ಗೃಹಿಣಿಯರ (Homemakers) ನಿರಂತರ ಮತ್ತು ಅಮೂಲ್ಯವಾದ ಶ್ರಮವನ್ನು ಗೌರವಿಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಮನೆಯನ್ನು ಮುನ್ನಡೆಸುವ ಮಹಿಳೆಯರನ್ನು ಕೇವಲ ‘ಗೃಹಿಣಿ’ ಎನ್ನುವ ಬದಲು ‘ರಾಷ್ಟ್ರ ನಿರ್ಮಾಪಕರು’ ಎಂದು ಕರೆಯುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ಇದನ್ನು ಓದಿದ್ದೀರಾ? SIR | ಇದು ಪ್ರಭುಗಳೇ ಪ್ರಜೆಗಳ ಆಯ್ದುಕೊಳ್ಳುವ ಕಾಲ; ಸುಪ್ರೀಂ ಮೂಕ ಪ್ರೇಕ್ಷಕ!
ಮೋಟಾರು ವಾಹನ ಅಪಘಾತಗಳಲ್ಲಿ ಗೃಹಿಣಿಯರು ಮರಣ ಹೊಂದಿದರೆ ಅಥವಾ ಅಂಗವೈಕಲ್ಯಕ್ಕೆ ಒಳಗಾದರೆ, ಅವರ ಕುಟುಂಬಕ್ಕೆ ನಷ್ಟ ಪರಿಹಾರವನ್ನು ಲೆಕ್ಕಹಾಕಲು ಗೃಹಿಣಿಯರ ಸಾಂಕೇತಿಕ ಮಾಸಿಕ ಆದಾಯವನ್ನು ಕನಿಷ್ಠ ₹30,000 ಎಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ಈ ಹಿಂದೆ ಗೃಹಿಣಿಯರ ಆದಾಯವನ್ನು ಕೇವಲ ದಿನಗೂಲಿ ಕಾರ್ಮಿಕರ ವೇತನಕ್ಕೆ ಹೋಲಿಸಿ ಲೆಕ್ಕ ಹಾಕಲಾಗುತ್ತಿತ್ತು. ಆದರೆ ಈಗ, ಅವರು ನೀಡುವ ಕೌಟುಂಬಿಕ ಆರೈಕೆ ಮತ್ತು ಸೇವೆಯ ನಷ್ಟವನ್ನು ಪ್ರತ್ಯೇಕ, ಪ್ರಮುಖ ಪರಿಹಾರದ ವಿಭಾಗವಾಗಿ ಪರಿಗಣಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ತೀರ್ಪಿನ ವೇಳೆ ನ್ಯಾಯಾಲಯವು, “ಮದುವೆ ಎಂದರೆ ಕೇವಲ ಮನೆಯ ಕೆಲಸಕ್ಕಾಗಿ ಒಬ್ಬಾಕೆಯನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಎಂದಲ್ಲ” ಎಂದು ಖಡಕ್ ಆಗಿ ಹೇಳಿದೆ. ಕೌಟುಂಬಿಕ ಜವಾಬ್ದಾರಿಗಳು ಇಬ್ಬರ ಮೇಲೂ ಇರುತ್ತವೆ ಮತ್ತು ಮದುವೆಯ ನಂತರವೂ ಮಹಿಳೆಯರ ವೈಯಕ್ತಿಕ ಆಸೆ, ವೃತ್ತಿ ಬದುಕು ಮತ್ತು ಅಸ್ತಿತ್ವ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಉದ್ಯೋಗಸ್ಥ ಪತಿ ಹಾಗೂ ಮಕ್ಕಳ ಯಶಸ್ಸಿನ ಹಿಂದೆ ಗೃಹಿಣಿಯರ ಶ್ರಮ ಅಡಗಿರುತ್ತದೆ. ಅವರ ಭಾವನಾತ್ಮಕ ಮತ್ತು ದೈಹಿಕ ಶ್ರಮವು ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದರೂ, ಅದರ ಪ್ರಭಾವ ಇಡೀ ದೇಶದ ಪ್ರಗತಿಯ ಮೇಲಿರುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
“ಮನೆಯನ್ನು ಮುನ್ನಡೆಸುವವರು ಕೇವಲ ಇತರರ ಮೇಲೆ ಅವಲಂಬಿತರಾಗಿದ್ದಾರೆ ಎನ್ನುವ ಆಲೋಚನೆಯೇ ತಪ್ಪು. ವಾಸ್ತವದಲ್ಲಿ, ಮನೆಯ ದುಡಿಯುವ ಸದಸ್ಯರೇ ಗೃಹಿಣಿಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಆದರೆ ಈ ಸತ್ಯಕ್ಕೆ ಸಿಗಬೇಕಾದ ಗೌರವ ಸಿಗುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2024ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿ ಪ್ರಕರಣ ಇದಾಗಿದೆ. ಹೈಕೋರ್ಟ್ ಸಂತ್ರಸ್ತೆಯ ಪತಿ ಮತ್ತು ಮಕ್ಕಳು ಸೇರಿದಂತೆ ಕುಟುಂಬಕ್ಕೆ 8 ಲಕ್ಷ ರೂ.ಗಳಿಗೂ ಹೆಚ್ಚು ಪರಿಹಾರವನ್ನು ನೀಡಿದೆ.
ಈ ತೀರ್ಪು ದೇಶಾದ್ಯಂತ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣಗಳಲ್ಲಿ (MACT) ಬಾಕಿ ಇರುವ ಸಾವಿರಾರು ಪ್ರಕರಣಗಳಲ್ಲಿ ಗೃಹಿಣಿಯರ ಕುಟುಂಬಕ್ಕೆ ನ್ಯಾಯಯುತ ಮತ್ತು ಗೌರವಾನ್ವಿತ ಪರಿಹಾರ ಸಿಗುವಂತೆ ಮಾಡಲಿದೆ.





