ನಮ್ಮ ಸಚಿವರು | ಸೋದರನಿಗೇ ಸಡ್ಡು ಹೊಡೆದು ಸಚಿವರಾದ ಭೈರತಿ ಸುರೇಶ್

Date:

ಸದ್ಯದ ರಾಜ್ಯ ರಾಜಕಾರಣಕ್ಕೂ ಬೆಂಗಳೂರಿನ ಪಕ್ಕದ ಭೈರತಿ ಊರಿಗೂ ಇನ್ನಿಲ್ಲದ ನಂಟು. ಕಳೆದ ಮೂರು ಸರ್ಕಾರಗಳ ಅವಧಿಯಲ್ಲೂ ಈ ಊರು ಖ್ಯಾತಿ ಹಾಗೂ ಕುಖ್ಯಾತಿಗಳೆರಡಕ್ಕೂ ಕಾರಣವಾಗಿದೆ.

ಸಿದ್ದರಾಮಯ್ಯ ಸರ್ಕಾರದ ಮೊದಲ ಆಡಳಿತ ಅವಧಿಯಲ್ಲಿ ಅವರ ಆಪ್ತ ಬಸವರಾಜ್ ಸಚಿವರಾಗಿ ಭೈರತಿ ಊರಿಗೆ ಖ್ಯಾತಿ ತಂದರೆ, ಅದೇ ವ್ಯಕ್ತಿ ಮುಂದೆ ಆಪರೇಷನ್ ಕಮಲದ ಕಾಲದಲ್ಲಿ “ಕೈ” ಬಿಟ್ಟು “ಕಮಲ” ಹಿಡಿದು ಊರಿಗೆ ಕುಖ್ಯಾತಿ ತಂದರು.

ಮತ್ತೆ ಬದಲಾದ ಕಾಲಘಟ್ಟದಲ್ಲಿ ಮರಳಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಯನ್ನೇರಿದೆ. ಮಗದೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಪ್ತಬಳಗದಲ್ಲಿದ್ದ ಭೈರತಿ ಊರಿನ ಬಸವರಾಜ್ ಬದಲಿಗೆ ಅವರ ಸೋದರ ಸಂಬಂಧಿ ಸುರೇಶ್ ಈಗ ಸಚಿವರಾಗಿ ಮರಳಿ ಊರಿನ ಹೆಸರನ್ನು ರಾಜಕೀಯವಾಗಿ ಗುರುತಿಸುವಂತೆ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರುಗಳ ಪೈಕಿ ಭೈರತಿ ಸುರೇಶ್ ಕೂಡ ಒಬ್ಬರು. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ, ಅನುಯಾಯಿಯಾಗಿ, ಅದೇ ಸಮುದಾಯದ ಯುವನಾಯಕನಾಗಿ ಗುರುತಿಸಿಕೊಂಡಿರುವ ಎರಡನೇ ತಲೆಮಾರಿನ ರಾಜಕಾರಣಿ.

ತಾವು ಪ್ರತಿನಿಧಿಸುವ ಹೆಬ್ಬಾಳ ಕ್ಷೇತ್ರದ ಜನರ ಬಾಯಿಂದ ಕೊಡುಗೈ ದಾನಿ ಎಂತಲೇ ಕರೆಯಿಸಿಕೊಳ್ಳುವ ಸುರೇಶ್, ಬಿರುದಿಗೆ ತಕ್ಕಂತೆ ನಡೆದುಕೊಂಡವರು, ಮನೆ ಬಾಗಿಲಿಗೆ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳುಹಿಸದ ಉದಾರಿ.

ಹಾಲಿ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾಗಿರುವ ಸುರೇಶ್ ಇದೇ ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ.

ಈ ಸ್ಥಾನಕ್ಕೇರುವ ಮೊದಲ ರಾಜಕೀಯದಂಕಣದಲ್ಲಿ ಸೋಲುಗೆಲುವಿನ ರುಚಿ ಕಂಡವರು ಸುರೇಶ್. 2018ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಇವರು, ಇದಕ್ಕೂ ಮುನ್ನ ಅಂದರೆ, 2012ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ರಾಜಕೀಯದತ್ತ ಒಲವು ಹೊಂದಿದ್ದ ಸುರೇಶ್, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ. ರಾಜಕೀಯದೆಡೆಗಿನ ಸೆಳೆತದ ಕಾರಣ ಅರ್ಧಕ್ಕೇ ಓದು ಮೊಟಕುಗೊಳಿಸಿ, ಕೆ.ಆರ್.ಪುರ ಕ್ಷೇತ್ರದ ಮಾಜಿ ಶಾಸಕ ಎ.ಕೃಷ್ಣಪ್ಪ ಅವರ ಅನುಯಾಯಿಯಾಗಿ ಗುರುತಿಸಿಕೊಂಡಿದ್ದರು.

ಕುರುಬ ಸಮಾಜಕ್ಕೆ ಸೇರಿದ ಭೈರತಿ ಸುರೇಶ್, ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ವಲಸೆ ಬಂದಾಗ ಅವರ ಆಪ್ತ ವಲಯ ಸೇರಿಕೊಂಡರು. 2010ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಮಮೂರ್ತಿನಗರ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುರೇಶ್ ಅಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ವಿಧಾನ ಪರಿಷತ್ ಪ್ರವೇಶಿಸಲು ಪ್ರಯತ್ನ ನಡೆಸುತ್ತಲೇ ಇದ್ದರು.

ಇದಕ್ಕೆ ಸಿದ್ದರಾಮಯ್ಯ ಅವರ ಸಹಕಾರ ಸಿಕ್ಕರೂ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೊಡಲು ನಿರಾಕರಿಸಿತ್ತು. ಈ ವೇಳೆ ತಮ್ಮ ಗೆಳೆಯ ಜೆಡಿಎಸ್ ಶಾಸಕ ಸುರೇಶ್ ಬಾಬು ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಸಂಪರ್ಕ ಬೆಳೆಸಿ ಜೆಡಿಎಸ್ ಬೆಂಬಲ ಪಡೆದುಕೊಂಡರು.

ಹೀಗೆ 2012ರಲ್ಲಿ ಮೇಲ್ಮನೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಚ್ಚರಿ ಎನಿಸುವಂತೆ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾದ ಸುರೇಶ್ ವಿಧಾನ ಪರಿಷತ್ ಪ್ರವೇಶಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು.

ಇಲ್ಲಿದ್ದುಕೊಂಡೇ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿದ್ದ ಸುರೇಶ್ 2018ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ‘ಕೈ’ವಶ ಮಾಡಿಕೊಂಡರು.

ತರುವಾಯ 2023ರಲ್ಲಿ ಬಿಜೆಪಿಯ ಕಟ್ಟಾ ಜಗದೀಶ್ ಭಾರೀ ಅಂತರದಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸುರೇಶ್‌ಗೆ, ಎರಡನೇ ಹೆಜ್ಜೆಯಲ್ಲೇ ಮಂತ್ರಿ ಸ್ಥಾನ ಒಲಿದು ಬಂದಿದೆ.

ಎರಡು ಬಾರಿ ಶಾಸಕ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಹಿರಿಯರನ್ನೆಲ್ಲ ಹಿಂದಿಕ್ಕಿ ಸಚಿವ ಸ್ಥಾನ ಗಿಟ್ಟಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರ ಶ್ರೀರಕ್ಷೆ ಕಾರಣ ಎನ್ನುವುದು ಕಾಂಗ್ರೆಸ್ಸಿಗರ ಮಾತು.

