ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಯೋಜನೆ ರೂಪಿಸಿರುವ ಸನಾತನಿಗಳು ವಚನ ದರ್ಶನ ಎಂದ ಕಸ ತುಂಬಿರುವ ಪುಸ್ತಕವನ್ನು ರಚಿಸಿ ನಾಡಿನಾದ್ಯಂತ ಬಿಡುಗಡೆಗೊಳಿಸುವ ನೆಪದಲ್ಲಿ ಹಿಂದುತ್ವದ ರಾಡಿಯನ್ನು ಎಬ್ಬಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿಯು ತನ್ನ ಎಂದಿನ ನಡೆಯಂತೆ ಏನೂ ಆಗಿಲ್ಲ ಎನ್ನುವಂತೆ ಮೈಮರೆತು ಮಲಗಿದೆ.
1904ರಲ್ಲಿ ಬ್ರಾಹ್ಮಣರಾಗಲು ಹೊರಟ ಲಿಂಗಾಯತರ ಒಂದು ಗುಂಪು ಹುಟ್ಟುಹಾಕಿರುವ ಅಖಿಲ ಭಾರತ ವೀರಶೈವ ಮಹಾಸಭಾ ಹೆಸರಿನ ಸಂಸ್ಥೆಯು ತನ್ನ 120 ವರ್ಷಗಳ ಕಾರ್ಯಕಾಲದ ಉದ್ದಕ್ಕೂ ಲಿಂಗಾಯತ ಧರ್ಮಕ್ಕೆ ಹಾನಿಯಾಗುವ ಅನೇಕ ಎಡಬಿಡಂಗಿ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಈಗ ಇತಿಹಾಸ. ಇತ್ತೀಚಿನ ನಾಲ್ಕು ದಶಗಳಲ್ಲಿ ಈ ಸಂಸ್ಥೆ ಪಕ್ಷಾತೀತವಾಗಿ ಲಿಂಗಾಯತ ಸಮುದಾಯವನ್ನು ರಾಜಕೀಯದ ದಾಳವಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪುಢಾರಿಗಳ ಹಿತಾಸಕ್ತಿ ಕಾಪಾಡುವ ಕಾರ್ಯ ಮಾಡುತ್ತಿದೆ.
ಈ ಸಂಸ್ಥೆ ಸ್ಥಾಪನೆಯಾದ ಕೆಲವು ವರ್ಷಗಳಲ್ಲಿ ಅದಕ್ಕೆ ಲಿಂಗಾಯತ ಮಹಾಸಭಾ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಎದ್ದಾಗ ಅದನ್ನು ಹತ್ತಿಕ್ಕುತ್ತ, ಅಲಕ್ಷಿಸುತ್ತ ಬಂದಿದ್ದ ಈ ಸಂಸ್ಥೆಯು ಇತ್ತೀಚಿಗೆ 2018ರಲ್ಲಿ ಸ್ಥಾಪನೆಯಾದ ಜಾಗತಿಕ ಲಿಂಗಾಯತ ಮಹಾಸಭಾಕ್ಕೆ ಹೆದರಿ ಸಂಸ್ಥೆಯ ಹೆಸರನ್ನು ವೀರಶೈವ-ಲಿಂಗಾಯತ ಎನ್ನುವ ಅರ್ಥವಿಲ್ಲದ ಹೆಸರನ್ನು ಘೋಷಿಸಿ ಅದನ್ನು ಕಾನೂನು ಪ್ರಕಾರ ಅಧಿಕೃತಗೊಳಿಸದೆ ಕೈತೊಳೆದುಕೊಂಡು ಲಿಂಗಾಯತರನ್ನು ವಂಚಿಸಿದೆ. ಸಮುದಾಯಕ್ಕೆ ಆಪತ್ತು ಬಂದಾಗಲೆಲ್ಲ ಈ ಸಂಸ್ಥೆ ಕುಂಭಕರ್ಣ ನಿದ್ರೆಗೆ ಜಾರುತ್ತದೆ.
ಈಗಿನ ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ನಂತರ ಸನಾತನಿ ಶಕ್ತಿಗಳು ಹತಾಶೆಗೊಂಡಿವೆ. ಅದಕ್ಕೆ ಪ್ರತಿಯಾಗಿ ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಯೋಜನೆ ರೂಪಿಸಿರುವ ಸನಾತನಿಗಳು ವಚನ ದರ್ಶನ ಎಂದ ಕಸ ತುಂಬಿರುವ ಪುಸ್ತಕವನ್ನು ರಚಿಸಿ ನಾಡಿನಾದ್ಯಂತ ಬಿಡುಗಡೆಗೊಳಿಸುವ ನೆಪದಲ್ಲಿ ಹಿಂದುತ್ವದ ರಾಡಿಯನ್ನು ಎಬ್ಬಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿಯು ತನ್ನ ಎಂದಿನ ನಡೆಯಂತೆ ಏನೂ ಆಗಿಲ್ಲ ಎನ್ನುವಂತೆ ಮೈಮರೆತು ಮಲಗಿದೆ. ವಿಚಿತ್ರವೆಂದರೆ ಸನಾತನಿಗಳ ಈ ಕಸದ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ವೀರಶೈವ ಮಹಾಸಭೆಯ ಜಿಲ್ಲಾ ಘಟಕಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ. ಲಿಂಗಾಯತ ಹಾಗೂ ಬಸವಪ್ರಜ್ಞೆ ಮೈಗೂಡಿಸಿಕೊಂಡಿರುವ ಜಾಗತಿಕ ಲಿಂಗಾಯತ ಮಹಾಸಭಾ ಸನಾತನಿಗಳ ವಿರುದ್ಧ ಧ್ವನಿ ಎತ್ತುತ್ತಿದ್ದರೆ ವೀರಶೈವ ಮಹಾಸಭಾದ ಜಿಲ್ಲಾ ಘಟಕಗಳು, ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು ಈ ಸಮಾರಂಭವನ್ನು ಆಯಾ ಜಿಲ್ಲೆಗಳಲ್ಲಿ ಸನಾತನಿಗಳೊಂದಿಗೆ ಸೇರಿ ಆಯೋಜಿಸುತ್ತಿವೆ. ಇಷ್ಟಾದರೂ ವೀರಶೈವ ಮಹಾಸಭಾ ಕೇಂದ್ರ ಸಮಿತಿಯು ಕುಂಭಕರ್ಣನಂತೆ ನಿದ್ರೆಗೆ ಜಾರಿದೆ.
2018ರಲ್ಲಿ ಅಂದಿನ ಸರ್ಕಾರ ಲಿಂಗಾಯತರನ್ನು ಅಲ್ಪಸಂಖ್ಯಾತರೆಂದು ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರ ಸರಕಾರದ ಅನುಮೋದನೆಗೆ ಶಿಫಾರಸ್ಸು ಮಾಡಿದ ತಕ್ಷಣ ಸ್ವಾಗತಿಸಿದ್ದ ವೀರಶೈವ ಮಹಾಸಭಾ ಕೆಲವೆ ಗಂಟೆಗಳಲ್ಲಿ ಯು-ಟರ್ನ್ ಹೊಡೆದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ. ಲಿಂಗಾಯತ ಸಮಾಜದಲ್ಲಿ ಜಾಗೃತೆ ಮೂಡಿಸುವ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯವನ್ನು ಅನವರತ ಹತ್ತಿಕ್ಕುವ ಕೃತ್ಯ ಮಾಡುತ್ತಿರುವ ವೀರಶೈವ ಮಹಾಸಭಾ ತನ್ನ ಎಡಬಿಡಂಗಿತನವನ್ನು ಪ್ರದರ್ಶಿಸುತ್ತಿದೆ. ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳು ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳಾಗಿರುವ ಡಾ ಜಾಮದಾರ್ ಅವರನ್ನು ಹೀನ ಪದಗಳಿಂಬ ಟೀಕಿಸುವ ವೀರಶೈವ ಮಹಾಸಭಾದ ಕೇಂದ್ರ ಸಮಿತಿಯ ಅಧ್ಯಕ್ಷರ ನಡೆಯಂತೂ ಅಹಸ್ಯ ಹುಟ್ಟಿಸುತ್ತದೆ. ಇನ್ನು ವೀರಶೈವ ಮಹಾಸಭಾದ ಪದಾಧಿಕಾರಿಯಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರು ಡಾ. ಜಾಮದಾರ್ ಅವರ ವಿರುದ್ಧ ಪುಡಿ ಸಾಹಿತಿಗಳ ಗುಂಪನ್ನು ಎತ್ತಿಕಟ್ಟಿ ಅವರನ್ನು ಟೀಕಿಸುವ ಹಾಗೂ ಅವರ ವಿರುದ್ಧ ಲೇಖನ ಬರೆಸುವ ಕೃತ್ಯದಲ್ಲಿ ತೊಡಗಿದ್ದಾರೆ.
ಸನಾತನಿಗಳು ರೂಪಿಸಿರುವ ವಚನ ದರ್ಶನ ಪುಸ್ತಕ ಬೆಳಗಾವಿಯಲ್ಲಿ ಬಿಡುಗಡೆಯಾದಾಗ ಆ ಸಮಾರಂಭವನ್ನು ಮುಂದೆ ನಿಂತು ಆಯೋಜಿಸಿದ್ದು ಬೆಳಗಾವಿ ಜಿಲ್ಲೆಯ ವೀರಶೈವ ಮಹಾಸಭಾ ಎನ್ನುವುದು ಗಮನಾರ್ಹ. ಕಾರ್ಯಕ್ರಮ ನಡೆದ ಸಭಾಭವನದಿಂದ ಹಿಡಿದು ಸ್ವಾಗತ ಭಾಷಣ ಮಾಡಿದವರೆಲ್ಲರೂ ವೀರಶೈವ ಮಹಾಸಭಾಕ್ಕೆ ಸೇರಿದವರು ಎನ್ನುವುದನ್ನು ನಾವು ಗಮನಿಸಬೇಕಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಪುಸ್ತಕ ಬಿಡುಗಡೆಯ ಸಮಾರಂಭದ ದಿನ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಇನ್ನುಳಿದ ಬಸವಪರ ಸಂಘಟನೆಗಳೊಂದಿಗೆ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಸಭಾಭವನದಲ್ಲಿ ಆರಾಮವಾಗಿ ಕುಳಿತಿದ್ದವರು ವೀರಶೈವ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಎನ್ನುವುದನ್ನು ನಾವು ಮರೆಯಬಾರದು. ಸನಾತನಿಗಳು ವೀರಶೈವ ಮಹಾಸಭಾವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ. ಇನ್ನು ಮತಿಹೀನ ಮಠಾಧೀಶರು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಲ್ಲದೇ ಲಿಂಗಾಯತ ಸಮುದಾಯಕ್ಕೆ ಹಾನಿ ಮಾಡುವಂತೆ ಮಾತನಾಡುತ್ತಿರುವುದು ದುರಂತದ ಸಂಗತಿ.
ಲಿಂಗಾಯತ ಸಮುದಾಯ ಇತ್ತೀಚಿಗೆ ಜಾಗೃತವಾಗುತ್ತಿರುವುದನ್ನು ಗಮನಿಸಿ ಆತಂಕಕ್ಕೊಳಗಾಗಿರುವ ಅತ್ಯಂತ ಹಳೆಯ ಸಂಸ್ಥೆಯಾಗಿರುವ ವೀರಶೈವ ಮಹಾಸಭಾ ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ತನ್ನ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಮಂಡಿಸಿ ಅಂಗೀಕರಿಸಿದೆ. ಮಹಾಸಭಾದ ಈ ಅಧಿವೇಶನವು ಅತ್ಯಂತ ನೀರಸವಾಗಿ ನಡೆದಿದ್ದು ಭಯಂಕರ ಪ್ರಮಾಣದಲ್ಲಿ ಹಣ ಖರ್ಚು ಮಾಡಿದರೂ ಜನರಿಲ್ಲದೆ ವಿಫಲವಾಗಿದ್ದಕ್ಕೆ ವೇದಿಕೆಯ ಮೇಲಿಂದಲೇ ಕೆಲವು ಮಠಾಧೀಶರು ಅತೃಪ್ತಿ ವ್ಯಕ್ತಪಡಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ. ವೀರಶೈವ ಮಹಾಸಭಾ ತನ್ನ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಅಂಗೀಕರಿಸಿದ್ದು ಒಂದು ಐತಿಹಾಸಿಕ ನಿರ್ಧಾರವೆಂದೇ ಹೇಳಬೇಕಿದೆ. ಹಿಂದೆ ಅನೇಕ ವೇಳೆ ಕೇಂದ್ರ ಸರ್ಕಾರಕ್ಕೆ ಅಲ್ಪಸಂಖ್ಯಾತ ಸ್ಥಾನಮಾನದ ಮಾನ್ಯತೆಗಾಗಿ ಪ್ರಸ್ತಾವನೆ ಕಳಿಸಿದಾಗಲೆಲ್ಲ ವೀರಶೈವ ಮಹಾಸಭಾ ಪ್ರಮಾದವೆಸಗಿದ್ದನ್ನು ನಾವು ಮರೆಯುವಂತಿಲ್ಲ. ವೀರಶೈವ ಮಹಾಸಭಾದ ಈ ದ್ವಂದ್ವ ಹಾಗೂ ಎಡಬಿಡಂಗಿತನದಿಂದ ಲಿಂಗಾಯತ ಸಮುದಾಯ ಅಲ್ಪಸಂಖ್ಯಾತರ ಸೌಲಭ್ಯದಿಂದ ವಂಚಿತಗೊಂಡಿದ್ದಂತೂ ಸತ್ಯ.
ಈ ವರ್ಷದ ಆರಂಭದಲ್ಲಿ ದಾವಣಗೆರೆಯಲ್ಲಿ ಜರುಗಿದ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಅಧಿವೇಶನ ತೆಗೆದುಕೊಂಡ ನಿರ್ಣಯದ ಅನುಸಾರ ಲಿಂಗಾಯತರು ಹಿಂದೂಗಳಲ್ಲ. ಹಾಗಿದ್ದ ಮೇಲೆ ಲಿಂಗಾಯತರನ್ನು ಹಿಂದುತ್ವದ ಕೊಚ್ಚೆಗೆ ಸೇರಿಸುವ ಸನಾತನಿಗಳ ವಚನ ದರ್ಶನ ಪುಸ್ತಕಾಭಿಯಾನದಲ್ಲಿ ವೀರಶೈವ ಮಹಾಸಭೆಯ ಜಿಲ್ಲಾ ಘಟಕಗಳು ಹಾಗೂ ಕೇಂದ್ರೀಯ/ರಾಜ್ಯ ಸಮಿತಿಯ ಪದಾಧಿಕಾರಿಗಳು ನೇರವಾಗಿ ಭಾಗವಹಿಸುತ್ತಿರುವುದೇಕೆ? ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಲಿಂಗಾಯತವು ಪ್ರತ್ಯೇಕ ಧರ್ಮವಲ್ಲ ಎನ್ನುವ ಹಾಗೂ ಅದು ಹಿಂದೂ ಧರ್ಮದ ಭಾಗವೆನ್ನುವ ಮಾತುಗಳನ್ನು ಸನಾತನಿಗಳು ತಾವೂ ಆಡುತ್ತಿದ್ದಾರೆ ಹಾಗೂ ವೀರಶೈವವಾದಿಗಳಿಂದಲೂ ಆಡಿಸುತ್ತಿದ್ದಾರೆ. ಇದೆಲ್ಲ ನಡೆಯುತ್ತಿದ್ದರೂ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಗಾಢ ಮೌನದಲ್ಲಿ ಮಲಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಇನ್ನು ಮುಂದಾದರೂ ತನ್ನನ್ನು ತಾನು ಸಮಸ್ತ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಎಂದು ಕರೆದುಕೊಳ್ಳುವ ವೀರಶೈವ ಮಹಾಸಭಾ ಕೇಂದ್ರ ಸಮಿತಿ ಎಚ್ಚೆತ್ತುಕೊಂಡು ತನ್ನ ಜಿಲ್ಲಾ ಘಟಕಗಳು ಹಾಗೂ ಪದಾಧಿಕಾರಿಗಳಿಗೆ ನಿರ್ದೇಶನ ನೀಡಬಲ್ಲುದೆ?
ಇದನ್ನೂ ಓದಿ ‘ವಚನ ದರ್ಶನ’ದ ನೆಪದಲ್ಲಿ ಹಿಂದುತ್ವದ ರಾಡಿ ಎಬ್ಬಿಸುತ್ತಿದೆಯೇ RSS?
ಇದನ್ನೂ ಓದಿ ಶರಣರ ಕಗ್ಗೊಲೆ ಮಾಡಿˌ ವಚನಕಟ್ಟುಗಳ ಸುಟ್ಟವರ ಸಂತತಿಯಿಂದ ವಚನ ದರ್ಶನ ಅಭಿಯಾನ!
ಲಿಂಗಾಯತ ಸಂಸ್ಕೃತಿ ನಾಶಗೊಳಿಸಲು ಸನಾತನಿಗಳ ಹಮ್ಮಿಕೊಂಡಿರುವ ಈ ವಚನ ದರ್ಶನ ಅಭಿಯಾನದಿಂದ ಅಂತರ ಕಾಯ್ದುಕೊಳ್ಳಲು ಹಾಗೂ ಅದನ್ನು ಬಲವಾಗಿ ವಿರೋಧಿಸಲು ತನ್ನ ಪದಾಧಿಕಾರಿಗಳಿಗೆ ಆದೇಶ ನೀಡಬಲ್ಲುದೆ? ಹಾಗೆ ಮಾಡದಿದ್ದರೆ ಅತ್ಯಂತ ಹಳೆಯ ಸಂಸ್ಥೆಯನ್ನು ಪ್ರಜ್ಞಾವಂತ ಲಿಂಗಾಯತರು ಕಸದ ಬುಟ್ಟಿಗೆ ಎಸೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಸವಾದಿ ಶರಣರ ಆಶಯಗಳನ್ನು ಹಾಳು ಮಾಡಿ ಬ್ರಾಹ್ಮಣರಾಗಲು ಹೊರಟ ಲಿಂಗಾಯತರ ಒಂದು ಗುಂಪು ಹುಟ್ಟುಹಾಕಿರುವ ಈ ವೀರಶೈವ ಮಹಾಸಭಾ ತಮ್ಮ ಪೂರ್ವದ ಕರ್ಮವನ್ನು ಕಳೆದುಕೊಂಡು ಪರಿಶುದ್ಧಗೊಳ್ಳುವ ಅಗತ್ಯವಿದೆ. ತನ್ನ ಸುದೀರ್ಘ ಕಾರ್ಯ ಕಾಲದಲ್ಲಿ ಈ ಸಂಸ್ಥೆ ಮಾಡಿದ ಎಡವಟ್ಟುಗಳು ಲಿಂಗಾಯತರಿಗೆ ಉಪಕಾರಕ್ಕಿಂತ ಹಾನಿ ಮಾಡಿದ್ದೆ ಹೆಚ್ಚು. ಬಸವಣ್ಣನವರು ಜನಿವಾರ ಕಿತ್ತೆಸೆದು “ವಿಪ್ರಕರ್ಮವ ಬಿಡಿಸಿ ಅಶುದ್ಧನ ಶುದ್ಧನಾಗಿಸಿದೆಯಯ್ಯಾ ಕೂಡಲಸಂಗಮದೇವಾ” ಎಂದು ಘೋಷಿಸಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದನ್ನು ವೀರಶೈವ ಮಹಾಸಭಾ ಇನ್ನಾದರೂ ಅರ್ಥಮಾಡಿಕೊಂಡು ತಾನು ಮಾಡಿದ ವಂಚನೆ ಹಾಗೂ ಪಾಪಗಳಿಂದ ಇನ್ನು ಮುಂದಾದರೂ ಬಿಡುಗಡೆ ಪಡೆಯಲಿ ಎಂದು ಲಿಂಗಾಯತ ಸಮುದಾಯ ಆಶಿಸುತ್ತಿದೆ.
ಜೈ ಬಸವ ವೀರಶೈವ ಧರ್ಮವಲ್ಲ. ಮೌಢ್ಯ ಮತ್ತು ವೈಧಿಕ ಆಚರಣೆಗಳ ಸಂಗಮ.ಇವರು ಶ್ರೇನಿಕ್ರತ ಸಮಾಜದ ವಾರಸುದಾರರು. ಇವರಿಗೆ ಲಿಂಗಾಯತರಿಗೆ ಸಂಬಂದವಿಲ್ಲ.ಆದಷ್ಟು ಇವರಿಂದ ದೂರವಿದ್ದು ಲಿಂಗಾಯತ ಸಮಾಜ ಬಲಪಡಿಸುವ ಕಾಯಕವಾಗಬೇಕಾಗಿದೆ.🙏