ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಎಂಬವರು ದೂರು ಸಲ್ಲಿಕೆ ಮಾಡಿದ್ದು, ರಾಜ್ಯಪಾಲರ ಹೆಸರಿನಲ್ಲಿ ಅಕ್ರಮ ಪರಿತ್ಯಾಜನ ಪತ್ರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರಾಜ್ಯಪಾಲರ ಹೆಸರಿನಲ್ಲಿ ಪರಿತ್ಯಾಜನ ಪತ್ರವನ್ನು ನೋಂದಾಯಿಸಿ ಕೊಂಡಿದ್ದಾರೆ. ಕೂಡಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಕೆ ಸಿ ಉಮೇಶ್ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ, ಸದರಿಯವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ”ದಿಂದ ನಿಮ್ಮ ಪರವಾಗಿ ನೋಂದಾಯಿಸಿಕೊಂಡಿರುವ ಎಲ್ಲ ಪರಿತ್ಯಾಜನ ಪತ್ರಗಳನ್ನು ಕೂಡಲೇ ರದ್ದು ಪಡಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತುರ್ತು ಸೂಚನೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಕೆಸಿ ಉಮೇಶ್ ಎಂಬವರು ಪರಿತ್ಯಾಜನ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಎಕರೆ ಜಮೀನು ಸಂಬಂಧ ಪರಿತ್ಯಾಜನ ಪತ್ರ ನೋಂದಣಿ ಮಾಡಲಾಗಿದೆ. 25-11-2021ರಲ್ಲಿ ಅಕ್ರಮವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ನೋಂದಣಿಯಾಗಿದೆ. ಪಾರ್ವತಿಯವರು ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ಮಾಡಿಕೊಟ್ಟಿದ್ದಾರೆ. ಕೂಡಲೇ ಉಮೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.