ಸಿರಿವಂತ ಕುಟುಂಬದ ಹಿನ್ನೆಲೆಯಲ್ಲಿದ್ದ ಸುರೇಶ್ ಅವರ ಕೈ ಹಿಡಿದಿದ್ದು ರಿಯಲ್ ಎಸ್ಟೇಟ್ ವ್ಯವಹಾರ. ಸುರೇಶ್ ತಂದೆ ಬಿ.ಎಂ.ಸುಬ್ಬಣ್ಣ ಭೂಮಾಲೀಕರು. ಬೆಂಗಳೂರು ನಗರ ವ್ಯಾಪ್ತಿ ಮೀರಿ ಬೆಳೆದಂತೆ ಭೈರತಿ ಗ್ರಾಮದ ಜಮೀನಿಗೆ ಚಿನ್ನದ ಬೆಲೆ ಬಂತು. ಈ ಹೊತ್ತಿಗಾಗಲೇ ಬೆಲೆ ಕಡಿಮೆ ಇದ್ದಾಗ ಸುರೇಶ್ ಅವರ ತಂದೆ ಹತ್ತಾರು ಎಕರೆ ಜಮೀನು ಖರೀದಿಸಿ ಇಟ್ಟುಕೊಂಡಿದ್ದರು. ಇದು ಸುರೇಶ್ ಅವರ ಸಿರಿವಂತಿಕೆಯನ್ನು ಮತ್ತಷ್ಟು ಹಿಗ್ಗಿಸಿತು.

ವ್ಯಾವಹಾರಿಕ ವಿಚಾರವೊಂದರ ಸಲುವಾಗಿ ತಮ್ಮ ಸಂಬಂಧಿ, ಸಹೋದರ ಮಾಜಿ ಸಚಿವ ಭೈರತಿ ಬಸವರಾಜು ಬಳಿ ಮಾತುಕತೆ ನಡೆಸುವ ಸಂದರ್ಭದಲ್ಲಾದ ಸಣ್ಣ ಅವಮಾನ ಸುರೇಶ್ ಅವರನ್ನು ಬಡಿದೆಬ್ಬಿಸಿತ್ತು. ಸಹೋದರನೆದುರೇ ಟೊಂಕ ಕಟ್ಟಿ ನಿಲ್ಲುವಂತೆ ಮಾಡಿತು. ಅಂದು ತನ್ನ ದಾಯಾದಿ ಪಡೆದುಕೊಂಡಿದ್ದ ನಗರಾಭಿವೃದ್ದಿ ಖಾತೆಯನ್ನೇ ಕೆಲವೇ ವರ್ಷಗಳಲ್ಲಿ ಸುರೇಶ್ ಪಡೆದುಕೊಂಡಿರುವುದು ಅವರ ಗಟ್ಟಿತನ ಹಾಗೂ ಛಲಕ್ಕೆ ಸಾಕ್ಷಿಯಾಗಿದೆ.

ಪಕ್ಷನಿಷ್ಠೆ ಜೊತೆಗೆ ವೈಯಕ್ತಿಕ ವರ್ಚಸ್ಸನ್ನು ಕಟ್ಟಿಕೊಂಡಿರುವ ಸುರೇಶ್ ಈಗ ಪಕ್ಷದಲ್ಲಿ ದ್ವಿತೀಯ ಶ್ರೇಣಿಯ ನಾಯಕ. ಮುಂಗೋಪ ತೋರುವುದನ್ನು ಹೊರತುಪಡಿಸಿದರೆ ಸಜ್ಜನ ಎನಿಸಿಕೊಂಡಿರುವ ರಾಜಕಾರಣಿ.

ಈ ಸುದ್ದಿ ಓದಿದ್ದೀರಾ? : ನಮ್ಮ ಸಿಎಂ | ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದ ಸಿದ್ದರಾಮಯ್ಯ

ಅಂದಹಾಗೆ 648.12 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿರುವ ಸುರೇಶ್ ಸದ್ಯ ಕಾಂಗ್ರೆಸ್ ಸರ್ಕಾರದ ಸಿರಿವಂತ ಸಚಿವರಲ್ಲಿ ಡಿಸಿಎಂ ಡಿಕೆಶಿ ನಂತರದ ಸ್ಥಾನ ಸುರೇಶ್ ಅವರದ್ದು. ರಿಯಲ್ ಎಸ್ಟೇಟ್ ಉದ್ಯಮ ಎಂದರೆ, ನೀತಿ ನಿಯಮ ಮೀರಿ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಉದ್ಯಮ ನಡೆಸುವುದು ಎನ್ನುವಂತಾಗಿದೆ. ಇಂಥ ಸ್ಥಿತಿಯಲ್ಲಿ ಭೈರತಿ ಸುರೇಶ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಹಗ್ಗದ ಮೇಲಿನ ನಡಿಗೆ ಮಾಡಬೇಕಾಗಿದೆ. ಅವರ ಹಣ ಎಷ್ಟು ಪಟ್ಟು ಹೇಗೆ ಹೆಚ್ಚಾಗುತ್ತಾ ಹೋಗಲಿದೆ ಎನ್ನುವುದನ್ನು ರಾಜ್ಯದ ಜನ ಗಮನಿಸುತ್ತಾರೆ ಎನ್ನುವ ಅರಿವು ಅವರಿಗೆ ಇರಬೇಕಾಗಿದೆ.

ಚುನಾವಣೆಯ ವೇಳೆ ಕ್ಷೇತ್ರದಲ್ಲಿ ಟಿವಿ ಸೆಟ್‌ಗಳನ್ನು ಹಂಚುವ ಮೂಲಕ ಭೈರತಿ ಸುರೇಶ್ ಸುದ್ದಿಯಾಗಿದ್ದರು. ಹೀಗೆ ಹಣ ಕೊಟ್ಟು, ಟಿವಿ ಕೊಟ್ಟು ಹೆಚ್ಚು ಕಾಲ ಚುನಾವಣೆಗಳನ್ನು ಗೆಲ್ಲಲಾಗುವುದಿಲ್ಲ ಎನ್ನುವುದನ್ನು ಸುರೇಶ್ ಅರಿಯಬೇಕಾಗಿದೆ. ಹಣವನ್ನು ನಂಬಿಕೊಂಡು ಚುನಾವಣೆ ಗೆಲ್ಲಲು ಬಯಸಿದ್ದ ಬಿಜೆಪಿ ಸರ್ಕಾರದ ಸಚಿವರು, ಶಾಸಕರನ್ನೆಲ್ಲ ಮತದಾರರು ಈ ಬಾರಿ ಹೇಗೆ ಸೋಲಿಸಿ ಮನೆಯಲ್ಲಿ ಕೂರಿಸಿದ್ದಾರೆ ಎನ್ನುವುದನ್ನು ಭೈರತಿ ಸುರೇಶ್ ಲಕ್ಷ್ಯದಲ್ಲಿಡಬೇಕು.

ಹೊಸ ಹುಮ್ಮಸ್ಸಿನಲ್ಲಿ ಅಧಿಕಾರದ ಕುದುರೆ ಏರಿರುವ ಸುರೇಶ್ ಅದನ್ನು ಸವಾರಿಯ ಬದಲು ಜವಾಬ್ದಾರಿ ಎಂದು ಕೊಂಡು ಮುನ್ನಡೆಸಿದರೆ ಅವರೊಬ್ಬ ಯಶಸ್ವಿ ನಾಯಕನಾಗಬಹುದು. ಇಲ್ಲದಿದ್ದಲ್ಲಿ ಮೊದಲ ಪ್ರಯತ್ನದಲ್ಲಿಯೇ ಮುಗ್ಗರಿಸಿಯೂ ಬಿಡಬಹುದು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣ | ಇಡಿ ದಾಳಿ; ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಬಂಧನ

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹರಿಯಾಣ ಕಾಂಗ್ರೆಸ್...

ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು

ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೇಸರೀಕರಣಗೊಳ್ಳುತ್ತಿವೆ ಎಂದು ದೇಶಾದ್ಯಂತ ವ್ಯಾಪಕ ಚರ್ಚೆಗೊಳಗಾಗುತ್ತಿರುವ...

ಅಜೀಂ ಪ್ರೇಮ್ ಜಿ ಫೌಂಡೇಷನ್‌ನಿಂದ ಶಾಲಾ ಮಕ್ಕಳಿಗೆ ಆರು ದಿನವೂ ಪೌಷ್ಟಿಕ ಆಹಾರ: ಸಿಎಂ ಸಿದ್ದರಾಮಯ್ಯ

"ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ...

ರೇಣುಕಸ್ವಾಮಿ ಕೊಲೆ ಪ್ರಕರಣ | 4ನೇ ಆರೋಪಿ ತಾಯಿ ಅನಾರೋಗ್ಯದಿಂದ ಸಾವು

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 4ನೇ ಆರೋಪಿ, ದರ್ಶನ್‌ ತೂಗುದೀಪ ಸೇನೆಯ...