ಬೆಂಗಳೂರಿನಲ್ಲಿರುವ ಬೆಂಗಾಲಿ ಮೂಲದ ವಲಸೆ ಕಾರ್ಮಿಕರ ಬಿಕ್ಕಟ್ಟು ಸಂಕೀರ್ಣವಾದದ್ದು. ಭಾಷೆಯ ಕಾರಣಕ್ಕೆ ಪಶ್ಚಿಮ ಬಂಗಾಳದ ಜನರನ್ನು ಬಾಂಗ್ಲಾದೇಶಿಗರೆಂದು ಬಿಂಬಿಸುವುದು ಒಂದೆಡೆಯಾದರೆ, ಬಾಂಗ್ಲಾದಿಂದ ಗಡಿ ದಾಟಿ ಬರುವ ಅಕ್ರಮ ವಲಸಿಗರ ಹಿಂದೆ ಗಾರ್ಬೇಜ್ ಮಾಫಿಯಾ ಕೆಲಸ ಮಾಡುತ್ತದೆ. 'ಆಪರೇಷನ್ ಮುಕ್ತ' ಕಾರ್ಯಾಚರಣೆಯನ್ನು ನಡೆಸಿದ ರಾಜ್ಯ ಸರ್ಕಾರ, ಬಾಂಗ್ಲಾ ಡಾನ್ಗಳನ್ನು ಹಿಡಿಯುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಾರೆ.
“ಆಗಸ್ಟ್ 8ನೇ ತಾರೀಕಿನಂದು ಮುಂಜಾನೆ 6.30ರ ವೇಳೆಗೆ ಪೊಲೀಸರು ಬಂದರು. ಮಲಗಿದ್ದವರನ್ನೆಲ್ಲ ಎಬ್ಬಿಸಿದರು. ಎಲ್ಲರೂ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎನ್ನುತ್ತಾ- ಸುಮಾರು 250 ಜನರನ್ನು ಬಂಡೇಪಾಳ್ಯ ಠಾಣೆಗೆ ಕರೆದೊಯ್ದರು. ಆನಂತರ ಒಂದು ಶಾದಿಮಹಲ್ನಲ್ಲಿ ನಮ್ಮನ್ನೆಲ್ಲ ಕೂಡಿ ಹಾಕಲಾಯಿತು. ಇರುವ ದಾಖಲೆಗಳನ್ನೆಲ್ಲ ಕೇಳಿದರು. ನಮ್ಮ ಮೊಬೈಲ್ಗಳನ್ನೆಲ್ಲ ಪಡೆದು ಚೆಕ್ ಮಾಡಿದರು”- ಹೀಗೆ ಪೊಲೀಸ್ ವಿಚಾರಣೆಯ ಮಾದರಿಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಬಂದಿರುವ ಅಬ್ದುಲ್ ಕಲಾಂ ಆಝಾದ್.
ಸುಮಾರು ಮೂರು ತಿಂಗಳ ಹಿಂದೆ ದುಡಿಮೆಗಾಗಿ ಬೆಂಗಳೂರು ತಲುಪಿದ ಆಝಾದ್ ಅವರ ಸುತ್ತ ಬಾಂಗ್ಲಾದೇಶಿಗನೆಂಬ ಗುಮಾನಿ ಸುತ್ತುವರಿಯಿತು. ಇವರಷ್ಟೇ ಅಲ್ಲ, ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೆಲ್ಲರ ಕಥೆಯೂ ಬಹುತೇಕ ಒಂದೇ ಆಗಿದೆ. ಈ ನೆಲದಲ್ಲಿ ಹುಟ್ಟಿ ಬೆಳೆದವರೂ ಈಗ ಅಕ್ರಮ ಬಾಂಗ್ಲಾ ವಲಸಿಗರೆಂಬ ಹಣೆಪಟ್ಟಿ ಹಚ್ಚಿಕೊಂಡು ಪದೇಪದೇ ಪೊಲೀಸ್ ತಪಾಸಣೆಯನ್ನು ಎದುರಿಸಬೇಕಾಗಿದೆ.
ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ರಫೀಕುಲ್ ಬಿಸ್ವಾಸ್ ಅವರದ್ದು ತೀರಾ ದುರಂತ ಕಥೆ. ವರ್ಷದ ಹಿಂದೆ ಮೂರು ತಿಂಗಳು ಕಾಲ ಬಂಧನ ಕೇಂದ್ರಕ್ಕೆ (Detention Center) ದೂಡಲ್ಪಟ್ಟ ರಫೀಕುಲ್ ಅವರು ಎರಡು ಸಲ ಹೃದಯಾಘಾತಕ್ಕೆ ಒಳಗಾದ ಬಳಿಕವಷ್ಟೇ ಬಿಡುಗಡೆಯಾದರು. ಇವರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ, ಕಳೆದ ಆಗಸ್ಟ್ 4ರಂದು ಖುಲಾಸೆಯೂ ಆಯಿತು. ಆದರೆ ಮತ್ತೆ ಆಗಸ್ಟ್ 8ರಂದು ರಫೀಕುಲ್ ಅವರನ್ನು ಪೊಲೀಸರು ಬಂಧಿಸಿದರು.
“ಪದೇ ಪದೇ ಹೀಗಾಗುತ್ತಿದೆ, ನಮ್ಮ ಮಗ ಇಲ್ಲಿ ಶಾಲೆಯಲ್ಲಿ ಓದುತ್ತಿದ್ದಾನೆ. ಆತನನ್ನು ಶಾಲೆಯಿಂದಲೂ ಹೊರಹಾಕಿದರು. ಮತ್ತೆ ಮತ್ತೆ ಪೊಲೀಸರು ನನ್ನನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಆ ಶಾಲೆಯ ಪ್ರಾಂಶುಪಾಲರು ನನ್ನ ಮಗುವನ್ನು ಅನುಮಾನಿಸಿದರು. ನಿಮ್ಮ ಅಪ್ಪ ಬಾಂಗ್ಲಾದೇಶಿ, ನೀನೂ ಬಾಂಗ್ಲಾದೇಶಿ ಎಂದು ಆತನಿಗೆ ಹೇಳಿಬಿಟ್ಟಿದ್ದಾರೆ. ನಾವು ಭಾರತೀಯರು, ಭಾರತದಲ್ಲಿ ನಮ್ಮ ಮಗನಿಗೆ ಓದಲು ಬಿಡದಿದ್ದರೆ, ಆತನನ್ನು ಎಲ್ಲಿಗೆ ಕಳುಹಿಸಲಿ?” ಎಂದು ನೋವಿನಿಂದ ಪ್ರಶ್ನಿಸುತ್ತಾರೆ ರಫೀಕುಲ್ ಬಿಸ್ವಾಸ್.

“ನಮಗೆ ಓದು ಬರಹ ಇಲ್ಲ, ನಾವು ಕೆಲಸ ಮಾಡುತ್ತಿದ್ದೇವೆ, ಆದರೆ ನಮ್ಮ ಮಗನನ್ನಾದರೂ ಹಾಗೆ ಮಾಡಬಾರದಲ್ಲ. ಅವನಿಗಾದರೂ ಓದಿನ ಅವಕಾಶ ಸಿಗುವುದಿಲ್ಲವಾ? ನಾವು ಆತನನ್ನು ಓದಿಸಿ, ಉತ್ತಮ ವ್ಯಕ್ತಿಯಾಗಿ ಮಾಡಬೇಕು. ಅದಕ್ಕೂ ಅವಕಾಶವಿಲ್ಲ. ಎಲ್ಲೆಡೆ ಒಂದೇ ಮಾತು- ನೀವು ಬಾಂಗ್ಲಾದೇಶಿ. ಆದರೆ ಈ ಕಿರುಕುಳ ಯಾಕೆ? ನಮ್ಮ ತಪ್ಪು ಏನಿದೆ? ಹೈಕೋರ್ಟ್ನಿಂದ ಆದೇಶ ಬಂದ ನಂತರವೂ ಏನು ಬೇಕು, ಹೇಳಿ- ಅದನ್ನೂ ಕೊಡುತ್ತೇನೆ” ಎನ್ನುತ್ತಾರೆ ಅವರು.
“ಪೊಲೀಸರಿಗೆ ನಾನು ಕೋರ್ಟ್ ಆದೇಶವನ್ನು ತೋರಿಸಿದೆ. ನೋಡಿ ಸರ್- ಇದು ಕೋರ್ಟ್ ಆದೇಶ, ನಾವು ಭಾರತೀಯರು. ಅವರು ಒಪ್ಪಲಿಲ್ಲ. ಇವೆಲ್ಲವೂ ನಕಲಿ ಎಂದು ಹೇಳಿದರು. ನಂತರ ಮತ್ತೆ ಅದೇ ಮಾತು- ಕರ್ನಾಟಕ ಹೈಕೋರ್ಟ್ ಆದೇಶ ನಕಲಿ, ನಮ್ಮ ದಾಖಲೆ ನಕಲಿ, ಪಾಸ್ಪೋರ್ಟ್ ನಕಲಿ, ಎಲ್ಲವೂ ನಕಲಿ! ಅವರು ನಿಜವಾಗಿಯೂ ಪೊಲೀಸರೋ ಅಲ್ಲವೋ ನನಗೆ ಅರ್ಥವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಹಿಂದುತ್ವ ಫ್ರಿಂಜ್ಗಳು ಮತ್ತು ಆಪರೇಷನ್ ಮುಕ್ತ
ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಯೋಜಿತ ಪ್ರಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪುನೀತ್ ಕೆರೆಹಳ್ಳಿ ಮತ್ತು ಇತರ ಹಿಂದುತ್ವ ಫ್ರಿಂಜ್ ಎಲಿಮೆಂಟ್ಗಳು ಬಿರುಸಾಗಿ ನಡೆಸಿದವು. ಕೆಲವು ಬಾಂಗ್ಲಾ ನಿವಾಸಿಗಳನ್ನು ತೋರಿಸಿ, ‘ಭಾರೀ ಅಕ್ರಮ ವಲಸಿಗರು ನುಸುಳಿದ್ದಾರೆ’ ಎಂದು ಮೀಡಿಯಾಗಳ ಮೂಲಕ ಗಮನ ಸೆಳೆದರು. “ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ನಿರಂತರ ಕಣ್ಣಿಟ್ಟಿರಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗುತ್ತದೆ” ಎಂದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು, ಮತ್ತೊಂದು ಬದಿಯಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಗೆ ಚಾಲನೆ ನೀಡಿದರು.
ವರ್ತೂರ್, ಎಚ್ಎಎಲ್, ಮಾರತ್ಹಳ್ಳಿ, ಮಹದೇವಪುರ, ವೈಟ್ ಫೀಲ್ಡ್, ಬಂಡೇಪಾಳ್ಯ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಸುತ್ತಲಿನ ಸಂಕೀರ್ಣ ಬಿಕ್ಕಟ್ಟುಗಳತ್ತ ಬೊಟ್ಟು ಮಾಡುತ್ತದೆ.
ಇದನ್ನೂ ಓದಿರಿ: ಆಳುವವರ ಕೋಮು ಕ್ರೌರ್ಯ: ಭಾರತೀಯ ಪೌರತ್ವದ ದಾಖಲೆಗಳಿದ್ದರೂ ‘ಬಾಂಗ್ಲಾದೇಶಿ’ ಹಣೆಪಟ್ಟಿ; 3 ತಿಂಗಳಿಂದ ಜೈಲಿನಲ್ಲಿದ್ದಾರೆ…
ನಮ್ಮದೇ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ಸೇರಿದಂತೆ ನೆರೆಯ ಬಾಂಗ್ಲಾದೇಶದಿಂದಲೂ ವಲಸೆ ಬರುವ ಕಾರ್ಮಿಕರು, ಬೆಂಗಳೂರಿನ ಕಸ ವಿಂಗಡಣೆ (segregation) ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಲ್ಲಿ ಸಿಗುವ ‘ಚಿಂದಿ’ (scrap) ಹಿಂದೆ ದೊಡ್ಡದೊಡ್ಡ ಕೈಗಳೇ ಇರುತ್ತವೆ. ಈ ಕಸ ಮಾಫಿಯಾವನ್ನು ಬೆನ್ನು ಹತ್ತಿದರೆ, ಬಾಂಗ್ಲಾ ಡಾನ್ಗಳವರೆಗೂ ಹೋಗುತ್ತದೆ. ಅವರ ಹಾವಳಿಯು ಮಿತಿಮೀರಿರುವ ಗಂಭೀರ ಆರೋಪಗಳೂ ಬರುತ್ತವೆ. ಈ ಜಾಲದೊಳಗೆ ಪಶ್ಚಿಮ ಬಂಗಾಳದ ಕಾರ್ಮಿಕರು ಬಲಿಪಶುಗಳಾಗುವ ಮತ್ತು ಅಕ್ರಮ ಬಾಂಗ್ಲಾ ವಲಸಿಗರೆಂಬ ಗುಮಾನಿಗೆ ಗುರಿಯಾಗುವ ಕಥನ ಹೃದಯವಿದ್ರಾವಕ.

‘ಆಪರೇಷನ್ ಮುಕ್ತ’ದ ಹಿನ್ನಲೆಯಲ್ಲಿ ನೂರಾರು ಕಾರ್ಮಿಕರನ್ನು ಸ್ಕ್ರ್ಯಾಪ್ (ಚಿಂದಿ) ಗೋಡನ್ಗಳಿಂದ ಪೊಲೀಸರು ವಶಕ್ಕೆ ಪಡೆದರು ಮತ್ತು ವಿಚಾರಣೆಗೆ ಒಳಪಡಿಸಿದರು. ಹೀಗೆ ಪೊಲೀಸರ ಗುಮಾನಿಗೆ ಹೆಚ್ಚು ಒಳಪಟ್ಟದ್ದು ಪಶ್ಚಿಮ ಬಂಗಾಳದ ಮುಸ್ಲಿಮರೆಂಬುದು ವ್ಯವಸ್ಥೆಯ ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತದೆ.
“ಇಲ್ಲಿ ನಾವೇ ನಿಜವಾದ ಸಂತ್ರಸ್ತರು ಹೊರತು, ಬಾಂಗ್ಲಾ ಮಾಫಿಯಾಗಳಲ್ಲ” ಎಂದು ಪಶ್ಚಿಮ ಬಂಗಾಳ ಮೂಲದ ವಲಸಿಗ ಕಾರ್ಮಿಕರು ಹೇಳಿಕೊಳ್ಳುತ್ತಾರೆ. ಈ ದೇಶದ ನಿವಾಸಿಗಳಾದರೂ ಭಾಷೆಯ ಕಾರಣಕ್ಕೆ ಅಕ್ರಮ ಬಾಂಗ್ಲಾ ನುಸುಳುಕೋರರು ಎಂದು ಬಿಂಬಿತವಾಗುವ ಅವರ ಸಂಕಷ್ಟ ಹೇಳತೀರದು.
“ನಾವು ಬೆಂಗಾಲಿ ಭಾಷೆಯನ್ನು ಮಾತನಾಡುವುದು ಅಪರಾಧವೇ? ನಮ್ಮ ಮಾತೃಭಾಷೆ ಬೆಂಗಾಲಿ ಆಗಿರುವ ಕಾರಣಕ್ಕೆ ನಾವು ಬಾಂಗ್ಲಾ ದೇಶದವರಾಗುತ್ತೇವೆಯೇ? ಪಶ್ಚಿಮ ಬಂಗಾಳದಲ್ಲಿ ಹುಟ್ಟಿ ಬೆಳೆದ ನಮ್ಮನ್ನು ಸದಾ ಅನುಮಾನಿಸಲಾಗುತ್ತದೆ ಮತ್ತು ವಿಚಾರಣೆಯ ನೆಪದಲ್ಲಿ ಹಿಂಸಿಸಲಾಗುತ್ತದೆ” ಎಂಬುದು ಭಾರತೀಯ ಬೆಂಗಾಲಿಗಳ ಸಂಕಟ.
ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಎಂ.ಡಿ. ಶೇಖ್ ಈಗ ‘ಆಲ್ ಇಂಡಿಯಾ ಶ್ರಮಿಕ್ ಕೇಂದ್ರ’ದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪೌರತ್ವವನ್ನೂ ಪೊಲೀಸರು ಅನುಮಾನಿಸಿದ್ದರು, ಆದರೆ ವಿಚಾರಣೆ ಬಳಿಕ ವಾಪಸ್ ಕಳುಹಿಸಿದರು. ‘ಈದಿನ ಡಾಟ್ ಕಾಮ್’ ಜೊತೆಯಲ್ಲಿ ಮಾತನಾಡಿದ ಅವರು, “ನಾವು ಭಾರತೀಯರು ಮತ್ತು ಪಶ್ಚಿಮ ಬಂಗಾಳದವರು. ನಮ್ಮ ಭಾಷೆ ಬೆಂಗಾಲಿ, ಬಾಂಗ್ಲಾ ದೇಶದವರ ಭಾಷೆಯೂ ಬೆಂಗಾಲಿ. ಕೇವಲ ಭಾಷೆಯ ಕಾರಣಕ್ಕಾಗಿ ನಮ್ಮನ್ನು ಬಾಂಗ್ಲಾದೇಶಿ ಎಂದು ಜರಿಯುತ್ತಾರೆ. ನಮ್ಮ ಜೊತೆಗಿನ ಸ್ನೇಹಿತರು ಹೊರಗಡೆ ಕೆಲಸಕ್ಕೆ ಹೋದಾಗ- ನೀವು ಬೆಂಗಾಲಿ ಮಾತನಾಡುತ್ತೀರಿ, ಹಾಗಾಗಿ ನೀವು ಬಾಂಗ್ಲಾದೇಶಿಯರು ಎಂದು ಕಿರುಕುಳ ನೀಡಲಾಗುತ್ತದೆ” ಎಂದು ಸಮಸ್ಯೆ ಹೇಳಿಕೊಂಡರು.

ಗರಿಮಾ ಟ್ರಸ್ಟ್ನ ಸಹಸಂಸ್ಥಾಪಕಿ ‘ಅವಿಷಿಕ್ತಾ’ (ಜೂನ್) ಅವರು ಭಾಷೆಯ ಕಾರಣಕ್ಕೆ ಆಗುತ್ತಿರುವ ಕಿರುಕುಳವನ್ನು ಎಳೆಎಳೆಯಾಗಿ ವಿವರಿಸುವುದು ಹೀಗೆ:
“ಆಗಸ್ಟ್ 8ರಂದು ಬೆಳ್ಳಂಬೆಳಿಗ್ಗೆಯೇ ಪೊಲೀಸರು ಬೆಂಗಳೂರಿನಾದ್ಯಂತ ಅಕ್ರಮ ವಲಸಿಗರ ಮೇಲೆ ರೈಡ್ ನಡೆಸಿದರು. ಆದರೆ ಈ ಕಾರ್ಯಾಚರಣೆಯ ಹೆಸರಲ್ಲಿ ಅಸ್ಸಾಂ, ತ್ರಿಪುರ, ವೆಸ್ಟ್ ಬೆಂಗಾಲ್- ಇತರ ಭಾರತದ ರಾಜ್ಯಗಳ ವಲಸಿಗರನ್ನು ಗುರಿಯಾಗಿಸಿದರು. ಅವರನ್ನು ವಶಕ್ಕೆ ಪಡೆದರು. ಅಷ್ಟೇ ಅಲ್ಲ, ಅವರ ಮೇಲೆ ಲಾಠೀ ಚಾರ್ಜ್ ಆಯಿತು. ಜಾನುವಾರುಗಳನ್ನು ಎಳೆದೊಯ್ಯುವಂತೆ, ಎಲ್ಲರನ್ನೂ ಬಸ್ಗೆ ತುಂಬಿಕೊಂಡು ಕರೆದೊಯ್ದರು. ವಲಸೆ ಕಾರ್ಮಿಕರ ಫೋನ್ಗಳನ್ನು ಜಪ್ತಿ ಮಾಡಿದರು. ಆದರೆ ದಿನದ ಕೊನೆಯಲ್ಲಿ ಅವರನ್ನು ಬಿಡುಗಡೆ ಮಾಡಿದರು. ಯಾಕೆಂದರೆ ಅವರೆಲ್ಲ ಭಾರತೀಯರು. ಉದ್ಯೋಗಕ್ಕಾಗಿ, ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದಾರೆ. ಪಶ್ಚಿಮ ಬಂಗಾಳದಿಂದ ಆಗಮಿಸಿದವರನ್ನು ಕೇವಲ ಭಾಷೆಯ ಕಾರಣಕ್ಕೆ ಪೊಲೀಸರು ಅನುಮಾನಿಸುತ್ತಿದ್ದಾರೆಯೇ? ಎರಡೂ ಕಡೆಯವರು (ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ) ಬೆಂಗಾಲಿ ಭಾಷೆಯನ್ನು ಮಾತನಾಡುತ್ತಾರೆಂದು ಈ ಹಿಂಸೆಯೇ? ಪೊಲೀಸರ ಈ ನೀತಿಯ ಪ್ರಕಾರ, ಭಾರತದಲ್ಲಿರುವ ಪ್ರತಿಯೊಬ್ಬರೂ ಒಂದೇ ಭಾಷೆಯನ್ನು ಮಾತನಾಡಬೇಕಾಗುತ್ತದೆ. ಭಾರತದಲ್ಲಿ ಹಲವು ಭಾಷೆಗಳಿವೆ. ಅದರಲ್ಲಿ ಬೆಂಗಾಲಿಯೂ ಒಂದು” ಎನ್ನುತ್ತಾರೆ.
ಮುಂದುವರಿದು, “ನನ್ನ ಮಾತೃಭಾಷೆಯನ್ನು ಮಾತನಾಡುವ ಕಾರಣಕ್ಕೆ ನಾನು ಭಾರತೀಯಳಲ್ಲ ಎಂದು ಹೇಳಲು ಸಾಧ್ಯವೇ? ಇದು ಜನಾಂಗೀಯ ಮನಸ್ಥಿತಿಯಾಗುತ್ತದೆ. ಒಂದು ವೇಳೆ ಅಕ್ರಮ ವಲಸಿಗರು ಅಪಾರ್ಟ್ಮೆಂಟ್ಗಳಲ್ಲಿದ್ದು ಭದ್ರವಾಗಿ ಕೂತಿದ್ದರೆ, ಅವರನ್ನೆಲ್ಲ ಹೊರಗೆಳೆದು, ಬಸ್ನಲ್ಲಿ ತುಂಬಿಕೊಂಡು ಕರೆದೊಯ್ಯುತ್ತಾರೆಯೇ?- ಇಲ್ಲ. ಆದರೆ ಈ ಜನರನ್ನು (ಜೋಪಡಿಗಳಲ್ಲಿ ಇರುವವರನ್ನು) ಮಾತ್ರ ಬಂಧನ ಮಾಡಲಾಗುತ್ತದೆ. ಯಾಕೆಂದರೆ ಇವರಿಗೆ ದನಿ ಇಲ್ಲವಲ್ಲ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸುತ್ತಾರೆ ಅವಿಷಿಕ್ತಾ.
ಬೆಂಗಾಲಿ ಭಾಷೆಯನ್ನು ಅಪರಾಧೀಕರಣ ಮಾಡುತ್ತಿರುವುದರ ವಿರುದ್ಧ ಬಿಸ್ವಾಸ್ ಖಾರವಾಗಿ ಪ್ರಶ್ನಿಸುತ್ತಾರೆ. “ಪೊಲೀಸರು ನೇರವಾಗಿ ಒಂದು ಪ್ರಶ್ನೆ ಕೇಳುತ್ತಾರೆ- ನಿಮ್ಮ ಭಾಷೆ ಯಾವುದು? ಬೆಂಗಾಲಿ. ಹಾಗಾದರೆ ನೀವು- ಬಾಂಗ್ಲಾದೇಶಿ! ಬನ್ನಿ, ಬನ್ನಿ ಎಂದು ಕರೆದುಕೊಂಡು ಹೊರಟುಹೋಗುತ್ತಾರೆ. ನಮ್ಮ ಭಾಷೆ ಬಾಂಗ್ಲಾದೇಶದ್ದಾದರೆ, ನಮ್ಮ ಪಶ್ಚಿಮ ಬಂಗಾಳವೂ ಬಾಂಗ್ಲಾದೇಶವಾಗುವುದೇ? ಅವರಿಂದ ಕೇಂದ್ರ ಸರ್ಕಾರ ತೆರಿಗೆಯನ್ನು ಏಕೆ ತೆಗೆದುಕೊಳ್ಳುತ್ತದೆ?” ಎಂದು ಕೇಳುತ್ತಾರೆ ರಫೀಕುಲ್.
ಇದನ್ನೂ ಓದಿರಿ: ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?
ಆಪರೇಷನ್ ಮುಕ್ತ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು, ಕೇವಲ ದಾಖಲೆಗಳನ್ನಷ್ಟೇ ಪರಿಶೀಲಿಸಲಿಲ್ಲ. ಈ ಕಾರ್ಮಿಕರು ಯಾರ್ಯಾರಿಗೆ ಕರೆ ಮಾಡಿದ್ದಾರೆ ಎಂಬುದನ್ನೆಲ್ಲ ಮೊಬೈಲ್ ವಶಕ್ಕೆ ಪಡೆದು ಜಾಲಾಡಿದ್ದಾರೆ. ಗಡಿಯಾಚೆಯ ಬಾಂಗ್ಲಾ ಮೂಲದ ನಂಬರ್ ಹೊಂದಿದ್ದಕ್ಕೆ ಅಬ್ದುಲ್ ಕಲಾಂ ಆಝಾದ್ ಸಂಕಷ್ಟಕ್ಕೆ ಸಿಲುಕಿದ್ದನ್ನು ಹಂಚಿಕೊಳ್ಳುವುದು ಹೀಗೆ:

“ಅವರು ಎಲ್ಲರ ಫೋನ್ಗಳನ್ನು ವಶಪಡಿಸಿಕೊಂಡರು ಮತ್ತು ನಿರ್ದಿಷ್ಟ ಸಂಖ್ಯೆಗಳಿಗಾಗಿ ಅವುಗಳನ್ನು ಪರಿಶೀಲಿಸಿದರು. ನನ್ನ ಫೋನ್ನಲ್ಲಿ ಬಾಂಗ್ಲಾದೇಶದ ಸಂಖ್ಯೆಯೊಂದಿತ್ತು. ನಾನು ಮೊಬೈಲ್ ಫೋನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದರಿಂದ, ಕೆಲಸದ ಕಾರಣಕ್ಕಾಗಿ ಆ ಸಂಖ್ಯೆಯನ್ನು ಇಟ್ಟುಕೊಂಡಿದ್ದೆ. ನಿನ್ನ ಬಳಿ ಈ ನಂಬರ್ ಯಾಕಿದೆ ಎಂದು ಪ್ರಶ್ನಿಸಿದರು. ಅವರಿಗೆ ದಾಖಲೆಗಳಲ್ಲಿ ಆಸಕ್ತಿ ಇರಲಿಲ್ಲ, ಆ ಸಂಖ್ಯೆ ಇರುವುದೇ ಅವರಿಗೆ ಮುಖ್ಯವಾಗಿತ್ತು. ದೊಡ್ಡ ಸಮಸ್ಯೆಯೆಂದರೆ- ಕೇವಲ ಬಾಂಗ್ಲಾದೇಶದ ಸಂಖ್ಯೆಯನ್ನು ಹೊಂದಿದ್ದ ಕಾರಣಕ್ಕಾಗಿ ಅವರು ನನ್ನನ್ನು ಬಾಂಗ್ಲಾದೇಶಿ ಎಂದು ಮುದ್ರೆ ಒತ್ತಿದರು. ನಾನು ಭಾರತೀಯನೆಂದು ಪದೇ ಪದೇ ಹೇಳಿಕೊಂಡರೂ, ನನ್ನ ಇಡೀ ಕುಟುಂಬ, ಮನೆ ಮತ್ತು ಜಮೀನು ಎಲ್ಲದ್ದಕ್ಕೂ ಭಾರತೀಯ ದಾಖಲೆಗಳಿವೆ ಎಂದು ವಿವರಿಸಿದರೂ ಅವರು ಅದರಲ್ಲಿ ಯಾವುದೇ ಆಸಕ್ತಿ ತೋರಿಸಲಿಲ್ಲ. ಅವರು ನಮ್ಮಲ್ಲಿನ ನಾಲ್ವರನ್ನು ರಾತ್ರಿ 8 ಗಂಟೆಯವರೆಗೆ ವಶದಲ್ಲಿಟ್ಟುಕೊಂಡರು” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆಝಾದ್.
“ಆದರೆ ಇಲ್ಲಿ ಬೇರೆಯೇ ಆಯಾಮವಿದೆ. ಫೋನ್ ನಂಬರ್ ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಪೌರತ್ವವನ್ನು ಅನುಮಾನಿಸಬಹುದೇ?” ಎಂದು ಪ್ರಶ್ನಿಸುತ್ತಾರೆ ಅವಿಷಿಕ್ತಾ.
“ಪಶ್ಚಿಮ ಬಂಗಾಳದ ಬಹುತೇಕ ಜನರು, ಬಾಂಗ್ಲಾದೇಶದಲ್ಲಿ ತಮ್ಮ ಸಂಬಂಧಿಕರನ್ನು ಹೊಂದಿದ್ದಾರೆ. ಅದೇನೂ ನಿನ್ನೆ ಮೊನ್ನೆಯ ಸಂಗತಿಯಲ್ಲ. ಅಲ್ಲಿನ ಜನರೊಂದಿಗೆ ದಶಕಗಳಿಂದ, ಶತಮಾನಗಳಿಂದ ಸಂಬಂಧಗಳನ್ನು ಮುಂದುವರಿಸಿದ್ದಾರೆ. ಪಶ್ಚಿಮ ಬಂಗಾಳದ ಕಾರ್ಮಿಕರು ಪಕ್ಕದ ಬಾಂಗ್ಲಾ ದೇಶದಲ್ಲಿದ್ದವರ ನಂಬರ್ ಹೊಂದಿರುವುದಕ್ಕೆ ಕಿರುಕುಳ ಎದುರಿಸಬೇಕಾಗಿದೆ. ನಾವೇನು ಬಾಂಗ್ಲಾದೊಂದಿಗೆ ಯುದ್ಧ ಮಾಡುತ್ತಿದ್ದೇವೆಯೇ? ಅದೇನು ನಮ್ಮ ಶತ್ರು ರಾಷ್ಟ್ರವೇ? ಹಾಗಿದ್ದರೆ- ಯಾವುದೇ ಕಾರಣಕ್ಕೂ ಬಾಂಗ್ಲಾಕ್ಕೆ ಕರೆ ಮಾಡಬಾರದು, ಯಾರೂ ಬಾಂಗ್ಲಾ ಕರೆಗಳನ್ನು ಸ್ವೀಕರಬಾರದು ಎಂಬುದನ್ನು ಸರ್ಕಾರ ಘೋಷಿಸಬೇಕಲ್ಲವೇ? ಕೇವಲ ಒಂದು ಕರೆಯನ್ನು ಬಾಂಗ್ಲಾದಲ್ಲಿದ್ದವರಿಗೆ ಮಾಡಿದ್ದಕ್ಕೆ ಅರೆಸ್ಟ್ ಮಾಡಬಹುದೇ? ನೇಪಾಳಕ್ಕೆ ಕರೆ ಮಾಡಿದರೆ ನಿಮಗೆ ಯಾವುದೇ ಸಮಸ್ಯೆ ಇಲ್ಲ, ಮತ್ತೆ ಯಾವುದೇ ದೇಶದಲ್ಲಿದ್ದವರಿಗೆ ಕರೆ ಮಾಡಿದರೂ ಸಮಸ್ಯೆ ಇಲ್ಲ. ಆದರೆ ಬಾಂಗ್ಲಾದಲ್ಲಿದ್ದವರಿಗೆ ಕರೆ ಮಾಡಿದ ತಕ್ಷಣ ತ್ರಾಸವೇಕೆ? ಅದೊಂದು ಮುಸ್ಲಿಂ ರಾಷ್ಟ್ರ ಎಂಬ ಕಾರಣಕ್ಕೆ ಗುಮಾನಿಯೇ?” ಎಂದು ಸರ್ಕಾರವನ್ನು ತಿವಿಯುತ್ತಾರೆ.
ಬೆಂಗಾಲಿ ಮಾತನಾಡುವ ಪಶ್ಚಿಮ ಬಂಗಾಳದ ಜನತೆಗೆ ಪದೇಪದೇ ವಿಚಾರಣೆ ನೆಪದಲ್ಲಿ ತೊಂದರೆ ಕೊಡುವುದು ತಪ್ಪಿಲ್ಲ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಲು ನಡೆಸುವ ಕಾರ್ಯಾಚರಣೆಗಳು ಸ್ವಾಗತಾರ್ಹವಾದರೂ ವೆಸ್ಟ್ ಬೆಂಗಾಲ್ ಜನತೆಗೆ ಪುನರಾವರ್ತಿತ ಕಿರುಕುಳ ನೀಡುವುದು ನಿಲ್ಲಬೇಕು, ಅದಕ್ಕೊಂದು ಸೂಕ್ತ ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಪಡುವ ಅವಿಷಿಕ್ತಾ, ಕೆಲವು ಸಲಹೆಗಳನ್ನು ನೀಡುತ್ತಾರೆ.

“ಎಲ್ಲ ರೀತಿಯ ವೆರಿಫಿಕೇಷನ್ ನಡೆಸಿದ ಬಳಿಕ, ಪರಿಶೀಲನೆ ಮುಕ್ತಾಯವಾಗಿದೆ ಎಂದು ಪೊಲೀಸರು ರಸೀದಿಯನ್ನೇಕೆ ಕೊಡುತ್ತಿಲ್ಲ ಎಂಬುದೇ ಇಲ್ಲಿನ ಪ್ರಶ್ನೆ. ವ್ಯಕ್ತಿಯೊಬ್ಬನ ಪರಿಶೀಲನೆ ಮುಗಿಸಿ, ಆ ಸಂಬಂಧ ರಸೀದಿ ನೀಡಿದರೆ, ಮತ್ತೆ ಮತ್ತೆ ದಾಖಲೆಗಳನ್ನು ಕೊಡುವುದು ತಪ್ಪುತ್ತದೆ. ‘ನಾನು ಇಂತಹ ಸ್ಥಳದಿಂದ ಬಂದಿದ್ದೇನೆ, ನನ್ನ ದಾಖಲೆಗಳು ಪರಿಶೀಲನೆಯಾಗಿವೆ, ನಾನು ಭಾರತೀಯ ಪೌರನಾಗಿದ್ದೇನೆ’ ಎಂಬ ಅಂಶಗಳುಳ್ಳ ದೃಢೀಕರಣವನ್ನು ಒಮ್ಮೆ ಕೊಟ್ಟುಬಿಟ್ಟರೆ, ಪೊಲೀಸರ ವಿಚಾರಣೆ ಭಯ ಇಲ್ಲವಾಗುತ್ತದೆ. ಈ ಕ್ರಮ ಜಾರಿಯಾದರೆ, ಗೃಹಕೆಲಸಗಳಿಗೆ ಹೋಗುವ ಮಹಿಳೆಯರ ಮೇಲಾಗಲೀ, ಬೇರೆ ಬೇರೆ ಉದ್ಯೋಗಗಳನ್ನು ಮಾಡುವವರ ಮೇಲಾಗಲೀ, ಬೆಂಗಾಲಿ ಭಾಷೆಯ ಕಾರಣಕ್ಕೆ ಉಂಟಾಗುವ ಗುಮಾನಿಗಳು ನಿಲ್ಲುತ್ತವೆ” ಎಂದು ವಿವರಿಸುತ್ತಾರೆ.
ಅಕ್ರಮ ಬಾಂಗ್ಲಾ ಡಾನ್ಗಳ ಹಾವಳಿ ಮಿತಿಮೀರಿದೆಯೇ?
“ಬೆಂಗಳೂರಿನಲ್ಲಿ ಬಾಂಗ್ಲಾ ವಲಸಿಗರು ಇರುವುದು ಸತ್ಯ. ಇವರನ್ನು ಎರಡು ವಿಧದಲ್ಲಿ ನೋಡಬೇಕಾಗುತ್ತದೆ. ಒಂದು: ಬಣ್ಣಬಣ್ಣದ ಮಾತುಗಳಿಗೆ ಮರುಳಾಗಿ, ಘನತೆಯ ಕೆಲಸದ ಆಸೆ ಹೊತ್ತು ಬಂದು, ಮಾನವ ಕಳ್ಳಸಾಗಣೆ ಮೂಲಕ ಇಲ್ಲಿ ಕಸವಿಂಗಡಣೆ ಕೆಲಸಕ್ಕೆ ದೂಡಲ್ಪಟ್ಟ ಬಾಂಗ್ಲಾ ಬಡವರು. ಎರಡು: ಈ ಕಸ ಮಾಫಿಯಾದ ಮೇಲೆ ಹಿಡಿತ ಹೊಂದಿರುವ ಬಾಂಗ್ಲಾ ಡಾನ್ಗಳು. ಬಡ ಬಾಂಗ್ಲಾ ವಲಸಿಗರು, ತಮ್ಮ ದೇಶಕ್ಕೆ ವಾಪಸ್ ಹೋಗಲು ಬಯಸಿದರೂ, ಕಸ ಮಾಫಿಯಾಗಳು ಸುಲಭವಾಗಿ ಬಿಡುವುದಿಲ್ಲ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.
ಈ ಬಾಂಗ್ಲಾ ಮಾಫಿಯಾಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ‘ದಿ ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫೀಸರ್’ (ಎಫ್ಆರ್ಆರ್ಒ) ಮತ್ತು ‘ಡಿಐಜಿ’ ಅವರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಸಿ.ಎಂ. ಅಮೀನ್ ಸೈಲಾನಿ ಅವರು, ಪೊಲೀಸ್ ಕಾರ್ಯಾಚರಣೆಗೆ ಸಹಕರಿಸಿದವರಲ್ಲಿ ಪ್ರಮುಖರು. “ಈ ಡಾನ್ಗಳ ಜಾಲದ ವಿರುದ್ಧ ನಿಂತಿದ್ದಕ್ಕೆ ನನ್ನ ವಿರುದ್ಧವೇ ಪಿತೂರಿಗಳು ನಡೆದವು, ನಾನು- ದೂರು ನೀಡಿದ ಮೇಲೆ, ನನ್ನನ್ನೇ ಬಾಂಗ್ಲಾದಿಂದ ಕಾರ್ಮಿಕರನ್ನು ಕರೆತಂದವನೆಂದು ಬಿಂಬಿಸುವ ಪ್ರಯತ್ನಗಳಾಗಿವೆ” ಎನ್ನುತ್ತಾರೆ ಸೈಲಾನಿ.
“ಆಪರೇಷನ್ ಮುಕ್ತದಲ್ಲಿ ಸಣ್ಣಪುಟ್ಟ ಕಾರ್ಮಿಕರು ಹೊರಹಾಕಲ್ಪಟ್ಟರೂ ದೊಡ್ಡ ಬಾಂಗ್ಲಾ ಮಾಫಿಯಾಗಳು ಸುರಕ್ಷಿತವಾಗಿದ್ದಾರೆ. ಅವರನ್ನು ಹೊರಗೆ ಹಾಕದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ” ಎನ್ನುವ ಸೈಲಾನಿ, “ಬಾಂಗ್ಲಾದೇಶಿ ಡಾನ್ಗಳನ್ನು ಈತನಕವೂ ಪೊಲೀಸರು ಹಿಡಿದಿಲ್ಲ. ದೊಡ್ಡ ಕುಳಗಳಾದ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡುತ್ತಿಲ್ಲವೇ?” ಎಂದು ಪ್ರಶ್ನಿಸುತ್ತಾರೆ. “ನಾನು ದೂರು ಕೊಟ್ಟ ಮೇಲೆ ನನಗೆ ಸಮಸ್ಯೆಗಳಾದವು. ನನ್ನನ್ನೇ ಪ್ರಶ್ನಿಸಲಾಯಿತು. ನಿನಗೂ ಈ ವಲಸೆ ಕಾರ್ಮಿಕರಿಗೂ ಏನು ಸಂಬಂಧ? ನೀವು ಎಷ್ಟು ಜನರನ್ನು ಕರೆದು ತಂದಿದ್ದೀರಿ ಎಂದೆಲ್ಲ ವಿಚಾರಣೆಯಾಯಿತು. ಅಕ್ರಮ ಬಾಂಗ್ಲಾ ಮಂದಿಯ ಕುರಿತು ನಾವು ಅರ್ಜಿಯನ್ನು ಹಾಕಿದರೆ, ವೆಸ್ಟ್ ಬೆಂಗಾಲ್, ಅಸ್ಸಾಂ, ತ್ರಿಪುರದಿಂದ ಬಂದವರ ಮೇಲೆ ರೈಡ್ ಆಯಿತು. ಎಲ್ಲೆಲ್ಲಿ ಬಾಂಗ್ಲಾದವರು ನೆಲೆಸಿದ್ದಾರೆಂದು ತೋರಿಸಿದರೂ ಈ ದೇಶದ ನಿವಾಸಿಗಳನ್ನು ಪ್ರಶ್ನಿಸಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಸ ಮಾಫಿಯಾಕ್ಕೆ ಬಾಂಗ್ಲಾ ಕಾರ್ಮಿಕರನ್ನು ಕರೆತರುವ ‘ದಲಾಲ್’ಗಳಿಗೆ ಕಡಿವಾಣ ಹಾಕಬೇಕು ಎನ್ನುವ ಸೈಲಾನಿಯವರು, “ಯಾವ್ಯಾವ ದಲಾಲ್ಗಳು, ಯಾವ್ಯಾವ ವಲಸಿಗರನ್ನು ಕರೆತರುತ್ತಿದ್ದಾರೆ ಎಂಬುದನ್ನು ತಿಳಿಸಿದ್ದೇನೆ. ಅತ್ಯಂತ ಕಡಿಮೆ ಕೂಲಿಗೆ ಅಥವಾ ಯಾವುದೇ ಕೂಲಿ ಇಲ್ಲದೆ ಕೆಲಸ ಮಾಡುವ ಬಾಂಗ್ಲಾ ಕಾರ್ಮಿಕರನ್ನು ಮಾಫಿಯಾದವರು ಹಿಂಸಿಸುತ್ತಿದ್ದಾರೆ. ಆ ಬಾಂಗ್ಲಾ ಕಾರ್ಮಿಕರಿಗೆ ಡ್ರಗ್ಸ್ ಕೊಟ್ಟು ಕೆಲಸಗಳನ್ನು ಮಾಡಿಸುತ್ತಿರುವುದನ್ನು ದೂರಿನಲ್ಲಿ ನಮೂದಿಸಿದ್ದೇನೆ. ಅವರ ಮೇಲೆ ಕ್ರಮ ಜರುಗಿಸದೆ ವೆಸ್ಟ್ ಬೆಂಗಾಲಿಗರಿಗೆ ಏಕೆ ಕಷ್ಟ ಕೊಡುತ್ತಿದ್ದೀರಿ?” ಎಂದು ಪ್ರಶ್ನಿಸುತ್ತಾರೆ.
ಬಾಂಗ್ಲಾ ಕಾರ್ಮಿಕರು ಇರುವ ಜಾಗಗಳನ್ನು ತೋರಿಸಿದವರಲ್ಲಿ ಎಂ.ಡಿ. ಶೇಖ್ ಕೂಡ ಸೇರಿದ್ದಾರೆ. “ಈ ಕಾರಣಕ್ಕೆ ಬಾಂಗ್ಲಾ ಡಾನ್ ಗಳಿಂದ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ” ಎಂದು ಆತಂಕ ತೋಡಿಕೊಳ್ಳುತ್ತಾರೆ.
“ವರ್ತೂರು ಪೊಲೀಸ್ ಸ್ಟೇಷನ್ನ ಅಧಿಕಾರಿಗಳು ನಮ್ಮನ್ನು ಕರೆಸಿದ್ದರು. ಪಶ್ಚಿಮ ಬಂಗಾಳದಿಂದ ಬಂದ ವಲಸಿಗರಿಗಾಗಿ ಕೆಲಸ ಮಾಡುವ ನಮ್ಮಂತಹ 10 ಜನರ ಒಂದು ತಂಡವನ್ನು ಮಾಡಿ, ಬಾಂಗ್ಲಾದೇಶಿಗರು ಎಲ್ಲಿದ್ದಾರೆ ಎಂಬುದನ್ನು ತೋರಿಸಲು ಸೂಚಿಸಿದರು. ಎಲ್ಲೆಲ್ಲಿ, ಎಷ್ಟು ಬಾಂಗ್ಲಾ ಮಂದಿ ಇದ್ದಾರೆ ಎಂಬುದು ಪೊಲೀಸ್ ಠಾಣೆಗಳಿಗೂ ತಿಳಿದಿರುತ್ತದೆ. ಆದರೂ ನಮ್ಮದೊಂದು ತಂಡವನ್ನು ಮಾಡಿದ್ದರು. ಪೊಲೀಸರೊಂದಿಗೆ ನಾವು ವೈಟ್ಫೀಲ್ಡ್ , ಕಾಡುಗೋಡಿ, ವರ್ತೂರು ಮುಂತಾದ ಕಡೆಗಳಲ್ಲಿ ಮೂರ್ನಾಲ್ಕು ದಿನ ರಾತ್ರಿ ವೇಳೆ ಹೋಗಿ, ಆಪರೇಷನ್ ನಡೆಸಿದ್ದೆವು. ಆ ಕೆಲಸ ಮುಗಿದ ನಂತರ, ನನ್ನನ್ನೇ ಬಾಂಗ್ಲಾದೇಶಿ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ನಾನು ಒಂದೇ ಮಾತು ಹೇಳಲು ಬಯಸುತ್ತೇನೆ- ನಾವು ಭಾರತೀಯ ಬೆಂಗಾಲಿಗಳು, ಬಾಂಗ್ಲಾದೇಶಿಯರಿಂದ ನಮಗೆ ಯಾವುದೇ ತೊಂದರೆಯಾಗಬಾರದು. ಅವರಲ್ಲಿ ದೊಡ್ಡ ದೊಡ್ಡ ಗೂಂಡಾಗಳಿದ್ದಾರೆ. ಈಗ ಬೆಂಗಳೂರಿನಲ್ಲಿ ಅವರದ್ದೇ ಹಾವಳಿ! ಹೊರಗೆ ಹೋಗಲು ನಮಗೆ ಭಯವಾಗುತ್ತಿದೆ. ಬಾಂಗ್ಲಾದೇಶಿ ಜನರಿಂದ ನಮಗೆ ಜೀವ ಬೆದರಿಕೆಗಳು ಬರುತ್ತಿವೆ. ವೈಟ್ಫೀಲ್ಡ್ನಲ್ಲಿ ಏನಾಯಿತು ಎಂದರೆ, 11 ಜನ ಭಾರತೀಯರ ಮೇಲೆ ಬಾಂಗ್ಲಾದೇಶಿ ಜನರು ಹಲ್ಲೆ ನಡೆಸಿದರು. ಆನಂತರ ಭಾರತೀಯರ ವಿರುದ್ಧವೇ ಕೇಸ್ ದಾಖಲಿಸಿದರು. ನಮ್ಮ ದೇಶದ ತಾಯಿಗೆ ಬಾಂಗ್ಲಾ ಮಂದಿ ಬೈಯುತ್ತಾರೆ. ಹಾಗಾಗಿ ನಮ್ಮ ವಿನಂತಿ ಏನೆಂದರೆ- ಆ ಗೂಂಡಾ ಮಂದಿಯನ್ನು ಹೊರಹಾಕಬೇಕು, ನಮ್ಮ ದೇಶವನ್ನು ಸುರಕ್ಷಿತವಾಗಿಡಬೇಕು. ಅವರು ಯಾವುದೇ ಅನಾಹುತವನ್ನು ಮಾಡಬಲ್ಲರು. ಅವರು ಅಕ್ರಮವಾಗಿ ನೆಲೆಸಿದ್ದಾರೆ, ಅವರು ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ. ಇಲ್ಲಿಗೆ ಬಂದು ಆಸ್ತಿ ಮಾಡಿಕೊಳ್ಳುತ್ತಾರೆ, ಕಟ್ಟಡಗಳನ್ನು ಕಟ್ಟುತ್ತಾರೆ, ಜಮೀನುಗಳನ್ನು ಖರೀದಿಸುತ್ತಾರೆ. ಆದರೆ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲೂ ನಮ್ಮ ಬಳಿ ಹಣವಿರುವುದಿಲ್ಲ. ನಮಗೆ ತುಂಬಾ ಅಪಾಯವಿದೆ, ಆದ್ದರಿಂದ ನಮಗೆ ರಕ್ಷಣೆ ಕೊಡಬೇಕು” ಎಂದು ಮನವಿ ಮಾಡುವ ಶೇಖ್, ಪೊಲೀಸರು ನೀಡಿದ ಸಹಕಾರಕ್ಕೆ ಕೃತಜ್ಞತೆಯನ್ನೂ ಅರ್ಪಿಸುತ್ತಾರೆ.

ರಫೀಕುಲ್ ಬಿಸ್ವಾಸ್ ಅವರು, “ನನಗೆ ಸಮಸ್ಯೆ ಎದುರಾಗಿದ್ದೇ ಚಿಂದಿ ವ್ಯವಹಾರಕ್ಕೆ ಕಾಲಿಟ್ಟ ನಂತರ” ಎಂದು ವಿವರಿಸುತ್ತಾರೆ ಮತ್ತು ಬಾಂಗ್ಲಾ ಡಾನ್ಗಳು ಪಿತೂರಿ ಮಾಡಿ ಸೃಷ್ಟಿಸಿದ್ದಾರೆ ಎನ್ನಲಾದ ನಕಲಿ ದಾಖಲೆಗಳ ಕುರಿತು ಹೇಳಿಕೊಳ್ಳುತ್ತಾರೆ.
“ಇಲ್ಲಿಗೆ ಬಂದು ಹಲವು ವರ್ಷಗಳಾಗಿವೆ. ನಾನು ಮತ್ತು ನನ್ನ ಹೆಂಡತಿ ಕೆಲಸ ಮಾಡಿ ಸ್ವಲ್ಪ ಹಣ ಉಳಿಸಿದೆವು. ಆ ಹಣದಿಂದ ಸ್ಕ್ರ್ಯಾಪ್ ವ್ಯಾಪಾರ ಆರಂಭಿಸಿದೆವು. ಒಂದೇ ತಿಂಗಳಲ್ಲಿ ಬಾಂಗ್ಲಾದೇಶಿಗರಿಗೆ ನನ್ನ ಮೇಲೆ ಆಕ್ರೋಶ ಹುಟ್ಟಿತು. ಭಾರತೀಯರಾದ ನಾವು ಈ ವ್ಯವಹಾರ ಮಾಡುವುದಕ್ಕೆ ಬಾಂಗ್ಲಾ ಮಾಫಿಯಾಗಳು ಬಿಡುವುದಿಲ್ಲ. ಇಲ್ಲಿ ಎಷ್ಟು ಸ್ಕ್ರ್ಯಾಪ್ ವ್ಯವಹಾರಗಳಿವೆಯೋ, ಎಲ್ಲವೂ ಬಾಂಗ್ಲಾದೇಶಿಯರದ್ದೇ ಆಗಿವೆ. ಹಾಗಾಗಿಯೇ ಅವರು ನನ್ನ ವಿರುದ್ಧ ನಿಂತರು. ಪೊಲೀಸರ ಮೂಲಕ ನನಗೆ ತೊಂದರೆ ಕೊಡಲು ಆರಂಭಿಸಿದರು. ಪೊಲೀಸರು ನನಗೆ ಕೇಳಿದರು- ನೀನು ಬಾಂಗ್ಲಾದೇಶಿಯೇ? ನಾನು ಹೇಳಿದೆ- ಇಲ್ಲ. ನಾನು ಬಾಂಗ್ಲಾದೇಶಿಯಾಗಲು ಸಾಧ್ಯವೇ ಇಲ್ಲ. ನಿಮಗೆ ಯಾರು ಹೇಳಿದರು? ಎಂದು ಕೇಳಿದೆ. ಸಾಕ್ಷಿ ತೋರಿಸಿ ಎಂದೆ. ನನ್ನ ಡಿಎಲ್ (ಚಾಲನಾ ಪರವಾನಗಿ) ಇದೆಯಲ್ಲ, ಅದರ ಫೋಟೋವನ್ನು ಸ್ಕ್ಯಾನ್ ಮಾಡಿ ಏನೋ ಸಿದ್ಧಪಡಿಸಿಟ್ಟುಕೊಂಡು ನನಗೆ ತೋರಿಸಿದರು” ಎಂದು ತಮ್ಮ ವಿರುದ್ಧ ಸೃಷ್ಟಿಸಲಾಗಿದ್ದ ನಕಲಿ ದಾಖಲೆಗಳ ಕಥೆಯನ್ನು ಬಿಚ್ಚಿಟ್ಟರು.
ಇದನ್ನೂ ಓದಿರಿ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ BJP-JDS ಪಟ್ಟು, ಸಾಹುಕಾರ್-ಕನ್ನಾಳೆ ವಿಚಾರದಲ್ಲಿ ಮೌನವೇಕೆ?
“ನಾನು ನೋಡುತ್ತಿದ್ದೇನೆ, ಅದರಲ್ಲಿ ಬಾಂಗ್ಲಾದೇಶದ ಹೆಸರು ಬರೆಯಲಾಗಿದೆ. ಅದರಲ್ಲಿ ನನ್ನ ಫೋಟೋ ಹಾಕಿ ಬಾಂಗ್ಲಾದೇಶಿ ಎಂದು ಚಿತ್ರಿಸುತ್ತಿದ್ದಾರೆ! ಠಾಣೆಯಲ್ಲಿ ಹೇಳಿದೆ- ಸರ್ ನಾವು ಬಾಂಗ್ಲಾದೇಶಿ ಹೇಗೆ ಆಗಲು ಸಾಧ್ಯ? ನಮ್ಮ ದಾಖಲೆಗಳನ್ನು ನೋಡಿ, ನಮ್ಮ ಎಲ್ಲವನ್ನೂ ಪರಿಶೀಲಿಸಿ. ಹೌದು, ಕೇವಲ ನಾನು ಮಾತ್ರವಲ್ಲ, ನಮ್ಮ ಸಂಪೂರ್ಣ ಕುಟುಂಬ, ಸಂಪೂರ್ಣ ಪ್ರದೇಶದ ಎಲ್ಲರನ್ನೂ ಪರಿಶೀಲಿಸಿ ನೋಡಿ ಎಂದೆ. ಯಾರೂ ಯಾವುದೇ ಮಾತು ಕೇಳಲಿಲ್ಲ, ಅವರು ಹೇಳಿದ್ದು ಒಂದೇ ಮಾತು- ನೀನು ಬಾಂಗ್ಲಾದೇಶಿ”- ಇದು ರಫೀಕುಲ್ ಎದುರಿಸಿದ ಮಾನಸಿಕ ಯಾತನೆ!
ಮಾನವ ಕಳ್ಳಸಾಗಣೆಯ ಜಾಲ
“ಬಾಂಗ್ಲಾ ಡಾನ್ಗಳದ್ದು ಅಟ್ಟಹಾಸವಾದರೆ, ಬಾಂಗ್ಲಾ ಮೂಲದ ಬಡ ಕಾರ್ಮಿಕರದ್ದು ಮನಕಲಕುವ ಕಥನ” ಎಂಬುದನ್ನು ಹೋರಾಟಗಾರರು ಗುರುತಿಸದೆ ಇರುವುದಿಲ್ಲ. ಮಾನವ ಕಳ್ಳಸಾಗಣೆ ಮತ್ತು ವಲಸೆ ಕಾರ್ಮಿಕರ ಬಿಕ್ಕಟ್ಟಿನ ಕುರಿತು ಮತ್ತಷ್ಟು ವಿವರಿಸುವ ಅವಿಷಿಕ್ತಾ, “ಈ ಕಾರ್ಮಿಕರು ಯಾರೆಂಬುದನ್ನು ನಾವು ನೋಡಬೇಕಾಗುತ್ತದೆ, ಅವರು ಎಲ್ಲಿಂದ ಬರುತ್ತಿದ್ದಾರೆಂದು ನೋಡಬೇಕಾಗುತ್ತದೆ. ಭಾರತದ ವಿವಿಧ ಜಿಲ್ಲೆಗಳಿಂದಲೂ ಇಲ್ಲಿಗೆ ಬರುತ್ತಾರೆ, ಬಾಂಗ್ಲಾದಿಂದಲೂ ಸಾಗಣೆಯಾಗುತ್ತಾರೆ. ಈ ಎಲ್ಲ ಕಾರ್ಮಿಕರು ಆರ್ಥಿಕವಾಗಿ ಸಂತ್ರಸ್ತರು. ಅವರಿಗೆ ತಮ್ಮ ಊರುಗಳಲ್ಲಿ ಮೂಲಸೌಕರ್ಯವೂ ಸಿಗುವುದಿಲ್ಲ. ಭಾರತದ ವಲಸೆ ಕಾರ್ಮಿಕರಾಗಲಿ, ಬಾಂಗ್ಲಾ ವಲಸೆ ಕಾರ್ಮಿಕರಾಗಿರಲಿ- ಕೊನೆಯಲ್ಲಿ ಇದೇ ಕೆಲಸಕ್ಕೆ ಮತ್ತು ಇದೇ ಜಾಗಗಳಿಗೆ ದೂಡಲ್ಪಡುತ್ತಾರೆ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮತ್ತು ಸೆಗ್ರಿಗೇಷನ್ನಲ್ಲಿ ತೊಡಗಿಸಿಕೊಳ್ಳುತ್ತಾರೆ” ಎಂದು ವಿಷಾದಿಸುತ್ತಾರೆ.
ಮುಂದುವರಿದು, “ಪಶ್ಚಿಮ ಬಂಗಾಳಿಗರು ಸುಲಭವಾಗಿ ಇಲ್ಲಿಗೆ ಬಂದು ಬಿಡಬಹುದು. ಆದರೆ ಬಡ ಬಾಂಗ್ಲಾ ಜನರು ಹೇಗೆ ತಲುಪುತ್ತಿದ್ದಾರೆ? ಅವರೇನು ಹಾರಿಕೊಂಡು ಬಂದರೆ? ಬಾರ್ಡರ್ಗಳನ್ನು ಒಡೆದು ಹಾಕಿ ಬಂದರೆ? ಅವರಿಗೆ ದಿನಕ್ಕೆ ನೂರಾರು ರೂಪಾಯಿ ಕೂಲಿ ಕೊಡುತ್ತೇವೆ ಎಂದು ಆಸೆ ತೋರಿಸಿ ಇಲ್ಲಿಗೆ ಕರೆತರುತ್ತಾರೆ. ಮಾಲ್ಗಳಲ್ಲಿ, ಮತ್ತಿತ್ತರ ಕಡೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿರುತ್ತಾರೆ. ಆದರೆ ಅಂತಿಮವಾಗಿ ಅವರಿಗೆ ಸಿಗುವುದು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕೆಲಸಗಳು! ಅವರು ತಿಂಗಳಿಗೆ 10ರಿಂದ 12 ಸಾವಿರ ರೂಪಾಯಿ ಸಂಪಾದನೆಯನ್ನೂ ಮಾಡುವುದಿಲ್ಲ. ಅವರು ಶಿಕ್ಷಣ ಪಡೆದಿರುವುದಿಲ್ಲ. ಅವರ ಮಕ್ಕಳೂ ಶಿಕ್ಷಣ ಪಡೆದಿರುವುದಿಲ್ಲ. ಜನಾಂಗದ ಕಾರಣಕ್ಕೆ, ಭಾಷೆಯ ಕಾರಣಕ್ಕೆ, ಧರ್ಮದ ಕಾರಣಕ್ಕೆ ಅವರನ್ನು ಅನುಮಾನಿಸಲಾಗುತ್ತದೆ. ಇಲ್ಲಿ ಕಿರುಕುಳ ಮತ್ತು ಹಲ್ಲೆಗೆ ಒಳಗಾಗುವವರು ಬಹುತೇಕ ಮುಸ್ಲಿಮರಾಗಿರುತ್ತಾರೆ” ಎಂದು ತಿಳಿಸುತ್ತಾರೆ.

ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಖಲೀಮ್ ಉಲ್ಲಾ ಅವರು, ಬಾಂಗ್ಲಾ ಮತ್ತು ಪಶ್ಚಿಮ ಬಂಗಾಳ ಕಾರ್ಮಿಕರ ನಡುವಿನ ಬಿಕ್ಕಟ್ಟುಗಳ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ.
“ಬೆಂಗಳೂರಿಗೆ ಅಕ್ರಮ ಬಾಂಗ್ಲಾ ನಿವಾಸಿಗಳು ಬಂದಿರುವುದು ನಿಜ. ಬಿಬಿಎಂಪಿ ಏಜೆಂಟ್ಗಳ ಮೂಲಕ, ಅತ್ಯಂತ ಕಡಿಮೆ ಕೂಲಿಗಾಗಿ ಅವರನ್ನು ಕರೆತರಲಾಗುತ್ತದೆ. ಹಲವು ವರ್ಷಗಳಿಂದಲೂ ಇದು ನಡೆಯುತ್ತಿದೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ವೆಸ್ಟ್ ಬೆಂಗಾಲಿಗಳಿಗೂ ಬಾಂಗ್ಲಾದವರಿಗೂ ಸಂಘರ್ಷವಿದೆ. ನಮಗೆ ಕೆಲಸ ಇಲ್ಲದಿರುವಾಗ ನೀವೇಕೆ ಬರುತ್ತಿರಿ ಎಂದು ವೆಸ್ಟ್ ಬೆಂಗಾಲಿಗಳು ಪ್ರಶ್ನಿಸುತ್ತಾರೆ. ಇನ್ನೊಂದೆಡೆ ವೆಟ್ (ಹಸಿ ಕಸ) ವಿಂಗಡಣೆಯ ಕೆಲಸವನ್ನು ಪಶ್ಚಿಮ ಬಂಗಾಲಿಗರು ಮಾಡುವುದಕ್ಕೆ ಕಷ್ಟವಿದೆ. ಅದರಲ್ಲಿ ಬರುವ ವಿಷಕಾರಿ ಗ್ಯಾಸ್ ಸಹಿಸಿಕೊಂಡು ಕೆಲಸ ಮಾಡುವುದು ಬಾಂಗ್ಲಾ ಜನ ಮಾತ್ರ. ಪಶ್ಚಿಮ ಬಂಗಾಲಿಗರು ಒಣ ಕಸ ವಿಂಗಡಣೆ ಮಾಡುತ್ತಾರೆ. ಬಿಬಿಎಂಪಿಯಲ್ಲಿ ಹಲವು ಸಲ ಪಶ್ಚಿಮ ಬಂಗಾಳದವರಿಗೆ ಸ್ಯಾಲರಿಯೂ ಸಿಗುವುದಿಲ್ಲ. ಡ್ರೈ ವೇಸ್ಟ್ ತೆಗೆದುಕೊಂಡು ಹೋಗಿಯೇ ಜೀವನ ನಡೆಸಬೇಕಾದ ಸನ್ನಿವೇಶಗಳು ಇವೆ” ಎಂದು ಕೆಲಸದ ಸ್ವರೂಪಗಳನ್ನು ಖಲೀಮ್ ಉಲ್ಲಾ ತೆರೆದಿಡುತ್ತಾರೆ.

“ಬಾಂಗ್ಲಾದೇಶಿಯರು ಎಲ್ಲಿದ್ದಾರೆ, ವೆಸ್ಟ್ ಬೆಂಗಾಲಿಯರು ಎಲ್ಲಿದ್ದಾರೆ, ಅಸ್ಸಾಮಿನವರು ಎಲ್ಲಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೆ ಪಶ್ಚಿಮ ಬಂಗಾಳ, ಅಸ್ಸಾಂನವರು ಇರುವ ಜೋಪಡಿಗಳಲ್ಲೇ ಹಲ್ಲೆಗಳಾಗಿವೆ. ಪುನೀತ್ ಕೆರೆಹಳ್ಳಿ ಮತ್ತಿತ್ತರರು ಬಂದು- ಬಾಂಗ್ಲಾ ನಿವಾಸಿಗಳಿದ್ದಾರೆಂದು ತೋರಿಸುತ್ತಿದ್ದಾರಲ್ಲ, ಆ ಭಾಗದಲ್ಲಿ ಶಾಸಕರು ಯಾರೆಂಬುದನ್ನು ಹೇಳಬೇಕು. ಅಕ್ರಮ ವಲಸಿಗರಿಗೆ ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಮಾಡಿಕೊಟ್ಟವರು ಯಾರು? ಆ ಶಾಸಕರಿಗೂ ಇವರಿಗೂ ಕನೆಕ್ಷನ್ ಇದೆಯೇ? ಈ ಸತ್ಯಗಳೆಲ್ಲ ಹೊರಗೆ ಬರಬೇಕು. ಬಾಂಗ್ಲಾದೇಶಿ ಏಜೆಂಟ್ಗಳ ವಿರುದ್ಧ ಕ್ರಮ ಜರುಗಿಸಬೇಕು. ಆಗಷ್ಟೇ ಪಶ್ಚಿಮ ಬಂಗಾಳಿಯರು ನೆಮ್ಮದಿಯಾಗಿರಲು ಸಾಧ್ಯವಾಗುತ್ತದೆ” ಎನ್ನುತ್ತಾರೆ.
ಇದನ್ನೂ ಓದಿರಿ: ಹನೂರು ಗ್ರೌಂಡ್ ರಿಪೋರ್ಟ್: ‘ಇದು ಕೌಂಟರ್ ಅಟ್ಯಾಕ್ ಅಲ್ಲ, ಎನ್ಕೌಂಟರ್?’
“ಆಪರೇಷನ್ ಮುಕ್ತದ ಮೂಲಕ ಕೆಲವು ಬಾಂಗ್ಲಾ ವಲಸಿಗರನ್ನು ಹೊರಗೆ ಹಾಕಿದ್ದಾರೆ. ಆದರೆ ಬಾಂಗ್ಲಾದೇಶಿ ಡಾನ್ಗಳನ್ನು ಇನ್ನೂ ಮುಟ್ಟಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡುತ್ತೇನೆ. ರಾಜ್ಯದಿಂದ ರಾಜ್ಯಕ್ಕೆ ಬಂದಿರುವ ಕಾರ್ಮಿಕರ ಉನ್ನತೀಕರಣಕ್ಕೆ ಒತ್ತಾಯಿಸುತ್ತೇನೆ. ವಲಸೆ ಕಾರ್ಮಿಕರು ಹತ್ತು ವರ್ಷಗಳಿಂದ ಒಂದೇ ಜೋಪಡಿಯಲ್ಲಿ ಬದುಕಿರುತ್ತಾರೆ. ತಂದೆಯ ನಂತರ ಮಗ ಕಸ ಎತ್ತೋಕೆ ಹೋಗುತ್ತಾನೆ. ಇದು ಬದಲಾವಣೆ ಆಗಬೇಕು. ಇಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತವೆ, ಪೋಕ್ಸೋ ಕೇಸ್ಗಳು ವರದಿಯಾಗುತ್ತಿವೆ, ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಕಾರ್ಮಿಕ ಇಲಾಖೆ, ಮಕ್ಕಳ ಇಲಾಖೆ- ತಮ್ಮಲ್ಲಿ ಇರುವ ಅನುಕೂಲಗಳ ಕುರಿತು ವಲಸೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು” ಎಂದು ಆಗ್ರಹಿಸುತ್ತಾರೆ.
“ಪ್ರಿಯಾಂಕ್ ಖರ್ಗೆಯವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಕುರಿತೂ ಗಂಭೀರವಾಗಿ ಅವರು ಯೋಚಿಸಬೇಕಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮತ್ತಷ್ಟು ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ” ಎಂದು ಆಶಿಸುತ್ತಾರೆ.
ಕೊನೆಯ ಮಾತು
ಬೆಂಗಳೂರಿನಲ್ಲಿರುವ ಬೆಂಗಾಲಿ ವಲಸೆ ಕಾರ್ಮಿಕರ ಕಥನ- ಬಹಳ ಸಂಕೀರ್ಣವಾದದ್ದು. “ಇಲ್ಲಿ ಬಾಂಗ್ಲಾ ಮಾಫಿಯಾಗಳಿದ್ದಾರೆ ಮತ್ತು ಅವರನ್ನು ಒಂದು ಭ್ರಷ್ಟ ವ್ಯವಸ್ಥೆ ಪೊರೆಯುತ್ತಿದೆ. ಗಾರ್ಬೇಜ್ ಸಾಮ್ರಾಜ್ಯವನ್ನು ಆಳುತ್ತಿರುವ ಬಾಂಗ್ಲಾ ಡಾನ್ಗಳು ಅಲುಗಾಡಿಸದಷ್ಟು ಭದ್ರವಾಗಿದ್ದಾರೆ” ಎಂಬುದು ಸಾಮಾಜಿಕ ಕಾರ್ಯಕರ್ತರ ಬಲವಾದ ಆರೋಪ. “ಇದೆಲ್ಲವೂ ವ್ಯವಸ್ಥೆಗೆ ಗೊತ್ತಿದೆ, ದಕ್ಷ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು- ನಡೆಸಿರುವ ಆಪರೇಷನ್ ಮುಕ್ತ ಕಾರ್ಯಾಚರಣೆಯಿಂದಾಗಿ ಹಲವು ಬಡ ಬಾಂಗ್ಲಾ ವಲಸಿಗರು- ತಮ್ಮ ದೇಶಕ್ಕೆ ವಾಪಸ್ ಮರಳಲು ಅನುಕೂಲವಾಗಿದೆ. ಇಲ್ಲವಾಗಿದ್ದರೆ ಅವರನ್ನು ಕಸ ಮಾಫಿಯಾಗಳು ಮತ್ತಷ್ಟು ಹಿಂಸಿಸುತ್ತಿದ್ದವು” ಎನ್ನುವ ಹೋರಾಟಗಾರರು, “ನಮಗೆ ಬಾಂಗ್ಲಾ ಡಾನ್ಗಳಿಂದ ಜೀವ ಬೆದರಿಕೆಗಳಿವೆ” ಎಂಬುದನ್ನು ಹೇಳಿಕೊಳ್ಳುತ್ತಾರೆ.
ಚಿತ್ರಗಳು: ಮುಸ್ತಫಾ ಖಾದರ್ ನದಾಫ್ ಅಳವಂಡಿ

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




