ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ

Date:

ದೆಹಲಿ ಮೇಲೆ ಎಷ್ಟು ಸಾಧ್ಯವೋ ಅಷ್ಟೂ ಹಿಡಿತ ಸಾಧಿಸಲು ಮೋದಿ ನೇತೃತ್ವದ ಕೇಂದ್ರದ ಮೋದಿ ಸರ್ಕಾರ ಹವಣಿಸುತ್ತಿದೆ. ಅದಕ್ಕಾಗಿ, ದೆಹಲಿ ಸರ್ಕಾರದ ಅಧೀನದಲ್ಲಿರುವ ನಾಗರಿಕ ಸೇವೆಗಳನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅನೈತಿಕ ಕಂದಾಚಾರಕ್ಕೆ ಕೇಂದ್ರ ಮುಂದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಿಗಳ ಮೇಲಿನ ಹಿಡಿತವನ್ನು ಆಡಳಿತಾಧಿಕಾರಿ (ಲೆಫ್ಟಿನೆಂಟ್ ಗವರ್ನರ್) ಕೈಗಿಟ್ಟು, ನಾಗರಿಕ ಸೇವೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರದ ಮೋದಿ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಸುಪ್ರೀಂ ಕೋರ್ಟ್‌ನ ಆದೇಶವನ್ನೂ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದೆ.

ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ದೆಹಲಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್‌ ಮತ್ತು ಭೂಮಿ ಮೇಲಿನ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ತೆಕ್ಕೆಯಲ್ಲಿದೆ. ಆದರೆ, ದೆಹಲಿ ಮೇಲೆ ಎಷ್ಟು ಸಾಧ್ಯವೋ ಅಷ್ಟೂ ಹಿಡಿತ ಸಾಧಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹವಣಿಸುತ್ತಿದೆ. ಅದಕ್ಕಾಗಿ, ದೆಹಲಿ ಸರ್ಕಾರದ ಅಧೀನದಲ್ಲಿರುವ ನಾಗರಿಕ ಸೇವೆಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅನೈತಿಕ ಕಂದಾಚಾರಕ್ಕೆ ಕೇಂದ್ರ ಮುಂದಾಗಿದೆ. ನಾಗರಿಕ ಸೇವೆಗಳನ್ನು ಅಡಳಿತಾಧಿಕಾರಿ ಅಧೀನಕ್ಕೆ ಒಳಪಡಿಸಿ ಸುಗ್ರೀವಾಜ್ಞೆ ಹೊರಡಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಅಪಾಯ ತಂದೊಡ್ಡುತ್ತದೆ. ದೆಹಲಿಯಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದು ‘ಹಲ್ಲಿಲ್ಲದ ಹಾವಿ’ನಂತೆ ಕಾರ್ಯನಿರ್ವಸಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ. ಮಾತ್ರವಲ್ಲದೆ, ರಾಜಧಾನಿಯಲ್ಲಿ ಫ್ಯಾಸಿಸ್ಟ್‌ ರೀತಿಯ ಸರ್ವಾಧಿಕಾರಕ್ಕೂ ಎಡೆ ಮಾಡಿಕೊಡುತ್ತದೆ. ಅಧಿಕಾರಿಗಳು ಕೇಂದ್ರದ ಅಣತಿಯಂತೆ ಕಾರ್ಯನಿರ್ವಹಿಸುತ್ತ, ದೆಹಲಿ ಸರ್ಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗುತ್ತದೆ ಎಂದೂ ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

2015ರ ಆರಂಭದಲ್ಲಿ, ದೆಹಲಿಯಲ್ಲಿ ನಾಗರಿಕ ಸೇವೆಗಳ ನಿಯಂತ್ರಣವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಕೇಂದ್ರ ಪ್ರಯತ್ನಿಸಿತ್ತು. ಅದು ಪ್ರಸ್ತುತ ಕಾನೂನಿನಲ್ಲಿ ನಿರ್ದಿಷ್ಟಪಡಿಸಿದಂತೆ ಕೇಂದ್ರ ಸರ್ಕಾರದ ಅಧಿಕಾರ ಮೀರಿ ದೆಹಲಿಯನ್ನು ನಿಯಂತ್ರಿಸುವ ಪ್ರಯತ್ನವಾಗಿತ್ತು. ದೆಹಲಿಯ ಆಡಳಿತದಲ್ಲಿ ಕೇಂದ್ರ ಸರ್ಕಾರವು ಕಾನೂನುಬದ್ಧ ಹಿತಾಸಕ್ತಿಗಳನ್ನು ಹೊಂದಿದೆ. ಆದರೆ, ಆ ಹಿತಾಸಕ್ತಿಗಳನ್ನು ಮೀರಿ, ನಿಯಂತ್ರಣ ಸಾಧಿಸುವ ಯತ್ನವನ್ನು ಕೇಂದ್ರ ಮಾಡಿತ್ತು. ಆ ಮೂಲಕ, ದೆಹಲಿಯಲ್ಲಿ ದೀರ್ಘಕಾಲದ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಎಲ್ಲ ಅಧಿಕಾರಿವನ್ನು ತನ್ನದೇ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರೊಂದಿಗೆ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಕೈಹಾಕಿತ್ತು.

ಅದೇ ವರ್ಷ, ಕೇಂದ್ರದ ನಡೆಯ ವಿರುದ್ಧ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಎಂಟು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ನಡೆಸಿತು. ಮೊದಲು, ವಿಚಾರಣೆಯಿಂದ ನ್ಯಾಯಾಲಯ ಹಿಂದೆ ಸರಿಯಲು ಮುಂದಾಗಿತ್ತು. ನಂತರದಲ್ಲಿ, ವ್ಯತಿರಿಕ್ತ ತೀರ್ಪುಗಳನ್ನು ನೀಡಿತು. ಹೀಗಾಗಿ, ಪ್ರಕರಣ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಟೇಬಲ್‌ ಸೇರಿತು. ಸದ್ಯ, ಆ ಪೀಠವು, “ಪ್ರಸ್ತುತ ಅಸ್ತಿತ್ವದಲ್ಲಿರುವ ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ದಿಷ್ಟ ಕ್ಷೇತ್ರಗಳನ್ನು ಹೊರತುಪಡಿಸಿ ನಾಗರಿಕ ಸೇವೆಗಳ ಆಡಳಿತ ನಿಯಂತ್ರಿಸಲು ದೆಹಲಿ ಸರ್ಕಾರಕ್ಕೆ ಅವಕಾಶವಿದೆ” ಎಂದು ಹೇಳಿತು. ಕೇಂದ್ರಕ್ಕೆ ಛೀಮಾರಿ ಹಾಕಿತು.

ಆದರೆ, ಕೇಂದ್ರದ ಮೋದಿ ಸರ್ಕಾರ ಏನು ಮಾಡಿದೆ? ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ರಜೆ ಆರಂಭವಾಗಿದೆ. ಇಂತಹ ಸಮಯದಲ್ಲಿ, ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸಿದೆ. ದೆಹಲಿ ಸರ್ಕಾರದ ನಿಯಂತ್ರಣದಲ್ಲಿದ್ದ ನಾಗರಿಕ ಸೇವೆಗಳನ್ನು ಆಡಳಿತಾಧಿಕಾರಿಯ ಕೈಗಿತ್ತಿದೆ. ಇದು ಕಾನೂನು, ಸಾಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುವ ನಡೆ.

ತಾಂತ್ರಿಕವಾಗಿ, ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿ ತಿದ್ದುಪಡಿ ಕಾನೂನನ್ನು ಸಂಸತ್ತು ಅಂಗೀಕರಿಸಿದರೆ, ದೆಹಲಿಯ ಆಡಳಿತವನ್ನು ಬದಲಾಯಿಸಿ ಎಲ್ಲ ಸೇವೆಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತಂದರೆ, ಅಂತಹ ಕಾನೂನು ಅವಿವೇಕವಾಗಿದ್ದರೂ ಕಾನೂನಾತ್ಮಕ ಚರ್ಚೆಗೆ ತೆರೆದುಕೊಳ್ಳಬಹುದು. ನ್ಯಾಯಾಲಯದಲ್ಲೂ ಪ್ರಶ್ನಿಸಬಹುದು. ಆದರೆ, ಸುಗ್ರೀವಾಜ್ಞೆಯ ಮಾರ್ಗವನ್ನು ಅನುಸರಿಸುವ ಮೂಲಕ, ಸರ್ಕಾರವು ಉದ್ದೇಶಪೂರ್ವಕವಾಗಿ ಪೂರ್ಣ ಪ್ರಮಾಣದ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅಧಿಕಾರಕ್ಕಾಗಿ ತಾನು ಯಾವ ಮಾರ್ಗ ಬೇಕಾದರೂ ಹಿಡಿಯುತ್ತೇನೆಂದು ತೋರಿಸಿದೆ.

ಈ ಹಿಂದೆ ಸರ್ಕಾರಗಳು ಹಲವು ನಿರ್ದಶನಗಳಲ್ಲಿ ಸುಗ್ರೀವಾಜ್ಞೆ ಮಾರ್ಗ ಬಳಸಿಕೊಂಡಿವೆ. ಬಳಿಕ ಅವುಗಳು ಸಂಸತ್ತಿನಲ್ಲಿ ಸಮ್ಮತಿ ಪಡೆದಿವೆ. ಕೆಲವು ಹಿನ್ನಡೆ ಅನುಭವಿಸಿವೆ. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಸುಗ್ರೀವಾಜ್ಷೆಗಳು ಜಾರಿಯಾಗಿರುವ ನಿರ್ದಶನಗಳು ಕಡಿಮೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಆ ಮಾರ್ಗವನ್ನು ಅನುಸರಿಸಿದೆ. ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ಸುಪ್ರೀಂ ಕೋರ್ಟ್‌ ನಿರ್ದೇಶನಕ್ಕೆ ಮೂಗುದಾರ ಹಾಕುತ್ತಿದೆ. ಈಗಿನ ನಡೆಯ ಮೂಲಕ, “ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರ ಸಂರಕ್ಷಿಸುವ ಬಗ್ಗೆ ನ್ಯಾಯಾಲಯ ಹೇಳಿದ ಎಲ್ಲವನ್ನೂ ನಿರಾಕರಿಸಲು ನಾವು ಸಂಪೂರ್ಣವಾಗಿ ಎಲ್ಲ ಅವಕಾಶಗಳನ್ನು ಬಳಸುತ್ತೇವೆ” ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಅಂದಹಾಗೆ ಸುಗ್ರೀವಾಜ್ಞೆ ರದ್ದುಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗಿಲ್ಲ.

ಕೇಂದ್ರವು ಸುಗ್ರೀವಾಜ್ಞೆಯನ್ನೇ ತರಲು ಅದರ ಬಳಿ ಯಾವುದೇ ಸಮರ್ಥನೆಗಳಿಲ್ಲ. ಏಕೆಂದರೆ, ಮೊದಲನೆಯದಾಗಿ, ಕೆಲವು ವಾರಗಳಲ್ಲಿ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಸರ್ಕಾರ ಸುಲಭವಾಗಿ ಶಾಸನವನ್ನು (ಅದು ಎಷ್ಟೇ ಕೆಟ್ಟದಾಗಿ ಸಲಹೆ ನೀಡಿದ್ದರೂ) ಪ್ರಸ್ತಾಪಿಸಬಹುದಿತ್ತು. ಎರಡನೆಯದಾಗಿ, ಇದು ಲಕ್ಷಾಂತರ ದೆಹಲಿ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವುದರ ಮೇಲೆ ತನ್ನ ಮುದ್ರೆ ಹಾಕುತ್ತದೆ.

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲೂ ಕೇಂದ್ರ ಇದನ್ನೇ ಮಾಡಿದೆ. ಯಾವುದೇ ಹೊಣೆಗಾರಿಕೆಯಿಲ್ಲದೆ ರಾಜ್ಯದ ಕಾನೂನು ಸ್ಥಿತಿ ಬದಲಾಯಿಸಿತು. ಕಾಶ್ಮೀರದ ಬಗ್ಗೆ ನ್ಯಾಯಾಲಯ ಮತ್ತು ಇತರ ಎಲ್ಲ ರಾಜಕೀಯ ಪಕ್ಷಗಳು ಮೌನವಾಗುವಂತೆ ಮಾಡಿದೆ. 370ನೇ ವಿಧಿ ರದ್ದು ಮಾಡಿದ್ದ, ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಒಕ್ಕೂಟ ವ್ಯವಸ್ಥೆಯ ಅಣಕ ಎಂದು ಟೀಕೆಗೆ ಗುರಿಯಾಗಿದೆ.

ದೆಹಲಿ ಮೇಲಿನ ಈಗಿನ ಸುಗ್ರೀವಾಜ್ಞೆಯ ಉದ್ದೇಶವು ದೆಹಲಿಯ ಮೇಲೆ ತುರ್ತಾಗಿ ಹಿಡಿತ ಸಾಧಿಸುವುದಲ್ಲ. ಸರ್ಕಾರವು ನ್ಯಾಯಾಂಗದ ಅಧಿಕಾರದಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದರ ಕುರಿತು ಶೋಧನೆಯ ಪ್ರಯತ್ನ. ಜೊತೆಗೆ, ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಒತ್ತಾಯಗಳಿಗೆ ವಿರುದ್ಧವಾಗಿ ಅದರ ಮೇಲೆ ಮತ್ತಷ್ಟು ಹಿಡಿತ ಸಾಧಿಸುವ ಸರ್ವಾಧಿಕಾರಿ ಧೋರಣೆಯ ಪ್ರದರ್ಶನ. ಎಎಪಿ ನೇತೃತ್ವದ ದೆಹಲಿ ಸರ್ಕಾರವು ಅದರ ಮಿತಿಗಳ ಹೊರತಾಗಿಯೂ ಜನಪ್ರಿಯತೆ ಗಳಿಸಿದೆ. ಇಂತಹ ಸಮಯದಲ್ಲಿ ದೆಹಲಿಯ ಆಡಳಿತವನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರ ತನ್ನ ಎಲ್ಲ ಅಧಿಕಾರವನ್ನು ಬಳಸಿದೆ.

ಇದೀಗ ದೆಹಲಿಯಲ್ಲಿ ಪ್ರಜಾಪ್ರಭುತ್ವದ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ಅಪಾಯವೆಂದರೆ ಸೋತವರು ತೀರ್ಪನ್ನು ಒಪ್ಪಿಕೊಳ್ಳದಿರುವುದು ಮತ್ತು ಅದನ್ನು ಬುಡಮೇಲು ಮಾಡಲು ತಮ್ಮ ಹಠಮಾರಿತನದೊಂದಿಗೆ ಮುನ್ನುಗ್ಗುವುದಾಗಿದೆ. ಸಾಮಾನ್ಯವಾಗಿ ಈ ವಿಧ್ವಂಸಕ ಸುಗ್ರೀವಾಜ್ಞೆಯು ಮುಂದೆ ಕಾನೂನು ರೂಪ ತೆಗೆದುಕೊಳ್ಳಬಹುದು. ಆದರೆ, ಪ್ರಜಾಪ್ರಭುತ್ವದ ಚೈತನ್ಯಕ್ಕೆ ದ್ರೋಹ ಬಗೆಯಲಾಗಿದೆ.

ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಚುನಾವಣಾ ಫಲಿತಾಂಶ : ‘ಬಿಜೆಪಿ ಮುಕ್ತ ದಕ್ಷಿಣ ಭಾರತ’ದ ಮುನ್ಸೂಚನೆಯೇ?

ರಾಜ್ಯದ ಮೇಲಿನ ಕೇಂದ್ರದ ಹೆಚ್ಚು ಅಧಿಕಾರವು, ಕೆಲವು ಬಣಗಳ ಮೇಲೆ ಒತ್ತಡ ಹೇರಲು ಮತ್ತು ವಿರೋಧಿ ಪಾಳಯದಲ್ಲಿರುವ ರಾಜಕೀಯ ಪಕ್ಷಗಳನ್ನು ಒಡೆಯಲು ಬಳಕೆಯಾಗಬಹುದು. ಜೊತೆಗೆ, ಆಡಳಿತ ಮಂಡಳಿಗೆ ಸಹಾಯ ಮಾಡಲು ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ಮತ್ತು ಸಭಾಪತಿ ಮಾಡಿದ್ದು ಇದನ್ನೇ ಎಂದು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡಿದೆ. ಕಾನೂನುಬದ್ಧ ಸರ್ಕಾರದ ಪತನವನ್ನು ನ್ಯಾಯಸಮ್ಮತವೆಂದು ತೋರಿಸಲು ಅವರು ತಮ್ಮ ಸಾಂವಿಧಾನಿಕ ಕಚೇರಿಗಳಿಗೆ ದ್ರೋಹ ಮಾಡಿದ್ದಾರೆ.

ದೆಹಲಿ ಮೇಲಿನ ಕೇಂದ್ರದ ಧೋರಣೆಯು ದೆಹಲಿಯಲ್ಲಿ ಮತ್ತೊಂದು ರಾಜಕೀಯ ಪಕ್ಷ ಆಡಳಿತ ನಡೆಸುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ದೆಹಲಿ ಸರ್ಕಾರ ಬುಡಮೇಲು ಮಾಡಲು ಕಾನೂನಿನಲ್ಲಿರುವ ಪ್ರತಿ ತಂತ್ರವನ್ನೂ ಅದು ಬಳಸುತ್ತದೆ. ಅಂತಹ ರಾಜಕೀಯ ಪಕ್ಷವು, ಸನ್ನಿಹಿತವಾದ ಸೋಲಿನ ನಿರೀಕ್ಷೆಯನ್ನು ಎದುರಿಸುತ್ತಿರುವಾಗ, ಸುಲಭವಾಗಿ ಅಧಿಕಾರ ತ್ಯಜಿಸುವ ಸಾಧ್ಯತೆಯಿದೆಯೇ?

ಕಾಶ್ಮೀರಕ್ಕೆ ಏನಾಯಿತು, ದೆಹಲಿಯಲ್ಲಿ ಏನಾಗುತ್ತಿದೆ ಎಂಬುದು ಸಾಮಾನ್ಯವಾಗಿ ಭಾರತೀಯ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಕಾನೂನು, ಸಾಂವಿಧಾನಿಕತೆ, ಸಂವೇದನಾಶೀಲ ಆಡಳಿತ ಮತ್ತು ಚುನಾವಣಾ ರಾಜಕೀಯದ ನ್ಯಾಯಯುತ ನಿಯಮಗಳನ್ನು ಗೌರವಿಸುವುದಿಲ್ಲ. ಈಗಿನ ಸುಗ್ರೀವಾಜ್ಞೆಯಂತಹ ಲಜ್ಜೆಗೆಟ್ಟ ನಡೆ ಯಾವುದೇ ರೀತಿಯಲ್ಲಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಸಂಕೇತವಾಗಿದೆ.

ಮಾಹಿತಿ ಮೂಲ: ಟಿಇಇ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ತಡವಾಗಿ ತಲುಪಿದ ವಿಮಾನ; ಒಲಿಂಪಿಕ್ ಅರ್ಹತಾ ಪಂದ್ಯದಿಂದ ಹೊರಗುಳಿದ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಸುಜೀತ್ ಕಲ್ಕಲ್‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ...

ಡಿಡಿ ನ್ಯೂಸ್ ಲೋಗೊ ಬಣ್ಣ ಕೇಸರೀಕರಣ: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ...

ನೇಹಾ ಕೊಲೆ ಪ್ರಕರಣ | ಹುಬ್ಬಳ್ಳಿ, ಬೆಳಗಾವಿಯಲ್ಲಿ ಚುನಾವಣೆ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಯತ್ನ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ...