ಭಾರತ್ ಜೋಡೋ ನ್ಯಾಯ ಯಾತ್ರೆ | ಬಿಜೆಪಿ ಕುಟಿಲ ಕಾರ್ಯತಂತ್ರಗಳನ್ನು ಪ್ರಯೋಗಿಸುತ್ತಿರುವುದೇಕೆ?

Date:

ಕಾಂಗ್ರೆಸ್ ಪಕ್ಷದ ಭಾರತ್‌ ಜೋಡೋ ನ್ಯಾಯ ಯಾತ್ರೆ ಸಾಗಿದ ರಾಜ್ಯಗಳಲ್ಲಿ ಸಭೆಗಳಿಗೆ ಅನುಮತಿ ನಿರಾಕರಣೆ, ಹಾದಿಗಳನ್ನು ಬದಲಿಸುವುದು, ನಾಯಕರು ಕಾಂಗ್ರೆಸ್ ತೊರೆಯುವಂತಹ ಕುಟಿಲ ಕಾರ್ಯತಂತ್ರಗಳು ನಡೆದಿವೆ

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಸೂಕ್ತ ಚುನಾವಣಾ ಕಾರ್ಯತಂತ್ರವಲ್ಲ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಇಂಡಿಯಾ ಮೈತ್ರಿ ಕೂಟದ ನಾಯಕರೇ ಈ ಯಾತ್ರೆಯಿಂದ ಸಂತುಷ್ಟರಾಗಿಲ್ಲ, ಪ್ರಶಾಂತ್ ಕಿಶೋರ್‌ರಂತಹ ಚುನಾವಣಾ ತಂತ್ರಜ್ಞರು ಯಾತ್ರೆಯ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಈ ಯಾತ್ರೆ ಅನಗತ್ಯ ಎನ್ನುವುದೇ ನಿಜವಾದಲ್ಲಿ ಅಥವಾ ಅದರಿಂದ ಕಾಂಗ್ರೆಸ್‌ಗೆ ಲಾಭವಿಲ್ಲದೆ ಇದ್ದಲ್ಲಿ, ಪ್ರತಿ ರಾಜ್ಯ ಪ್ರವೇಶಿಸುತ್ತಲೇ ಬಿಜೆಪಿ ಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದೇಕೆ? ಇಂಡಿಯಾ ಮೈತ್ರಿಕೂಟದ ಇತರ ನಾಯಕರೂ ಯಾತ್ರೆಯನ್ನು ಅನುಮಾನದಿಂದಲೇ ನೋಡುತ್ತಿರುವುದೇಕೆ? ಮಾಧ್ಯಮಗಳು ಯಾತ್ರೆಯನ್ನು ಸಂಪೂರ್ಣವಾಗಿ ಅಲಕ್ಷಿಸಿರುವ ಉದ್ದೇಶವೇನು?

ಕಳೆದ ವರ್ಷ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಮತ್ತೆ ಯಾತ್ರೆಯನ್ನು ಆಯೋಜಿಸುವ ನಿರ್ಧಾರ ಕೈಗೊಂಡಾಗ ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಆರಂಭದಲ್ಲೇ ಮಾಡಿತ್ತು. ಯಾತ್ರೆಯನ್ನು ಟೀಕಿಸುವ ಜೊತೆಗೆ ವಿಫಲ ಪ್ರಯತ್ನವೆನ್ನುವಂತೆ ಬಿಂಬಿಸಲು ಸಾಕಷ್ಟು ಸಿದ್ಧತೆಗಳು/ಯೋಜನೆಗಳನ್ನೂ ಮಾಡಿದೆ.

ಯಾತ್ರೆಯ ಸಂದರ್ಭದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಾಜಿ ಕೇಂದ್ರ ಸಚಿವ ಮಿಲಿಂದ್ ಡಿಯೋರಾರಂತಹ ನಾಯಕರು ಕಾಂಗ್ರೆಸ್ ತೊರೆಯಬೇಕು ಎಂದು ನಾನು ಬಯಸಿದ್ದೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ನ್ಯಾಯ ಯಾತ್ರೆ ಆರಂಭಿಸಿದ ದಿನವೇ ಮಿಲಿಂದ್ ಡಿಯೋರಾ ರಾಜೀನಾಮೆ ನೀಡಿದ್ದರು. ಯಾತ್ರೆ ಅಸ್ಸಾಂ ಪ್ರವೇಶಿಸಿದಾಗ ಹಿಮಂತ್ ಬಿಸ್ವಾ ಸರಣಿ ಪತ್ರಿಕಾಗೋಷ್ಠಿಗಳಲ್ಲಿ ರಾಹುಲ್ ಗಾಂಧಿ ಬಗ್ಗೆ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಫಲ ಯಾತ್ರೆಯಾಗಿದ್ದರೆ, ಬಿಜೆಪಿಯ ನಾಯಕರು, ಮುಖ್ಯಮಂತ್ರಿ ಹಿಮಂತ್ ಯಾತ್ರೆಯನ್ನು ಟೀಕಿಸಲು ಪತ್ರಿಕಾಗೋಷ್ಠಿ ಕರೆಯುವ ಅಗತ್ಯವೇನಿದೆ? ಯಾತ್ರೆ ಆರಂಭವಾದಂದಿನಿಂದ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಅನಗತ್ಯವೆಂದು ಮಾಧ್ಯಮಗಳಲ್ಲಿ ಎಲ್ಲಾ ನಾಯಕರು ದೂಷಿಸುತ್ತಿರುವ ಯಾತ್ರೆಯ ಬಗ್ಗೆ ಪ್ರತಿ ರಾಜಕೀಯ ಪಕ್ಷಗಳಿಂದಲೂ ಅತಿ ಎಚ್ಚರಿಕೆಯ ಪ್ರತಿಕ್ರಿಯೆ ಕಂಡುಬಂದಿರುವುದು ನಿಜ.

ರಾಹುಲ್ ಯಾತ್ರೆಯ ಆರಂಭದಿಂದಲೇ ಗಮನಿಸುತ್ತಾ ಹೋದಲ್ಲಿ, ಮೊದಲಿಗೆ ಮಣಿಪುರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ದಿನ ಪಕ್ಷಕ್ಕೆ ರಾಜೀನಾಮೆ ನೀಡಿದ ಮಿಲಿಂದ್ ಡಿಯೋರಾ ಬಿಜೆಪಿಗೆ ಸೇರಿರುವುದನ್ನು ಘೋಷಿಸಿದರು. ಕಳೆದ ಕೆಲವು ವರ್ಷಗಳಿಂದ ಬಿಜೆಪಿಗೆ ಆಪ್ತರಾಗುತ್ತಾ ಬಂದಿದ್ದ ಡಿಯೋರಾ ಯಾತ್ರೆಯ ದಿನವನ್ನೇ ಉದ್ದೇಶಪೂರ್ವಕವಾಗಿ ತಮ್ಮ ರಾಜೀನಾಮೆಗೆ ಆರಿಸಿಕೊಂಡಿರುವುದು ಸ್ಪಷ್ಟ. ”ಯಾತ್ರೆ ಆರಂಭದ ದಿನವೇ ಪಕ್ಷ ತೊರೆಯಬೇಡ” ಎಂದು ಕಾಂಗ್ರೆಸಿಗರು ತನ್ನಲ್ಲಿ ಬೇಡಿಕೊಂಡಿದ್ದರು ಎನ್ನುವುದನ್ನು ಸ್ವತಃ ಡಿಯೋರಾ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಇದೇ ವಾಕ್ಯ ಸರಣಿ ಪತ್ರಿಕಾ ಹೇಳಿಕೆಗಳಲ್ಲಿ ಮಾಧ್ಯಮಗಳಲ್ಲಿ ತಲೆಬರಹದಲ್ಲಿ ಬಂದಿದೆ. ಕೇಂದ್ರ ಸಚಿವ ಸ್ಥಾನ ಸಿಕ್ಕಿರುವುದರಿಂದ ತೊಡಗಿ ರಾಜಕೀಯ ಜೀವನದ ಬೆಳವಣಿಗೆಗೆ ಬಹಳಷ್ಟು ನೆರವು ನೀಡಿದ ಮಾತೃ ಪಕ್ಷದ ಬೇಡಿಕೆಯನ್ನೂ ತಿರಸ್ಕರಿಸುವ ದಾಷ್ಟ್ರ್ಯವನ್ನು ಪ್ರದರ್ಶಿಸಿ ಸ್ವಾರ್ಥ ಹಿತಾಸಕ್ತಿ ಗಮನಿಸಿರುವ ಬಗ್ಗೆ ಡಿಯೋರಾ ಬಹಿರಂಗವಾಗಿ ಜಂಭ ಕೊಚ್ಚಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ, ‘ಮಿಲಿಂದ್ ಡಿಯೋರಾ ನಿರ್ಗಮನ, ರಾಹುಲ್ ಯಾತ್ರೆಗೆ ಹಿನ್ನಡೆ’ ಎನ್ನವ ತಲೆಬರಹಗಳಲ್ಲಿ ವರದಿಗಳು ಬಿತ್ತರವಾದವು.

ಮಣಿಪುರ, ಮೇಘಾಲಯಗಳಲ್ಲಿ ಯಾತ್ರೆ ಸಂಚರಿಸಲು ಮತ್ತು ಯಾತ್ರೆಯ ಕಾರ್ಯಕ್ರಮಗಳ ಬಗ್ಗೆ ತಿಂಗಳ ಮೊದಲೇ ಸ್ಥಳೀಯ ಸರ್ಕಾರಗಳು ಮತ್ತು ಆಡಳಿತಗಳಿಗೆ ವಿವರ ನೀಡಲಾಗಿತ್ತು. ಹಾಗಿದ್ದರೂ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಜೊತೆಗೆ ನಡೆಸುತ್ತಿರುವ ಸಭೆ ಮತ್ತು ಇತರ ಕಾರ್ಯಕ್ರಮಗಳಿಗೆ ಕಾಲಕಾಲಕ್ಕೆ ಅಡ್ಡಿ ಮಾಡಲಾಗುತ್ತಿದೆ. ಮಣಿಪುರದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗಿನ ರಾಹುಲ್ ಗಾಂಧಿ ಸಭೆಗೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಂಡ ನಂತರ, ಅವರು ಆಯ್ದ ಕೆಲವು ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಹೊರಗೆ ಸಭೆ ನಡೆಸಿದರು.

ಯಾತ್ರೆ ಅಸ್ಸಾಂ ತಲುಪುತ್ತಲೇ ಪೊಲೀಸರು ಉದ್ದೇಶಿತ ಹಾದಿಯಲ್ಲಿ ಸಾಗದಂತೆ ತಡೆದರು. ಈಗಾಗಲೇ ಒಪ್ಪಿತ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಹೋಗುವಂತೆ ಸೂಚಿಸಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣರಾದರು. ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಸಭೆಗೆ ನೀಡಲಾಗಿದ್ದ ಅನುಮತಿ ರದ್ದುಪಡಿಸಿದ ನಂತರ ವಿದ್ಯಾರ್ಥಿಗಳೇ ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಬಂದು ರಾಹುಲ್ ಭಾಷಣವನ್ನು ಕೇಳಿಸಿಕೊಂಡರು. 

ರಾಹುಲ್ ಯಾತ್ರೆ ಅಸ್ಸಾಂನಲ್ಲಿರುವಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭ ನಡೆಯುತ್ತಿತ್ತು. ಅಯೋಧ್ಯೆಯಿಂದ ಪ್ರಧಾನಿ ನರೇಂದ್ರ ಮೋದಿ ರಾಮ ರಾಜ್ಯದ ಸ್ಥಾಪನೆಯ ಘೋಷಣೆ ಮಾಡಿದ್ದರು. ಇಡೀ ದೇಶದಲ್ಲಿ ರಾಮರಾಜ್ಯದ ಅಲೆಯಿದೆ ಮತ್ತು ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಲಿದೆ ಎಂದು ಮಾಧ್ಯಮಗಳು ಜನರಿಗೆ ಪದೇಪದೆ ನೆನಪಿಸುತ್ತಿದ್ದವು. 

ಟಿವಿ ಸುದ್ದಿವಾಹಿನಿಗಳಲ್ಲಿ ಮೂರು ತಿಂಗಳಿನಿಂದ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹೊರತಾದ ಕಾರ್ಯಕ್ರಮಗಳು ಅತಿ ಕಡಿಮೆಯಾಗಿ, ರಾಮರಾಜ್ಯದ ಅಬ್ಬರದ ಪ್ರಚಾರದ ನಡುವೆ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಆದರೆ, ಈ ಉದ್ಘಾಟನೆಯ ದಿನದಂದು ರಾಹುಲ್ ಗಾಂಧಿ ವೈಷ್ಣವ ಧರ್ಮದ ಸುಧಾರಕ ಶ್ರೀಮಂತ ಸಂಕರದೇವ ಮಂದಿರಕ್ಕೆ ಭೇಟಿ ನೀಡುವುದನ್ನು ತಡೆಯಲಾಯಿತು. ಅಸ್ಸಾಂ ಅಸ್ಮಿತೆಯನ್ನು ಸಾರುವ ಈ ದೇವಾಲಯ ರಾಜಕೀಯದಲ್ಲಿ ಮಹತ್ವ ಪಡೆದಿದೆ. ಜಾತಿ ವ್ಯತ್ಯಾಸಗಳು, ಸಂಪ್ರದಾಯಬದ್ಧ ಬ್ರಾಹ್ಮಣ ಆಚರಣೆಗಳಿಂದ ಮುಕ್ತವಾದ ಸಮಾನತೆ ಮತ್ತು ಸೋದರತೆಯನ್ನು ಸಾರಿದವರು ಸಂಕರದೇವ. ಅವರ  ನವವೈಷ್ಣವವಾದಿ ಚಳವಳಿ ಅಸ್ಸಾಂನ ಇತಿಹಾಸದ ಭಾಗ. ಆದರೆ ರಾಮರಾಜ್ಯದ ಅಲೆಯ ಮೇಲೆ ವಿಶ್ವಾಸವಿದ್ದ ಬಿಜೆಪಿಯ ನೇತೃತ್ವದ ರಾಜ್ಯ ಸರ್ಕಾರ ರಾಹುಲ್ ಗಾಂಧಿ ಸಂಕರದೇವರ ತಾಣಕ್ಕೆ ಭೇಟಿ ನೀಡುವುದನ್ನು ತಡೆದಿರುವುದು ಆಶ್ಚರ್ಯಕರ! ಈ ಭೇಟಿಗೆ ಮೊದಲೇ ನೀಡಲಾಗಿದ್ದ ಅನುಮತಿಯನ್ನು ಕೊನೆಕ್ಷಣದಲ್ಲಿ ಹಿಂಪಡೆಯಲಾಗಿತ್ತು.

ಯಾತ್ರೆ ಅಸ್ಸಾಂನಲ್ಲಿರುವಾಗ ಹಿಮಂತ ಬಿಸ್ವಾ ಸರ್ಮಾ ರಾಜ್ಯ ಪೊಲೀಸ್ ಪಡೆಯನ್ನು ಬಳಸಿದ್ದಾರೆ, ಸರಣಿ ಪತ್ರಿಕಾಗೋಷ್ಠಿಗಳನ್ನು ಮಾಡಿ ರಾಹುಲ್ ಗಾಂಧಿ ವ್ಯಕ್ತಿತ್ವವನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸ್ವತಃ ಯಾತ್ರೆ ನಡೆಸುತ್ತಿಲ್ಲ, ಅವರ ಜಾಗದಲ್ಲಿ ನಕಲಿ ವ್ಯಕ್ತಿ ಜನರೊಂದಿಗೆ ಬೆರೆಯುತ್ತಿದ್ದಾನೆ ಎನ್ನುವಂತಹ ಹಾಸ್ಯಾಸ್ಪದ ವಿಚಾರವನ್ನು ಹೇಳಲು ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನೂ ಅಸ್ಸಾಂ ಮುಖ್ಯಮಂತ್ರಿ ಕರೆದಿದ್ದರು.

ಅಸ್ಸಾಂನಿಂದ ಯಾತ್ರೆ ಪಶ್ಚಿಮ ಬಂಗಾಳಕ್ಕೆ ತೆರಳಿದಾಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ನಡುವೆ ಒಡಕು ಮೂಡಿರುವ ಬಗ್ಗೆ ವರದಿಯಾಯಿತು. ಎರಡನೇ ಬಾರಿ ಯಾತ್ರೆ ಪಶ್ಚಿಮ ಬಂಗಾಳಕ್ಕೆ ತೆರಳಿದಾಗ ಸ್ವತಃ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಟೀಕಿಸಿದರು. ಇಂಡಿಯಾ ಮೈತ್ರಿಕೂಟದಿಂದ ಮಮತಾ ಬ್ಯಾನರ್ಜಿ ಹೊರ ಹೋಗುತ್ತಾರೆ ಎನ್ನುವಷ್ಟರ ಮಟ್ಟಿಗೆ ವಿವಾದ ಸೃಷ್ಟಿಯಾಗಿದೆ.

ಯಾತ್ರೆ ಬಿಹಾರ ಪ್ರವೇಶಿಸುತ್ತಲೇ ಜಾರಿ ನಿರ್ದೇಶನಾಲಯ (ಇಡಿ) ಲಾಲೂ ಪ್ರಸಾದ್ ಯಾದವ್‌ರನ್ನು ಬಂದಿಸಿತು, ತೇಜಸ್ವಿ ಯಾದವ್ ವಿಚಾರಣೆ ನಡೆದಿದೆ. ಮುಖ್ಯವಾಗಿ ಮೈತ್ರಿ ಸರ್ಕಾರವೇ ಬಿದ್ದು ಹೋಯಿತು. ನಿತಿಶ್ ಕುಮಾರ್ ಬಿಜೆಪಿ ಸೇರಿದರು. ಬಿಜೆಪಿ ಮತ್ತು ಜೆಡಿಯು ನೇತೃತ್ವದ ಸರ್ಕಾರ ರಚನೆಯಾಯಿತು. ಬಿಜೆಪಿಗೆ ರಾಮರಾಜ್ಯದ ಮೇಲೆ, ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ವಿಶ್ವಾಸವಿದ್ದಿದ್ದರೆ ಬಿಹಾರದಲ್ಲಿ ಜಾರಿ ನಿರ್ದೇಶನಾಲಯವನ್ನು ಪ್ರಯೋಗಿಸುವ ಅಗತ್ಯ ಯಾಕೆ ಬಂತು? ಬಿಹಾರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರವೇಶಿಸುವ ಹಂತದಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿರುವುದು ಕಾಕತಾಳೀಯವಂತೂ ಅಲ್ಲ.

ಇದನ್ನೂ ಓದಿ: ಅಂತರ್ಧಮೀಯ ದಂಪತಿ ರಕ್ಷಣೆಗೆ ತೊಡಕಾಗಿರುವ ಮತಾಂತರ ಕಾಯ್ದೆಗಳು

ಈ ಬಾರಿಯ ಭಾರತ್ ಜೋಡೋ ನ್ಯಾಯ ಯಾತ್ರೆಯ ವೈಫಲ್ಯದ ಬಗ್ಗೆ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಪದೇಪದೆ ಮಾತನಾಡುತ್ತಿದ್ದಾರೆ. ಮಾತ್ರವಲ್ಲ, ಇಂಡಿಯಾ ಒಕ್ಕೂಟದ ನಾಯಕರು ಕಾಂಗ್ರೆಸ್ ಏಕಪಕ್ಷೀಯವಾಗಿ ಯಾತ್ರೆ ಮಾಡಿ ಒಕ್ಕೂಟವನ್ನು ಕಡೆಗಣಿಸಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನ್ಯಾಯ ಯಾತ್ರೆಯ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿಲ್ಲ. ನ್ಯಾಯ ಯಾತ್ರೆಯ ಮೂಲಕ ಕಾಂಗ್ರೆಸ್ ಒಕ್ಕೂಟದ ಪಕ್ಷಗಳಿಗೆ ಬೆದರಿಕೆ ಒಡ್ಡಿದ ಭಾವನೆ ವ್ಯಕ್ತವಾಗಿದೆ. 

ಕಾಂಗ್ರೆಸ್ ತನ್ನ ವ್ಯಾಪ್ತಿ ವಿಸ್ತರಣೆ ಮಾಡಿಕೊಂಡು ಪ್ರಾದೇಶಿಕ ಪಕ್ಷಗಳನ್ನು ತುಳಿಯುತ್ತಿರುವ ಭಾವನೆ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಪ್ರತಿಕ್ರಿಯೆಯಲ್ಲಿ ಕಂಡುಬಂದಿದೆ. ಆದರೆ ಒಕ್ಕೂಟದಲ್ಲಿರುವ ಎಲ್ಲಾ ಪಕ್ಷಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಎಡಪಕ್ಷಗಳು ಮತ್ತು ಆರ್‌ಜೆಡಿ ಯಾತ್ರೆಯನ್ನು ಬೆಂಬಲಿಸಿವೆ.

ಆದರೆ ಮೂರನೇ ಬಾರಿ ಅಭೂತಪೂರ್ವ ಬಹುಮತದಿಂದ ಗೆದ್ದುಬರುವ ಉಮೇದಿನಲ್ಲಿರುವ ಬಿಜೆಪಿ ಇದೀಗ ಯಾತ್ರೆಯ ಪ್ರತಿಹೆಜ್ಜೆಯಲ್ಲೂ ತೊಡಕುಂಟುಮಾಡುವ ಪ್ರಯತ್ನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ಜನರಿಗೆ ವಿಶ್ವಾಸ ಹೊರಟು ಹೋಗಿದೆಯೇ? ರಾಮಮಂದಿರ ಉದ್ಘಾಟನೆಯ ಸಕಾರಾತ್ಮಕ ಮನೋಭಾವದ ಅಲೆಯಿಂದ ಲೋಕಸಭಾ ಚುನಾವಣೆ ಗೆಲ್ಲಬಹುದು ಎನ್ನುವ ಉಮೇದಿನಲ್ಲಿದ್ದ ಬಿಜೆಪಿಗೆ ತನಿಖಾ ಸಂಸ್ಥೆಗಳ ಪ್ರಯೋಗ ಮತ್ತು ವಿಪಕ್ಷಗಳನ್ನು ಹತ್ತಿಕ್ಕುವ ಕುಟಿಲ ತಂತ್ರಗಳ ಪ್ರಯೋಗಗಳ ಅಗತ್ಯ ಬಂದಿರುವುದೇಕೆ ಎನ್ನುವ ಪ್ರಶ್ನೆ ಕೇಳಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಪಾಕಿಸ್ತಾನ ಜಿಂದಾಬಾದ್‌ | ಮಾಧ್ಯಮಗಳ ವಿಡಿಯೋ ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ: ಡಾ. ಜಿ.ಪರಮೇಶ್ವರ್

‌ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...

ಆಂಧ್ರ ಪ್ರದೇಶ | ವಿಧಾನಸಭೆಯಿಂದ 8 ಶಾಸಕರು ಅನರ್ಹ

ಆಂಧ್ರಪ್ರದೇಶದ ಎಂಟು ಹಾಲಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ...

ಹಿಮಾಚಲ ಪ್ರದೇಶ | ವಿಧಾನಸಭೆಯಿಂದ 15 ಬಿಜೆಪಿ ಶಾಸಕರ ಅಮಾನತು; ಕಾಂಗ್ರೆಸ್‌ನ ಸಚಿವ ರಾಜೀನಾಮೆ

ಹಿಮಾಚಲ ಪ್ರದೇಶ ಸುಖ್ವಿಂದರ್ ಸಿಂಗ್‌ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀಳಿಸಲು...