"ಕುಲವನರಸುವರೆ ಜಾತಿ ಸಂಕರವಾದ ಬಳಿಕ?" ಎನ್ನುವ ಬಸವಣ್ಣನವರ ಎಚ್ಚರಿಕೆಯ ಮಾತಿನಂತೆ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಲಿಂಗಧಾರಿಗಳು ಒಂಬತ್ತು ನೂರು ವರ್ಷಗಳ ಹಿಂದೆ ಏನಾಗಿದ್ದರು ಎನ್ನುವುದು ಈಗ ಅಪ್ರಸ್ತುತ. ಬಸವಣ್ಣನವರ ಧರ್ಮದೊಳಗೆ ಬಂದ ಮೇಲೆ ಇನ್ನು ಮುಂದೆ ಹೇಗಿರಬೇಕು ಎನ್ನುವ ಚಿಂತನೆ ಇಂದಿನ ಅತ್ಯಗತ್ಯ.
ಲಿಂಗಾಯತ ಧರ್ಮಕ್ಕೆ ನಿಖರವಾದ ಇತಿಹಾಸ ಕೇವಲ ಒಂಬೈನೂರು ವರ್ಷಗಳಷ್ಟು ಮಾತ್ರ ಹಳೆಯದು. ಅದಕ್ಕಿಂತ ಹಿಂದೆ ಲಿಂಗಾಯತ ಧರ್ಮವಿರಲಿಲ್ಲ. ವೀರಶೈವರು ತಮ್ಮ ಧರ್ಮದ ಉಗಮದ ಕಾಲಮಾನ ಮನುಷ್ಯನ ಉಗಮಕ್ಕಿಂತ ಹಿಂದಕ್ಕೆ ಕೊಂಡೊಯ್ದಿದ್ದಾರೆ. ಬ್ರಾಹ್ಮಣರು ಸಹ ತಮ್ಮ ಧರ್ಮ ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದದ್ದು ಎಂದು ಬಿಂಬಿಸುತ್ತಾರೆ. ತಮ್ಮ ಧರ್ಮ ಪ್ರಾಚೀನವಾದದ್ದು ಎಂದು ಹೇಳಿಕೊಳ್ಳುವುದು ಒಂದು ಗುಣಪಡಿಸಲಾಗದ ಮನೋರೋಗವಷ್ಟೆ. ಧರ್ಮದ ಶ್ರೇಷ್ಠತೆಯು ಅದರ ಪ್ರಾಚೀನತೆಯಿಂದ ನಿರ್ಧರಿಸಲಾಗದು, ಧರ್ಮದ ಶ್ರೇಷ್ಠತೆ ಆ ಧರ್ಮದ ಜೀವಪರ, ಜನಪರ ಸಿದ್ಧಾಂತ ಮತ್ತು ಆಚರಣೆಯಿಂದ ನಿರ್ಧರಿಸಲಾಗುತ್ತದೆ. ಲಿಂಗಾಯತ ಅಥವಾ ಅದರ ಉಪಪಂಗಡಗಳು ಅತ್ಯಂತ ಪ್ರಾಚೀನ ಎಂದು ನಾವು ಸಾಧಿಸುವ ಅಗತ್ಯವಿಲ್ಲ. ಪ್ರಾಚೀನತೆಯ ಮನೋರೋಗದ ಗೀಳನ್ನು ಅಂಟಿಸಿಕೊಂಡಿರುವ ವೀರಶೈವರಿಗೆ ಹಿರಿಯ ಸಮಾಜವಾದಿ ಚಿಂತಕ, ಮಾಜಿ ಶಾಸಕ ನೀಲಗಂಗಯ್ಯಾ ಪೂಜಾರ್ ಅವರು ಹೀಗೆ ಹೇಳುತ್ತಾರೆ:
“ವೀರಶೈವರಿಗೆ ನಾನು ಒಂದು ಮಾತು ಸ್ಪಷ್ಟಪಡಿಸುತ್ತೇನೆ, ಬಸವಣ್ಣನಿಲ್ಲದ ನಿಮ್ಮ ಧರ್ಮಕ್ಕೆ ಏನೂ ಅರ್ಥವಿಲ್ಲ. ಅದು ವೈದಿಕ ಶೈವದ ಒಂದು ಪ್ರಭೇದವೆಂಬ ಅರ್ಥ ಬರುವಂತೆ ಅದನ್ನು ವೀರಶೈವವೆಂದು ಕರೆದುಕೊಳ್ಳುವ ಮೌಢ್ಯವನ್ನು ಬಿಡುವುದು ಒಳಿತು. ವೀರಶೈವವು ಲಿಂಗವಂತರಿಗೆ ಒಂದು ಐತಿಹಾಸಿಕ ಸಂಧುಕಟ್ಟಿನ ಸಂದರ್ಭದಲ್ಲಿ ಉಪಯೋಗಿಸಲಾದ ಪಾರಿಭಾಷಿಕ ಶಬ್ದವೇ ವಿನಃ ಅದೊಂದು ಸ್ವಯಂ ಸಂಪೂರ್ಣ ಧರ್ಮವಲ್ಲ. ಅದರ ಪ್ರಾಚೀನ ಮೊಳಕೆಯನ್ನು ಹರಪ್ಪ ಮೊಹಾಂಜದಾರೊ ಉತ್ಖನನದಲ್ಲಿ ದೊರೆತ ಮುದ್ರಿಕೆಗಳ್ಳಲ್ಲಾಗಲಿ, ವೇದೊಪನಿಷತ್ತುˌ ಆಗಮ ಪುರಾಣಗಳಲ್ಲಿ ಹುಡುಕುವ ವ್ಯರ್ಥ ಪ್ರಯಾಸ ಮಾಡಬೇಡಿರಿ. ಲಿಂಗಾಯತರಿಗಿರುವ ವೇದೋಪನಿಷತ್ತುಗಳ ನೆಲೆಯನ್ನು ಬ್ರಾಹ್ಮಣನು ಸಮ್ಮತಿಸುವುದಿಲ್ಲ. ಯಾವ ಹಿಂದೂ ಪವಿತ್ರ ಗ್ರಂಥಗಳಲ್ಲಿ ಏನೇ ಬರೆದಿರಲಿ, ಯಾವ ಸಾಹಿತ್ಯದಲ್ಲಿ ಏನೇ ಹೇಳಿರಲಿ, ಒಂದು ಮಾತ್ರ ನಿಶ್ಚಯ, ಬಸವನಿಗಿಂತ ಪೂರ್ವದಲ್ಲಿ ಖಚಿತ ಸಿದ್ಧಾಂತ ಹಾಗು ಪ್ರಾಸ್ಥಾಪಿತ ಸಾಮಾಜಿಕ ಸಂಘಟನೆಯನ್ನು ಹೊಂದಿದ ಲಿಂಗಧಾರಿ ಧಾರ್ಮಿಕ ವ್ಯವಸ್ಥೆ ಎಂದೂ ಇರಲಿಲ್ಲ. ಬಸವಣ್ಣನ ಇಷ್ಟಲಿಂಗದ ಕಲ್ಪನೆಯೇ ಬೇರೆ. ಅದನ್ನು ಬಸವಪೂರ್ವದ ತಪ್ತಮುದ್ರಾ ಲಿಂಗವಾಗಲಿ, ನಾಭಿ, ಶಿಖೆಗಳಲ್ಲಿ ಧರಿಸುತ್ತಿದ್ದ ಲಿಂಗವಾಗಗಲಿ ಇಷ್ಟಲಿಂಗವಾಗಿ ಕಲ್ಪಿಸಬಾರದು. ಬಸವಣ್ಣನ ಲಿಂಗವು ನುಡಿಯಲ್ಲಿ ಮಾತ್ರ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಘಟಸರ್ಪವಾಗುವಂತ ಆಚಾರ ಶುದ್ಧಿಯ ಸಂಕಲ್ಪಕ್ಕೆ ಪ್ರಮಾಣವಾದದ್ದು.”
“ಅದಕ್ಕಾಗಿ ಬಸವಣ್ಣನ ಲಿಂಗಾಯತದ ಬೇರುಗಳನ್ನು ಬಸವಣ್ಣನಾಚೆಯ ದಿನಗಳಲ್ಲಿ ಹುಡುಕುವ ವೀರಶೈವರ ಕಾರ್ಯ ವ್ಯರ್ಥ ಕಾಲಹರಣವಷ್ಟೆ. ಧರ್ಮವಿಹೀನ ಅವರ್ಣೀಯ ಜನಾಂಗ ಮತ್ತು ಜನಪದೀಯ ಸಮುದಾಯಕ್ಕೆ ಅವರ ಅಧ್ಯಾತ್ಮದ ಹಸಿವನ್ನು ಹಿಂಗಿಸುವುದಕ್ಕಾಗಿ ಕರ್ಮ ಜಂಜಡಗಳಿಂದ ಮುಕ್ತವಾದ ಒಂದು ಸರಳ ಅರ್ಥವಾಗುವ ಧರ್ಮವನ್ನು ಬಸವಣ್ಣ ಹುಟ್ಟುಹಾಕಿದ್ದನೆಂಬುದಷ್ಟೇ ನಿಜ, ಉಳಿದದ್ದೆಲ್ಲ ಸುಳ್ಳು. ಸಿದ್ದಾಂತಶಿಖಾಮಣಿಯ ಪ್ರವೇಶದಿಂದಾಗಿ ಕರ್ನಾಟಕದ ಶರಣಧರ್ಮದ ಪ್ರವಾಹದಲ್ಲಿ ಕಲಕು ನೀರು ಬಂದು ಸೇರಿದೆ. ಅನೇಕ ಒತ್ತಡಗಳಿಗೆ ಸಿಕ್ಕ ಕಾಳಾಮುಖ,ಪಾಶುಪತ, ತಮಿಳು ಶೈವ, ತೆಲಗು ಶ್ರೌತಶೈವಗಳು ಶರಣರ ಲಿಂಗಾಯತದೊಂದಿಗೆ ವಿಲಿನವಾಗಿ ಲಿಂಗಾಯತವನ್ನು ಕುಲಗೆಡಿಸಿದವು. ಆ ಮೊದಲು ಆಗಮದಲ್ಲಿ ಕ್ವಚಿತ್ತಾಗಿ ಪ್ರಸ್ತಾಪಿಸುತ್ತ ಬಂದಿದ್ದ ವೀರಶೈವ ಶಬ್ದವನ್ನು ಹೊಸ ಲಿಂಗಾಯತ ಧರ್ಮಕ್ಕೆ ಪಾರಿಭಾಷಿಕ ಹೆಸರನ್ನಾಗಿ ಉಪಯೋಗಿಸಲಾಂಭಿಸಿದರು. ಈ ವೀರಶೈವವು ಬಸವಣ್ಣನವರ ಪೂರ್ವದಲ್ಲೇ ಅಸ್ಥಿತ್ವದಲ್ಲಿದ್ದಿದ್ದರೆ ಉಪನಯನ, ಮೌಂಜೀಬಂಧನ, ಯಜ್ಞಯಾಗಾದಿಗಳು, ವೇದಪಠಣ, ವೈದಿಕ ಧರ್ಮಸೂತ್ರಗಳ ಪರಿಪಾಲನೆಗಳ ವಿರುದ್ಧ ಬಸವಣ್ಣ ಬಂಡೇಳಲು ಕಾರಣಗಳೇ ಇದ್ದಿರಲಿಲ್ಲ. ಹೇಳಿಕೇಳಿ ಬಸವಣ್ಣ ಹುಟ್ಟಿನಿಂದ ಶೋತ್ರಿಯ ಶೈವರು-ಶಿವಾದ್ವೈತಿಗಳು. ಬಸವಣ್ಣನವರು ಬಸವಣ್ಣನವರಾದದ್ದು ಆ ಬಂಡಾಯದಿಂದಲೆ. ಆನಂತರ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.”
ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು
“ಶಿದ್ಧಾಂತ ಶಿಖಾಮಣಿಯ ಮೂಲಕ ಮತ್ತೆ ಅವರನ್ನು ಶೋತ್ರಿಯ ಶಿವಾದ್ವೈತಿಗಳನ್ನಾಗಿ ರೂಪಿಸುವ ಪ್ರಯತ್ನಗಳಾಗಬಾರದು. ಸಿದ್ಧಾಂತ ಶಿಖಾಮಣಿಯು ವೀರಶೈವವನ್ನು ಪ್ರವೇಶಿಸುವಾಗ ಒಂಟಿಯಾಗಿ ಬಂದಿಲ್ಲ. ತನ್ನ ಜ್ಞಾತಿ ಬಂಧಗಳಾದ ಶ್ರೀಕರಭಾಷ್ಯ, ಕ್ರೀಯಾಸಾರಗಳನ್ನು ಜೊತೆಗೂಡಿಸಿಕೊಂಡು ಬಂದಿದೆ. ಬಸವಣ್ಣನು ಕಿತ್ತೊಗೆದ ಜನೀವಾರವನ್ನು ವೀರಶೈವಕ್ಕೆ ಗ್ರಾಹ್ಯವಾಗಿಸಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲವೆಂಬುದು ಬೇರೆ ಮಾತು.”
~ ನೀಲಗಂಗಯ್ಯ ಪುಜಾರ್
1-10-1997
(ಹಿಂದೂತ್ವಕ್ಕೆ ಪ್ರತಿದ್ವಂದ್ವಿಯಾಗಿ ಹನ್ನೆರಡನೇ ಶತಮಾನದಲ್ಲಿ ಉದಿಸಿ ಬಂದ ಲಿಂಗಾಯತ ಧರ್ಮ ಎಂಬ ತಮ್ಮ ಪುಸ್ತಕದಲ್ಲಿ).
ಈ ಮಾತುಗಳು ಲಿಂಗಾಯತ ಧರ್ಮದ ಒಳಗಿನ ಎಲ್ಲಾ ಉಪಪಂಗಡಗಳಿಗೂ ಸಮನಾಗಿ ಅನ್ವಯವಾಗುತ್ತವೆ. “ಕುಲವನರಸುವರೆ ಜಾತಿ ಸಂಕರವಾದ ಬಳಿಕ?” ಎನ್ನುವ ಬಸವಣ್ಣನವರ ಎಚ್ಚರಿಕೆಯ ಮಾತಿನಂತೆ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಲಿಂಗಧಾರಿಗಳು ಒಂಬತ್ತು ನೂರು ವರ್ಷಗಳ ಹಿಂದೆ ಏನಾಗಿದ್ದರು ಎನ್ನುವುದು ಈಗ ಅಪ್ರಸ್ತುತ. ಬಸವಣ್ಣನವರ ಧರ್ಮದೊಳಗೆ ಬಂದ ಮೇಲೆ ಇನ್ನು ಮುಂದೆ ಹೇಗಿರಬೇಕು ಎನ್ನುವ ಚಿಂತನೆ ಇಂದಿನ ಅತ್ಯಗತ್ಯ. ಲಿಂಗೈಕ್ಯ ಡಾ. ಎಂ. ಎಂ. ಕಲಬುರ್ಗಿಯವರು ಲಿಂಗಾಯತ ಉಪಪಂಗಡಗಳ ಕುರಿತು ಅವುಗಳ ಐತಿಹಾಸಿಕ ಹಿನ್ನೆಲೆ, ಬಸವಪೂರ್ವದ ಪೂರ್ವಾಪರ ಕ್ರೂಢೀಕರಿಸುವ “ಲಿಂಗಾಯತ ಉಪಪಂಗಡಗಳ ದಾಖಲೀಕರಣ” ಎಂಬ ಗ್ರಂಥವನ್ನು ಸಂಪಾದಿಸಿದರು. ಅದು ಚಿತ್ತರಗಿ-ಇಲಕಲ್ ಮಠ ಪ್ರಕಟಿಸಿತು. ಆದರೆ, ಅಲ್ಲಿ ಬಹುತೇಕ ಉಪಪಂಗಡಗಳ ಕುರಿತು ಬರೆಯಲಾದ ಲೇಖನಗಳು ಪೌರಾಣಿಕ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಬರೆದವುಗಳು. ಸೋಜಿಗದ ಸಂಗತಿ ಎಂದರೆ, ಜಾನ್ ಪೀಟರ್ ಶೌಟನ್ ಎಂಬ ವಿದೇಶಿ ಲೇಖಕ ತನ್ನ ಅಧ್ಯಯನ ಪ್ರವಾಸದ ಮೂಲಕ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ “ರೆವಲೂಷನ್ ಆಫ್ ಮಿಸ್ಟಿಕ್ಸ್” ಎನ್ನುವ ಗ್ರಂಥದಲ್ಲಿ ಲಿಂಗಾಯತ ಉಪಪಂಗಡಗಳ ಕುರಿತು ಅತ್ಯಂತ ವೈಜ್ಞಾನಿಕ ಹಾಗು ವಿಶ್ವಾಸಾರ್ಹ ಮಾಹಿತಿ ನೀಡಿದ್ದಾನೆ. ಆ ಗ್ರಂಥವನ್ನು ೨೦೦೦ ಇಸ್ವಿಯಲ್ಲಿ ಪ್ರೊ. ಟಿ. ಆರ್. ಚಂದ್ರಶೇಖರ್ ಅವರು “ಅನುಭಾವಿಗಳ ಕ್ರಾಂತಿ” ಎನ್ನುವ ಶಿರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಗದುಗಿನ ಲಿಂಗಾಯತ ಅಧ್ಯಯನ ಸಂಸ್ಥೆ ಗ್ರಂಥ ಪ್ರಕಟಿಸಿದೆ.
ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ- ಭಾಗ 2 | ಪಂಚಮಸಾಲಿಗಳ ಪ್ರತ್ಯೇಕ ಪೀಠಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಕಲಬುರ್ಗಿ
ಹಾಗಾಗಿ, ಪಂಚಮಸಾಲಿ ಉಪವರ್ಗದ ಊಹಾತ್ಮಕ ಪ್ರಾಚೀನತೆಯಾಗಲಿ, ಹಿನ್ನೆಲೆಯಾಗಲಿ ಇಂದಿನ ಅಗತ್ಯವಲ್ಲ. ಈಗ ಈ ಉಪವರ್ಗ ತುಳಿದಿರುವ ದಾರಿ ಎಂತದ್ದು, ಆ ಉಪವರ್ಗದಲ್ಲಿ ಉದ್ಭವಿಸಿದ ವಿಪ್ಲವ, ತಲ್ಲಣ, ಬೇಗುದಿಯನ್ನು ಹೇಗೆ ನೀಡಿ ಕೊಂಡು ಸಮಾಜವನ್ನು ಸರಿದಾರಿಗೆ ತರಬೇಕು ಎನ್ನುವ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅದು ಪಂಚಮಸಾಲಿಗಳು ಸ್ನೇಹಿತನಂತೆ ವರ್ತಿಸಿ ತಮ್ಮನ್ನು ಹಾಳು ಮಾಡುತ್ತಿರುವ ಅಸಲಿ ಶತೃವನ್ನು ಗುರುತಿಸಬೇಕು. Identifying our enemy ಅಥವಾ ನಮ್ಮ ನಿಜವಾದ ಶತೃವನ್ನು ಗುರುತಿಸುವುದು ನಮ್ಮ ಸಂಘಟನೆಯ ಮೊದಲ ಹೆಜ್ಜೆಯಾಗಬೇಕು. ಈಗ ಪಂಚಮಸಾಲಿ ಉಪವರ್ಗದಲ್ಲಿ ಹುಟ್ಟಿದ ಗೊಂದಲ ಕೇವಲ ಪಂಚಮಸಾಲಿ ಉಪವರ್ಗಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆಯಾಗಿರದೆ ಅದು ಸಮಸ್ತ ಲಿಂಗಾಯತ ಧರ್ಮಿಯರ ಸಮಸ್ಯೆಯಾಗಿದೆ. ಏಕೆಂದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುವ ಪಂಚಮಸಾಲಿಗಳ ಈ ಕವಲು ಹಾದಿಯ ಹಿಂದೆ ಅದೇ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸಿ, ಅಸಂಖ್ಯಾತ ಶರಣರ ಮಾರಣಹೋಮ ಮಾಡಿ, ವಚನ ಸಾಹಿತ್ಯವನ್ನು ಸುಟ್ಟ ವೈದಿಕ ಶಕ್ತಿಗಳ ಕೈವಾಡವಿದೆ ಎನ್ನುವುದು ನಮಗೆಲ್ಲ ಎಚ್ಚರಿಕೆಯ ಗಂಟೆಯಾಗಬೇಕಿದೆ. ಪಂಚಮಸಾಲಿ ಉಪವರ್ಗದ ಸಂಘಟನೆಗಳು, ಪೀಠಗಳು, ಪಕ್ಷಾತೀತವಾಗಿ ರಾಜಕಾರಣಿಗಳು, ವಿದ್ವಾಂಸರು, ಸಾಮಾನ್ಯ ಜನರು, ಉಳಿದ ಲಿಂಗಾಯತ ಉಪವರ್ಗದ ಪ್ರಾಜ್ಞರ ಜೊತೆಗೆ ಸೇರಿ ಈಗಿನ ಗೊಂದಲವನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಏಕೆಂದರೆ, ಈ ಗೊಂದಲದ ಹಿಂದಿರುವ ಲಿಂಗಾಯತರ ಸಮಾನ ವೈರಿಯು ಸಾಮಾನ್ಯನಾದವನಲ್ಲ ಎನ್ನುವ ಸಂಗತಿಗೆ ಇವರೆಲ್ಲರು ಮಹತ್ವ ಕೊಡಬೇಕಾಗಿದೆ. ಪಂಚಮಸಾಲಿ ಉಪವರ್ಗದಲ್ಲಿ ಈಗ ಮೂಡಿರುವ ಗೊಂದಲದ ಹಿಂದಿರುವ ದುಷ್ಟ ಶಕ್ತಿಗಳ ಕುರಿತು ಮುಂಬರುವ ಇಡೀ ಕಂತುಗಳಲ್ಲಿ ವಿವರವಾಗಿ ಬರೆಯಲಿದ್ದೇನೆ.
ಇದನ್ನೂ ಓದಿ… ಪಂಚಮಸಾಲಿ ಪೀಠಗಳ ಗೊಂದಲ ಭಾಗ-3 |ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ?
ಮುಂದುವರೆಯುವುದು….

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ



