ಕಾಕ್ರೋಚ್ ಜನತಾ ಪಾರ್ಟಿ ಯುವ ಪೀಳಿಗೆಯ ಆಳವಾದ ಆಕ್ರೋಶ ಮತ್ತು ರಾಜಕೀಯ ಜಾಗೃತಿಯ ಪ್ರತಿಫಲನ ಎಂಬುದು ಸ್ಪಷ್ಟ. ಈ 'ವರ್ಚುವಲ್ ಪಾರ್ಟಿ' ಸದ್ಯ ಮೋದಿ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಜಗತ್ತಿನಾದ್ಯಂತ ಈವರೆಗೆ ನಡೆದ ಯುವಜನ ಕ್ರಾಂತಿಗಳಿಗೆ ಆಳುವ ವರ್ಗದ ನಿರ್ಲಕ್ಷ್ಯವೇ ಕಾರಣ.
ಕ್ಷಣಾರ್ಧದಲ್ಲೇ ಜಗತ್ತಿನ ಯಾವುದೋ ಮೂಲೆಯ ಮಾಹಿತಿ ನಮಗೆ ಸಿಗುವ ಡಿಜಿಟಲ್ ಯುಗವಿದು. ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ಬಳಕೆಯೂ ಹೆಚ್ಚು. ಆದರೆ ಸೋಷಿಯಲ್ ಮೀಡಿಯಾ ಕೇವಲ ಮನರಂಜನೆಯ ಸಾಧನವಾಗಿ ಉಳಿದಿಲ್ಲ, ಬದಲಾಗಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಶಕ್ತಿಯುತ ಅಸ್ತ್ರವಾಗಿ ಮಾರ್ಪಟ್ಟಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಸೈಬರ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party – CJP). ಮೊದಲ ನೋಟಕ್ಕೆ ಇದೊಂದು ವ್ಯಂಗ್ಯ ಅಥವಾ ಮೀಮ್ ಎನಿಸಿದರೂ, ಇದು ಇಂದಿನ ಜೆನ್-ಝೀಗಳ ಮತ್ತು ಯುವ ಪೀಳಿಗೆಯ ಆಳವಾದ ಆಕ್ರೋಶ ಮತ್ತು ರಾಜಕೀಯ ಜಾಗೃತಿಯ ಪ್ರತಿಫಲನ ಎಂಬುದು ಸ್ಪಷ್ಟ.
ಸದ್ಯ ಸೈಬರ್ ಲೋಕದಲ್ಲಿ ಸೃಷ್ಟಿಯಾಗಿರುವ ಕಾಕ್ರೋಚ್ ಪಾರ್ಟಿ ಅಲೆಯು ವಿಸ್ತರಿಸುತ್ತಲೇ ಇದೆ. ಯುವಜನರು ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್ಇ ಉತ್ತರಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಹಗರಣ – ಹೀಗೆ ಹಲವು ಗಂಭೀರ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದೆ. ಸರ್ಕಾರವನ್ನು ಪ್ರಶ್ನಿಸುತ್ತಿದೆ. ಇತಿಹಾಸದ ಪುಟವನ್ನು ನಾವು ತಿರುವಿದಾಗ ವಿಶ್ವದೆಲ್ಲೆಡೆ ನಡೆದಿರುವ ಯುವಜನ ಕ್ರಾಂತಿಗಳಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ. ಸದ್ಯ ಮೋದಿ ಸರ್ಕಾರದ ಅಸಡ್ಡೆ ದೇಶದಲ್ಲಿ ಜಾಗತಿಕ ಯುವಜನ ಕ್ರಾಂತಿಗಳ ಇತಿಹಾಸ ಮರುಕಳಿಸುವಂತೆ ಮಾಡುತ್ತದೆಯೇ?
ಇದನ್ನು ಓದಿದ್ದೀರಾ? ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಜಿರಳೆ ಪಕ್ಷ ಹುಟ್ಟಿದ್ದೇಕೆ?
ಫ್ರಾನ್ಸ್ನ 1968ರ ಯುವಜನ ಕ್ರಾಂತಿ
ಪ್ಯಾರಿಸ್ನ ವಿಶ್ವವಿದ್ಯಾನಿಲಯಗಳಲ್ಲಿನ ಕಟ್ಟುನಿಟ್ಟಿನ ನಿಯಮಗಳು, ಶಿಕ್ಷಣದ ಗುಣಮಟ್ಟದ ಕೊರತೆ ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ಬಗೆಗಿನ ಆತಂಕದಿಂದ 1968ರ ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಶಿಕ್ಷಣ ವ್ಯವಸ್ಥೆಯ ಯಾಂತ್ರಿಕತೆ ಮತ್ತು ಸರ್ಕಾರದ ಯಥಾಸ್ಥಿತಿಯ ವಿರುದ್ಧ ಫ್ರಾನ್ಸ್ನಲ್ಲಿ ವಿದ್ಯಾರ್ಥಿಗಳು ನಡೆಸಿದ ದೊಡ್ಡ ಕ್ರಾಂತಿ ಇದು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದ ಈ ಚಳವಳಿ ನಂತರ ಕೋಟ್ಯಂತರ ಕಾರ್ಮಿಕರು ಕೈಜೋಡಿಸಿ ಇಡೀ ಫ್ರಾನ್ಸ್ ಸರ್ಕಾರವೇ ತಲ್ಲಣಿಸುವಂತೆ ಮಾಡಿತ್ತು. ಅಂದಿನ ಅಧ್ಯಕ್ಷ ಚಾರ್ಲ್ಸ್ ಡಿ ಗಲ್ಲೆ ಸರ್ಕಾರವು ಈ ಕ್ರಾಂತಿಗೆ ನಡುಗಿತು. ಚಾರ್ಲ್ಸ್ ಡಿ ಗೌಲ್ ಕೆಲಕಾಲ ದೇಶವನ್ನೇ ತೊರೆದು ಬೇರೆಡೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕ್ರಾಂತಿಯು ರಾಜಕೀಯವಾಗಿ ತಕ್ಷಣದ ಬದಲಾವಣೆಯನ್ನು ತರಲಿಲ್ಲವಾದರೂ ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆಗಳನ್ನು ತಂದಿದ್ದು ನಿಜ. ನೂತನ ಸರ್ಕಾರ ಕಾರ್ಮಿಕರ ವೇತನ ಹೆಚ್ಚಳ ಮಾಡಿತು. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದಿತು.
ಅರಬ್ ಸ್ಪ್ರಿಂಗ್ – 2010-2011
ಅರಬ್ ಸ್ಪ್ರಿಂಗ್ ಎಂದೇ ಕರೆಯಲಾಗುವ 2010 ಮತ್ತು 2011ರಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ದೇಶಗಳಲ್ಲಿ ನಡೆದ ಈ ಕ್ರಾಂತಿಯು ಯುವಜನರು ಮತ್ತು ನಿರುದ್ಯೋಗ ಹೇಗೆ ಒಂದು ಇಡೀ ಪ್ರದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಅರಬ್ ದೇಶಗಳಲ್ಲಿ ಭ್ರಷ್ಟಾಚಾರ, ಸರ್ವಾಧಿಕಾರ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಭುಗಿಲೆದ್ದ ಬೃಹತ್ ಪ್ರತಿಭಟನೆಗಳು ಮತ್ತು ದಂಗೆಗಳ ಸರಣಿಯೇ ಅರಬ್ ಸ್ಪ್ರಿಂಗ್.
ಟುನೀಶಿಯಾದ ವಿಶ್ವವಿದ್ಯಾನಿಲಯ ಒಂದರಲ್ಲಿ ಮೊಹಮ್ಮದ್ ಬೌಅಜೀಜಿ ಎಂಬ ಯುವಕ ಪದವಿ ಪಡೆದಿದ್ದ. ಆದರೆ ಉದ್ಯೋಗ ಸಿಕ್ಕಿರಲಿಲ್ಲ. ಬದುಕು ಸಾಗಿಸಲು ಹಣ್ಣು ತರಕಾರಿ ಮಾರುತ್ತಿದ್ದ. ಆದರೆ ಪೊಲೀಸರು ಈ ಯುವಕನಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯಿಂದ ಆಕ್ರೋಶಗೊಂಡ ಯುವಜನರು ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದರು. ಸೋಷಿಯಲ್ ಮೀಡಿಯಾ ಮೂಲಕ ಹರಡಿದ ಈ ಕ್ರಾಂತಿ ಟುನೀಶಿಯಾ, ಈಜಿಪ್ಟ್, ಲಿಬಿಯಾ ಮತ್ತು ಯೆಮನ್ ದೇಶಗಳ ಸರ್ವಾಧಿಕಾರಿ ಸರ್ಕಾರಗಳನ್ನು ಪತನಗೊಳಿಸಿತು.
ಶ್ರೀಲಂಕಾದ ಜನತಾ ಕ್ರಾಂತಿ – 2022
ನಮ್ಮದೇ ನೆರೆಯ ದೇಶದಲ್ಲಿ ನಡೆದ ಈ ಕ್ರಾಂತಿ ಆಡಳಿತಗಾರರ ಬೇಜವಾಬ್ದಾರಿತನ ಮತ್ತು ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟು, ಆಹಾರ ಮತ್ತು ಇಂಧನದ ಕೊರತೆ, ಯುವಜನರಿಗೆ ಉದ್ಯೋಗವಿಲ್ಲದ ಪರಿಸ್ಥಿತಿ ನಿರ್ಮಾಣವಾದಾಗ, ಗೋತಬಯ ರಾಜಪಕ್ಸೆ ಕುಟುಂಬದ ಭ್ರಷ್ಟ ಆಡಳಿತದ ವಿರುದ್ಧ ಯುವಜನರು ಬೀದಿಗಿಳಿದಿದ್ದರು. ದೇಶದ ಇತಿಹಾಸದಲ್ಲೇ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸಾಮಾನ್ಯ ನಾಗರಿಕರು ನಡೆಸಿದ ದಂಗೆಯಾಗಿದೆ. ಜನರು ಕೊಲಂಬೊದಲ್ಲಿನ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಗಳಿಗೆ ನುಗ್ಗಿ ತಮ್ಮ ವಶಕ್ಕೆ ಪಡೆದುಕೊಂಡರು. ಈ ಸಾಮೂಹಿಕ ಪ್ರತಿಭಟನೆಯಿಂದಾಗಿ ಅಂತಿಮವಾಗಿ ಪ್ರಬಲ ರಾಜಪಕ್ಸೆ ರಾಜಕೀಯ ವಂಶಾವಳಿಯ ಪತನಗೊಂಡಿತು. ರಾಜಪಕ್ಸೆ ದೇಶ ಬಿಟ್ಟು ಓಡಿಹೋಗಿ ರಾಜೀನಾಮೆ ನೀಡಬೇಕಾಯಿತು.
ತೈವಾನ್ನ ಸನ್ಫ್ಲವರ್ ವಿದ್ಯಾರ್ಥಿ ಚಳವಳಿ- 2014
ತೈವಾನ್ನ ಸನ್ಫ್ಲವರ್ ವಿದ್ಯಾರ್ಥಿ ಚಳವಳಿ 2014ರಲ್ಲಿ ಯುವಜನರು ತಮ್ಮ ದೇಶದ ಆರ್ಥಿಕ ಭವಿಷ್ಯ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ತಾವೇ ಕಾನೂನು ರೂಪಿಸುವ ಸಂಸತ್ತಿಗೆ ನುಗ್ಗಿದ ಅಪರೂಪದ ಹೋರಾಟ. 2014ರ ಮಾರ್ಚ್ 18ರಿಂದ ಏಪ್ರಿಲ್ 10 ರವರೆಗೆ ನಡೆದ ಒಂದು ಐತಿಹಾಸಿಕ ಪ್ರತಿಭಟನೆಯಾಗಿದೆ. ಚೀನಾ ದೇಶದೊಂದಿಗೆ ಅಂದಿನ ತೈವಾನ್ ಸರ್ಕಾರ ಮಾಡಿಕೊಳ್ಳಲು ಹೊರಟಿದ್ದ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಯುವಕರಿಗೆ ಉದ್ಯೋಗ ನಷ್ಟವಾಗುತ್ತದೆ ಮತ್ತು ದೇಶದ ಆರ್ಥಿಕತೆ ಚೀನಾದ ಪಾಲಾಗುತ್ತದೆ ಎಂದು ಯುವಜನರು ಆತಂಕಗೊಂಡು ಬೀದಿಗಿಳಿದಿದ್ದರು. ನೂರಾರು ವಿದ್ಯಾರ್ಥಿಗಳು ತೈವಾನ್ನ ಸಂಸತ್ತಿನಲ್ಲಿ ವಾರಗಳ ಕಾಲ ಪ್ರತಿಭಟಿಸಿದ್ದರು. ಅಂತಿಮವಾಗಿ ಸರ್ಕಾರ ಆ ಒಪ್ಪಂದವನ್ನು ಕೈಬಿಡಬೇಕಾಯಿತು.
ಬಾಂಗ್ಲಾದೇಶದ ಕೋಟಾ ವಿರೋಧಿ ಹೋರಾಟ
ಬಾಂಗ್ಲಾದೇಶದ ಕೋಟಾ ವಿರೋಧಿ ಹೋರಾಟವು ನಿರುದ್ಯೋಗ ಮತ್ತು ಅರ್ಹತೆಗೆ ಮನ್ನಣೆ ಸಿಗದಿದ್ದಾಗ ಯುವಶಕ್ತಿ ಹೇಗೆ ಸಿಡಿದೇಳುತ್ತದೆ ಎಂಬುದಕ್ಕೆ ತೀರಾ ಇತ್ತೀಚಿನ ಉದಾಹರಣೆ. ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ನೀಡಲಾಗಿದ್ದ ಶೇಕಡಾ 30ರಷ್ಟು ಕೋಟಾವನ್ನು (ಮೀಸಲಾತಿ) ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಯತ್ನಿಸಿದಾಗ ಹೋರಾಟ ತೀವ್ರರೂಪಕ್ಕೆ ತಿರುಗಿತು. ನೂರಾರು ಜನ ಮೃತಪಟ್ಟು, ಸಾವಿರಾರು ಜನರು ಗಾಯಗೊಂಡರು. ಅಂತಿಮವಾಗಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಅಂದಿನ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಭಾರತಕ್ಕೆ ಪಲಾಯನಗೊಂಡರು. ಇದು ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು.
ಸದ್ಯ ನಿರುದ್ಯೋಗ ಹೆಚ್ಚುತ್ತಲೇ ಇದೆ. ಸದ್ಯ ಕೈಯಲ್ಲಿ ಪದವಿ ಪ್ರಮಾಣಪತ್ರವಿದ್ದರೂ ಉದ್ಯೋಗವಿಲ್ಲ. ನಿರುದ್ಯೋಗದಿಂದ ಬೇಸತ್ತಿರುವ ಕೋಟ್ಯಂತರ ಯುವಕರಿಗೆ ಸದ್ಯ ಕಾಕ್ರೋಚ್ ಜನತಾ ಪಾರ್ಟಿ ತಮ್ಮ ಧ್ವನಿಯಾಗಿ ಕಾಣಿಸುತ್ತಿದೆ. ನೀಟ್ ಅಕ್ರಮಗಳು , ಪ್ರಶ್ನೆ ಪತ್ರಿಕೆ ಸೋರಿಗೆ ದಂಧೆಗಳು ಪ್ರಾಮಾಣಿಕವಾಗಿ ಓದುವ ವಿದ್ಯಾರ್ಥಿಗಳ ಭವಿಷ್ಯವನ್ನೇ ಕಗ್ಗತ್ತಲಿಗೆ ದೂಡಿವೆ. ಈ ನಡುವೆ ಇಂದಿನ ಯುವ ಪೀಳಿಗೆ ರಾಜಕೀಯ ಪಕ್ಷಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿವೆ. ಅದಕ್ಕಾಗಿಯೇ ಅವರು ವ್ಯಂಗ್ಯ, ಮೀಮ್ಸ್ ಮತ್ತು ಡಿಜಿಟಲ್ ಚಳವಳಿಗಳ ಮೂಲಕ ಸತ್ಯವನ್ನು ಬೆತ್ತಲೆಗೊಳಿಸುವ ‘ಕಾಕ್ರೋಚ್ ಜನತಾ ಪಾರ್ಟಿ’ಯಂತಹ ವಿಭಿನ್ನ ಆಂದೋಲನಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಮೋದಿ ಸರ್ಕಾರ ಈಗಲೂ ಎಚ್ಚೆತ್ತು ಯುವಜನರ ಸಮಸ್ಯೆಗಳಿಗೆ ಕಿವಿಯಾಗದಿದ್ದರೆ, ಯುವಜನರ ಉದ್ಯೋಗ, ಶಿಕ್ಷಣದ ಭದ್ರತೆ ಮತ್ತು ಪಾರದರ್ಶಕತೆಯನ್ನು ನಿರ್ಲಕ್ಷಿಸಿದರೆ, ಈ ಸೈಬರ್ ಲೋಕದ ಆಕ್ರೋಶವು ಬೀದಿಗಿಳಿದು ಮತ್ತೊಂದು ಐತಿಹಾಸಿಕ ಯುವ ಕ್ರಾಂತಿಗೆ ನಾಂದಿ ಹಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇತಿಹಾಸದುದ್ದಕ್ಕೂ ಯುವಜನರ ಹೋರಾಟವು ದೊಡ್ಡ ದೊಡ್ಡ ಸಾಮ್ರಾಜ್ಯಗಳ ಪತನಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



