ಸಚಿವ ಸ್ಥಾನ ತಲೆದಂಡದಿಂದ ತಪ್ಪಿಸಿಕೊಳ್ಳಲು ಮೂವರು ಡಿಸಿಎಂ ವಿಚಾರ ಪ್ರಸ್ತಾಪಿಸಿದ್ರಾ ಕೆ ಎನ್‌ ರಾಜಣ್ಣ?

Date:

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆಯುವದರೊಳಗೆ ಮತ್ತೆ ಮೂವರು ಡಿಸಿಎಂ ವಿಚಾರ ಮುನ್ನೆಲೆಗೆ ಬಂದಿದೆ. ಸಚಿವ ಕೆ.ಎನ್‌. ರಾಜಣ್ಣ ಮಾಡಿರುವ ಈ ಪ್ರಸ್ತಾಪದ ಹಿಂದಿರುವ ಮರ್ಮವೇನು? ಇಲ್ಲಿದೆ ಓದಿ…

ಸದಾ ವಿವಾದ ಉಂಟಾಗುವಂತಹ ಹೇಳಿಕೆಗಳನ್ನು ನೀಡುವುದನ್ನೇ ತಮ್ಮ ರಾಜಕೀಯ ಶೈಲಿ ಮಾಡಿಕೊಂಡಂತೆ ಕಾಣುವ ಸಹಕಾರ ಸಚಿವ ಮತ್ತು ತುಮಕೂರು ಉಸ್ತುವಾರಿ ಕೆ‌ ಎನ್ ರಾಜಣ್ಣ ಈಗ ಮತ್ತೆ ತಮ್ಮ ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ.

“ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ರಾಜ್ಯದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕು. ಆಗ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ” ಎಂದು ಜೂ.11ರಂದು ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇವರ ಮಾತು ಈಗ ವಿವಾದಕ್ಕೆ ದಾರಿ ಮಾಡಿಕೊಡುತ್ತಿದೆ.

ಮೂವರು ಡಿಸಿಎಂ ಕುರಿತ ಕೆ‌ ಎನ್ ರಾಜಣ್ಣರ ಹೇಳಿಕೆ ಏನು ಹೊಸದಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಇದೇ ತರಹ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಜನವರಿ 5ರಂದು ಡಿಸಿಎಂ ವಿಚಾರ ಪ್ರಸ್ತಾಪಿಸಿದ್ದ ಕೆ ಎನ್‌ ರಾಜಣ್ಣ, “ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವುದು ಸೂಕ್ತ” ಎಂದು ಹೇಳಿಕೆ ನೀಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆ ವೇಳೆ ಕೆ ಎನ್‌ ರಾಜಣ್ಣ ಅವರ ಹೇಳಿಕೆಯನ್ನು ಗೃಹ ಸಚವ ಡಾ.ಜಿ. ಪರಮೇಶ್ವರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಮರ್ಥಿಸಿಕೊಂಡು ಕೆಲವು ದಿನಗಳ ಕಾಲ ಮೂವರು ಡಿಸಿಎಂ ವಿಚಾರ ಜೀವಂತವಾಗಿಟ್ಟಿದ್ದರು. ಇವರೆಲ್ಲರೂ ಒಂದು ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್‌ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು. ಆಗ ಸಹಜವಾಗಿಯೇ ಮೂವರು ಡಿಸಿಎಂ ವಿಚಾರ ಡಿ ಕೆ ಶಿವಕುಮಾರ್‌ ಅವರ ಕಣ್ಣನ್ನು ಕೆಂಪಾಗಿಸಿತ್ತು. ಪ್ರತಿಪಕ್ಷಗಳಿಗೆ ಟೀಕಿಸಲು ಒಂದು ವಿಷಯವಾಗಿತ್ತು.

ಎದುರಾಳಿಗಳನ್ನು ಸದಾ ಮಾರ್ಮಿಕ ಮಾತುಗಳಿಂದ ಚುಚ್ಚುತ್ತ, ವ್ಯಂಗ್ಯ ಮಾಡುತ್ತ, ಕೊನೆಗೆ ತಾನೂ ಕೂಡ ಅಂಥದ್ದೇ ವ್ಯಂಗ್ಯಕ್ಕೆ ಗುರಿಯಾಗುವ ಚಾಳಿಯನ್ನು ಕೆ ಎನ್‌ ರಾಜಣ್ಣ ಮತ್ತೆ ಮುಂದುವರಿಸಿದಂತೆ ಕಾಣುತ್ತಿದೆ. 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆಯುವದರೊಳಗೆ ಮತ್ತೆ ಮೂವರು ಡಿಸಿಎಂ ವಿಚಾರ ಪ್ರಸ್ತಾಪವನ್ನು ಕೆ ಎನ್‌ ರಾಜಣ್ಣ ಮಾಡಿರುವುದು ಬಾಯಿಚಪಲಕ್ಕಂತೂ ಅಲ್ಲ ಎಂಬುದು ರಾಜಕೀಯ ಬಲ್ಲವರಿಗೆ ತಿಳಿದ ಸಂಗತಿ.

ಸಚಿವ ಸತೀಶ್‌ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‌ ಕೆಲವು ಕ್ಷೇತ್ರದಲ್ಲಿ ಸೋಲಲು ನಿರ್ಮಾಪಕ, ನಿರ್ದೇಶಕರ ಪಾತ್ರ ಇದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್‌ಗೆ ಕುಟುಕಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಾಜಣ್ಣ ಕೂಡ ಪರೋಕ್ಷವಾಗಿ ಶಿವಕುಮಾರ್‌ ಉದ್ದೇಶಿಸಿಯೇ ಮೂವರು ಡಿಸಿಎಂ ವಿಚಾರ ಪ್ರಸ್ತಾಪಿಸಿರುವ ಸಾಧ್ಯತೆ ಹೆಚ್ಚಿದೆ.

ಕೆ ಎನ್‌ ರಾಜಣ್ಣ ಮೂವರು ಡಿಸಿಎಂ ವಿಚಾರ ಪ್ರಸ್ತಾಪಿಸಲು ಇನ್ನೂ ಒಂದು ಕಾರಣ ಇರಬಹುದು. ಅದು ಲೋಕಸಭೆ ಚುನಾವಣೆಗೂ ಮುನ್ನ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಹಿರಂಗವಾಗಿ ನೀಡಿದ್ದ ಹೇಳಿಕೆ ರಾಜಣ್ಣ ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿರಬಹುದು.

“ತುಮಕೂರು ಲೋಕಸಭಾ ಕ್ಷೇತ್ರದಿಂದ ಎಸ್ ಪಿ ಮುದ್ದಹನುಮೇಗೌಡ ಸ್ಪರ್ಧಿಸುವುದು ಖಚಿತ. ಅಭ್ಯರ್ಥಿ ಆಗುವುದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ ಮಾಡುವುದಾದರೆ ಮಾಡಲಿ. ಯಾರು ಗೆಲ್ಲಿಸುವುದಿಲ್ಲ ಅವರ ತಲೆದಂಡವಾಗುತ್ತದೆ. ಗೆಲ್ಲಿಸದೇ ಇದ್ದರೆ ನನ್ನದೂ ತಲೆದಂಡವಾಗಲಿ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ” ಎಂದು ರಾಜಣ್ಣ ಹೇಳಿದ್ದರು. ಈಗ ತುಮಕೂರು ಫಲಿತಾಂಶ ಬಂದಾಗಿದೆ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕಾಂಗ್ರೆಸ್‌ನ ಮುದ್ದಹನುಮೇಗೌಡರನ್ನು ಸೋಲಿಸಿ ಸಂಸತ್‌ ಪ್ರವೇಶಿಸಿದ್ದಾರೆ. ಹೀಗಾಗಿ ತಮ್ಮ ಸಚಿವ ಸ್ಥಾನದ ತಲೆದಂಡದಿಂದ ತಪ್ಪಿಸಿಕೊಳ್ಳಲು ಮೂವರು ಡಿಸಿಎಂ ವಿಚಾರವನ್ನು ಕೆ ಎನ್‌ ರಾಜಣ್ಣ ಪ್ರಸ್ತಾಪಿಸಿದ್ರಾ ಎನ್ನುವುದು ಈಗ ಪ್ರಶ್ನೆ.

ಅಲ್ಲದೇ ನಿಗಮ, ಮಂಡಳಿ ನೇಮಕ ವಿಚಾರದಲ್ಲೂ ಕೂಡ ರಾಜಣ್ಣ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ತೀವ್ರ ಆಕ್ರೋಶ ಹೊರ ಹಾಕಿ ಸುದ್ದಿಯಾಗಿದ್ದರು. ಆ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕೆ ಎನ್ ರಾಜಣ್ಣ, “ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. ಈ ಹೇಳಿಕೆ ಕೂಡ ರಾಜಣ್ಣರ ಸಚಿವ ಸ್ಥಾನಕ್ಕೆ ಕುತ್ತು ತಂದಿರಬಹುದು.

ಸಹೋದರ ಡಿ ಕೆ ಸುರೇಶ್‌ ಅವರನ್ನು ಗೆಲ್ಲಿಸಿಕೊಂಡು ಬರಲು ಡಿ ಕೆ ಶಿವಕುಮಾರ್‌ ಹೆಚ್ಚು ಸಮಯವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹಾಕಿದ್ದು ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಡಿ ಕೆ ಶಿವಕುಮಾರ್‌ ಬಣದ ಅಭ್ಯರ್ಥಿಗಳೇ ಹೆಚ್ಚು ಸೋತಿರುವುದು ಪಕ್ಷದ ಪಡಸಾಲೆಯಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ ಕೆ ಶಿವಕುಮಾರ್‌ ಅವರನ್ನು ಕಟ್ಟಿಹಾಕಲು ಮೂವರು ಡಿಸಿಎಂ ಹುದ್ದೆಯ ಹೊಸ ಆಟಕ್ಕೆ ರಾಜಣ್ಣ ಮುನ್ನುಡಿ ಬರೆದಿರಲೂಬಹುದು. ಇದರಲ್ಲಿ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ತಂತ್ರಗಾರಿಕೆಯೂ ಇರಬಹುದು.

ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ ಎನ್‌ ರಾಜಣ್ಣ ಅವರ ಮೂವರು ಡಿಸಿಎಂ ವಿಚಾರ ಪ್ರಸ್ತಾಪ ಇನ್ನು ಯಾವ ಸ್ವರೂಪ ಪಡೆಯುತ್ತೆ? ಡಿ ಕೆ ಶಿವಕುಮಾರ್‌ ವಿರೋಧಿ ಬಣದವರು ಹೇಗೆಲ್ಲಾ ರಿಯಾಕ್ಟ್‌ ಮಾಡ್ತಾರೆ? ಹೈ ಕಮಾಂಡ್‌ ಹೇಗೆ ನೋಡುತ್ತೆ? ಡಿ ಕೆ ಶಿವಕುಮಾರ್‌ ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎಂಬುದು ಅಷ್ಟೇ ಕುತೂಹಲ ಮೂಡಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ಎರಡು ದಿನ ರಾಜ್ಯದ ಹಲವೆಡೆ ಭಾರೀ ಮಳೆ; ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯದ ಹಲವೆಡೆ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುತ್ತಿದ್ದು ಮುಂದಿನ ಎರಡು ದಿನಗಳ...

ಈ ದಿನ.ಕಾಮ್ ವರದಿ ಫಲಶೃತಿ | ಕೊನೆಗೂ ಶತಾಯುಷಿ ಅಜ್ಜಿಯ ಖಾತೆಗೆ ಜಮೆಯಾಯ್ತು ವೃದ್ದಾಪ್ಯ ವೇತನ

ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ಮಹಾಪುರೆ ಎಂಬ 110 ವರ್ಷದ...

ಬಾಲ್ಯವಿವಾಹ | ಕರ್ನಾಟಕಕ್ಕೆ 2ನೇ ಸ್ಥಾನ: ನಾಚಿಕೆಗೇಡಿನ ಸಂಗತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ಅತಿ ಹೆಚ್ಚು...

ಉತ್ತರ ಪ್ರದೇಶ | 2027ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುತ್ತದೆ: ಬಿಜೆಪಿ ಶಾಸಕನ ವಿಡಿಯೋ ವೈರಲ್

"2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಸೋಲು ಕಾಣಲಿದೆ,...