ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸುವ ಲ್ಯಾಮಿನೇಟೆಡ್ ಗೋಣಿಚೀಲಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇರುವ ಫೋಟೋಗಳನ್ನು ಇರುವಂತೆ ಮುದ್ರಿಸಲು ಭಾರತೀಯ ಆಹಾರ ನಿಗಮ(FCI)ವು ಟೆಂಡರ್ ಕರೆಯುವಂತೆ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಕೋಟ್ಯಂತರ ರೂ. ವೆಚ್ಚ ಮಾಡಲಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.
ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಿಗೆ ಮುನ್ನ ಈ ಸೂಚನೆ ಹೊರಬಿದ್ದಿದೆ ಎಂದು ವರದಿ ಮಾಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ)ಯಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಯೋಜನೆಯ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ.
ಸಾಮಾಜಿಕ ಕಾರ್ಯಕರ್ತ ಅಜಯ್ ಬೋಸ್ ಎಂಬುವವರು ಆರ್‌ಟಿಐ ಕಾಯ್ದೆಯಡಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು, ರಾಜಸ್ಥಾನವೊಂದರಲ್ಲೇ 13.29 ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಬ್ಯಾಗ್‌ಗಳ ಪೂರೈಕೆಗಾಗಿ ಐದು ಕಂಪನಿಗಳಿಗೆ ಟೆಂಡರ್‌ಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಪ್ರತಿ ಬ್ಯಾಗ್ ಗೆ 12.375 ರೂ.ದರದಲ್ಲಿ 1.07 ಕೋಟಿ ಸಿಂಥೆಟಿಕ್ ಚೀಲಗಳನ್ನು ಖರೀದಿಸಲು ಅದು ಉದ್ದೇಶಿಸಿದೆ. ನಾಗಾಲ್ಯಾಂಡ್ ಒಂದು ಕಂಪನಿಗೆ ಮಾತ್ರ ಪ್ರತಿ ಚೀಲಕ್ಕೆ 9.30 ರೂ.ದರದಲ್ಲಿ ಬ್ಯಾಗ್‌ಗಳ ಪೂರೈಕೆಗೆ ಟೆಂಡರ್ ನೀಡಿದೆ.
2024ರಲ್ಲಿ ‘ಚುನಾವಣೆಗಳಿಗೆ ಮುನ್ನ’ ಇಂತಹ ಬ್ರ್ಯಾಂಡಿಂಗ್ ಆರಂಭಗೊಂಡಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಈ ನಡುವೆ ತಮಿಳುನಾಡು 1.14 ಕೋಟಿ ಚೀಲಗಳಿಗಾಗಿ ಟೆಂಡರ್ ಕರೆದಿದ್ದರೆ, ಮಹಾರಾಷ್ಟ್ರ ಇನ್ನೂ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ.
ಈ ತಿಂಗಳ ಆರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪಿಎಂಜಿಕೆಎವೈ ಅಡಿ ಪಡಿತರ ಅಂಗಡಿಗಳಲ್ಲಿ ಮೋದಿಯವರ ಕಟೌಟ್‌ಗಳನ್ನೊಳಗೊಂಡ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರದ ನಿರ್ದೇಶನವನ್ನು ತಿರಸ್ಕರಿಸಿದ್ದರು.
ಇದನ್ನು ಓದಿದ್ದೀರಾ? ಅಮೀರ್ ಖಾನ್ ಜೊತೆಗೆ ‘ದಂಗಲ್’ನಲ್ಲಿ ನಟಿಸಿದ್ದ ಯುವನಟಿ ಇನ್ನಿಲ್ಲ
ಇದಕ್ಕೂ ಮುನ್ನ ಪಡಿತರ ವಿತರಣೆಗೆ ಬಳಸುವ ಚೀಲಗಳ ಮೇಲೆ ಮೋದಿಯವರ ಚಿತ್ರವನ್ನು ಮುದ್ರಿಸಲು ನಿರಾಕರಿಸಿದ್ದಕ್ಕೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಣಕಾಸು ತಡೆಹಿಡಿದಿತ್ತು.