ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಉಪವರ್ಗದಲ್ಲಿಯೂ ತಮ್ಮದೇ ಪೀಠ ಸ್ಥಾಪಿಸಬೇಕೆಂಬ ಯೋಚನೆಗಳು ಆರಂಭಗೊಂಡವು. ಆಗ ವೀರಶೈವ ಪಂಚಪೀಠಗಳು ಅಕ್ಷರಶಃ ನಲುಗಿ ಹೋದವು. ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಸಂಪನ್ಮೂಲವಾಗಿದ್ದರು. ಹೇಗಾದರೂ ಮಾಡಿ ಪಂಚಮಸಾಲಿ ಪೀಠ ಆಗದಂತೆ ತಡೆಯುವ ಎಲ್ಲಾ ಹುನ್ನಾರಗಳು ವೀರಶೈವ ಪಂಚಪೀಠಗಳು ಆರಂಭಿಸಿದವು
ಕರ್ನಾಟಕದಲ್ಲಿ ಲಿಂಗಾಯತ ಮಠ ಪರಂಪರೆಗೆ ತನ್ನದೇ ಆದ ಹಿನ್ನೆಲೆ, ಹಿರಿಮೆ ಹಾಗು ಗರಿಮೆ ಇದೆ. ಕಲ್ಯಾಣ ಕ್ರಾಂತಿಯನ್ನು ವೈದಿಕರು ರಕ್ತಪಾತದ ಪ್ರತಿಕ್ರಾಂತಿಯ ಮೂಲಕ ಹಣಿದ ನಂತರ ಯಡಿಯೂರ ಸಿದ್ಧಲಿಂಗ ಶಿವಯೋಗಿಗಳು ಬಸವ ಧರ್ಮದ ತತ್ವ ಸಿದ್ಧಾಂತಗಳನ್ನು ಪ್ರಚಾರ ಹಾಗು ಪ್ರಸಾರ ಮಾಡಲು ಬಸವಪ್ರಣೀತ ವಿರಕ್ತ ಮಠ ಪರಂಪರೆ ಸ್ಥಾಪಿಸಿದರು. ಹದಿನೈದು-ಹದಿನಾರನೆಯ ಶತಮಾನದಲ್ಲಿ ಬಸವ ಪರಂಪರೆಯ ಲಿಂಗಾಯತ ಮಠಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡವು. ವಿರಕ್ತ ಪರಂಪರೆಯನ್ನು ನಕಲು ಮಾಡಿ ಅದಾಗಲೇ ಲಿಂಗಾಯತ ಧರ್ಮಕ್ಕೆ ವಲಸೆ ಬಂದಿದ್ದ ಆಂಧ್ರದ ಆರಾಧ್ಯ ಬ್ರಾಹ್ಮಣರು ವೀರಶೈವ ಚತುರಾಚಾರ್ಯ ಪರಿಕಲ್ಪನೆ ಹುಟ್ಟುಹಾಕಿ ಮುಂದೆ ಪಂಚಾಚಾರ್ಯರಾಗಿ ಪಂಚ ಪೀಠಗಳನ್ನು ಸ್ಥಾಪಿಸಿದರು. ವಿರಕ್ತ ಮಠಗಳು ಅನ್ನ, ಶಿಕ್ಷಣ, ಉದ್ಯೋಗದ ಸೇವೆಯ ಜೊತೆಗೆ ಬಸವ ತತ್ವ ಮತ್ತು ಲಿಂಗಾಯತ ಧರ್ಮವನ್ನು ಪ್ರಚಾರ ಮಾಡಿದರೆ ವೀರಶೈವ ಪಂಚಪೀಠಗಳು ಪೂಜಾ, ಪ್ರಸಾದ, ಪಾದಪೂಜೆ, ಪಲ್ಲಕ್ಕಿ, ಕಾಣಿಕೆ, ಹೋಮ, ಹವನ, ರುದ್ರಾಭಿಷೇಕ, ಗದ್ದುಗೆ ನಿರ್ಮಾಣ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಮುಂತಾದ ