಗ ವೀಳ್ಯ ನೀಡಿ ಕರೆಯುವುದು, ಅಕ್ಷತೆ ಕೊಟ್ಟು ಕರೆಯುವುದು ರೂಢಿಯಾದದ್ದು. ಇದರ ಬಗ್ಗೆ ಯಾವ ಆಕ್ಷೇಪವಿಲ್ಲ.

ಇದನ್ನು ಅಯೋಧ್ಯೆಯ ಮಂತ್ರಾಕ್ಷತೆಯೆಂದೂ, ಸ್ನಾನ ಮಾಡಿ, ಪಂಚೆಯುಟ್ಟು, ಕಲಶ ಹಿಡಿದು, ಶುದ್ಧ ಧಾರ್ಮಿಕ ಆಚರಣೆಯಂತೆ ಮಾಡಲು ನೀವು ಹೊರಟದ್ದು. ಪೂಜೆಯ ಅಂತಿಮ ಘಟ್ಟದಲ್ಲಿ ಪುರೋಹಿತರು, ಗುರುಗಳು, ಅಕ್ಷತವನ್ನು ಹಿಡಿದು ವೇದ ಮಂತ್ರ ಹೇಳಿ ಅದನ್ನು ಮಂತ್ರಾಕ್ಷತೆಯೆಂದು ಕೊಡುವುದು. ದೇವರೇ ಪ್ರತಿಷ್ಠಾಪನೆ ಆಗದೇ ರಾಮ ಮಂತ್ರಾಕ್ಷತೆ ಎಲ್ಲಿಂದ? ಹೀಗೆ ವಾದ ಪ್ರಾರಂಭವಾಯಿತು. (ನಾನು ಕಾಂಗ್ರೆಸ್ ನಲ್ಲಿ ಇದ್ದೇನೆ ಎಂಬ ಕಾರಣಕ್ಕೆ ಇವರು ಹಿಂದೂ ಧರ್ಮವನ್ನು ತಮಗೆ ಬಂದಂತೆ ವ್ಯಾಖ್ಯಾನ ಮಾಡಿದರೂ ಸುಮ್ಮನಿರಬೇಕಾ? ನಾನು ಪ್ರಶ್ನೆ ಮಾಡಿದೆ. ತಪ್ಪೇನು?)

ಸಹಜವಾಗಿ, ಅಕ್ಷತೆ ಕೊಟ್ಟು ಕರೆಯುವುದು ಎಂದು ಬಿಜೆಪಿ ಹೇಳಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ತಪ್ಪು ಅವರದು. ಮೊಸರಿಗೆ ಮೊದಲ ಕಲ್ಲು ಹಾಕಿದ್ದು ನೀವು.

3. ಅಯೋಧ್ಯೆ ರಾಮ ಮಂದಿರ ಚಳವಳಿಯ ಪ್ರಧಾನ ನಾಯಕರು ಅಡ್ವಾಣಿ ಮತ್ತು ಇತರರು. ಅವರ ಮನೆಗೆ ಹೋಗಿ ಆಮಂತ್ರಣ ಕೊಟ್ಟು, ಆಶೀರ್ವಾದ ಪಡೆದಿದ್ದರೆ ಮುಗಿಯುತ್ತಿತ್ತು. ಅವರೇ ತನಗೆ ಆರೋಗ್ಯದ ಸಮಸ್ಯೆ ಇದೆ ಅನ್ನುತ್ತಿದ್ದರು. ನೀವು ಮಾಡಿದ್ದೇನು? ಪತ್ರಿಕಾಗೋಷ್ಠಿ ಕರೆದು ಅವರು ಬರುವುದೇ ಬೇಡ ಎಂದು ಅಬ್ಬರಿಸಿದಿರಿ. ಇದು ಕಾಂಗ್ರೆಸ್ ನ ಕಚೇರಿಯಲ್ಲಿ ವಕ್ತಾರರು ಹೇಳಿದ್ದಾ? ಅಲ್ಲವಲ್ಲ? ನೀವೇ ಹೇಳಿದಿರಿ. ಸಮಸ್ಯೆ ಬಿಗಡಾಯಿಸಿದ ಮೇಲೆ ಅವರನ್ನು ಆಮಂತ್ರಿಸಿದಿರಿ. ಆದರೆ ವಾದ ವಿವಾದ ಎದ್ದಾಗಿತ್ತು. ಇದರಲ್ಲಿ ಕಾಂಗ್ರೆಸ್ ಎಲ್ಲಿಂದ ಬಂತು?

ಮೊಸರಿಗೆ 2ನೇ ಕಲ್ಲು ಹಾಕಿದ್ದು ನೀವು. ಕಾಂಗ್ರೆಸ್ ಅಲ್ಲ, ಕಮ್ಯುನಿಸ್ಟರಲ್ಲ, ಮುಸ್ಲಿಮರೂ ಅಲ್ಲ.

4. ಇದು ತಣ್ಣಗಾಗುವ ಮೊದಲೇ ನಿಮ್ಮ ಬಿಜೆಪಿ ಪರಿವಾರದ ಟ್ರಸ್ಟ್ ನವರು ದೇವಸ್ಥಾನನ ಶೇ 40 ಕೆಲಸ ಆಗಿದೆ. ಉಳಿದದ್ದು ಮುಂದೆ ಮಾಡಲಾಗುವುದು ಅಂತ ಹೇಳಿಕೆ ಕೊಟ್ಟರು. ಇದು ಕಾಂಗ್ರೆಸ್ ವಕ್ತಾರ ಹೇಳಿದ್ದ? ಅಲ್ಲವಲ್ಲ. ಆಗ ಸಹಜವಾಗಿ ಅರೇ ದೇವಸ್ಥಾನವೇ ಪೂರ್ಣವಾಗದೇ ಪ್ರಾಣ ಪ್ರತಿಷ್ಠೆ ಶಾಸ್ತ್ರ ವಿರೋಧಿ ಎಂದು ಶಂಕರ ಪೀಠ ಮತ್ತು ವಿದ್ವಾಂಸರು ಹೇಳಿದ್ದು.

ಇದಕ್ಕೆ ನೀವು ಸಮಾಧಾನ ಶಾಂತಿಯಿಂದ ಉತ್ತರಿಸಿದ್ದಾ? ಅಲ್ಲ. ಏಕಾಏಕಿ ಇದು ಶೈವ ಮತ್ತು ಶಾಕ್ತ ಪಂಥದಲ್ಲ ಅನ್ನುವ ರೀತಿ ಉಢಾಪೆ ಮಾತನ್ನಾಡಿದಿರಿ. ಯಾರು ಕಾಂಗ್ರೆಸ್ ಹೇಳಿ ಕೊಟ್ಟದ್ದಾ ಅಲ್ಲವಲ್ಲ. (ಆಮೇಲೆ ಹಾಗಲ್ಲ ಹೀಗೆ ಎಂದು ಸಮಜಾಯಿಕೆ ಹೇಳಿಕೆ ಕೊಟ್ಟಿದ್ದು. ಕಾಲ ಮಿಂಚಿತ್ತು) ಮೊಸರಿಗೆ ಮೂರನೇ ದೊಡ್ಡ ಕಲ್ಲು ಹಾಕಿದ್ದು ನೀವೇ.

5. ಆಗಮ ಶಾಸ್ತ್ರ, ವೈದಿಕ ಕಾರ್ಯಕ್ರಮದ ಕುರಿತು ಸೈದ್ಧಾಂತಿಕವಾಗಿಯೇ ಕೆಲವರು ಚರ್ಚೆ ಮಾಡಿದ್ದರು. ಹಿಂದೂ ಸಮಾಜದ ದೇವಸ್ಥಾನ ಅಂದ ಮೇಲೆ ಹಿಂದೂ ಭಕ್ತರು ಸಹಜವಾಗಿ ಇಂತಹ ವಿಷಯ ಕೇಳುತ್ತಾರೆ. ನಿಮ್ಮ ಪರ ವೈದಿಕರು ವಿದ್ವಾಂಸರು, ಒಂದು ಒಳ್ಳೆಯ ಕ್ರಾಂತಿ ಮಾಡಿದ್ದಾರೆ. ಶ್ಲಾಘನೀಯ. ಅದು ಜಾತಿ ಮತ ಬೇಧವಿಲ್ಲದೆ ಎಲ್ಲರನ್ನೂ ಪ್ರಾಣ ಪ್ರತಿಷ್ಠೆಯ ವಿಧಿಯಲ್ಲಿ ಬಳಸಿದ್ದಾರೆ.

ಇನ್ನು ಮುಂದೆ ಆಯಾ ಜಿಲ್ಲೆ, ರಾಜ್ಯದ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳು ಪ್ರಾಣ ಪ್ರತಿಷ್ಠೆಗೆ ಗರ್ಭ ಗುಡಿಯೊಳಗೆ ಹೋಗಬಹುದು ಅನ್ನುವ ಮಹತ್ತರ ಕಾರ್ಯ. ಇದನ್ನು ಇನ್ನು ಉಡುಪಿ ಸೇರಿದಂತೆ ಯಾವ ಮಠಗಳೂ ವಿರೋಧಿಸಲಾರವು. ಪುರೋಹಿತ ವರ್ಗವೂ ಒಪ್ಪುವಂತಾಯಿತು. ಇದಕ್ಕಾಗಿ ಅಭಿನಂದನೆಗಳು.

ಈ ಶಾಸ್ತ್ರದ ವಿಚಾರ ಸಾರ್ವಜನಿಕ ಸಂವಾದಕ್ಕೆ ಎಳೆದು ತಂದದ್ದು ನೀವು. ಕಾಂಗ್ರೆಸ್ ಅಲ್ಲವಲ್ಲ. ನಿಜ ಹಿಂದೂ ಅನುಯಾಯಿಗಳಲ್ಲಿ ವಿವಿಧ ಪಂಥ, ಭಿನ್ನ ಭಿನ್ನ ಪದ್ಧತಿಯಿದೆ. ಅದು ನಿಮಗೂ ಗೊತ್ತಿತ್ತು. ಆದರೆ ಈ ಹೋರಾಟದಲ್ಲಿ ಜಾತಿ, ಮತ, ಬೇಧವಿಲ್ಲದೆ ಆಗಿದೆ. ಎಲ್ಲ ವರ್ಗದವರೂ ಪ್ರಾಣ ಕಳಕೊಂಡಿದ್ದಾರೆ ಅನ್ನುವುದು ನಿಮಗೆ ಗೊತ್ತಿದೆ. ಹಾಗಿರುವಾಗ ನೀವು ದೇವಸ್ಥಾನದ ಕಾರ್ಯಕ್ರಮ ರೂಪಿಸುವ ಮೊದಲೇ ನಮ್ಮ ಊರುಗಳಲ್ಲಿ ಮಾಡುವಂತೆ, ಎಲ್ಲಾ ಪಂಥದವರನ್ನು ಕರೆಸಿ ಪ್ರಾಣ ಪ್ರತಿಷ್ಠಾಪನಾ ಸ್ವಾಗತ ಸಮಿತಿ ಅಂತೇನಾದರೂ ಮಾಡಿದ್ದೀರಾ. ಬಹುಶಃ ಇಲ್ಲ.

ನಿಮ್ಮ ಟ್ರಸ್ಟ್ ನವರು ದೇಶದ ಪ್ರಮುಖ ಭಾಗ ಸಂಚರಿಸಿ, ಚರ್ಚೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯಕ್ರಮ ರೂಪಿಸಿದ್ದೂ ಅಲ್ಲ. ಎಲ್ಲವನ್ನೂ ನಿಮ್ಮ ಪರಿವಾರದೊಳಗೆ ಮಾಡಿಕೊಂಡದ್ದು.

ನಿಮಗೆ ಬೇಕಾದಂತೆ ಕಾರ್ಯಕ್ರಮ ಘೋಷಣೆ ಆದ ಮೇಲೆ, ಆಮಂತ್ರಣ ಕೊಡುವ ನಾಟಕೀಯತೆ ತೋರಿಸಿದ್ದು. ಸಾಮಾಜಿಕ ಜಾಲತಾಣದಲ್ಲಿನ ಸಾವಿರಾರು ನಿಮ್ಮ ಅಭಿಪ್ರಾಯಗಳು, ಮಾಧ್ಯಮದ ಸುದ್ದಿಗಳು ಹೌದು, “ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು ಮಾಡಿದೆ, ಮೋದಿಯವರಿಂದ ಮಾತ್ರ ಇದು ಆದದ್ದು” ಎಂದು ಸ್ಪಷ್ಟವಾಗಿ ರಾಜಕೀಯವನ್ನು ನೀವಲ್ಲವಾ ಬೆರೆಸಿದ್ದು. ರಾಮ ದೇಗುಲದಲ್ಲಿ ಧಾರ್ಮಿಕ ಗುರುಗಳಿಗಿಂತ ರಾಜಕೀಯ ನಾಯಕನಿಗೇ ಆದ್ಯತೆ ಎಂಬ ಹೊಸ ನೀತಿ ನೀವು ಜಾರಿಗೆ ತಂದದ್ದು. ಅದನ್ನು ಎಲ್ಲರೂ ಒಪ್ಪಲೇಬೇಕೆಂದು ಹೇಗೇ ಆಗ್ರಹಿಸುತ್ತೀರಿ.

ಕಾರ್ಯಕ್ರಮ ಸಂಘ ಪ್ರಾಯೋಜಿತ ಟ್ರಸ್ಟ್ ನದು. ನಾಯಕತ್ವವ ಬಿಜೆಪಿಯದು ಅಂದ ಮೇಲೆ ಅದು ಬಿಜೆಪಿ ಹಿಂದೂಗಳ ದೇವಸ್ಥಾನ ಆದಂತಾಯಿತು. ಮತ್ತೆ ಬೇರೆ ಪಕ್ಷದವರು ಅಲ್ಲಿ ಬರುವುದು ಬಿಡುವುದು ಅವರಿಗೆ ಬಿಟ್ಟದ್ದಲ್ಲವಾ? ಮೊಸರಿಗೆ ಮತ್ತೊಂದು ಕಲ್ಲು ಹಾಕಿದ್ದು ನೀವು.

ಡಾ ಪ್ರವೀಣ್‌ ಭಾಯ್ ತೊಗಾಡಿಯಾ, ಉಮಾ ಭಾರತಿ, ಸಾಧ್ವಿ ರಿತಾಂಬರ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಗೋವಿಂದಾಚಾರ್ಯ, ವಿನಯ್ ಕಟಿಯಾರ್  ಹೀಗೆ ಸಾಲು ಸಾಲು ರಾಷ್ಟ್ರೀಯ ಮಟ್ಟದ ನಾಯಕರು ಹೋರಾಟದ ನಾಯಕತ್ವ ವಹಿಸಿಕೊಂಡದ್ದು. ರಾಜ್ಯದಲ್ಲೂ ಅಂತಹವರು ಇದ್ದಾರೆ. ಈಗ ಅವರ ಹೆಸರು ಪ್ರಚಾರ ಮಾಡದಂತೆ ತಡೆದದ್ದು ಕಾಂಗ್ರೆಸ್ ಅಲ್ಲವಲ್ಲ. ಅಸಮಾಧಾನಗೊಂಡ, ಅವರ ಅನುಯಾಯಿಗಳು, ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿರಿ ಕಿರಿ ಮಾಡಿದರೆ ಕಾಂಗ್ರೆಸ್ ಕಾರಣವಾಗುವುದು ಹೇಗೆ. ನೀವು ಎಲ್ಲವೂ ಮೋದಿ, ಮೋದಿ ಮಾತ್ರ ಕಾರಣ ಎಂದು ಬಿಂಬಿಸಿದ್ದಕ್ಕೆ, ನಿಮ್ಮೊಳಗೆ ಹುಟ್ಟಿಕೊಳ್ಳುವ ಅಸಮಾಧಾನ ಮತ್ತು ಪರಿಣಾಮಗಳಿಗೆ ನೀವೇ ಜವಾಬ್ದಾರರು ತಾನೆ?

ಇದನ್ನೆಲ್ಲಾ ನೋಡುವಾಗ ನನಗೊಂದು ಅನುಮಾನ. ಈ ಸಮಸ್ಯೆಗಳನ್ನು ಬಿಜೆಪಿಯೇ ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದ್ದೆ? ಹಾಗೆ ಮಾಡುವುದರಿಂದ ಉಂಟಾಗುವ ಗೊಂದಲದಿಂದ ಕಾಂಗ್ರೆಸ್ ಪಕ್ಷವನ್ನು ಹೆಣೆಯಲು ಸಾಧ್ಯ ಎಂಬ ಟೂಲ್ ಕಿಟ್ ಆಗಿರಬಹುದೇ ?

ಈ ವಿಷಯದಲ್ಲಿ ದೇಶದ ಮುಸ್ಲಿಮರ ವರ್ತನೆ ಅತ್ಯಂತ ಶ್ಲಾಘನೀಯ. ತೀರ್ಪು ಬಂದ ಮೇಲೆ ಮತ್ತು ಈಗ ಕೂಡಾ, ಎಷ್ಟೇ ಕೆರಳಿಸಿದರೂ ಶಾಂತಿಯಿಂದ ನಕ್ಕು ಮುಂದೆ ಹೋಗುತ್ತಿದ್ದಾರೆ. ಒಂದಿಷ್ಟು ತೀರಾ ಮತೀಯವಾದದ ಮುಸ್ಲಿಮರು ಸಾಮಾಜಿಕ ಜಾಲತಾಣದಲ್ಲಿ ಕೆರಳಿಸಲು ಯತ್ನಿಸುತ್ತಿದ್ದಾರೆ. ಆದರೆ ಜಾತ್ಯತೀತ ಬಹುಸಂಖ್ಯೆಯ ಮುಸ್ಲಿಮರು ಅವರನ್ನು ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಇದು ಬಿಜೆಪಿಗೆ ನುಂಗಲಾರದ ತುತ್ತು. ಅದಕ್ಕಾಗಿ ಪೂರ್ಣ ಶೋವನ್ನು ಕಾಂಗ್ರೆಸ್ ವಿರುದ್ದ ತಿರುಗಿಸಲು ಹೋಗಿ ಏನೇನೋ ಎಡವಟ್ಟು ಮಾಡಿಕೊಂಡಿದೆ. ಆದರೆ, ಕಾಂಗ್ರೆಸ್ ಯಾವತ್ತೂ ದೇವಸ್ಥಾನ ಮಾಡಬೇಡಿ ಹೇಳಿದ್ದೂ ಇಲ್ಲ, ಅವರ ಕೆಲಸದಲ್ಲಿ ಮೂಗು ತೂರಿಸಿದ್ದೂ ಇಲ್ಲ. ಈಗ ಬಿಜೆಪಿಯೇ ನೇರವಾಗಿ ಹೌದು ಇದು ನಮ್ಮದೇ ಕೆಲಸ, ನಮ್ಮದೇ ಕಾರ್ಯಕ್ರಮ ಎಂಬ ಭಾಷೆಯಲ್ಲಿ ಮಾತನಾಡಿದ ಮೇಲೆ, ಹಿಂದೂ ಸಮಾಜದ ಬಹುದೊಡ್ಡ ಶಂಕರ ಪೀಠ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಪ್ರಶ್ನೆ ಮಾಡಿದ ಮೇಲೆ, ನಾವು ಈಗ ಭಾಗವಹಿಸುವುದಿಲ್ಲ. ಇದು ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕ್ರಮ, ಚುನಾವಣೆ ಮೊದಲು ಉದ್ದೇಶಪೂರ್ವಕವಾಗಿ, ಅವಸರದಿಂದ ಮಾಡುವ ಕಾರ್ಯಕ್ರಮ, ನಾವು ಚುನಾವಣೆ ಮುಗಿದ ಮೇಲೆ ಬರುತ್ತೇವೆ ಎಂದು ಹೇಳಿದೆ. ರಾಮ ಮಂದಿರ ನಮ್ಮದೇ ಎಂದು ಬಿಜೆಪಿ, ಒಂದೆಡೆ ಹಕ್ಕು ಸ್ಥಾಪನೆ ಮಾಡಿದ ಮೇಲೆ, ಉಳಿದವರು ಹೋಗುವುದು ಬಿಡುವುದು ಅವರವರ ಇಚ್ಚೆ.

ಇದನ್ನೂ ಓದಿ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ರಾಮ, ರಾಮಾಯಣ, ರಾಮರಾಜ್ಯ, ಮಂದಿರಗಳು…

ಒಟ್ಟಾರೆ ಬಿಜೆಪಿ ಹಿಂದೂಗಳಿಗೆ ಜಗಳಕ್ಕೆ ಜನ ಬೇಕು. ಆದರೆ ಯಾರೂ ಬರುತ್ತಿಲ್ಲ. ಅದಕ್ಕೆ ಯಾರನ್ನಾದರೂ ಸರಿ ಜಗಳಕ್ಕೆ ಬರುವಂತೆ ಸದಾ ಪ್ರಚೋದಿಸುವುದು. ಇದಕ್ಕೆ ಉದಾಹರಣೆ ಅನಂತ ಕುಮಾರ್ ಹೆಗಡೆ ಹೇಳಿಕೆ. ಈಗ ಶಾಂತವಾಗಿರುವಾಗ, ರಾಮ ಮಂದಿರ ಪ್ರಾರಂಭವಾಗುವಾಗುವ ಹೊತ್ತಿನಲ್ಲಿ, ಊರಿನ ಮಸೀದಿ ಒಡೆಯುತ್ತೇವೆ ಎಂಬ ಹೇಳಿಕೆ ಪರಿವಾರದ ಪರವಾಗಿ ಯಾಕೆ ಕೊಟ್ಟದ್ದು. ಅದಕ್ಕೂ ಮುಸ್ಲಿಮರು ಸೊಪ್ಪು ಹಾಕಲಿಲ್ಲ ಬಿಡಿ.

ಚುನಾವಣೆಯಲ್ಲಿ ಮತ ಕೇಳಬೇಕು. ಅದಕ್ಕಾಗಿ ಹಿಂದುತ್ವ ಹೇಳಿದರೆ ಈಗ ಅಷ್ಟು ಜನಸ್ಪಂದನವಿಲ್ಲ. ಕೇವಲ ಅಭಿವೃದ್ಧಿಯ ವಿಷಯ ಎದುರಿಟ್ಟು ಚುನಾವಣೆ ಎದುರಿಸಲು ಇವರ ಜನ್ಮದಲ್ಲಿ ಸಾಧ್ಯವಿಲ್ಲ. ಅದಕ್ಕೆ ರಾಮ ಮಂದಿರ ವಿರೋಧ ಎಂದು ಮುಂದೆ ಭಾಷಣ ಮಾಡಲು ವೇದಿಕೆಯಾಗಬೇಕು.

ಭಕ್ತಿ ಮತ್ತು ಶ್ರದ್ಧೆ ಎರಡನ್ನು ಬಿಟ್ಟು ಬಿಜೆಪಿ ಪರಿವಾರ ರಾಮದೇವರ ಪ್ರಾಣ ಪ್ರತಿಷ್ಠೆಯಲ್ಲಿ ತೊಡಗಿಕೊಂಡಿದೆ. ಅಯೋಧ್ಯೆ ರಾಮ ದೇವರು ಇವರಿಗೆ ಸದ್ಭುದ್ದಿ ನೀಡಲೆಂದು ಪ್ರಾರ್ಥಿಸುತ್ತ, ದೇವರ ಕಾರ್ಯ ನಿರ್ವಿಘ್ನವಾಗಿ ನಡೆದು, ದೇಶಕ್ಕೆ ಒಳಿತಾಗಲಿ ಎಂದು ಬೇಡಿಕೊಳ್ಳುವೆ.

ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

1 COMMENT

  1. ವಿಷಯ ಸಂಪೂರ್ಣ ತರ್ಕ ಬದ್ದವಾಗಿದೆ, ಧನ್ಯವಾದಗಳು ಸರ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ...

ದೇಶವಾಸಿಗಳು ʼಕ್ವಿಟ್ ಎನ್‍ಡಿಎʼ ಮತ್ತು ʼಸೇವ್ ಇಂಡಿಯಾʼ ಚಳವಳಿಗೆ ಸನ್ನದ್ಧರಾಗಬೇಕಿದೆ..

ಕೋಮುವಾದಿಗಳು ಮತ್ತು ಜಾತಿವಾದಿಗಳ ಅನೈತಿಕ ಮೈತ್ರಿ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತದಲ್ಲಿ...