ಈ ಖಾಪ್ ಪಂಚಾಯತ್ಗಳಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ. ಆದರೂ ಸ್ಥಳೀಯ ಜನಸಮುದಾಯಗಳ ಮೇಲೆ ಪ್ರಭಾವ ಬೀರುತ್ತವೆ. ಇವುಗಳು ಹೊರಡಿಸುವ ಫಾರ್ಮಾನುಗಳನ್ನು ಉಲ್ಲಂಘಿಸಿದರೆ, ಗ್ರಾಮಗಳಿಂದ ಬಹಿಷ್ಕರಿಸಿ, ಅಸಹಕಾರ ತೋರಲಾಗುತ್ತದೆ.
“ಹುಡುಗಿಯರು ತಮ್ಮ ಅಪ್ಪನ ಬೈಕ್ ಹಿಂಬದಿಯಲ್ಲಿ ಕೂತಾಗ ಎರಡು ಕಡೆ ಕಾಲುಗಳನ್ನು ಇಳಿಬಿಟ್ಟುಕೊಳ್ಳುತ್ತಾರೆ, ಮೊಬೈಲ್ ಬಳಸುತ್ತಾರೆ, ಖಾಪ್ಗಳಿಗೆ ಒಪ್ಪಿಗೆಯಾಗದ ಬಟ್ಟೆಗಳನ್ನು ಧರಿಸುತ್ತಾರೆ. ಅಂತಹ ಹುಡುಗಿಯರ ಮೊಬೈಲ್ ಗಳನ್ನು ಕಿತ್ತುಕೊಂಡು ಹೊಡೆದು ಹಾಕಬೇಕು”- ಹೀಗೆ ಅಭಿಪ್ರಾಯ ವ್ಯಕ್ತಪಡಿಸಿ, ತೀವ್ರ ಟೀಕೆಗೆ ಒಳಗಾದವನು ಹರಿಯಾಣದ ಇಕ್ಕಾಸ್ ಗ್ರಾಮದ ನಿವಾಸಿ ವಿರೇಂಧರ್ ಧುಲ್. ಈತ ಇಲ್ಲಿನ ಖಾಪ್ ಪಂಚಾಯತ್ ಸದಸ್ಯನೂ ಹೌದು, ಜಾಟ್ ಹಿರಿಯ ಮಾಧ್ಯಮಿಕ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕನೂ ಹೌದು. ಈತನ ಮಾತುಗಳು ಹರಿಯಾಣದಲ್ಲಿ ಅಸ್ತಿತ್ವದಲ್ಲಿರುವ ಖಾಪ್ ಪಂಚಾಯತ್ಗಳ ನಿಜ ಸ್ವರೂಪವನ್ನು ಅನಾವರಣ ಮಾಡುತ್ತವೆ. ಇದೇ ಕಾರಣಕ್ಕೆ ಜೆನ್ ಝೀ ತಲೆಮಾರು ಖಾಪ್ಗಳ ಮುಖಂಡರನ್ನು ಗೇಲಿ ಮಾಡುತ್ತಿದೆ ಮತ್ತು ಕಟು ಟೀಕೆಗೆ ಒಳಪಡಿಸುತ್ತಿದೆ.
ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಚುನಾಯಿತವಲ್ಲದ ಸಮುದಾಯಿಕ ಮಂಡಲಿ ಅಥವಾ ಕೌನ್ಸಿಲ್ಗಳೇ ಖಾಪ್ ಪಂಚಾಯತ್ಗಳು. ಜಾಟ್ಗಳಂತಹ ಭೂಮಾಲಿಕ ಸಮುದಾಯಗಳಲ್ಲಿನ ಹಿರಿಯ ಗಂಡಸರು ನಡೆಸುವ ಈ ಖಾಪ್ ಪಂಚಾಯತ್ಗಳಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ. ಆದರೂ ಸ್ಥಳೀಯ ಜನಸಮುದಾಯಗಳ ಮೇಲೆ ಪ್ರಭಾವ ಬೀರುತ್ತವೆ. ಇವುಗಳು ಹೊರಡಿಸುವ ಫಾರ್ಮಾನುಗಳನ್ನು ಉಲ್ಲಂಘಿಸಿದರೆ, ಗ್ರಾಮಗಳಿಂದ ಬಹಿಷ್ಕರಿಸಿ, ಅಸಹಕಾರ ತೋರಲಾಗುತ್ತದೆ. ಹರಿಯಾಣ ರಾಜ್ಯಾದ್ಯಂತ ಇಂತಹ 130 ಖಾಪ್ಗಳು ಸಕ್ರಿಯವಾಗಿವೆ ಎನ್ನುತ್ತವೆ ವರದಿಗಳು.
ವೀರೇಂದರ್ ಧುಲ್ನ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಜೆನ್ ಝಿಗಳು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಜಿಂದ್ ಜಿಲ್ಲೆಯ ಇಗ್ರಾ ಗ್ರಾಮದ ಎಂಎ ವಿದ್ಯಾರ್ಥಿನಿ ಅಂಚಲ್ ವ್ಯಂಗ್ಯವಾಡಿರುವುದು ಹೀಗೆ: “ಯುವತಿಯರ ಮೇಲೆ ನಿಷೇಧಗಳನ್ನು ಹೇರುವ ಖಾಪ್ಗಳನ್ನು ಉದ್ದೇಶಿಸಿ, ‘ಜೆನ್ ಝೀ ಪಂಚಾಯತ್’ ನಡೆದರೆ, ನಿಯಮಗಳು ಹೇಗಿರಬಹುದು ಗೊತ್ತೆ? ವಯಸ್ಸಾದ ಗಂಡಸರ್ಯಾರೂ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸುವಂತಿಲ್ಲ. ಇಸ್ಪೀಟ್ ಆಡುವಂತಿಲ್ಲ, ಹುಕ್ಕಾ ಅಥವಾ ಬೀಡಿ ಸೇರುವಂತಿಲ್ಲ, ಸಮಯ ವ್ಯರ್ಥ ಮಾಡುವಂತಿಲ್ಲ. ತಂಬಾಕು ಮಾರಾಟಗಾರರ ಮೇಲೆ ದಂಡ ವಿಧಿಸಲಾಗುತ್ತದೆ. ಹುಡುಗಿಯರಿಂದ ಹಿರಿಯ ಖಾಪ್ಗಳು ವಶಪಡಿಸಿಕೊಂಡ ಅಥವಾ ಹಾನಿಗೊಳಗಾದ ಮೊಬೈಲ್ಗಳನ್ನು ಬದಲಾಯಿಸುವುದಕ್ಕಾಗಿ ಆ ದಂಡದ ಹಣವನ್ನು ಬಳಸಲಾಗುವುದು”.

ಇತ್ತೀಚಿನ ದಿನಗಳಲ್ಲಿ ಹರಿಯಾಣದ ಖಾಪ್ ಪಂಚಾಯತ್ಗಳು ಹಲವಾರು ನಿರ್ಬಂಧಗಳನ್ನು ಜಾರಿಗೆ ತರುತ್ತಿರುವುದು ಸುದ್ದಿಯಾಗಿದೆ. ಅದರಲ್ಲೂ ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುವ ರೀತಿಯ ವಿದ್ಯಮಾನಗಳಾಗಿವೆ. ಸಂಸ್ಕೃತಿ, ಸಮಾಜದ ಸ್ವಾಸ್ಥ್ಯದ ನೆಪದಲ್ಲಿ ನೇರವಾಗಿಯೇ ಮನುಸ್ಮೃತಿಯನ್ನು ಹೇರುವ ಪ್ರವೃತ್ತಿ ಕಂಡು ಬಂದಿದೆ. ಈ ಕುರಿತು ‘ದಿ ಹಿಂದೂ’ ಪತ್ರಿಕೆ ವಿಸ್ತೃತವಾಗಿ ವರದಿ ಮಾಡಿದ್ದು, ಯುವಜನರನ್ನು ಮುಖ್ಯವಾಗಿ ಯುವತಿಯರನ್ನು ಖಾಪ್ಗಳು ಹೇಗೆ ನಿಯಂತ್ರಿಸಲು ಮುಂದಾಗಿವೆ ಎಂಬುದರ ಕುರಿತು ಚರ್ಚಿಸಿದೆ.
ಇದನ್ನೂ ಓದಿರಿ: ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?
“ಸಂಸ್ಕೃತಿ ಮತ್ತು ಸಾಮಾಜಿಕ ವರ್ತನೆಯ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳುತ್ತಾ ಖಾಪ್ ಪಂಚಾಯತ್ಗಳು ಹೇರುತ್ತಿರುವ ಈ ವಿಚಾರಗಳು ಮುಖ್ಯವಾಗಿ ಹುಡುಗಿಯರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿವೆ? ನಿಜಕ್ಕೂ ಸಮಾಜವನ್ನು ರಕ್ಷಿಸಲು ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಲು ಉದ್ದೇಶಿಸಿದ್ದರೆ, ನಿರ್ಬಂಧಗಳು ಪುರುಷರಿಗೂ ಸಮಾನವಾಗಿ ಅನ್ವಯಿಸಬೇಕಲ್ಲವೇ?” ಎಂಬುದು ಜೆನ್ ಝೀ ಯುವತಿ ಅಂಚಲ್ ಅವರ ಪ್ರಶ್ನೆ.
“ಒಂದೇ ಗೋತ್ರದ ನಡುವೆ ವಿವಾಹಗಳು ನಡೆಯುವಂತಿಲ್ಲ, ಲಿವ್ ಇನ್ ಮತ್ತು ಸಲಿಂಗ ಸಂಬಂಧಗಳನ್ನು ಹೊಂದುವಂತಿಲ್ಲ” ಎನ್ನುತ್ತವೆ ಖಾಪ್ಗಳು. ಇದರ ಜೊತೆಗೆ ಮಾದಕ ವ್ಯಸನ, ಆನ್ಲೈನ್ ಬೆಟ್ಟಿಂಗ್ ಮತ್ತು ಅಶ್ಲೀಲ ಸಾಮಾಜಿಕ ಜಾಲತಾಣದ ಕಂಟೆಂಟ್ಗಳ ವಿರುದ್ಧ ಹೋರಾಡುವುದಾಗಿಯೂ ಹೇಳುತ್ತಿವೆ. ಕೆಲವು ನಿರ್ಧಾರಗಳು, ಸಮಾಜಮುಖಿಯೆಂಬಂತೆ ತೋರಿದರೂ ಬಹುತೇಕ ನಿರ್ಧಾರಗಳು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲಾಗಿ ಪರಿಣಮಿಸಿವೆ.
“ಧುಲ್ ನೀಡಿರುವ ಹೇಳಿಕೆಗಳು ಖಾಫ್ ಪಂಚಾಯತ್ಗಳ ಫಾರ್ಮಾನುಗಳಲ್ಲ. ನಾವು ಸಮುದಾಯದ ಯುವಕರಿಗೆ ಮಾರ್ಗದರ್ಶನ ನೀಡುವ ಹಿರಿಯರು. ಸಾಮಾಜಿಕ ಸಾಮರಸ್ಯ ಕಾಪಾಡಿ, ಕುಟುಂಬಗಳನ್ನು ರಕ್ಷಿಸುವುದೇ ನಮ್ಮ ಗುರಿ” ಎನ್ನುವ ಖಾಪ್ಗಳು, ನಿಯಮಗಳನ್ನು ಉಲ್ಲಂಘಿಸುವವರಿಗೆ ಬಹಿಷ್ಕಾರದ ಶಿಕ್ಷೆ ವಿಧಿಸುವುದನ್ನು ನಿಲ್ಲಿಸಿಲ್ಲ. ಯುವತಿಯರನ್ನೇ ಗುರಿಯಾಗಿಸಿಕೊಂಡಿರುವುದಂತೂ ಸುಳ್ಳಲ್ಲ.
ಧುಲ್ ಹೇಳಿಕೆಯನ್ನೂ ಪರೋಕ್ಷವಾಗಿ ಸಮರ್ಥಿಸುವ ಪ್ರಯತ್ನಗಳನ್ನು ಖಾಪ್ ಸದಸ್ಯರು ಮಾಡಿದಂತೆ ತೋರುತ್ತದೆ. “ಧುಲ್ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಯುವತಿಯರು ಮೊಬೈಲ್ ಫೋನ್ ಬಳಸಬಾರದೆಂದು, ಮಹಿಳೆಯರು ಇಂತಹದ್ದೇ ಬಟ್ಟೆಯನ್ನು ಧರಿಸಬೇಕೆಂದು ಖಾಪ್ ಆದೇಶಿಸಿಲ್ಲ. ತಮ್ಮ ಮಕ್ಕಳಿಗೆ ಯಾವುದು ಸೂಕ್ತ ಎಂಬುದನ್ನು ಪೋಷಕರೇ ನಿರ್ಧರಿಸಬೇಕು. ಪೋಷಕರು ಸಹಾಯ ಕೋರಿದರೆ ಮಾತ್ರ ಖಾಪ್ ಮಧ್ಯಪ್ರವೇಶಿಸುತ್ತದೆ” ಎಂಬುದು ನೌಗಮಾ ಖಾಪ್ ಅಧ್ಯಕ್ಷ ಜೈವೀರ್ ಲೋಹನ್ ಅಭಿಪ್ರಾಯ. ಅಂದರೆ ಪೋಷಕರ ಮೇಲೆ ಹಿಂಬದಿಯಿಂದ ಒತ್ತಡ ಹೇರುವ ತಂತ್ರಗಾರಿಕೆಯನ್ನು ಖಾಪ್ ಹೊಂದಿರುವಂತೆ ಕಾಣುತ್ತದೆ.
“ಧುಲ್ ಅವರ ಹೇಳಿಕೆ ವೈಯಕ್ತಿಕವಾದದ್ದು” ಎನ್ನುವ ಲೋಹನ್ ಅವರಲ್ಲಿ, “ನೌಗಮಾ ಖಾಪ್ನಲ್ಲಿ ಇರುವ 42 ಸದಸ್ಯರೆಲ್ಲರೂ ಗಂಡಸರೇ ಏಕೆ” ಎಂದು ಕೇಳಿದರೆ ಉತ್ತರ ಕೊಡುತ್ತಾರೆಯೇ? ಹರಿಯಾಣದಲ್ಲಿ ಇರುವ 130 ಖಾಪ್ ಪಂಚಾಯತ್ಗಳು ಸ್ತ್ರೀ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಮರೆಮಾಚಲಾದೀತೆ?

“ಮಹಿಳೆಯರ ಸ್ವಾತಂತ್ರ್ಯ ನಿಯಂತ್ರಣಕ್ಕೆ ಒಳಪಡುತ್ತಿದೆ. ಯುವತಿಯರು ತಮ್ಮ ಸಂಗಾತಿ ಯಾರೆಂದು ನಿರ್ಧರಿಸುವ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ. ಯಾರೊಂದಿಗೆ ಸಂಬಂಧ ಇಟ್ಟುಕೊಳ್ಳಬೇಕು, ಹೇಗೆ ಬದುಕಬೇಕು ಎಂಬುದನ್ನು ಪದೇ ಪದೇ ಮಹಿಳೆಯರ ಮೇಲೆ ಹೇರಲಾಗುತ್ತಿದೆ” ಎಂಬ ಟೀಕೆಗಳು ಸರ್ವೇ ಸಾಮಾನ್ಯವಾಗಿವೆ.
ಆಗಸ್ಟ್ 9ರಂದು ಜಿಂದ್ನ ಕಂದೇಲಾ ಗ್ರಾಮದಲ್ಲಿ 24 ಖಾಪ್ ಪಂಚಾಯತ್ಗಳು ತೆಗೆದುಕೊಂಡ ಒಂದು ನಿರ್ಧಾರ ವಿವಾದಾಸ್ಪದವಾಗಿದೆ. ಖಾಪ್ ಪಂಚಾಯತ್ಗಳ ವ್ಯಾಪ್ತಿಗೆ ಬರುವ ಒಂದೇ ಗೋತ್ರ (ಕುಲ) ಅಥವಾ ಗುಂಪಿನೊಳಗೆ ವಿವಾಹ ನಿಶಿದ್ಧ ಎಂಬ ನಿರ್ಣಯ ಅಂಗೀಕರಿಸಲಾಯಿತು. ಇವರ ಪ್ರಕಾರ “ಒಂದೇ ವ್ಯಾಪ್ತಿಯಲ್ಲಿನ ಎಲ್ಲರೂ ಒಂದೇ ವಿಸ್ತೃತ ಸಾಮಾಜಿಕ ಕುಟಂಬ.” ಈ ಗಡಿಯಾಚೆಗಷ್ಟೇ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಮುಖ್ಯವಾಗಿ, “ಜಾತಿ ಭೇದಗಳನ್ನು ಮತ್ತು ಕೆಲವು ಸಂದರ್ಭಗಳಲ್ಲಿ ಗೋತ್ರ ಭೇದಗಳನ್ನು ಲೆಕ್ಕಿಸದೆ ಒಂದೇ ಜಾಲದಲ್ಲಿರುವ ಜನರನ್ನು ಅಣ್ಣತಮ್ಮಂದಿರು ಹಾಗೂ ಅಕ್ಕತಂಗಿಯರೆಂದು ಪರಿಗಣಿಸಲಾಗುತ್ತದೆ” ಎನ್ನುತ್ತಾರೆ ಖಾಪ್ ಸದಸ್ಯ ಚಂದರ್ಭಾನ್ ನಂಬರ್ದಾರ್.
24 ಖಾಪ್ ಪಂಚಾಯತ್ಗಳ ವ್ಯಾಪ್ತಿಗೆ ಬರುವ ಜನರು ಈ ನಿಯಮ ಮೀರಿ ನಡೆದರೆ, ಅಂಥವರನ್ನು ಸಮುದಾಯದ ವ್ಯಾಪ್ತಿಗೆ ಒಳಪಡುವ ಪ್ರದೇಶದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸುವ ನಂಬರ್ದಾರ್, “ಖಾಪ್ಗಳಿಗೆ ಯಾವುದೇ ಕಾನೂನು ಅಧಿಕಾರವಿಲ್ಲ” ಎಂದೂ ಒಪ್ಪಿಕೊಳ್ಳುತ್ತಾರೆ.
“ಖಾಪ್ ಪಂಚಾಯತ್ಗಳು ಲವ್ ಮ್ಯಾರೇಜ್ಗಳನ್ನು ವಿರೋಧಿಸುವುದಿಲ್ಲ. ಆದರೆ ಅವು ಪೋಷಕರ ಒಪ್ಪಿಗೆಯೊಂದಿಗೆ ಮತ್ತು ಸ್ವೀಕೃತ ಸಾಮಾಜಿಕ ರೂಢಿಗಳೊಳಗೆ ನಡೆಯಬೇಕು ಎಂದು ಬಯಸುತ್ತದೆ” ಎಂದು ತಿಳಿಸುತ್ತಾರೆ ಜಿಂದ್ನ ಸರ್ವಜಾತಿಯ ಬಿನೈನ್ ಖಾಪ್ ಅಧ್ಯಕ್ಷ ರಘುಬೀರ್ ನೈನ್. ಅವರ ಪ್ರಕಾರ, “ಲಿವ್ ಇನ್ ಮತ್ತು ಸಲಿಂಗ ಸಂಬಂಧ ಎಂಬುದು ‘ಹೊಸ ಕಾಯಿಲೆ'”.
ಜೆನ್ ಝೀ ತಿರುಗೇಟು
“21ನೇ ಶತಮಾನದಲ್ಲಿದ್ದೇವೆ. ಮಹಿಳೆಯರ ಬಟ್ಟೆ, ಓಡಾಟ, ವರ್ತನೆಗಳ ಮೇಲೆ ನಿರ್ಬಂಧ ಹೇರುವುದನ್ನೂ ಈಗಲೂ ಕಾಣುತ್ತಿದ್ದೇವೆ” ಎಂದು ಟೀಕಿಸುತ್ತಾರೆ ಜೆನ್ ಝೀ ಯುವತಿ ಲೀನಾ ಶರ್ಮಾ. ಮುಂದುವರಿದು, “ಮೋಟಾರ್ ಸೈಕಲ್ ಮೇಲೆ ಕಾಲುಗಳನ್ನು ಎರಡು ಕಡೆ ಇಳಿಬಿಟ್ಟುಕೊಂಡು ಕೂರುವುದು ಸುರಕ್ಷತೆಯ ದೃಷ್ಟಿಯಿಂದ. ಮಹಿಳೆಯರಿಗೆ ನಿರ್ಬಂಧ ವಿಧಿಸುವ ಇವರು, ಮದುವೆಗಳಲ್ಲಿ ಡಿಜೆ ಬಳಕೆಯನ್ನು ವಿರೋಧಿಸುವುದಿಲ್ಲ ಏಕೆ? ಇನ್ನೊಬ್ಬರ ವೈಯಕ್ತಿಕ ಆಯ್ಕೆಗಳು ಹೇಗಿರಬೇಕೆಂದು ಹೇಳುವುದಕ್ಕೆ ಇವರು ಯಾರು? ನಗರಗಳು ಬದಲಾದರೂ ಈ ಹಳ್ಳಿಗಳು ಯಥಾಸ್ಥಿತಿಯಲ್ಲಿವೆ” ಎಂದು ವಿಷಾದಿಸುತ್ತಾರೆ.
ಗರಿಮಾ ಎಂಬ ಯುವತಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಖಾಪ್ಗಳನ್ನು ಖಾರವಾಗಿ ಪ್ರಶ್ನಿಸಿದ್ದಾರೆ. “20ಕ್ಕೂ ಹೆಚ್ಚು ಗ್ರಾಮಗಳ ಜನರು ಸೇರಿ ಕೆಲವು ನಿಯಮಗಳನ್ನು ಮಾಡಿದ್ದಾರೆ ಎಂಬುದನ್ನು ನೀವು ಖಂಡಿತವಾಗಿಯೂ ಕೇಳಿಯೇ ಇರುತ್ತೀರಿ. ಉದಾಹರಣೆಗೆ, ಹುಡುಗಿಯರು ಮೊಬೈಲ್ ಫೋನ್ಗಳನ್ನು ಇಟ್ಟುಕೊಳ್ಳುವಂತಿಲ್ಲ, ಜನರು ಲಿವ್-ಇನ್ನಲ್ಲಿ ಇರುವಂತಿಲ್ಲ, ಪ್ರೇಮ ವಿವಾಹಗಳನ್ನು ಮಾಡಿಕೊಳ್ಳುವಂತಿಲ್ಲ, ಅಂತರ್ಜಾತಿ ಮತ್ತು ಅಂತಧರ್ಮೀಯ ವಿವಾಹಗಳಿಗೂ ಅನುಮತಿಯಿಲ್ಲ. ಈ ನಿರ್ಬಂಧಗಳ ಪಟ್ಟಿಗೆ ಅಂತ್ಯವಿಲ್ಲ. ಈ ಖಾಪ್ಗಳ ಪ್ರಕಾರ, ಕೇವಲ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಇವೆಲ್ಲವನ್ನೂ ಮಾಡಲಾಗಿದೆ. ಇದು ಹೊಸದೇನೂ ಅಲ್ಲ, ಸಂಸ್ಕೃತಿಯನ್ನು ಉಳಿಸುವ ಹೆಸರಿನಲ್ಲಿ ಮಹಿಳೆಯರನ್ನು ನಿಯಂತ್ರಿಸುವ ಅಸಲಿ ಉದ್ದೇಶವನ್ನು ಹೊಂದಿರುವ ಇಂತಹ ಸಭೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಮತ್ತೊಂದೆಡೆ, ಹರಿಯಾಣ ಮತ್ತು ರಾಜಸ್ಥಾನವು ಅತ್ಯಧಿಕ ನಿರುದ್ಯೋಗ ಅನುಪಾತವನ್ನು ಎದುರಿಸುತ್ತಿವೆ. ಅತ್ಯಂತ ಕೆಟ್ಟ ಲಿಂಗಾನುಪಾತ ಹೊಂದಿವೆ. ಅತ್ಯಂತ ಕಡಿಮೆ ಮಹಿಳಾ ಸುರಕ್ಷತೆಯನ್ನು ಹೊಂದಿವೆ. ಇದರ ನಡುವೆ ಹರಿಯಾಣದ ಯುವಕರು ಡ್ರಗ್ಸ್ ಸೇವಿಸುತ್ತಿದ್ದಾರೆ. ಸಕ್ರಿಯವಾಗಿ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ನಿರುದ್ಯೋಗಿಗಳಾಗಿದ್ದಾರೆ, ಆದರೆ ಅವರ ಅಭಿವೃದ್ಧಿಗಾಗಿ ಯಾವುದೇ ಪಂಚಾಯತ್ ನಡೆಯುವುದಿಲ್ಲ. ಅವರಿಗಾಗಿ ಯಾವುದೇ ನಿಷೇಧ ವಿಧಿಸಲಾಗುವುದಿಲ್ಲ ಮತ್ತು ಅವರಿಗಾಗಿ ಯಾವುದೇ ನಿಯಮಗಳನ್ನು ರೂಪಿಸಲಾಗುವುದಿಲ್ಲ. ಫಲಿತಾಂಶವು ನಿಮ್ಮ ಮುಂದಿದೆ. ಯಾವುದೇ ರಾಜ್ಯದಲ್ಲಿ ಮಹಿಳೆಯರನ್ನು ದಮನ ಮಾಡಿದರೆ, ಮಹಿಳೆಯರ ಕೊಡುಗೆಯು ಅತ್ಯಲ್ಪವಾಗಿದ್ದರೆ, ಆ ರಾಜ್ಯವು ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೆಣ್ಣುಮಕ್ಕಳು ಶೇ. 50ರಷ್ಟಿದ್ದಾರೆ. ಅವರು ಕೊಡುಗೆ ನೀಡದಿದ್ದರೆ, ಶೇ.50ರಷ್ಟು ಅಭಿವೃದ್ಧಿಯು ತಂತಾನೇ ಕುಸಿತ ಕಾಣುತ್ತದೆ” ಎಂದು ಎಚ್ಚರಿಸುತ್ತಾರೆ ಗರಿಮಾ.
ಇದನ್ನೂ ಓದಿರಿ: ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?
ಯುವತಿಯರ ಜೊತೆಗೆ ಜೆನ್ ಝೀ ಯುವಕರು ದನಿಗೂಡಿಸಿದ್ದಾರೆ. ಜಿಂದ್ನ ವಿಶ್ವವಿದ್ಯಾಲಯವೊಂದರಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಮಾನ್ ಕಶ್ಯಪ್, “ಸಂವಿಧಾನವು ಹುಡುಗಿಯರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಹೀಗಿರುವಾಗ ಈ ಪಂಚಾಯತ್ಗಳು ಯುವತಿಯರ ಮೊಬೈಲ್ ಕಸಿಯಲು ಸಾಧ್ಯವೇ? ಯುವತಿಯರು ಓಡಾಡುವಂತಿಲ್ಲ ಎಂದು ನಿರ್ಬಂಧಿಸಬಹುದೇ? ಈ ಫರ್ಮಾನುಗಳು ಕಾನೂನುಬಾಹಿರವಾಗಿವೆ. ಅಭಿವ್ಯಕ್ತಿ, ಗೌಪ್ಯತೆಯ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ” ಎನ್ನುತ್ತಾರೆ.
ಕಾನೂನು ಬದಲಿಸಲು ಆಗ್ರಹ
“ನಮ್ಮ ಸಾಮಾಜಿಕ ಸಂಪ್ರದಾಯಗಳಿಗೆ ವಿರುದ್ಧವಾಗಿ ಕಾನೂನುಗಳಿವೆ” ಎಂಬುದು ಖಾಪ್ ಪಂಚಾಯತ್ಗಳ ಅಭಿಪ್ರಾಯ. ಕಾನೂನುಗಳಿಗೆ ತಿದ್ದುಪಡಿಗಳನ್ನು ತರಬೇಕೆಂದು ಹಲವು ವರ್ಷಗಳಿಂದ ಖಾಪ್ ನಾಯಕರು ಪ್ರಯತ್ನಿಸುತ್ತಿರುವುದನ್ನೂ ಕಾಣಬಹುದು. ಎರಡೂವರೆ ವರ್ಷಗಳ ಹಿಂದೆ ಒಂದು ನಿಯೋಗವು ಅಂದಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿತ್ತು. ನಂತರ 2025ರ ಜನವರಿಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕೆಲವರು ಭೇಟಿ ಮಾಡಿದ್ದರು. “ಒಂದೇ ಗೋತ್ರ ಮತ್ತು ಒಂದೇ ಗ್ರಾಮದ ವಿವಾಹಗಳ ಮೇಲಿನ ನಿರ್ಬಂಧಗಳನ್ನು ತರುವುದಕ್ಕಾಗಿ, ಲಿವ್-ಇನ್ ಹಾಗೂ ಸಲಿಂಗ ಸಂಬಂಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕಾಗಿ” ಬೇಡಿಕೆಗಳನ್ನು ಇಡುತ್ತಲೇ ಬರಲಾಗಿದೆ. “ಹೆಣ್ಣುಮಕ್ಕಳ ಮದುವೆಯ ವಯೋಮಿತಿಯನ್ನು ಕಡಿಮೆ ಮಾಡಬೇಕು. ಅದನ್ನು 18ರಿಂದ 16ನೇ ವರ್ಷಕ್ಕೆ ಇಳಿಸಬೇಕು ಎಂಬುದು” ಖಾಪ್ಗಳ ಮತ್ತೊಂದು ಪ್ರಮುಖ ಆಗ್ರಹ.
ಮಾದಕ ವ್ಯಸನ, ಆನ್ಲೈನ್ ಬೆಟ್ಟಿಂಗ್, ಅಶ್ಲೀಲ ಸಾಮಾಜಿಕ ಜಾಲತಾಣದ ಕಂಟೆಂಟ್ ಮತ್ತು ಆನ್ಲೈನ್ನಲ್ಲಿ ಬಂದೂಕುಗಳ ವೈಭವೀಕರಣದ ವಿರುದ್ಧ ಖಾಪ್ಗಳು ತೆಗೆದುಕೊಂಡಿರುವ ನಿರ್ಧಾರಗಳನ್ನು ಮುಕ್ತವಾಗಿ ನೋಡಿದರೂ ಅವರ ಪ್ರಮುಖ ಆದ್ಯತೆ ಸ್ತ್ರೀಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದೇ ಆಗಿದೆ. ಪ್ರಸ್ತುತ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಹರಿಯಾಣ ರಾಜ್ಯದ ಲಿಂಗಾನುಪಾತ ಕುಸಿದಿದೆ. ‘ಪ್ರತಿ 1,000 ಗಂಡು ಮಕ್ಕಳಿಗೆ 898 ಹೆಣ್ಣು ಮಕ್ಕಳು’ ಇದ್ದಾರೆ. ಅಂದರೆ ಹೆಣ್ಣುಭ್ರೂಣ ಹತ್ಯೆಯ ಪ್ರಮಾಣ ದೊಡ್ಡ ಪ್ರಮಾಣದಲ್ಲಿರುವುದು ಕಂಡುಬರುತ್ತದೆ. ಮುದುಕರ ಖಾಪ್ ಪಂಚಾಯತ್ಗಳು ಮತ್ತಷ್ಟು ಲಿಂಗ ಅಸಮಾನತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಸಾಗುತ್ತಿವೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



