ಚುನಾವಣೆ ವಿಶೇಷ | ಸಂಧ್ಯಾಕಾಲದಲ್ಲಿ ಸಂದಿಗ್ಧಕ್ಕೆ ಸಿಲುಕಿರುವ ಯಡಿಯೂರಪ್ಪ

Date:

ಒಂದು ಕಡೆ ವರುಣಾದಿಂದ ಸ್ಪರ್ಧಿಸುತ್ತಾರೆಂಬ ವದಂತಿಗೆ ಗಾಳಿ, ಮತ್ತೊಂದೆಡೆ ಶಿಕಾರಿಪುರದಲ್ಲಿ ಸೋಲಿಸಲು ಷಡ್ಯಂತ್ರ. ಇವರೆಡನ್ನೂ ಮಾಡುತ್ತಿರುವವರು ಬಿಜೆಪಿಗರೆ. ಅದು ಯಡಿಯೂರಪ್ಪನವರಿಗೆ ಗೊತ್ತಿದೆ. ಆದರೆ ಬಾಯ್ಬಿಟ್ಟು ಹೇಳುವಂತಿಲ್ಲ. ಸುಮ್ಮನಿದ್ದು ಸಹಿಸಲೂ ಸಾಧ್ಯವಾಗುತ್ತಿಲ್ಲ.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ಈಗ 80 ವರ್ಷ. ಈ ವಯಸ್ಸಿನ ಕಾರಣವನ್ನೇ ಮುಂದೆ ಮಾಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಕೆಳಗಿಳಿಸಿತ್ತು. ಈಗ ಅದೇ ಬಿಜೆಪಿ ‘ಯಡಿಯೂರಪ್ಪನವರು ಗಟ್ಟಿಮುಟ್ಟಾಗಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಾದ್ಯಂತ ಸುತ್ತಾಡಲಿದ್ದಾರೆ’ ಎಂದು ಹೇಳುತ್ತಿದೆ. ಹೇಳುವುದಷ್ಟೇ ಅಲ್ಲ, ಅವರನ್ನೇ ಸಾರಥಿಯನ್ನಾಗಿ ಮಾಡಿಕೊಂಡಿದೆ.

ಬಿಜೆಪಿಗೆ ಅಂದು ಬೇಡವಾಗಿದ್ದ ನಾಯಕ ಇಂದು ಬೇಕಾಗಿದ್ದಾರೆ. ಅಂದು ಫೈಲ್‌ಗಳನ್ನು ಮುಂದಿಟ್ಟು ಅಧಿಕಾರದ ಕುರ್ಚಿಯಿಂದ ಕೆಳಗಿಳಿಸಿ ಅವಮಾನಿಸಿದ್ದವರೇ ಇಂದು ಹಾಡಿ ಹೊಗಳುತ್ತಿದ್ದಾರೆ. ಏಕೆಂದರೆ, ಚುನಾವಣೆ ಎದುರಾಗಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಬೇಕಿದೆ. ರಾಜ್ಯದ ಬಹುಸಂಖ್ಯಾತರಾದ ಲಿಂಗಾಯತ ಸಮುದಾಯದ ಮತಗಳನ್ನು ತರುವ ನಾಯಕ ಬೇಕಾಗಿದೆ. ಅದಕ್ಕಾಗಿ ಯಡಿಯೂರಪ್ಪನವರನ್ನು ಬಿಜೆಪಿ ಓಲೈಸುತ್ತಿದೆ. ಮಗನಿಗೆ ಟಿಕೆಟ್ ಕೊಡುವ ನೆಪದಲ್ಲಿ ಚುನಾವಣೆಯಲ್ಲಿ ಓಡಾಡಿ, ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಬ್ಲಾಕ್ ಮೇಲ್ ಮಾಡುತ್ತಿದೆ. ಆದರೆ, ಒಳಗೊಳಗೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಯಾವುದೇ ಕಾರಣಕ್ಕೂ ಮತ್ತೆ ವಿಧಾನಸೌಧದ ಮೆಟ್ಟಿಲು ಹತ್ತಬಾರದು ಎಂದು ಷಡ್ಯಂತ್ರವನ್ನೂ ಹೆಣೆಯುತ್ತಿದೆ.

ಯಡಿಯೂರಪ್ಪನವರು ಒಡಲಾಳದ ತಳಮಳವನ್ನು ತಹಬಂದಿಗೆ ತಂದುಕೊಂಡು, ಚುನಾವಣಾ ಸಭೆಗಳಲ್ಲಿ, ಮೆರವಣಿಗೆಗಳಲ್ಲಿ, ಯಾತ್ರೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿಜಯದ ನಗೆಯನ್ನು ಬಲವಂತವಾಗಿ ಮುಖದ ಮೇಲೆ ತಂದುಕೊಂಡು ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕಾರಣ, ಪುತ್ರ ವಿಜಯೇಂದ್ರರ ರಾಜಕೀಯ ಭವಿಷ್ಯ. ತಾವಿರುವಾಗಲೇ ಆತನಿಗೊಂದು ಕ್ಷೇತ್ರವನ್ನು ನಿಕ್ಕಿ ಮಾಡಿ, ಗೆಲ್ಲಿಸಿ ಶಾಸಕನನ್ನಾಗಿ ಮಾಡಿ ವಿಧಾನಸೌಧಕ್ಕೆ ಕಳಿಸಬೇಕೆಂಬ ಆಸೆ. ಆದರೆ ಅವರ ಆಸೆಗೆ ಬೇರೆ ಪಕ್ಷಗಳಲ್ಲ ಬಿಜೆಪಿಯೊಳಗಿದ್ದೇ ಕಲ್ಲುಹಾಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರೊಂದಿಗೆ ಕೆಲ ಪತ್ರಕರ್ತರೂ ಕೈಜೋಡಿಸಿದ್ದಾರೆ. ಆ ಪತ್ರಕರ್ತರು ದಿನಕ್ಕೊಂದು ಸುದ್ದಿ ತೇಲಿ ಬಿಡುತ್ತಿದ್ದಾರೆ.

ಮೊನ್ನೆ ಶುಕ್ರವಾರ ಮೈಸೂರಿನಲ್ಲಿ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. ಅದನ್ನು ಒಂದೊಂದು ಸುದ್ದಿ ಸಂಸ್ಥೆ ಒಂದೊಂದು ರೀತಿಯಲ್ಲಿ ತಿರುಚಿ ಪ್ರಸಾರ ಮಾಡಿತು. ಆ ಸುದ್ದಿ ಮತ್ತೆ ಇನ್ನಾವ ಗೊಂದಲ ಸೃಷ್ಟಿ ಮಾಡುತ್ತದೋ ಎಂದು ಭಯಕ್ಕೆ ಬಿದ್ದ ಯಡಿಯೂರಪ್ಪನವರು, ವಿಜಯೇಂದ್ರ ಸ್ಪರ್ಧೆ ಶಿಕಾರಿಪುರ. ಬೇರೆ ಕಡೆ ಇಲ್ಲ’ ಎಂದು ಸ್ಪಷ್ಟಪಡಿಸಬೇಕಾಯಿತು. ಅವರೇ ಖುದ್ದು ನಿಂತು ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಿಕೊಟ್ಟಿದ್ದೂ ಆಯಿತು. ಮೈಸೂರಿನ ವರುಣಾದಲ್ಲಿ ವಿಜಯೇಂದ್ರರ ಸ್ಪರ್ಧೆ ಏಕೆ ಬೇಡವೆಂದರೆ, ಅಲ್ಲಿಂದ ಕಾಂಗ್ರೆಸ್ಸಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವೆ ರಾಜಕಾರಣಕ್ಕೂ ಮೀರಿದ ಸ್ನೇಹವಿದೆ. ಆ ಕಾರಣಕ್ಕಾಗಿ ವಿಜಯೇಂದ್ರ ಅಲ್ಲಿ ನಿಲ್ಲುವುದು ಯಡಿಯೂರಪ್ಪನವರಿಗೆ ಇಷ್ಟವಿಲ್ಲ. ಮತ್ತೊಂದು ಕಾರಣವೆಂದರೆ, ಸಿದ್ದರಾಮಯ್ಯನವರಿಗೆ ಈ ಬಾರಿ ಜನಾಶೀರ್ವಾದವಿರುವುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಅಂತಹ ಕ್ಷೇತ್ರದಲ್ಲಿ ಮೊದಲ ಬಾರಿಗೆ ನಿಂತು ಸೋತರೆ, ಭವಿಷ್ಯದ ರಾಜಕಾರಣಕ್ಕೆ ಕತ್ತಲಾವರಿಸುತ್ತದೆ. ಹಾಗೆಯೇ ಇತ್ತ ಕಡೆ, ಅಪ್ಪ ಕಟ್ಟಿರುವ ಶಿಕಾರಿಪುರವೆಂಬ ಕೋಟೆಯೂ ಮತ್ತೊಬ್ಬರ ಕೈವಶವಾಗುತ್ತದೆ.

ಈ ಎಲ್ಲ ಕಾರಣಗಳಿಂದ ಯಡಿಯೂರಪ್ಪನವರು ಕಷ್ಟಪಟ್ಟು ಬಿಜೆಪಿ ಹೈಕಮಾಂಡಿಗೆ ಒಪ್ಪಿಸಿ, ವಿಜಯೇಂದ್ರರಿಗೆ ಶಿಕಾರಿಪುರದಿಂದ ಟಿಕೆಟ್ ಕೊಡಿಸಲು ಹೆಣಗಾಡುತ್ತಿದ್ದಾರೆ. ಈ ಘಟನೆಯಾದ ಕೆಲ ದಿನಗಳ ಹಿಂದೆ, ಮಾ. 27ರಂದು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆಗಿಳಿದರು. ಮುಂದುವರೆದು ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಿ, ಕಲ್ಲು ತೂರಿ ಗಾಜು ಒಡೆದು ದಾಂಧಲೆ ಎಬ್ಬಿಸಿದರು. ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿಯೊಬ್ಬರ ಮನೆ ಮೇಲೆ ಕಲ್ಲು ತೂರಿದ ಘಟನೆ ಘಟಿಸಿತು. ಪೊಲೀಸರ ಲಾಠಿಗಳು ಮಾತನಾಡಿದವು, ಕೆಲವು ದುಷ್ಕರ್ಮಿಗಳ ಬಂಧನವೂ ನಡೆಯಿತು. ಆಶ್ಚರ್ಯಕರ ಸಂಗತಿ ಎಂದರೆ, ಬಂಜಾರ ಸಮುದಾಯದವರು ರಾಜ್ಯದ ಹಲವು ಪ್ರದೇಶಗಳಲ್ಲಿದ್ದಾರೆ. ಅಲ್ಲಿ ಎಲ್ಲಿಯೂ ಪ್ರತಿಭಟನೆ, ದಾಂಧಲೆ ನಡೆಯದೇ, ಶಿಕಾರಿಪುರದಲ್ಲಿ ಮಾತ್ರ ಏಕೆ ನಡೆಯಿತು? ಅದರ ಹಿಂದಿರುವ ಕೈವಾಡ ಯಾರದು? ಯಾತಕ್ಕಾಗಿ ಇದನ್ನು ಮಾಡಿದರು? ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದ ಯಡಿಯೂರಪ್ಪನವರು, ಆ ತಕ್ಷಣವೇ ಏದುಸಿರು ಬಿಡುತ್ತ ಓಡಿಬಂದು,’ಬಂಜಾರ ಸಮುದಾಯ ನಮ್ಮ ಜೊತೆ ಇದೆ. ಅವರೊಂದಿಗೆ ಕೂತು ನಾನು ಮಾತನಾಡುತ್ತೇನೆ. ಅವರೆಲ್ಲ ನಮ್ಮವರೆ, ಅವರ ಮೇಲೆ ಯಾವ ಕೇಸುಗಳನ್ನೂ ದಾಖಲಿಸಬಾರದು’ ಎಂದು ಹೇಳಿದರು. ಹಾಗೆ ಹೇಳುವ ಮೂಲಕ ಮನೆ ಮೇಲೆ ನಡೆದ ದಾಳಿಯ ನೋವನ್ನು ನುಂಗಿಕೊಂಡರು. ಅದಕ್ಕೆ ಕಾರಣ, ಶಿಕಾರಿಪುರ ಕ್ಷೇತ್ರದಲ್ಲಿ ಸಾದರು, ಸಾಬರು ಮತ್ತು ಬಂಜಾರ ಸಮುದಾಯದವರು ಯಡಿಯೂರಪ್ಪನವರನ್ನು ನಿರಂತರವಾಗಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುತ್ತಲೇ ಬಂದಿದ್ದಾರೆ. ಅಕಸ್ಮಾತ್, ಘಟನೆಗೆ ಬೇಸತ್ತು ಬಂಜಾರ ಸಮುದಾಯದವರ ಮೇಲೆ ಕ್ರಮ ಕೈಗೊಂಡಿದ್ದೇ ಆದರೆ, 20 ಸಾವಿರ ಜನಸಂಖ್ಯೆಯಿರುವ ಬಂಜಾರ ಸಮುದಾಯ ಉಲ್ಟಾ ಹೊಡೆಯುತ್ತದೆ. ಕಾಂಗ್ರೆಸ್‌ನವರೂ ಸಾದರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಸಾದರ-ಸಾಬರ ಮತಗಳು ಚದುರಿಹೋಗುತ್ತವೆ. ಪುತ್ರ ವಿಜಯೇಂದ್ರ ಶಾಸಕನಾಗುವ ಕನಸು ಭಗ್ನಗೊಳ್ಳುತ್ತದೆ.

ಒಂದು ಕಡೆ ವರುಣಾದಿಂದ ಸ್ಪರ್ಧಿಸುತ್ತಾರೆಂಬ ವದಂತಿಗೆ ಗಾಳಿ, ಮತ್ತೊಂದೆಡೆ ಶಿಕಾರಿಪುರದಲ್ಲಿ ಸೋಲಿಸಲು ಷಡ್ಯಂತ್ರ. ಇವರೆಡನ್ನೂ ಮಾಡುತ್ತಿರುವವರು ಬಿಜೆಪಿಗರೆ. ಅದು ಯಡಿಯೂರಪ್ಪನವರಿಗೆ ಗೊತ್ತಿದೆ. ಆದರೆ ಬಾಯ್ಬಿಟ್ಟು ಹೇಳುವಂತಿಲ್ಲ. ಸುಮ್ಮನಿದ್ದು ಸಹಿಸಲೂ ಸಾಧ್ಯವಾಗುತ್ತಿಲ್ಲ. ಬದುಕಿನ ಇಳಿಸಂಜೆಯಲ್ಲಿ ಇಂತಹ ಸಂದಿಗ್ಧಕ್ಕೆ ಸಿಲುಕುತ್ತೇನೆಂದು ಸ್ವತಃ ಯಡಿಯೂರಪ್ಪನವರಿಗೂ ತಿಳಿದಿರಲಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ, ಅಧಿಕಾರಕ್ಕೆ ತಂದ ನಾಯಕನಿಗೇ ಬಿಜೆಪಿ ಇಂತಹ ಸ್ಥಿತಿಗೆ ನೂಕುತ್ತದೆ ಎಂದರೆ, ನಾಡಿನ ಪ್ರಜೆಗಳ ಕತೆ ಏನು? ಮತದಾರರು ಯೋಚಿಸಬೇಕಾದ ಕಾಲ ಈಗ ಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬ್ರ್ಯಾಂಡ್‌ ಹೆಸರು ಬಳಸಿ ನಕಲಿ ಬಟ್ಟೆ ತಯಾರು: ಸಿಸಿಬಿ ದಾಳಿ

ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ...

ಮೈತ್ರಿ ಕಗ್ಗಂಟು | ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಗುವುದೇ ಡೌಟು!

ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ...

ಕಲಬುರಗಿ | ಕೆಇಎ ಪರೀಕ್ಷಾ ಅಕ್ರಮ ಪ್ರಕರಣ; ಇಬ್ಬರು ಪ್ರಾಂಶುಪಾಲರ ಬಂಧನ

ಕಳೆದ ಅಕ್ಟೋಬರ್‌ 28 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ...

ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಸಿದ್ದರಾಮಯ್ಯ ಭರವಸೆ

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹೇಳಿಕೆ ಸ್ಥಳದ ಅಭಾವವಿರುವ...