ಆಳುತ್ತಿರುವ ನಾಯಕರು ಹಿರಿಯರೇ ಆದರೂ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಭಯ ಹುಟ್ಟಿಸುವಂತಿವೆ. ಒಂದಿಡೀ ಪೀಳಿಗೆಯನ್ನು ಮತ, ಪಂಥ, ಸಿದ್ಧಾಂತ, ರಾಷ್ಟ್ರದ ಹೆಸರಲ್ಲಿ ಉದ್ವೇಗಕ್ಕೆ ದೂಡಿ ಮಾನವೀಯತೆಯನ್ನೇ ಮರೆಯುವಂತೆ ಮಾಡಿದ್ದಾರೆ. ಮನುಷ್ಯ ಕುಲಕ್ಕೆ ಥಿಚ್‌ರಂತಹ ಸಮಚಿತ್ತದ ಮನೋಮಗ್ನ ಹೀಲರ್ ಬೇಕಾಗಿದ್ದಾರೆ war mongers ಅಲ್ಲ.
ಬೌದ್ಧ ಗುರು ಥಿಚ್ ನಾಥ್ ಹಾನ್ ವಿಯೆಟ್ನಾಂ ಯುದ್ಧದಲ್ಲಿ ಹೋರಾಡಿದ ಅಮೆರಿಕನ್ ಸೈನಿಕನನ್ನು ತಮ್ಮ ಶಿಬಿರದಲ್ಲೊಮ್ಮೆ ಭೇಟಿಯಾಗುತ್ತಾರೆ. ಯುದ್ಧದ ಭೀಭತ್ಸತೆ ಅನುಭವಿಸಿದ್ದ ಯೋಧ ಅವ. ಒಂದು ದಿನ ವಿಯೆಟ್ನಾಂ ಕಾಡುಗಳಲ್ಲಿ ಅವನ ಪಡೆ ದಾಳಿಗೊಳಗಾಗುತ್ತದೆ. ಏಕಾಏಕಿ ಬಂದೆರಗಿದ ವೈರಿ ಸೇನೆ, ಗಸ್ತು ಹೊಡೆಯುತ್ತಿದ್ದ ಪಡೆಯಲ್ಲಿದ್ದ ಆತನ ಆಪ್ತ ಮಿತ್ರರನ್ನು ಕೊಂದು ಬಿಡುತ್ತದೆ. ಆತ ಮತ್ತು ಕೆಲ ಯೋಧರು ಮಾತ್ರ ಬದುಕುಳಿಯುತ್ತಾರೆ. ಸುಡುವ ಸೇಡಿನ ಕಿಚ್ಚನ್ನು ನಂದಿಸಲು ಯೋಧ ವಿಕೃತ ಪಿತೂರಿಯೊಂದನ್ನು ಮಾಡುತ್ತಾನೆ. ರುಚಿಕರ ಮಾಂಸಾಹಾರ, ಸ್ಯಾಂಡ್ವಿಚ್ ಮಾಡಿ ಅದರೊಳಗೆ ವಿಷ ಬೆರೆಸುತ್ತಾನೆ. ಆ ವಿಷ ಮಿಶ್ರಿತ ಆಹಾರವನ್ನು ವಿಯೆಟ್ನಾಂ ಹಳ್ಳಿಯ ಬಳಿ ಬಿಡುತ್ತಾನೆ.
ಹಾಗೆ ಮಾಡಿದ ಆತ ದೂರದಲ್ಲಿ ಅವಿತು ಕುಳಿತು ಕುತೂಹಲದಿಂದ ಗಮನಿಸುತ್ತಾನೆ. ಹಳ್ಳಿಗೆ ಮರಳುತ್ತಿದ್ದ ಮುಗ್ಧ ಮಕ್ಕಳು ಯಾವುದೇ ಸಂಶಯ ಪಡದೆ ರುಚಿಯಾದ ಆಹಾರವನ್ನು ತಿನ್ನುತ್ತಾರೆ. ಕೆಲವೇ ಕ್ಷಣಗಳಲ್ಲಿ ಮಕ್ಕಳು ಅತೀವ ವೇದನೆಯಲ್ಲಿ ನೆರಳುತ್ತಾರೆ, ಮನಕಲುಕುವಂತೆ ಅಳುತ್ತಾರೆ. ಗಾಬರಿಗೊಂಡ ಪೋಷಕರು ಮಕ್ಕಳ ಬಳಿ ಬರುತ್ತಾರೆ. ಆಂಬುಲೆನ್ಸ್ ಕರೆಸಲು ಪ್ರಯತ್ನಿಸುತ್ತಾರೆ. ರಸ್ತೆಗಳೇ ಇರದ ಆ ದಟ್ಟ ಕಾನನದಲ್ಲಿದ್ದ ಹಳ್ಳಿಗೆ ತ್ವರಿತ ಗತಿಯಲ್ಲಿ ಆಂಬುಲೆನ್ಸ್ ಬರಬಹುದೇ? ಅಂತಹ ದುರ್ಗಮ ಹಾದಿ ಸವೆಸಿ ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬರಲಾರದು ಎಂದು ಅರಿತಿದ್ದ ಯೋಧ ಈ ಕುಕೃತ್ಯಕ್ಕೆ ಮುಂದಾಗಿದ್ದ! ವಿಲವಿಲ ಒದ್ದಾಡಿದ ಐವರು ತಮ್ಮ ಪೋಷಕರ ಮಡಿಲಲ್ಲಿ ಪ್ರಾಣಬಿಡುತ್ತಾರೆ.
ಅಮೆರಿಕಾಕ್ಕೆ ಮರಳಿದ ಆ ಯೋಧ ಮತ್ತೆಂದೂ ನೆಮ್ಮದಿಯ ಜೀವನ ನಡೆಸಲಾಗಲಿಲ್ಲ. ಆತನ ಬದುಕಿನಿಂದ ಸುಖ ನಿದ್ದೆ ಮಾಯವಾಯಿತು. ತನ್ನ ಮಕ್ಕಳೊಡನೆ ಸಮಯ ಕಳೆಯುವುದೇ ಅವನಿಗೆ ಅಸಾಧ್ಯವಾಯಿತು. ಆತ ಅವರಿಂದ ದೂರವೇ ಇರುತ್ತಿದ್ದ. ತಾನು ಎಸಗಿದ ದುಷ್ಕೃತ್ಯವನ್ನು ಯಾರಿಗೂ ಹೇಳಿಕೊಳ್ಳಲಾಗಲಿಲ್ಲ. ಒಮ್ಮೆ ತಾಯಿಯ ಬಳಿ ಎಲ್ಲಾ ಹೇಳಿಕೊಂಡಾಗ ಆಕೆಗೂ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ. “ಯುದ್ಧದ ಭೀಕರತೆಯೇ ಹಾಗೆ. ಇಂತಹ ಘಟನೆಗಳು ನಡೆದು ಹೋಗುತ್ತವೆ. ಈ ಪರಿ ನಿನ್ನನ್ನು ನೀನು ಶಿಕ್ಷಿಸಿಕೊಳ್ಳಬೇಡ” ಎಂದೇಳಿ ಸುಮ್ಮನಾದಳು ತಾಯಿ. ಐವರು ಮುಗ್ಧರನ್ನು ಕೊಂದ ಯೋಧ ತನ್ನನ್ನು ತಾನು ಕ್ಷಮಿಸಿಕೊಳ್ಳಲಾಗಲಿಲ್ಲ.

ಹಲವು ವರುಷಗಳ ನಂತರ ವಿಯೆಟ್ನಾಂ ಯೋಧರಿಗೆ ಥಿಚ್ ಶಿಬಿರವೊಂದನ್ನು ಆಯೋಜಿಸಿದ್ದರು. ಸೈಕೋಥೆರಪಿಸ್ಟ್ ಗಳ ಸಲಹೆ ಮೇರೆಗೆ ಯೋಧರು ಆ ಶಿಬಿರದಲ್ಲಿ ಭಾಗವಹಿಸಿದ್ದರು. ಐವರನ್ನು ಕೊಂದ ಯೋಧ ಕೂಡ ಶಿಬಿರದ ಭಾಗವಾಗಿದ್ದ. ಅಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದ. ಶಿಬಿರದಲ್ಲೂ ಆತ ಭೀತಿಯಿಂದಲೇ ನಡೆದಾಡುತ್ತಿದ್ದ. ಶಿಬಿರದಲ್ಲೂ ದಾಳಿಗೊಳಗಾಗಬಹುದೆಂಬ ಭಯ ಅವನಿಗೆ. ವಿಯೆಟ್ನಾಂ ಬೌದ್ಧ ಗುರು ನಡೆಸುತ್ತಿದ್ದ ಶಿಬಿರದಲ್ಲಿ ಅಮೆರಿಕನ್ ಯೋಧ ನೆಮ್ಮದಿಯಾಗಿರುವುದಾದರು ಹೇಗೆ? ಆತ ಥಿಚ್ ಅವರನ್ನು ಅನುಮಾನದಿಂದಲೇ ಕಂಡಿದ್ದ.
ಥಿಚ್ ಹೇಳಿಕೊಡುವ ನಡಿಗೆ ಧ್ಯಾನದ (walking meditation) ವೇಳೆಯಲ್ಲೂ ಆತ ಗುಂಪಿನಿಂದ ಬಲು ಹಿಂದುಳಿಯುತ್ತಿದ್ದ. ಯಾರಾದರೂ ದಾಳಿ ಮಾಡಿದರೆ ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ ಎಂಬ ಲೆಕ್ಕಾಚಾರ ಅವನದು. ಮತ್ತೊಬ್ಬ ಯೋಧನಿದ್ದ ಶಿಬಿರದ ಡಾರ್ಮಿಟರಿಯಲ್ಲಿ ಮಲಗುತ್ತಿರಲಿಲ್ಲ. ದೂರದಲ್ಲಿ ಒಂದು ಟೆಂಟ್ ಹಾಕಿ ತನ್ನನ್ನ ತಾನು ರಕ್ಷಿಸಿಕೊಳ್ಳಲು ಟೆಂಟ್ ಸುತ್ತಲೂ ಬಲೆ ಮತ್ತಲವು ಟ್ರ್ಯಾಪ್ ಹರಡಿದ್ದ! ಎಷ್ಟೋ ಯೋಧರೊಂದಿಗೆ ಮಾತು ಕೂಡ ಆಡುತ್ತಿರಲಿಲ್ಲ.
ಇದನ್ನು ಓದಿದ್ದೀರಾ?: ‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು
ಆಹಾರದಲ್ಲಿ ವಿಷ ಬೆರೆಸಿ ಮಕ್ಕಳನ್ನು ಕೊಂದ ಯೋಧನನ್ನು ಥಿಚ್ ಮಾತನಾಡಿಸಿ ಕೋಣೆಗೆ ಬರುವಂತೆ ತಿಳಿಸಿದರು. ಅಲ್ಲಿ ನಡೆದ ಸಂವಾದದ ವೇಳೆ “ಹೌದು ನೀನು ವಿಯೆಟ್ನಾಂನಲ್ಲಿ ಐವರು ಮುಗ್ಧರನ್ನು ಕೊಂದೆ ನಿಜ, ಆದರೆ ಇಂದು ಎಷ್ಟೋ ಮಕ್ಕಳ ಜೀವ ಉಳಿಸುವ ಕಾರ್ಯವನ್ನು ನೀ ಮಾಡಬಹುದೆಂಬುದು ನಿಜ ಅಲ್ಲವೇ” ಎಂದು ಥಿಚ್ ಕೇಳಿದರು.
ಪ್ರಪಂಚಾದ್ಯಂತ ಎಲ್ಲೆಡೆ ಹಿಂಸೆ, ಬಡತನ, ದಬ್ಬಾಳಿಕೆ, ಕದನಗಳಿಗೆ ಮಕ್ಕಳು ಪ್ರಾಣ ಬಿಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸಿಗುವ ಆಹಾರ, ಔಷಧಿ, ಬೆಚ್ಚನೆಯ ಬಟ್ಟೆ, ಕುಡಿಯುವ ನೀರು ಕೂಡ ಸಾವಿರಾರು ಮಕ್ಕಳ ಪ್ರಾಣ ಉಳಿಸುತ್ತೆ. “ನೀನೇಕೆ ಈ ಮಕ್ಕಳ ಪ್ರಾಣ ಉಳಿಸುವ ಕಾರ್ಯಕ್ಕೆ ಮುಂದಾಗಬಾರದು. ಹೌದು ನೀನು ಐವರ ಕೊಲೆ ಮಾಡಿದ್ದಿ. ಆದರೆ ನಿನಗೀಗ ಐವತ್ತು ಮಕ್ಕಳನ್ನು ಉಳಿಸುವ ಸಾಮರ್ಥ್ಯ, ಅವಕಾಶವೂ ಇದೆ. ಈ ಗಳಿಗೆಯಲ್ಲಿ ಗತದಿಂದ ಬಿಡುಗಡೆಗೊಳ್ಳಬಹುದು. In the present moment, you can heal the past” ಎಂದರು ಥಿಚ್.
ಮನೋಮಗ್ನತೆ ಎಂಬುದು ಮಾಂತ್ರಿಕ ಮುಲಾಮು. ಅದೊಂದು ಸದೃಢ ಹಾಯಿ ದೋಣಿ. ಮನೋಮಗ್ನತೆಯನ್ನು ಆಚರಿಸುವವರು ಬದುಕೆಂಬ ರಭಸದ ನದಿಯಲ್ಲಿ ಸದಾ ಈ ಸುರಕ್ಷಿತ ದೋಣಿಯಲ್ಲಿರುತ್ತಾರೆ. ಮನೋಮಗ್ನರು ವೇದನೆಯ ನದಿಯಲ್ಲಿ ಮುಳುಗಲಾರರು.
ಥಿಚ್ ಅವರ ಮಾತುಗಳು ಯೋಧನ ಮನ ನಾಟಿತು. ಆತ ಮಕ್ಕಳ ಸಹಾಯಕ್ಕಿಳಿದ. ಗುಣಮುಖನಾದ. ಈ ಗಳಿಗೆಯಲ್ಲಿ ಗತವೂ ಇದೆ. ಈ ಗಳಿಗೆಯಲ್ಲಿ ಆಳವಾಗಿ ಬದುಕಿದರೆ ಗತವನ್ನು ಗುಣಪಡಿಸಬಹುದು. ಯಾವುದಕ್ಕೂ ಕಾಯುವ ಅವಶ್ಯಕತೆಯಿಲ್ಲ ಎಂದು ಥಿಚ್ ತಿಳಿಸಿದರು.

ಸಂತಾನೋತ್ಪತ್ತಿಯ ಕಾಲ ಮುಗಿದ ನಂತರವೂ ಮನುಷ್ಯ ಇಷ್ಟು ಸುದೀರ್ಘ ಕಾಲವೇಕೆ ಬದುಕುತ್ತಾನೆ ಎಂಬ ಪ್ರಶ್ನೆ ವಿಕಸನ ಜೀವಶಾಸ್ತ್ರಜ್ಞರನ್ನು ಬಹುವರುಷ ಕಾಡಿತ್ತಂತೆ. ಮನುಷ್ಯನ ಹತ್ತಿರದ ಸಂಬಂಧಿಗಳೆಂದೇ ಗುರುತಿಸಲ್ಪಡುವ ಚಿಂಪಾಂಜಿ, ಗೊರಿಲ್ಲಾಗಳು ಮೂವತ್ತು ನಲವತ್ತು ವರುಷ ಬದುಕುತ್ತವೆ. ಆದರೆ ನಾವು ಎಪ್ಪತ್ತು ಎಂಬತ್ತು ವರುಷ ಬದುಕುತ್ತೇವೇಕೆ? ಉತ್ತರ ಬಲು ಸರಳವಾಗಿತ್ತು. ಮನುಷ್ಯ ಬದುಕುಳಿಯುವುದಕ್ಕೆ ವಿವೇಕ, ಜ್ಞಾನದ ಅವಶ್ಯಕತೆಯಿತ್ತು. ಸಿಹಿನೀರಿನ ಬಾವಿಗಳ, ಋತುಗಳ, ಹಿಡಿಯಬೇಕಾದ ಜಾಡಿನ, ಪಸಲಿನ, ಮರದ, ಕ್ರೂರಮೃಗಗಳ, ಸತ್ವಯುತ ಫಲಗಳ ಕುರಿತಾದ ಜ್ಞಾನವನ್ನು ಮಾಹಿತಿಯನ್ನು ಹಿರಿಯರೇ ಯುವ ಜನತೆಗೆ ಧಾರೆ ಎರೆಯಬೇಕಿತ್ತು. ಹಿರಿಯರ ಉಳಿವು ಮನುಷ್ಯಕುಲದ ಉಳಿವಾಗಿತ್ತು. It was the question of survival. ಇದನ್ನೇ ವಿಕಸನ ಜೀವಶಾಸ್ತ್ರಜ್ಞರು Grandmother’s hypothesis ಎಂದು ಹೆಸರಿಸಿದರು.
ಮನುಷ್ಯರ ವಿಕಸನದಲ್ಲಿ ಹಿರಿಯರು ವಹಿಸಿದ ಪಾತ್ರ ಮಹತ್ವವಾದದ್ದು. ಆದರಿಂದು ಹಿರಿಯರು ಮಾಡುತ್ತಿರುವ ಅವಾಂತರ ನೋಡುತ್ತಿದ್ದರೆ ಬಹುಶಃ ಮನುಷ್ಯಕುಲದ ಅವನತಿಗೂ ಹಿರಿಯರೇ ಕಾರಣವಾಗಲಿದ್ದಾರೆ ಎಂದು ಅನಿಸತೊಡಗಿದೆ. ಎಲ್ಲಾ ದೇಶಗಳನ್ನೂ ಆಳುತ್ತಿರುವ ನಾಯಕರು ಹಿರಿಯರೇ ಆದರೂ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಭಯ ಹುಟ್ಟಿಸುವಂತಿವೆ. ಒಂದಿಡೀ ಪೀಳಿಗೆಯನ್ನು ಮತ, ಪಂಥ, ಸಿದ್ಧಾಂತ, ರಾಷ್ಟ್ರದ ಹೆಸರಲ್ಲಿ ಉದ್ವೇಗಕ್ಕೆ ದೂಡಿ ಮಾನವೀಯತೆಯನ್ನೇ ಮರೆಯುವಂತೆ ಮಾಡಿದ್ದಾರೆ. ಮನುಷ್ಯ ಕುಲಕ್ಕೆ ಥಿಚ್‌ರಂತಹ ಸಮಚಿತ್ತದ ಮನೋಮಗ್ನ ಹೀಲರ್ ಬೇಕಾಗಿದ್ದಾರೆ war mongers ಅಲ್ಲ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ



