ನವದೆಹಲಿಯ ಐತಿಹಾಸಿಕ ‘ಜಂತರ್ ಮಂತರ್’ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ ಕೈಬಿಟ್ಟಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಅಕ್ಟೋಬರ್ 9ರಂದು ನ್ಯಾಯಾಲಯ ನೀಡಿದ್ದ ಆದೇಶದ ಆಧಾರದ ಮೇಲೆಯೇ ಈ ದಿಢೀರ್ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಕೀಲೆ ಸ್ವಾತಿ ಸಿಂಗ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್ ಜಾರಿಗೊಳಿಸಿದೆ. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದಿಂದ ಕೈಬಿಟ್ಟಿರುವುದು ಸಂವಿಧಾನ ದತ್ತವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಸಭೆ ಸೇರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲೆ ಮುಕ್ತಾ ಗುಪ್ತ ಅವರು ವಾದ ಮಂಡಿಸಿದರು.
ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್ನ ಅಕ್ಟೋಬರ್ 9ರ ಆದೇಶವು ಈ ನಿರ್ಧಾರಕ್ಕೆ ಆಧಾರವಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಪ್ರತಿಭಟನೆಗಳಿಗೆ ಪರ್ಯಾಯ ಸ್ಥಳಗಳನ್ನು ಗುರುತಿಸಿ ಪರಿಶೀಲಿಸಲು ಈ ಹಿಂದೆಯೇ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಸಿದ್ಧಪಡಿಸಿದ ವಿವರವಾದ ವರದಿಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.
ಅಕ್ಟೋಬರ್ 9ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯವೇ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರವಷ್ಟೇ ದೆಹಲಿ ಹೈಕೋರ್ಟ್ಗೆ ತಿಳಿಸಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಅಕ್ಟೋಬರ್ 11ರಂದು ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಆದೇಶ ಹೊರಡಿಸಿ, ಪೂರ್ವ ದೆಹಲಿಯ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪರ್ಯಾಯ ಪ್ರತಿಭಟನಾ ಸ್ಥಳಗಳನ್ನಾಗಿ ಘೋಷಿಸಿದ್ದರು.
ಅಕ್ಟೋಬರ್ 9ರಂದು ಸುಪ್ರೀಂ ಕೋರ್ಟ್, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವ ದಶಕಗಳ ಹಳೆಯ ಪದ್ಧತಿಯನ್ನು ಮರುಪರಿಶೀಲಿಸುವಂತೆ ಮತ್ತು ಶಾಂತಿಯುತವಾಗಿ ಪ್ರತಿಭಟಿಸುವವರಿಗಾಗಿ ಉತ್ತಮ ಮೂಲಸೌಕರ್ಯಗಳಿರುವ ಪರ್ಯಾಯ ಸ್ಥಳಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಆಯುಕ್ತರು ಮತ್ತು ಸಂಬಂಧಪಟ್ಟ ಇತರೆ ಪ್ರಾಧಿಕಾರಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿತ್ತು.
2018ರ ‘ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನೆಪವೊಡ್ಡಿ ನಾಗರಿಕರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಮತ್ತು ಪ್ರತಿಭಟನೆ ನಡೆಸಲು ಇರುವ ಅರ್ಥಪೂರ್ಣ ಅವಕಾಶವನ್ನು ಸಂಪೂರ್ಣವಾಗಿ ಕಸಿದುಕೊಳ್ಳಬಾರದು. ಸಾರ್ವಜನಿಕ ಹಿತಾಸಕ್ತಿ ಹಾಗೂ ಶಾಂತಿಯುತ ಸಭೆ ಸೇರುವ ಹಕ್ಕನ್ನು ಸಮತೋಲನದಲ್ಲಿ ಕಾಪಾಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.




