ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

Date:

ಹದಿನೈದನೆಯ ಹಣಕಾಸು ಆಯೋಗವು ಒಕ್ಕೂಟ ಸರ್ಕಾರ ಒಟ್ಟು ತೆರಿಗೆ ರಾಶಿಯಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ ಇದನ್ನು ಒಕ್ಕೂಟ ಸರ್ಕಾರ ಪಾಲಿಸುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಬರಬೇಕಾದ ಹಣಕಾಸು ಬರುತ್ತಿಲ್ಲ. ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಅನುಷ್ಠಾನಕ್ಕೆ ಕ್ರಮ ತೆಗೆದುಕೊಂಡಿದೆ. ಆದರೂ ಅನೇಕರು ಇದರ ಬಗ್ಗೆ ಅಪಸ್ವರ ತೆಗೆಯುತ್ತಿದ್ದಾರೆ. ಷರತ್ತುಗಳು ಏಕೆ ಎಂಬುದು ಅಂತಹ ಒಂದು ಆಕ್ಷೇಪ. ವಾರ್ಷಿಕ ಸರಾಸರಿ ಬಳಕೆಯ ಮೇಲೆ ಮಾಸಿಕ ಶೇ. 10 ರಷ್ಟು ಸೇರಿಸಿ ವಿದ್ಯುತ್ ಉಚಿತ ಎಂಬ ಬಗ್ಗೆ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಟೀಕೆಯನ್ನು ಹರಿಬಿಟ್ಟಿದ್ದಾರೆ. ತಾವು ಏನನ್ನೂ ಕೊಡಲಿಲ್ಲ; ತಮ್ಮ ಒಕ್ಕೂಟ ಸರ್ಕಾರವು ಹಿರಿಯ ನಾಗರಿಕರಿಗೆ ರೈಲಿನ ಪ್ರಯಾಣದಲ್ಲಿ ನೀಡುತ್ತಿದ್ದ ಶೇ. 40 ರಿಯಾಯಿತಿಯನ್ನು ಕಿತ್ತುಕೊಳ್ಳಲಾಯಿತು. ಒಕ್ಕೂಟ ಸರ್ಕಾರಕ್ಕೆ ಕಿತ್ತುಕೊಳ್ಳುವುದು ಗೊತ್ತೇ ವಿನಾ ಕೊಡುವುದು ಗೊತ್ತಿಲ್ಲ. ಆದರೆ ಬೇರೆಯವರು ಕೊಡುತ್ತಿರುವುದರ ಬಗ್ಗೆ ರಾಗ ಎಳೆಯುತ್ತಿದ್ದೀರಿ!

ಈ ಎಲ್ಲ ಗೊಂದಲದಲ್ಲಿ ಕಾಂಗ್ರೆಸ್‌ ಸೇರಿದಂತೆ ಮರೆತ ಸಂಗತಿಯೆಂದರೆ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಸಂಪನ್ಮೂಲ ವರ್ಗಾವಣೆಯಲ್ಲಿ ಮಾಡುತ್ತಿರುವ ಅನ್ಯಾಯ. ಇದು ಚರ್ಚೆಯಾಗುತ್ತಿಲ್ಲ. ಕನ್ನಡ ಟಿವಿ ಮಾಧ್ಯಗಳಂತೂ ಅಪ್ಪಿತಪ್ಪಿಯೂ ಇದರ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಯಾವ ಯಾವ ರೀತಿಯಲ್ಲಿ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಸಂವಿಧಾನಾತ್ಮಕ ಸಂಪನ್ಮೂಲ ವರ್ಗಾವಣೆಯಲ್ಲಿ ‘ಅನ್ಯಾಯ’ ಮಾಡುತ್ತಿದೆ ಎಂಬುದನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಹದಿನೈದನೆಯ ಹಣಕಾಸು ಆಯೋಗವು ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ರಾಶಿಯಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ ಇದನ್ನು ಒಕ್ಕೂಟ ಸರ್ಕಾರ ಪಾಲಿಸುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಬರಬೇಕಾದ ಹಣಕಾಸು ಬರುತ್ತಿಲ್ಲ. ಉದಾ: 2023-24ರಲ್ಲಿ ಒಕ್ಕೂಟದ ಒಟ್ಟು ತೆರಿಗೆ ರಾಶಿ ರೂ. 33.61 ಲಕ್ಷ ಕೋಟಿ. ಆದರೆ ಒಕ್ಕೂಟ ಸರ್ಕಾರ ವರ್ಗಾವಣೆ ಮಾಡಿರುವುದು ರೂ.10.21 ಲಕ್ಷ ಕೋಟಿ. ಅದರೆ ವರ್ಗಾವಣೆ ಮಾಡಬೇಕಾದದ್ದು ರೂ.13.38 ಲಕ್ಷ ಕೋಟಿ. ಇದರಿಂದ ರಾಜ್ಯಗಳಿಗೆ ಉಂಟಾದ ನಷ್ಟ ರೂ.3.56 ಲಕ್ಷ ಕೋಟಿ. ಕಳೆದ 4-5 ವರ್ಷಗಳಿಂದಲೂ ಹೀಗೆ ವರ್ಗಾವಣೆಯನ್ನು ಪೂರ್ಣವಾಗಿ ಒಕ್ಕೂಟ ಮಾಡುತ್ತಿಲ್ಲ. ಇದರಲ್ಲಿ ನ್ಯಾಯಬದ್ಧವಾಗಿ ಹಣಕಾಸು ವರ್ಗಾವಣೆಯಾದರೆ ಗ್ಯಾರಂಟಿಗಳನ್ನು ಅಥವಾ ಅದೇ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯವು ಕೈಗೊಳ್ಳಬಹುದಾಗಿತ್ತು(ವಿವರಗಳಿಗೆ ನೋಡಿ: ಒಕ್ಕೂಟದ ಬಜೆಟ್ 2023-24. ಬಜೆಟ್ ಅಟ್ ಎ ಗ್ಲಾನ್ಸ್). ಈ ಅನ್ಯಾಯದ ಬಗ್ಗೆ ರಾಜ್ಯದ 25 ಎಂಪಿಗಳು ಮತ್ತು ರಾಜ್ಯ ಬಿಜೆಪಿ ನಾಯಕರು ಚರ್ಚೆ ಮಾಡಲಿಲ್ಲ, ಒಕ್ಕೂಟ ಸರ್ಕಾರಕ್ಕೆ ಪ್ರಶ್ನೆ ಕೇಳಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎರಡನೆಯದು ರಾಜ್ಯದ ಬಜೆಟ್ಟಿನ ರೆವಿನ್ಯೂ ಮೂಲಗಳು ನಾಲ್ಕು- ತೆರಿಗೆ ಮೂಲ, ತೆರಿಗೆಯೇತರ ಮೂಲ, ಒಕ್ಕೂಟದ ತೆರಿಗೆ ರಾಶಿಯಲ್ಲಿ ರಾಜ್ಯದ ಪಾಲು ಮತ್ತು ಗ್ರಾಂಟ್ಸ್ ಇನ್ ಐಡ್. ಮೊದಲ ಎರಡು ರಾಜ್ಯದ ಸ್ವಂತ ರಾಜಸ್ವ ಮೂಲವಾದರೆ ಕೊನೆಯ ಎರಡು ಒಕ್ಕೂಟದಿಂದ ಬರುವ ವರ್ಗಾವಣೆ.

ರಾಜ್ಯದ 2017-18ರ ಒಟ್ಟು ತೆರಿಗೆ ರಾಶಿಯಲ್ಲಿ(ರೂ.146999 ಕೋಟಿ) ಸ್ವಂತ ತೆರಿಗೆ ಪಾಲು ಶೇ. 67.93 ರಷ್ಟಿದ್ದರೆ ಒಕ್ಕೂಟದ ವರ್ಗಾವಣೆ(ರೂ.47145 ಕೋಟಿ) ಪಾಲು ಶೇ. 32.07 ರಷ್ಟಿತ್ತು. ಆದರೆ 2023-24ರಲ್ಲಿ ರಾಜ್ಯದ ಒಟ್ಟು ತೆರಿಗೆ ರಾಶಿಯಲ್ಲಿ(ರೂ. 225909 ಕೋಟಿ) ಸ್ವಂತ ತೆರಿಗೆ ಪಾಲು ಶೇ. 77.75 ರಷ್ಟಿದ್ದರೆ ಒಕ್ಕೂಟದ ವರ್ಗಾವಣೆ(ರೂ. 50257 ಕೋಟಿ) ಪಾಲು ಶೇ. 22.25. ಇದು ಏನನ್ನು ತೋರಿಸುತ್ತದೆ? ಒಕ್ಕೂಟದ ವರ್ಗಾವಣೆ ಪಾಲು ರಾಜ್ಯದ ತೆರಿಗೆ ರಾಶಿಯಲ್ಲಿ 2017-18ರಿಂದ 2023-24ರ ಅವಧಿಯಲ್ಲಿ ಶೇ(-)9.8ರಷ್ಟು ಕಡಿತವಾಗಿದೆ. ಈ ಅವಧಿಯಲ್ಲಿ ಒಕ್ಕೂಟ ಸರ್ಕಾರದ ತೆರಿಗೆ ರಾಶಿಯು ರೂ. 21.42 ಲಕ್ಷ ಕೋಟಿಯಿಂದ ರೂ. 45.03 ಲಕ್ಷ ಕೋಟಿಗೇರಿದೆ. ಇಲ್ಲಿನ ಏರಿಕೆ ಶೇ.110.23. ಒಟ್ಟು ತೆರಿಗೆ ರಾಶಿಯಲ್ಲಿ ಏರಿಕೆಯಾದರೆ ಅದರಿಂದ ರಾಜ್ಯಕ್ಕೆ ದೊರೆಯಬೇಕಾದ ಪಾಲು ಹೆಚ್ಚಾಗಬೇಕು. ಆದರೆ ಹೀಗಾಗುತ್ತಿಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ರಾಜ್ಯವನ್ನು ಆಳಿದ ಬಿಜೆಪಿ ಸರ್ಕಾರ ಮತ್ತು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ 25 ಬಿಜೆಪಿ ಎಂಪಿಗಳು ಪ್ರಶ್ನೆ ಮಾಡಲಿಲ್ಲ. ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದಕ್ಕೆ ಪ್ರಯತ್ನ ಮಾಡಲಿಲ್ಲ.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್

ಹದಿನೈದನೆಯ ಹಣಕಾಸು ಆಯೋಗವು ಹಣಕಾಸು ಹಂಚಿಕೆಯ ಸೂತ್ರದಲ್ಲಿ ಕರ್ನಾಟಕಕ್ಕೆ ಕಡಿತವಾಗಿರುವುದನ್ನು ಗಮನಿಸಿ ತನ್ನ ಮಧ್ಯಂತರ ವರದಿಯಲ್ಲಿ 2020-21ನೆಯ ಸಾಲಿಗೆ ವಿಶೇಷ ಅನುದಾನ ರೂ. 5495 ಕೋಟಿಯನ್ನು ಶಿಫಾರಸ್ಸು ಮಾಡಿತ್ತು. ಕರ್ನಾಟಕದಿಂದಲೇ ಆಯ್ಕೆಯಾಗಿ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಒಕ್ಕೂಟದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಆಯೋಗದ ಅಂತಿಮ ವರದಿಯಲ್ಲಿ ಇದನ್ನು ತೆಗೆಸಿ ಹಾಕಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ತಂದೇ ತರುತ್ತೇವೆ ಎಂದು ಡಿಸೆಂಬರ್ 07, 2020ರಂದು ವಿಧಾನಸಭೆಯಲ್ಲಿ ಅಂದಿನ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಅಬ್ಬರಿಸಿದ್ದರು(ಡೆಕನ್ ಹೆರಾಲ್ಡ್ 07.12.2020). ಇದಿಷ್ಟೇ ಅಲ್ಲ. ಜಿಎಸ್‍ಟಿ ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಬಸವರಾಜ್ ಬೊಮ್ಮಾಯಿ ಅವರು ಮುಂದುವರಿದು ‘ಇದನ್ನು ಪಡೆಯಲು ನಾವು ಪ್ರಯತ್ನಸುತ್ತಿದ್ದೇವೆ. ರಾಜ್ಯದ ಪಾಲನ್ನು ಪಡೆಯುವಲ್ಲಿ ಮತ್ತು ಅದರ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದೂ ಹೇಳಿದ್ದರು. ಆದರೆ ಅದು ರಾಜ್ಯಕ್ಕೆ ದೊರಕಲಿಲ್ಲ.

ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಹಣಕಾಸು ಸಂಬಂಧ: ನಮ್ಮದು ಒಕ್ಕೂಟ ರಾಜಕೀಯ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ವಿವಾದಾತ್ಮಕ-ಸಂಘರ್ಷಾತ್ಮಕ ಸಂಗತಿಯೆಂದರೆ ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಹಣಕಾಸು ಸಂಬಂಧ. ಈ ಸಮಸ್ಯೆಯ ನಿರ್ವಹಣೆಗಾಗಿ ಸಂವಿಧಾನದಲ್ಲಿ ಹಣಕಾಸು ಆಯೋಗದಂತಹ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಆಯೋಗವು ಪ್ರತಿ ಐದು ವರ್ಷಗಳಿಗೊಮ್ಮೆ ಒಕ್ಕೂಟ ಸರ್ಕಾರ ತನ್ನ ತೆರಿಗೆ ರಾಶಿಯಲ್ಲಿ ರಾಜ್ಯಗಳಿಗೆ ಎಷ್ಟನ್ನು ವರ್ಗಾಯಿಸಬೇಕು ಎಂಬುದರ ನಿಯಮವನ್ನು ರೂಪಿಸುತ್ತದೆ. ಒಕ್ಕೂಟದ ತೆರಿಗೆ ರಾಶಿಯ ಹಂಚಿಕೆಯ ಭಾಗದಲ್ಲಿ ಸೆಸ್(ಮೇಲು ತೆರಿಗೆ) ಮತ್ತು ಸರ್‍ಚಾರ್ಚ್(ಉಪತೆರಿಗೆ)ಮೂಲದ ರೆವಿನ್ಯೂ ಸೇರುವುದಿಲ್ಲ. ಅಂದರೆ ಸೆಸ್ ಮತ್ತು ಸರ್‌ಚಾರ್ಜ್‌ಗಳ ರೆವಿನ್ಯೂವನ್ನು ಒಕ್ಕೂಟ ಪೂರ್ಣವಾಗಿ ತಾನೇ ಬಳಸುತ್ತದೆ. ಇದನ್ನು ರಾಜ್ಯಗಳ ಜೊತೆಯಲ್ಲಿ ಹಂಚಿಕೊಳ್ಳುವುದಿಲ್ಲ. ಈ ತೆರಿಗೆಗಳ ಮೂಲಕ ಒಕ್ಕೂಟವು ಅಪಾರ ರೆವಿನ್ಯೂ ಸಂಗ್ರಹಿಸಿಕೊಳ್ಳುತ್ತಿದೆ. ಈ ತೆರಿಗೆಗಳ ಮೊತ್ತ 2017-18ರಲ್ಲಿ ಒಕ್ಕೂಟದ ತೆರಿಗೆ ರಾಶಿಯಲ್ಲಿ ಶೇ. 11.43 ರಷ್ಟಿದ್ದುದು 2023-24ರಲ್ಲಿ ಇದು ಶೇ. 18.15 ರಷ್ಟಾಗಿದೆ. ಈ ತೆರಿಗೆಗಳ ಮೊತ್ತ 2017-18ರಲ್ಲಿ ರೂ. 2.18 ಲಕ್ಷ ಕೋಟಿಯಷ್ಟಿದ್ದುದು 2022-23ರಲ್ಲಿ ರೂ. 5.20 ಲಕ್ಷ ಕೋಟಿಯಾಗಿದೆ. ಈ ತೆರಿಗೆಗಳ ಮೊತ್ತವನ್ನು ಒಕ್ಕೂಟದ ಹಂಚುವ ತೆರಿಗೆ ರಾಶಿಗೆ ಸೇರಿಸಬೇಕು ಎಂದು ರಾಜ್ಯಗಳು ಒತ್ತಾಯಿಸುತ್ತಿವೆ. ಹಣಕಾಸು ಆಯೋಗಗಳು ಶಿಫಾರಸ್ಸು ಮಾಡುತ್ತಿವೆ. ಆದರೆ ಒಕ್ಕೂಟ ಇದಕ್ಕೆ ಸ್ಪಂದಿಸುತ್ತಿಲ್ಲ. ಈ ತೆರಿಗೆ ದರಗಳನ್ನು ತೀವ್ರ ಏರಿಕೆ ಮಾಡುತ್ತಾ ಒಕ್ಕೂಟ ಸದರಿ ತೆರಿಗೆಗಳ ಮೊತ್ತದ ಮೇಲೆ ಏಕಸ್ವಾಮ್ಯ ಸಾಧಿಸಿಕೊಂಡಿದೆ. ಇದು ಸಂವಿಧಾನಾತ್ಮಕ ಒಕ್ಕೂಟ ತತ್ವದ ಉಲ್ಲಂಘನೆ ಮತ್ತು ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯ.

ಒಕ್ಕೂಟವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬೇಕು!

ಒಕ್ಕೂಟ ತತ್ವದ ಬಗ್ಗೆ ಮೋದಿ ಸರ್ಕಾರಕ್ಕೆ ಗೌರವವಿಲ್ಲ. ಅನೇಕ ರೀತಿಯಲ್ಲಿ ರಾಜ್ಯಗಳ ಅಧಿಕಾರವನ್ನು ಅದು ಕಬಳಿಸುತ್ತಿದೆ. ಅದು ಕೇಂದ್ರೀಕರಣ ನೀತಿಯನ್ನು ಪಾಲಿಸುತ್ತಿದೆ. ಜಿಎಸ್‍ಟಿ ಕಾಯಿದೆಯಿಂದಾಗಿ ರಾಜ್ಯಗಳು ತೆರಿಗೆ ಸಾಮರ್ಥ್ಯವನ್ನು ಕಳೆದುಕೊಂಡವು. ಈಗ ಸಂಪನ್ಮೂಲಕ್ಕಾಗಿ ಒಕ್ಕೂಟದ ಮುಂದೆ ಕೈಯೊಡ್ಡಿ ನಿಲ್ಲುವ ಸ್ಥಿತಿ ಬಂದಿದೆ.
ದಕ್ಷಿಣ ಭಾರತದ ಎಲ್ಲ ಐದು ರಾಜ್ಯಗಳಿಗೂ ಒಕ್ಕೂಟ ಅನ್ಯಾಯ ಮಾಡುತ್ತಿದೆ. ಯಾವುದನ್ನು ‘ಹಿಂದಿ ಬೆಲ್ಟ್’ ಎಂದು ಕರೆಯುತ್ತೇವೆಯೋ ಆ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸಗಡಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಇದು ರಾಜಕೀಯ ಅನ್ಯಾಯ. ಏಕೆಂದರೆ ಭಾರತದ ಜಿಡಿಪಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪಾಲು ಉತ್ತರ ಭಾರತದ ಐದು ರಾಜ್ಯಗಳ ಪಾಲಿಗಿಂತ ಬಹಳಷ್ಟು ಅಧಿಕವಾಗಿದೆ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ದೇಶದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 19.23 ಪಾಲು ಪಡೆದಿದ್ದರೆ ದೇಶದ ಜನಸಂಖ್ಯೆಯಲ್ಲಿ ಶೇ. 20.71 ಪಾಲು ಪಡೆದಿವೆ. ಆದರೆ ದೇಶದ 2020-21ರ ಜಿಡಿಪಿಯಲ್ಲಿ ಇವುಗಳ ಪಾಲು ಶೇ. 33.13. ಆದರೆ ಉತ್ತರ ಭಾರತದ ಐದು ರಾಜ್ಯಗಳು ದೇಶದ ವಿಸ್ತೀರ್ಣದಲ್ಲಿ ಶೇ. 32.87ರಷ್ಟು ಮತ್ತು ದೇಶದ ಜನಸಂಖ್ಯೆಯಲ್ಲಿ ಶೇ. 38.84 ರಷ್ಟು ಪಾಲು ಪಡೆದಿವೆ. ಆದರೆ ದೇಶದ ಜಿಡಿಪಿಯಲ್ಲಿ ಇವುಗಳ ಪಾಲು ಶೇ. 23.27.

ಆದರೆ, ಒಕ್ಕೂಟವು ರಾಜ್ಯಗಳಿಗೆ ವರ್ಗಾವಣೆ ಮಾಡುವ ಮೊತ್ತದಲ್ಲಿ ಉತ್ತರ ಭಾರತದ ಐದು ರಾಜ್ಯಗಳ ಪಾಲು ಅತ್ಯಧಿಕ ಮತ್ತು ದಕ್ಷಿಣ ಭಾರತದ ಪಾಲು ಅತ್ಯಂತ ಕಡಿಮೆ. ಕೋಷ್ಟಕದಲ್ಲಿ 2023-24ರಲ್ಲಿ ದಕ್ಷಿಣ ಭಾರತದ ಐದು ಮತು ಉತ್ತರ ಭಾರತದ ಐದು ರಾಜ್ಯಗಳಿಗೆ ವರ್ಗಾಯಿಸುತ್ತಿರುವ ಹಣಕಾಸು ವಿವರ ನೀಡಲಾಗಿದೆ.

ಒಕ್ಕೂಟ ಸರ್ಕಾರ 2023-24ರಲ್ಲಿ ರಾಜ್ಯಗಳಿಗೆ ತನ್ನ ತೆರಿಗೆ ರಾಶಿಯಿಂದ ವರ್ಗಾವಣೆ ಮಾಡಿದ ಒಟ್ಟು ಮೊತ್ತ ರೂ.10.21 ಲಕ್ಷ ಕೋಟಿ. ಇದರಲ್ಲಿ ದಕ್ಷಿಣ ಭಾರತ ಐದು ರಾಜ್ಯಗಳ ಪಾಲು ಶೇ. 15.79 ರಷ್ಟಾದರೆ ಉತ್ತರ ಭಾರತದ ಐದು ರಾಜ್ಯಗಳ ಪಾಲು ಶೇ. 45.27. ಇಲ್ಲಿದೆ ಅನ್ಯಾಯದ ಮೂಲ. ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲವನ್ನು ಒಕ್ಕೂಟ ವರ್ಗಾಯಿಸಬೇಕು ಎಂಬ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಸಾಧ್ಯವಿಲ್ಲ. ಆದರೆ ತಾರತಮ್ಯಕ್ಕೆ ಒಂದು ಮಿತಿ ಇರಬೇಕು.

ದಕ್ಷಿಣ ಭಾರತದ ರಾಜ್ಯಗಳ ಜಿಎಸ್‍ಡಿಪಿಯು ದೇಶದ ಜಿಡಿಪಿಯ ಮೂರನೆಯ ಒಂದರಷ್ಟಿದ್ದರೆ ಉತ್ತರ ಭಾರತದ ಜಿಎಸ್‍ಡಿಪಿಯು ದೇಶದ ಜಿಡಿಪಿಯ ಒಂದನೆಯ ನಾಲ್ಕರಷ್ಟಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹಣಕಾಸು ವರ್ಗಾವಣೆಯಲ್ಲಿ ಅನ್ಯಾಯ ಮಾಡಿದರೆ ಅದು ದೇಶದ ಆರ್ಥಿಕ ಬೆಳವಣಿಗೆಗೆ(ಜಿಡಿಪಿ) ಧಕ್ಕೆಯುಂಟು ಮಾಡುತ್ತದೆ.
ಒಟ್ಟಾರೆ ಕರ್ನಾಟಕ ರಾಜ್ಯವು ಒಕ್ಕೂಟ ಸರ್ಕಾರದಿಂದ ಅನ್ಯಾಯವನ್ನು ಅನುಭವಿಸುತ್ತಿದೆ. ಇದನ್ನು ಡಬಲ್ ಎಂಜಿನ್ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಪಕ್ಷವು ಸರಿಪಡಿಸುವುದಕ್ಕೆ ಪ್ರಯತ್ನವಿರಲಿ ಧ್ವನಿಯನ್ನೂ ಎತ್ತುತ್ತಿಲ್ಲ. ಕಾಂಗ್ರೆಸ್ ಪಕ್ಷವು ಮೇ 10ರ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಬಗ್ಗೆ ಇನ್ನಿಲ್ಲದ ಪ್ರಶ್ನೆಗಳನ್ನು ಕೇಳಿದ, ಈಗ ಷರತ್ತುಗಳ ಏಕೆ ಎಂದು ಪ್ರಶ್ನೆ ಮಾಡುತ್ತಿರುವ ಗ್ಯಾರಂಟಿಗಳ ವ್ಯಸನದಲ್ಲಿ ಮುಳುಗಿ-ತೇಲುತ್ತಿರುವ ಕನ್ನಡ ಟಿವಿ ಮಾಧ್ಯಮಗಳು ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಚಕಾರವೆತ್ತುತ್ತಿಲ್ಲ. ಒಕ್ಕೂಟ ಸರ್ಕಾರದಿಂದ ನಮಗೆ ನ್ಯಾಯ ದೊರೆತರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯು ಉಂಟಾಗುವುದಿಲ್ಲ.

ಟಿ ಆರ್ ಚಂದ್ರಶೇಖರ
+ posts

ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಟಿ ಆರ್ ಚಂದ್ರಶೇಖರ
ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

ಕುಟುಂಬದಲ್ಲಿ ಸಾವು-ನೋವು ಸಂಭವಿಸಿದರೆ ಕೆಲ ಕಾಲದಲ್ಲಿ ಎಲ್ಲರೂ ಯಥಾಸ್ಥಿತಿಗೆ ಮರಳುತ್ತಾರೆ. ಆದರೆ,...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು...