ಕುಸ್ತಿಪಟುಗಳ ಪ್ರತಿಭಟನೆ | ಸಾಕ್ಷಿ ಮಲಿಕ್, ವಿನೇಶಾ ಪೋಗಟ್ ಅವರದು ಮಾದರಿ ನಾಯಕತ್ವ

Date:

ಸಾಕ್ಷಿ ಮಲಿಕ್ ಮತ್ತು ವಿನೇಶಾ ಪೋಗಟ್ ನಿಜವಾದ ನಾಯಕತ್ವ ಹೇಗಿರಬೇಕು ಎನ್ನುವುದನ್ನು ತಮ್ಮ ಹೋರಾಟದ ಕ್ರಮದಲ್ಲಿಯೇ ತೋರಿಸಿದ್ದಾರೆ. ನೈಜ ನಾಯಕರು ಮುಂಚೂಣಿಯಲ್ಲಿ ನಿಂತು, ತನ್ನೊಡನಿರುವ ದುರ್ಬಲರನ್ನು, ಅಸಹಾಯಕರನ್ನು ಕಾಪಾಡಿಕೊಳ್ಳುತ್ತಾರೆ. ಅವರನ್ನು ಪಣಕ್ಕಿಟ್ಟು ತಾವು ಉಳಿದುಕೊಳ್ಳುವುದಿಲ್ಲ. ಇಲ್ಲಿ ದೂರು ನೀಡಿರುವ ಅಪ್ರಾಪ್ತವಯಸ್ಕರ ಹೆಸರುಗಳನ್ನು ಪೋಗಟ್ ಬಯಲು ಮಾಡಿಲ್ಲ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೇ 28, 2023 ಪ್ರಜ್ಞಾವಂತ ನಾಗರಿಕರೆಲ್ಲರೂ ಯೋಚಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವ ದಿನ. ನಮ್ಮ ಸಂಸತ್ ಭವನ ಸಂವಿಧಾನದ ಘನ ಮೌಲ್ಯಗಳಾದ ಸಮಾನತೆ, ಮಾನವೀಯ ಹಕ್ಕುಗಳು ಮತ್ತು ಧರ್ಮನಿರಪೇಕ್ಷತೆಯನ್ನು ಪ್ರತಿನಿಧಿಸುವ ತಾಣವಾಗಬೇಕಿತ್ತು. ಆದರೆ ಉದ್ಘಾಟನೆಯ ಸಂದರ್ಭದಲ್ಲಿ ಸಂವಿಧಾನದ ಮೂಲ ಆಶಯಕ್ಕೆ ಸೋಲಾಯಿತು. ಅಪಮಾನಿತ ಕುಸ್ತಿಪಟುಗಳ ಮನವಿ, ಮಾತುಕತೆ, ಎಲ್ಲಾ ಸೋತು, ನ್ಯಾಯಾಲಯದ ಮಧ್ಯಪ್ರವೇಶಿಕೆಯು ಅರ್ಥ ಕಳೆದುಕೊಂಡು, ಕೊನೆಗೆ 38 ದಿನಗಳ ಶಾಂತಿಯುತ ಹೋರಾಟವು ಸರ್ಕಾರದ ಮನಸ್ಸನ್ನು ತಟ್ಟದೆ ಹೋಯಿತು. ಪ್ರಜೆಗಳ ಅಳಲಿಗೆ ಈ ಮಟ್ಟಿಗೆ ನಿಷ್ಕ್ರಿಯವಾದ ಸರ್ಕಾರವನ್ನು ಚಲಿಸುವಂತೆ ಮಾಡುವುದಕ್ಕೆ ಉಳಿದಿದ್ದ ದಾರಿ ಪ್ರತಿನಿಧಿಗಳು ಸೇರಿದ್ದ ಸಂಸತ್ ಭವನಕ್ಕೆ ಹೋಗುವುದೊಂದೇ. ಹತಾಶರಾದ ನೊಂದ ಜೀವಿಗಳಿಗೆ ಅಲ್ಲೂ ಪ್ರವೇಶ ಮುಚ್ಚಿದಾಗ ಬಲವಂತವಾಗಿ ಹೋಗುವುದು ಅನಿವಾರ್ಯವಾಯಿತು.

ದೇಶದ ಗೌರವವನ್ನು ಜಗತ್ತಿನಾದ್ಯಂತ ಮೆರಸಿ, ದೇಶಕ್ಕೆ ಘನತೆ ತಂದುಕೊಟ್ಟಿದ್ದವರ ನೋವಿಗೆ ಸ್ಪಂದಿಸಲಾಗದ ಸರ್ಕಾರ ಅವರ ಮೇಲೆ ಕಾನೂನು ಉಲ್ಲಂಘನೆಯ ಕ್ರಮವನ್ನು ತೆಗೆದುಕೊಂಡಿತು. ಕೇಸುಗಳನ್ನು ದಾಖಲಿಸಿತು. ಹತಾಶರಾಗಿ ತಮ್ಮ ಪದಕಗಳನ್ನು ಹರಿದ್ವಾರದಲ್ಲಿ ಗಂಗೆಗೆ ಎಸೆಯಲು ಬಂದರೂ ಸರ್ಕಾರ ಅವರತ್ತ ತಿರುಗಿ ನೋಡಲಿಲ್ಲ. ಕೋಪಕ್ಕೆ ಇರುವ ನಿಜವಾದ ಕಾರಣವನ್ನು ಅರ್ಥಮಾಡಿಕೊಂಡರಷ್ಟೇ ಅದನ್ನು ಪರಿಹರಿಸಲು, ನ್ಯಾಯ ಒದಗಿಸಲು ಸಾಧ್ಯ. ಸರ್ಕಾರ ಜನರ ನೋವಿಗೆ ಸ್ಪಂದಿಸುವ ಮನಸ್ಥಿತಿಯಲ್ಲಿಲ್ಲ ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸಿತು. ಈ ಘಟನೆಗಳು ಭಾರತದ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸುತ್ತಿರುವ ರೀತಿಗೆ ಸಂಬಂಧಿಸಿದಂತೆ ತುಂಬಾ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.

ವಿಭಿನ್ನ ಕ್ರೀಡಾ ಪ್ರಕಾರಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಮಹಿಳಾ ಕ್ರೀಡಾಪಟುಗಳು ಹಲವು ಕಾಲದಿಂದ ಲೈಂಗಿಕ ಕಿರುಕುಳದ ಬಗ್ಗೆ ದೂರುತ್ತಾ, ಗೊಣಗಾಡುತ್ತಲೇ ಬಂದಿದ್ದಾರೆ. ಆದರೆ ಧೈರ್ಯದಿಂದ ಸಾರ್ವಜನಿಕವಾಗಿ ಮಾತನಾಡಲು ಹಿಂಜರಿದಿದ್ದಾರೆ. ಯಾಕೆ? ಮನೆಯ ಒಳಗೆ-ಹೊರಗೆ, ರಾಜಕೀಯ ಕಣದಲ್ಲಿ, ಪೊಲೀಸ್ ಠಾಣೆಯಲ್ಲಿ, ನ್ಯಾಯಾಲಯಗಳಲ್ಲಿ, ಒಟ್ಟಾರೆ ಸಮಾಜದಲ್ಲಿ, ತಮಗಾಗುವ ಹಿಂಸೆಯೆಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಬಲ್ಲಂತಹ ವಾತಾವರಣ ಹೆಣ್ಣಿಗೆ ಈ ದೇಶದಲ್ಲೇನು ಯಾವ ದೇಶದಲ್ಲೂ ಇಲ್ಲ. ಸಾರ್ವಜನಿಕವಾಗಿ ದನಿಯೆತ್ತುವ ಕ್ರೀಡಾಪಟುಗಳು ತಮ್ಮ ವೃತ್ತಿಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ಕಳೆದುಕೊಳ್ಳಲು ಸಿದ್ಧರಿರಬೇಕು.

ಕ್ರೀಡಾ ವಕೀಲರೂ ಮತ್ತು ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸೌರಭ್ ಮಿಶ್ರಾ ಹೇಳುತ್ತಾರೆ, “ಹೀಗೆ ದೂರು ನೀಡಿದ ಕ್ರೀಡಾಪಟುಗಳು ಮತ್ತೆ ಮಾತನಾಡದಂತೆ, ಅವರಿಗೆ ಸ್ಪರ್ಧಿಸುವ ಅವಕಾಶವೇ ಇಲ್ಲದಂತೆ ಮಾಡಲಾಗುತ್ತದೆ.” ಈ ಮಾತನ್ನು ಸಾಕ್ಷಿ ಮಲಿಕ್ ಕೂಡ ಸಮರ್ಥಿಸುತ್ತಾರೆ. ಮೊದಲೇ ಲೈಂಗಿಕ ಕಿರುಕುಳದಿಂದ ಸಿಕ್ಕಾಪಟ್ಟೆ ನೊಂದಿರುವ ಹೆಣ್ಣುಮಕ್ಕಳು ತಾವು ಅನುಭವಿಸಿರುವ ಕಿರುಕುಳವನ್ನು ವಿಭಿನ್ನ ಸಮಿತಿಗಳ ಮುಂದೆ ಮತ್ತೆ ಮತ್ತೆ ಹೇಳುವಂತೆ ಮಾಡಲಾಗುತ್ತದೆ. ಅದು ಸಂತ್ರಸ್ತರಿಗೆ ಅತ್ಯಂತ ಹಿಂಸೆ ಮತ್ತು ನೋವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ, ಕಿರುಕುಳಕೊಟ್ಟವರು ಮತ್ತಷ್ಟು ಕಿರುಕುಳ ಕೊಟ್ಟು ಹೆಮ್ಮೆಯಿಂದ ಬೀಗುವಂಥ ಅವಕಾಶವನ್ನು ನಮ್ಮ ರಾಜಕೀಯ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಅಂತಹ ಅತ್ಯಂತ ಕಹಿ ಅನುಭವ ನಮ್ಮ ಕ್ರೀಡಾಪಟುಗಳಿಗಾಗಿದೆ. ವಿನೇಶಾ ಪೋಗಟ್ ಇದಕ್ಕೊಂದು ಜ್ವಲಂತ ಉದಾಹರಣೆ ನೀಡುತ್ತಾರೆ, “ಪೂರ್ವ ಭಾರತದ ರಾಜ್ಯವೊಂದರಲ್ಲಿ ಹೆಣ್ಣುಮಕ್ಕಳು ತಮಗೆ ಕಿರುಕುಳ ಕೊಡುತ್ತಿದ್ದ ತರಬೇತುದಾರನ ವಿರುದ್ಧ ರೆಸಲಿಂಗ್ ಫೆಡೆರೇಷನ್ ಆಫ್ ಇಂಡಿಯಾಕ್ಕೆ ದೂರು ನೀಡಿದರು. ಆತನನ್ನು 10 ದಿನಗಳ ಅವಧಿಗೆ ಅಮಾನತ್ತುಗೊಳಿಸಿದರು. ಆದರೆ 7ನೆಯ ದಿನವೇ ಆತ ಹೆಡ್ ಕೋಚ್ ಆಗಿ ಮರಳಿ ಕೆಲಸಕ್ಕೆ ಬಂದ. ಇದು ರಸಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯವೈಖರಿ.” ಈ ಮಾತುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಕುಸ್ತಿ

ರಸಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಒಬ್ಬ ಅಪ್ರಾಪ್ತವಯಸ್ಕಳೂ ಸೇರಿದಂತೆ ಏಳು ಜನ ಕ್ರೀಡಾಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರ ಅಧಿಕಾರಾವಧಿ ಪ್ರಾರಂಭವಾದ ದಿನದಿಂದಲೂ ಮಹಿಳಾ ಕುಸ್ತಿಪಟುಗಳು ತೀವ್ರತರವಾದ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.

1990ರಿಂದಲೂ ಆತನ ವಿರುದ್ದ ಕ್ರಿಮಿನಲ್ ದಾಖಲೆಗಳಿವೆ. 1990ರಲ್ಲಿ ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂನ ನಾಲ್ವರು ಸಹಚರರಿಗೆ ಸಹಾಯ ಮಾಡಿದ್ದರು ಎನ್ನುವ ಕಾರಣಕ್ಕೆ ಟಾಡಾ ನಿಯಮದಡಿ ಜೈಲಿಗೆ ಹಾಕಿದ್ದರು. ಅವರವಿರುದ್ಧ 40ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ಇವೆ. ಕಳ್ಳತನ, ಕೊಲೆ ಪ್ರಯತ್ನ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಅನೈತಿಕ ಹಣದ ವಹಿವಾಟು ಇವುಗಳಿಗೆ ಸಂಬಂಧಿಸಿದ ನಾಲ್ಕು ಕೇಸುಗಳು ಈಗಲೂ ನಡೆಯುತ್ತಿದೆ. ಸಾರ್ವಜನಿಕವಾಗಿ ಸಂದರ್ಶನವೊಂದರಲ್ಲಿ ತಾನು ಒಂದು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಪೋಕ್ಸೊ ಕಾಯಿದೆ ಸೇರಿದಂತೆ ಈಗ ಅವರ ಮೇಲೆ ಎರಡು ಎಫ್‍ಐಆರ್ ದಾಖಲಾಗಿದೆ ಹಾಗಿದ್ದೂ ಈವರಗೆ ಅವರನ್ನು ಬಂದಿಸಿಲ್ಲ ಪೋಕ್ಸೊ ಕಾನೂನು ಸರಿಯಿಲ್ಲ. ಸಾಧು ಸಂತರ ಬೆಂಬಲದಿಂದ ಅದಕ್ಕೆ ತಿದ್ದುಪಡಿ ತರುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಂಸತ್ತಿನ ಉದ್ಘಾಟನೆಯಲ್ಲಿ ಗತ್ತಿನಿಂದ ಭಾಗವಹಿಸಿದ್ದರು. ಆದರೆ 38 ದಿನಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ, ಯಾವುದೇ ಅಪರಾಧದ ಹಿನ್ನೆಲೆಯಿಲ್ಲದ ಕ್ರೀಡಾಪಟುಗಳನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಎಳೆದಾಡಿ, ಬಂಧಿಸಿ, ಜಂತರ್‌ ಮಂತರ್‌ನಿಂದ ಒಕ್ಕಲೆಬ್ಬಿಸಿ, ಬೀದಿಪಾಲು ಮಾಡಲಾಗಿದೆ. ಇಡೀ ಪ್ರಭುತ್ವ ಬ್ರಿಜ್‍ಭೂಷಣ್ ಬೆನ್ನಿಗೆ ನಿಂತಿದೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು?

ಇಂತಹ ಸನ್ನಿವೇಶಗಳನ್ನು ಖ್ಯಾತ ಅರ್ಥಶಾಸ್ತ್ರಜ್ಞೆ ಮತ್ತು ಸ್ತ್ರೀವಾದಿ ಚಿಂತಕಿ ಜಯತಿ ಘೋಷ್ “ರಿಲೇಷನಲ್ ಇನೀಕ್ವಾಲಿಟಿಗೆ” (ಸಂಬಂಧಾತ್ಮಕ ಅಸಮಾನತೆ) ನಿದರ್ಶನಗಳು ಎನ್ನುತ್ತಾರೆ. ಸಂಬಂಧಗಳಲ್ಲಿ ಅಸಮಾನತೆ ಇದ್ದಾಗ ಕೆಲವರಿಗೆ ಅಥವಾ ಕೆಲವು ವರ್ಗ, ವರ್ಣ, ದೇಶ ಅಥವಾ ಸಮುದಾಯಗಳಿಗೆ ಹೆಚ್ಚಿನ ಅಧಿಕಾರ ಅಥವಾ ಪ್ರಭಾವ ಸಾಧ್ಯವಾಗುತ್ತದೆ. ಅದರಿಂದ ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಉಳಿದ ಹಲವರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ ಉಳಿದವರಿಗೆ ಅವು ಸಿಗದಂತೆ ನೋಡಿಕೊಳ್ಳುವುದಕ್ಕೂ ಪ್ರಭಾವಶಾಲಿಗಳಿಗೆ ಸಾಧ್ಯವಾಗುತ್ತದೆ. ಅಂದರೆ ಉಳಿದವರ ಹಕ್ಕು ಹಾಗೂ ಸ್ವಾತಂತ್ರ್ಯ ಎರಡಕ್ಕೂ ಧಕ್ಕೆಯಾಗುತ್ತದೆ. ಹಾಗೆಯೇ ಅಧಿಕಾರದ ವಿಷಯದಲ್ಲೂ ಸಿಗಬೇಕಾದ ಅಧಿಕಾರ ಸಿಗುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಸಮಾಜಗಳಲ್ಲಿಯೂ ಹೆಣ್ಣಿಗಿಂತ ಗಂಡಿಗೆ, ಕರಿಯರಿಗಿಂತ ಬಿಳಿಯರಿಗೆ, ನಿಮ್ನ ಜಾತಿಯವರಿಗಿಂತ ಮೇಲ್ಜಾತಿಯವರಿಗೆ, ಗ್ರಾಮೀಣ ಪ್ರದೇಶದವರಿಗಿಂತ ನಗರ ಪ್ರದೇಶದವರಿಗೆ ಹೆಚ್ಚು ಅಧಿಕಾರ ಮತ್ತು ಪ್ರಭಾವ ಇರುತ್ತದೆ. ಅವರಿಗೆ ಪ್ರಭುತ್ವದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಮಥ್ರ್ಯವಿರುತ್ತದೆ. ಬಹುಶಃ ಮಹಿಳಾ ಕುಸ್ತಿಪಟುಗಳ ಹೋರಾಟ, ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಹೇಳಿಕೆಗಳು ಹಾಗೂ ಪ್ರಭುತ್ವದ ಧೋರಣೆ ಇವುಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಬಹುದೇನೋ.

ಬ್ರಿಜ್‍ಭೂಷಣ್ ಈಗಾಗಲೇ ಐದು ಸಲ ಬಿಜೆಪಿಯಿಂದ ಸಂಸತ್ ಸದಸ್ಯರಾಗಿದ್ದಾರೆ. ಗೊಂಡ್ ಪ್ರಾಂತ್ಯದ ಸುತ್ತಮುತ್ತಲಿನ 6 ಲೋಕಸಭಾ ಕ್ಷೇತ್ರದಲ್ಲಿ ಆತನ ಮಾತು ಮತ್ತು ಪ್ರಭಾವ ಗಾಢವಾಗಿದೆ. ಪ್ರಭುತ್ವದ ಅಧಿಕಾರವನ್ನು ಮತ್ತಷ್ಟು ಬಲಪಡಿಸುವ, ಗದ್ದುಗೆಯಲ್ಲಿ ಮುಂದುವರಿಯಲು ಸಹಕಾರಿಯಾಗುವ ಆತ ಪ್ರಭುತ್ವಕ್ಕೆ ತುಂಬಾ ಮುಖ್ಯ. ಹಾಗಾಗಿ ಪ್ರಭುತ್ವದ ನ್ಯಾಯದ ಹಂಚಿಕೆಯಲ್ಲಿ ಆತನ ಪ್ರಭಾವ ಮತ್ತು ಅಧಿಕಾರ ಎರಡೂ ಹೆಚ್ಚಿಗೆ ಇರುತ್ತದೆ. ಆದರೆ ಇಂತಹ ಕರಿಷ್ಮಾ ಇಲ್ಲದ ಕ್ರೀಡಾಪಟುಗಳಿಂದ ಪ್ರಭುತ್ವಕ್ಕೆ ಲಾಭವೇನಿಲ್ಲ ಮತ್ತು ಅವರನ್ನು ಕಡೆಗಾಣಿಸುವುದರಿಂದ ನಷ್ಟವೂ ಇಲ್ಲ. ಹಾಗಾಗಿ ಈ ಅಧಿಕಾರ ಮತ್ತು ಪ್ರಭಾವದ ಶ್ರೇಣೀಕರಣದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ನ್ಯಾಯ ದೊರಕಿಸಿಕೊಳ್ಳುವುದು ಸುಲಭವಲ್ಲ.

ಎರಡನೆಯದಾಗಿ ಪತ್ರಕರ್ತ ಶೇಖರ್ ಗುಪ್ತಾ ಗುರುತಿಸುವಂತೆ ಕುಸ್ತಿಯಲ್ಲಿ ಈತನಕ ಪದಕಗಳನ್ನು ತಂದಿರುವ ಎಲ್ಲರೂ ಗ್ರಾಮೀಣ ಪ್ರದೇಶದವರು. ಇಂಗ್ಲಿಷ್ ಅಷ್ಟಾಗಿ ಬಾರದವರು, ಆಂಗ್ಲಭಾಷಾ ಸಮೂಹ ಮಾಧ್ಯಮಗಳಲ್ಲಿ ಮತ್ತು ಕುಲೀನ ವಲಯಗಳಲ್ಲಿ ಧೋನಿ ಅಥವಾ ವಿರಾಟ್ ಕೋಹ್ಲಿಯಂತೆ ಜನಪ್ರಿಯತೆ ಹೊಂದಿಲ್ಲದವರು. ಅವರ ಮಾತು, ನಡವಳಿಕೆ, ಭಾಷೆ ಯಾವುದೂ ತುಂಬಾ ಪರಿಷ್ಕೃತವಾದುವಲ್ಲ. ಹಾಗಾಗಿ ಭಾರತೀಯ ಕುಲೀನರಲ್ಲಿ ಅವರಿಗೆ ಒಂದು ಬ್ರಾಡ್ ಬೇಸ್ ಇಲ್ಲ. ಮಾಧ್ಯಮಗಳ ಮೇಲಾಗಲಿ, ಸಮಾಜದ ಮೇಲಾಗಲಿ ತುಂಬಾ ಪ್ರಭಾವ ಬೀರಬಲ್ಲ ಶಕ್ತಿಯುಳ್ಳವರಲ್ಲ. ಅಧಿಕಾರ ಮತ್ತು ಪ್ರಭಾವದ ಏಣಿಯಲ್ಲಿ ಕಡೆಗಾಣಿಸಬಲ್ಲ ಸ್ಥಾನದಲ್ಲಿ ಅವರಿದ್ದಾರೆ.

ಮೂರನೆಯದಾಗಿ ಪ್ರಭುತ್ವವನ್ನು ಪ್ರಭಾವಿಸಬಲ್ಲ ಸಾಮಥ್ಯವಿಲ್ಲದ ಜನಸಮುದಾಯಗಳು ಉದಾಹರಣೆಗೆ ಗ್ರಾಮೀಣ ಮಹಿಳೆಯರು, ಆದಿವಾಸಿಗಳು ಇವರನ್ನು ಕುರಿತ ಅಧ್ಯಯನಗಳೆಲ್ಲವೂ ಈ ಮೇಲಿನ ಅಂಶವನ್ನು ಸಮರ್ಥಿಸುತ್ತವೆ. 1975ರಷ್ಟು ಹಿಂದೆಯೇ ಈ ದೇಶದ ಮಹಿಳೆಯರ ಸ್ಥಿತಿಗತಿ ಕುರಿತು ತಳಸ್ಪರ್ಶಿ ಅಧ್ಯಯನ ಮಾಡಿದ ಖ್ಯಾತ ಸಮಾಜಶಾಸ್ತ್ರಜ್ಞೆ ಡಾ ವೀಣಾ ಮಜುಂದಾರ್ “ಈ ವ್ಯವಸ್ಥೆಯಲ್ಲಿ ಮಹಿಳೆಯರ ಅಗತ್ಯಗಳಿಗೆ ರಾಜಕಾರಣಿಗಳು, ವ್ಯವಸ್ಥಾಪಕರು, ಶಿಕ್ಷಕರು, ಹೀಗೆ ಎಲ್ಲರೂ ಉದಾಸೀನತೆಯನ್ನು ತೋರಿಸುವ ಈ ಕಾರ್ಯವೈಖರಿ ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿದೆ,” ಎಂದು ಬರೆಯುತ್ತಾರೆ. ಇವರು ರಾಜಕೀಯ ಪ್ರಭಾವದ ದೃಷ್ಟಿಯಿಂದ ನಿರ್ಣಾಯಕರಲ್ಲ.

ಆದರೆ ಇಂತಹ ನಿರಾಶಾದಾಯಕ ಸನ್ನಿವೇಶದಲ್ಲೂ ಕೆಲವು ಧನಾತ್ಮಕ ಬೆಳವಣಿಗೆಗಳು ಗೋಚರಿಸುತ್ತಿವೆ.
ಮೊದಲನೆಯದಾಗಿ ಬಜರಂಗ್ ಪುನಿಯಾ ಮತ್ತು ಇನ್ನಿತರ ಪುರುಷ ಕ್ರೀಡಾಪಟುಗಳು ತಮ್ಮ ಕ್ರೀಡಾ ಭವಿಷ್ಯವನ್ನೇ ಪಣಕ್ಕಿಟ್ಟು ಎಲ್ಲರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಮಹಿಳೆಯರೊಡನೆ ಕೈಜೋಡಿಸಿರುವುದು ತುಂಬಾ ಧನಾತ್ಮಕ ಬೆಳವಣಿಗೆ. ಇದು ಯುವಪೀಳಿಗೆಯ ಒಟ್ಟು ಮನಃಸ್ಥಿತಿಯಲ್ಲಿಯೇ ಆಗುತ್ತಿರುವ ಒಂದು ಮಹತ್ತರ ಬದಲಾವಣೆಯ ದ್ಯೋತಕ ಎಂದು ಭಾವಿಸಬಹುದು.

ಇದನ್ನು ಓದಿ ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ.

ಎರಡನೆಯದಾಗಿ ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಹಲವು ಬಗೆಯ ವಿರೋಧಗಳನ್ನು ಎದುರಿಸಿಕೊಂಡು ತಮ್ಮ ಕ್ರೀಡಾಬದುಕನ್ನು ಕಟ್ಟಿಕೊಂಡ ಮಹಿಳಾ ಕ್ರೀಡಾಪಟುಗಳು ತಾವು ತಿಂದಿರುವ ಪೆಟ್ಟುಗಳಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಗಟ್ಟಿಯಾಗಿ ನಿಂತಿದ್ದಾರೆ. ಇವರ ಈ ಗಟ್ಟಿತನದಿಂದ ಹಲವು ದಮನಿತರ ದನಿಗಳು ಹೊರಬರುತ್ತಿವೆ. ತಮ್ಮ ವೈಯಕ್ತಿಕ ಲಾಭವನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು “ಈ ಹೋರಾಟ ನಮಗೆ ಮಾತ್ರವಲ್ಲ. ದೌರ್ಜನ್ಯದ ವಿರುದ್ಧ ಮಾತನಾಡಲು ಬಯಸುವ ಎಲ್ಲ ಕ್ರೀಡಾಪಟುಗಳ ಪರವಾಗಿ. ನಾವೀಗ ಹಿಂದೆ ಸರಿದರೆ ಅವರ ಆಲೋಚನೆಗಳನ್ನು ಹತ್ತಿಕ್ಕಿದಂತಾಗುತ್ತೆ. ನಾವು ಬರಿಗೈಲಿ ಹಿಂತಿರುಗುವುದಿಲ್ಲ.” ಎಂಬ ಬಲವಾದ ನಿಲುವನ್ನು ತಳೆದಿದ್ದಾರೆ.

ಇದಕ್ಕಿಂತ ಗಮನಾರ್ಹ ಅಂಶವೊಂದನ್ನು ನಾವು ಗುರುತಿಸದೇ ಹೋಗಬಾರದು. ಸಾಕ್ಷಿ ಮಲಿಕ್ ಮತ್ತು ವಿನೇಶಾ ಪೋಗಟ್ ನಿಜವಾದ ನಾಯಕತ್ವ ಹೇಗಿರಬೇಕು ಎನ್ನುವುದನ್ನು ತಮ್ಮ ಹೋರಾಟದ ಕ್ರಮದಲ್ಲಿಯೇ ತೋರಿಸಿದ್ದಾರೆ. ನೈಜ ನಾಯಕರು ಮುಂಚೂಣಿಯಲ್ಲಿ ನಿಂತು, ತನ್ನೊಡನಿರುವ ದುರ್ಬಲರನ್ನು, ಅಸಹಾಯಕರನ್ನು ಕಾಪಾಡಿಕೊಳ್ಳುತ್ತಾರೆ. ಅವರನ್ನು ಪಣಕ್ಕಿಟ್ಟು ತಾವು ಉಳಿದುಕೊಳ್ಳುವುದಿಲ್ಲ. ಇಲ್ಲಿ ದೂರು ನೀಡಿರುವ ಅಪ್ರಾಪ್ತವಯಸ್ಕರ ಹೆಸರುಗಳನ್ನು ಪೋಗಟ್ ಬಯಲು ಮಾಡಿಲ್ಲ. “ಇವರೆಲ್ಲರೂ ಹಳ್ಳಿಯ ರೈತಾಪಿ, ಪಿತೃಪ್ರಧಾನ ಧೋರಣೆಯ ಕುಟುಂಬದಿಂದ ಬಂದವರು. ನಾಳೆ ಏನಾದರೂ ಆದರೆ ಅವರು ತಮ್ಮ ಹಳ್ಳಿಯಲ್ಲಿ ಮನೆಯಿಂದ ಹೊರಬಂದು ಬದುಕಲು ಸಾಧ್ಯವಿಲ್ಲ. ಹಳ್ಳಿಯ ಜನ ಸುಶಿಕ್ಷಿತರಲ್ಲ. ಈ ಹುಡುಗಿಯರು ಮುಂಬೈ ಅಥವಾ ಲಂಡನ್ನಿಗೆ ಹೋಗಿ ಜೀವನ ನಡೆಸುವುದಕ್ಕೆ ಸಾಧ್ಯವಿಲ್ಲ.” ಎನ್ನುವ ವಿನೇಶ್ ಮತ್ತಿತರರು ನಾಯಕತ್ವದ ಮಾದರಿಯನ್ನು ಸೃಷ್ಟಿಸಿದ್ದಾರೆ.

ಶೈಲಜಾ ಮೈಸೂರು
+ posts

ಲೇಖಕಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...