ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ತೊರೆದ ತಮಿಳಗ ವಾಜ್ವುರಿಮೈ ಕಚ್ಚಿ (TaVK) ಪಕ್ಷದ ಅಧ್ಯಕ್ಷ ಟಿ ವೇಲ್ಮುರುಗನ್, ʼದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ʼಗೆ ಸಂದರ್ಶನ ನೀಡಿದ್ದು, ʼಚುನಾವಣೆಯಲ್ಲಿ ಗೆಲ್ಲುವುದು ಮಾತ್ರ ನಮ್ಮ ಗುರಿ ಅಲ್ಲ. ಡಿಎಂಕೆ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ತಮಿಳಿಗರ ಹಕ್ಕಿಗಾಗಿ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಬಿಜೆಪಿಯ ನೀತಿ ಮತ್ತು ರಾಜಕೀಯದ ಮುಂದೆ ನನ್ನ ಧ್ವನಿ ಅಡಗುವುದಿಲ್ಲʼ. ಎಂದು ಹೇಳಿದ್ದಾರೆ.
1.ಡಿಎಂಕೆ ಮೈತ್ರಿ ತೊರೆವ ನಿರ್ಧಾರ ಮಾಡಿದ್ದೀರಿ. ನಿಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದ್ದನ್ನು ಕಟುವಾಗಿ ಟೀಕಿಸಿದ್ದೀರಿ. ಮುಂದೆ ನಿಮ್ಮ ನಡೆ ?
ಕಳೆದ ಐದು ವರ್ಷಗಳಿಂದ ನಾನು ನಮ್ಮ ಬೇಡಿಕೆಗಳನ್ನು ಇಡುತ್ತಿದ್ದೇನೆ. ಪ್ರತಿ ಬಾರಿಯೂ, ಸರ್ಕಾರ ಪರಿಗಣಿಸುವುದಾಗಿ ಹೇಳಿತ್ತು. ಕಳೆದ ಐದು ವರ್ಷಗಳಿಂದ ನಮಗೆ ಭರವಸೆ ನೀಡುತ್ತಲೇ ಇತ್ತು. ಚುನಾವಣೆಗೆ ಮುಂಚೆಯೇ, ಸರ್ಕಾರ ಯೋಜನೆಗಳನ್ನು ಘೋಷಿಸಿತ್ತು. ಸರ್ಕಾರ ಮಹಿಳೆಯರಿಗೆ 5,000 ರೂ.ಗಳನ್ನು (ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಮತ್ತು ವಿಶೇಷ ಪ್ಯಾಕೇಜ್‌ನ ಭಾಗವಾಗಿ) ಜಮಾ ಮಾಡಿತು. ಅದೇ ರೀತಿ, ಪತ್ರಕರ್ತರು ಮತ್ತು ಇತರರ ಕೆಲವು ಬೇಡಿಕೆಗಳನ್ನೂ ಪೂರೈಸಲಾಯಿತು. ಆದ್ದರಿಂದ ನಮ್ಮ ಬೇಡಿಕೆಗಳು ಸಹ ಈಡೇರುತ್ತವೆ ಎಂದು ನಾನು ನಂಬಿದ್ದೆ.
ಶ್ರೀಲಂಕಾದ ವಿಶೇಷ ಶಿಬಿರಗಳಲ್ಲಿ ಬಂಧಿಯಾಗಿರುವ ಅಮಾಯಕ ತಮಿಳರನ್ನು ಬಿಡುಗಡೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುವುದು ಮತ್ತು ನೇಮಕಾತಿಯಲ್ಲಿ ತಮಿಳರಿಗೆ ಆದ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸಿ ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುತ್ತದೆ ಎನ್ನುವುದು ಮುಖ್ಯವಾಗಿರಲಿಲ್ಲ. ನಮ್ಮ ಪಕ್ಷದ ಪ್ರಮುಖ 10 ಬೇಡಿಕೆಗಳನ್ನು ಈಡೇರಿಸುವುದೇ ನಮಗೆ ಮುಖ್ಯವಾಗಿತ್ತು. ಆದರೆ, ಡಿಎಂಕೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಪ್ರಯತ್ನವನ್ನೂ ಮಾಡಿಲ್ಲ. ಹಾಗಾಗಿ ಆ ಪಕ್ಷದ ನೇತೃತ್ವದ ಮೈತ್ರಿಯೊಂದಿಗೆ ನಾವು ಮುಂದುವರಿಯುವುದರಲ್ಲಿ ಅರ್ಥವಿಲ್ಲ.
2. ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣವೇನು?
ಡಿಎಂಕೆ ʼದೊಡ್ಡಣ್ಣʼನ ಧೋರಣೆಯನ್ನು ತೋರಿಸುತ್ತಿದೆ. ಮೈತ್ರಿಕೂಟದಲ್ಲಿರುವ ಪಕ್ಷಗಳನ್ನು ಗೌರವವದಿಂದ ನಡೆಸಿಕೊಂಡಿಲ್ಲ. ಈ ಸರ್ಕಾರದಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಬಹಳ ಕಡಿಮೆ ಇದೆ. ಅಧಿಕಾರಿಗಳೇ ಎಲ್ಲವನ್ನೂ ಮಾಡುತ್ತಾರೆ. ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ, ಸಾರ್ವಜನಿಕ ಸಮಸ್ಯೆಗಳು ಅಥವಾ ನೀತಿ ನಿರ್ಧಾರಗಳ ಬಗ್ಗೆ ಚರ್ಚಿಸುವುದಕ್ಕೆ ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳ ನಾಯಕರನ್ನು ಕರೆದ ಒಂದೇ ಒಂದು ಉದಾಹರಣೆ ಇಲ್ಲ. ಅನೇಕ ಕಲ್ಯಾಣ ಯೋಜನೆಗಳನ್ನು ಘೋಷಣೆ ಮಾಡಲಾಯಿತು. ಆದರೆ, ಆ ಸಂಬಂಧಿಸಿದಂತೆ ಮೈತ್ರಿಕೂಟದ ಇತರೆ ಪಕ್ಷಗಳ ನಾಯಕರೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಏಕಾಂಗಿಯಾಗಿ ಜಾರಿಗೆ ತರಲಾಯಿತು. ಕೆಲವು ಯೋಜನೆಗಳು ಉಪಯುಕ್ತವಾಗಿವೆ, ನಾವು ಅದನ್ನು ನಿರಾಕರಿಸುವುದಿಲ್ಲ. ಆದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಆ ಯೋಜನೆಗಳನ್ನು ತರಬಹುದಾಗಿತ್ತು. ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿದ್ದರೆ, ಯೋಜನೆಗಳನ್ನು ಹೇಗೆ ಸುಧಾರಿಸಬಹುದು ಎನ್ನುವುದರ ಬಗ್ಗೆ ಚರ್ಚಿಸಬಹುದಿತ್ತು. ಸಾಮೂಹಿಕ ಶಕ್ತಿಯ ಬಗ್ಗೆ ನಂಬಿಕೆ ಇಲ್ಲ ಎನ್ನುವಂತೆ ಡಿಎಂಕೆ ಪಕ್ಷ ನಡೆದುಕೊಂಡಿದೆ.
2021 ರ ಚುನಾವಣೆಯ ಪೂರ್ವವಾಗಿ, ಸಾಮೂಹಿಕ ಬಲ ಪ್ರದರ್ಶನ ಮಾಡಿದರು. ಒಟ್ಟಾಗಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ನಂತರ, ಮೈತ್ರಿಕೂಟದ ಇತರೆ ಪಕ್ಷಗಳನ್ನು ʼಸರ್ಕಾರವನ್ನು ಹೊಗಳಲುʼ ಮಾತ್ರ ಬಳಸಿಕೊಳ್ಳಲಾಯಿತು.
ಇದನ್ನೂ ಓದಿ : ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
3. ಡಿಎಂಕೆ ಮೈತ್ರಿಕೂಟವನ್ನು ನೀವು ತೊರೆದಿರುವುದು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಪ್ರಯೋಜನವಾಗುವುದಿಲ್ಲವೇ?
ಇಲ್ಲ, ಖಂಡಿತ ಆಗುವುದಿಲ್ಲ. ನಾನು ಬಿಜೆಪಿಯನ್ನು ಬಲವಾಗಿ ವಿರೋಧಿಸುತ್ತೇನೆ. ಬಿಜೆಪಿ ನನ್ನ ಪ್ರಮುಖ ರಾಜಕೀಯ ಎದುರಾಳಿ. ನಾನು ಬಿಜೆಪಿಯೊಂದಿಗೆ ಕೈಜೋಡಿಸಿದ್ದರೆ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಲಾಭವಾಗಬಹುದು. ಆದರೆ, ನಾನು ಬಿಜೆಪಿ ವಿರುದ್ಧ ಪ್ರಚಾರ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಅವರ ನೀತಿಗಳು, ಒಡೆದು ಆಳುವ ರಾಜಕಾರಣ ತಮಿಳುನಾಡಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಜನರಿಗೆ ತಿಳಿಸುವುದಕ್ಕೆ ಪ್ರಯತ್ನಿಸುತ್ತೇನೆ.
4. ನಿಮ್ಮ ಭವಿಷ್ಯದ ಯೋಜನೆಗಳೇನು?
ಕಳೆದ 15 ವರ್ಷಗಳಿಂದ, ನಾವು ತಮಿಳುನಾಡಿನಲ್ಲಿ ಅನೇಕ ಹಿಂದುಳಿದ ಸಮುದಾಯಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಹಿಂದುಳಿದ ಸಮುದಾಯಗಳ ಪರವಾಗಿಯೇ ಇರುತ್ತೇವೆ. ತಮಿಳುನಾಡಿನಾದ್ಯಂತ ನಮ್ಮ ಪಕ್ಷವನ್ನು ಮತ್ತೆ ಸಮೃದ್ಧವಾಗಿ ಕಟ್ಟುತ್ತೇವೆ. ಎಲ್ಲಾ ಹಿಂದುಳಿದ ಸಮುದಾಯಗಳನ್ನು ನಾವು ಒಟ್ಟುಗೂಡಿಸುತ್ತೇವೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತೇವೆ. ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವುದು ಮಾತ್ರ ನಮ್ಮ ಗುರಿ ಅಲ್ಲ. ನಾವು ತಮಿಳಿಗರ ಹಕ್ಕುಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮಗೂ ಒಂದು ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ನಾವು ರಾಜಕೀಯ ಮನ್ನಣೆ ಪಡೆಯುತ್ತೇವೆ ಎನ್ನುವ ವಿಶ್ವಾಸವಿದೆ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ




