ಚುನಾವಣಾ ಆಯೋಗದ (EC) ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಇತ್ತೀಚೆಗೆ ಎದ್ದಿರುವ ವಿವಾದಗಳು ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದೊಳಗೂ ಬಿರುಗಾಳಿ ಎಬ್ಬಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಮಿತ್ರಪಕ್ಷಗಳಾದ ತೆಲುಗು ದೇಶಂ ಪಾರ್ಟಿ (TDP), ಲೋಕಜನಶಕ್ತಿ ಪಾರ್ಟಿ-ರಾಮ್ ವಿಲಾಸ್ (LJP-RV) ಹಾಗೂ ರಾಷ್ಟ್ರೀಯ ಲೋಕಮೋರ್ಚಾ (RLM) ನಾಯಕರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರವಾಗಿ ಮೋದಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ತನಿಖಾ ವರದಿಯೊಂದು ಈ ಬಂಡಾಯಕ್ಕೆ ನಾಂದಿ ಹಾಡಿದೆ. ಕಳೆದ 10 ತಿಂಗಳಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳು ಹಾಗೂ ಆದೇಶಗಳ ಕುರಿತು ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪಣೆ (Dissent notes) ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ವಿಚಾರ ಈಗ ಎನ್‌ಡಿಎ ಮಿತ್ರಪಕ್ಷಗಳಲ್ಲೇ ತೀವ್ರ ಸಂಚಲನ ಮೂಡಿಸಿದ್ದು, ಮೋದಿ ಸರ್ಕಾರದ ನೈತಿಕತೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ.
ಪಾಟ್ನಾದಲ್ಲಿ ಪ್ರತಿಕ್ರಿಯಿಸಿರುವ ಎಲ್‌ಜೆಪಿ(ಆರ್.ವಿ) ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಆಯೋಗದ ನಡೆಯನ್ನು ಮಾತ್ರವಲ್ಲದೆ, ಪರೋಕ್ಷವಾಗಿ ಸರ್ಕಾರದ ನಿಲುವನ್ನೂ ಕಟುವಾಗಿ ಪ್ರಶ್ನಿಸಿದ್ದಾರೆ. “ಸಾಂವಿಧಾನಿಕ ಸಂಸ್ಥೆಯನ್ನು ಸಮರ್ಥಿಸಿಕೊಳ್ಳುವುದು ನನ್ನ ಉದ್ದೇಶವಲ್ಲ. ಆದರೆ ಆಯೋಗದ ಕಾರ್ಯವೈಖರಿಯ ಬಗ್ಗೆಯೇ ಪ್ರಶ್ನೆಗಳು ಎದ್ದಾಗ, ತನ್ನ ನಿಲುವನ್ನು ಸ್ಪಷ್ಟಪಡಿಸುವುದು ಅದರಲ್ಲೂ ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತರ ಜವಾಬ್ದಾರಿಯಾಗಿದೆ. ಈ ಬಗ್ಗೆ ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನ ಸಾಮಾನ್ಯರಲ್ಲಿ ಯಾವುದೇ ಅನುಮಾನಗಳು ಮೂಡದಂತೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಟಿಡಿಪಿಯ ಲೋಕಸಭಾ ನಾಯಕ ಲಾವು ಶ್ರೀಕೃಷ್ಣ ದೇವರಾಯಲು ಅವರು ಆಂಧ್ರಪ್ರದೇಶದಲ್ಲಿ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಹೇಳುತ್ತಲೇ, ಕೇಂದ್ರ ಸರ್ಕಾರದ ಹೊಣೆಗಾರಿಕೆಯನ್ನು ನೆನಪಿಸಿದ್ದಾರೆ. “ಚುನಾವಣಾ ಆಯೋಗವು ಪ್ರಜಾಪ್ರಭುತ್ವದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿರುವ ಸಾಂವಿಧಾನಿಕ ಸಂಸ್ಥೆ. ಆದ್ದರಿಂದ ಆಯೋಗದ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಎದುರಾದಾಗ, ಸೂಕ್ತ ಸ್ಪಷ್ಟೀಕರಣವನ್ನು ನೀಡಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರ್ಕಾರದ ಹಾಗೂ ಆಯೋಗದ ಜಂಟಿ ಜವಾಬ್ದಾರಿಯಾಗಿದೆ. ಇದರಿಂದ ಸಂಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ. ಇಲ್ಲವಾದಲ್ಲಿ ಸರ್ಕಾರದ ಮೇಲಿನ ವಿಶ್ವಾಸವೇ ಕುಸಿಯುತ್ತದೆ” ಎಂದು ಎಚ್ಚರಿಸಿದ್ದಾರೆ.
ಇದೇ ರೀತಿಯ ಕಳವಳವನ್ನು ಆರ್‌ಎಲ್‌ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ ಕೂಡ ವ್ಯಕ್ತಪಡಿಸಿದ್ದಾರೆ. “ಪರಿಷ್ಕರಣೆ ವಿವಾದದಿಂದಾಗಿ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ಹಾಗಾಗಿ ಚುನಾವಣಾ ಆಯೋಗವು ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ವಾಸ್ತವ ಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಈ ಗೊಂದಲಗಳನ್ನು ನಿವಾರಿಸಬೇಕು. ಇಲ್ಲವಾದಲ್ಲಿ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ” ಎಂದು ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ವಿಪಕ್ಷಗಳು ಕೇವಲ ರಾಜಕೀಯ ಉದ್ದೇಶಕ್ಕಾಗಿ ಆರೋಪ ಮಾಡುತ್ತಿವೆ, ಆದರೆ ಅಧಿಕೃತ ದೂರುಗಳನ್ನು ಏಕೆ ನೀಡಿಲ್ಲ ಎಂದು ಜೆಡಿಯು (JD-U) ವಕ್ತಾರ ರಾಜೀವ್ ರಂಜನ್ ಪ್ರಶ್ನಿಸಿದ್ದಾರೆ. ಇನ್ನು ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, “ಬಹುಸದಸ್ಯ ಆಯೋಗದಲ್ಲಿ ಚರ್ಚೆ ವೇಳೆ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಎಲ್ಲಾ ಅಂತಿಮ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ತೆಗೆದುಕೊಂಡಿದೆ” ಎಂದು ಸಮರ್ಥಿಸಿಕೊಂಡಿದೆ. ಆದರೂ, ಮಿತ್ರಪಕ್ಷಗಳ ಈ ದಿಢೀರ್ ವಾಗ್ದಾಳಿಯು ಮೋದಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.




