- ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ
- ಜು.7ರೊಳಗೆ ವರದಿ ಸಲ್ಲಿಸುವಂತೆ ಬೇಲೂರು ಠಾಣಾಧಿಕಾರಿಗೆ ನಿರ್ದೇಶನ
ಭೂ ಮಂಜೂರಾತಿ ವೇಳೆ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಎಸ್ ಲಿಂಗೇಶ್ ಮೇಲೆ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ.
ಬೇಲೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ 2,750 ಎಕರೆ 86 ಗುಂಟೆ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಬಲಾಢ್ಯರಿಗೆ, ಅನರ್ಹರಿಗೆ, ಅಪ್ರಾಪ್ತರಿಗೆ ಹಾಗೂ ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರದ ಗಾಂಧಿ ನಗರ ನಿವಾಸಿ ಕೆ ಸಿ ರಾಜಣ್ಣ ಎಂಬುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಾಸಕ ಕೆ ಎಸ್ ಲಿಂಗೇಶ್ ಹಾಗೂ ಇತರೆ 15 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಖಾಸಗಿ ದೂರು ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? : ದಹಿ ವಿವಾದ | ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವ ʼಭಂಡ ಬಾಳುʼ ಬಿಜೆಪಿಗೆ ಮಾತ್ರ ಸಾಧ್ಯ: ಕಾಂಗ್ರೆಸ್ ಕಿಡಿ
ರಾಜ್ಯದ ಶಾಸಕರು ಹಾಗೂ ಸಂಸದರ ವಿರುದ್ಧ ನಡೆಯುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುವ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ನ್ಯಾಯಾಧೀಶೆ ಜೆ ಪ್ರೀತ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಕೋಲಾರದ ವ್ಯಕ್ತಿಯ ಆರೋಪದ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಶಾಸಕರ ಮೇಲೆ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 156 (3)ರ ಅಡಿಯಲ್ಲಿ ತನಿಖೆ ನಡೆಸಿ, ಎಲ್ಲ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 468, 465, 464, 420, 471, 120 ಬಿ ಹಾಗೂ 409ರ ಅನ್ವಯ ಕಾನೂನು ಕ್ರಮ ಜರುಗಿಸಿ, ಇದೇ ವರ್ಷದ ಜುಲೈ 7ರ ಒಳಗೆ ವರದಿ ಸಲ್ಲಿಸುವಂತೆ ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.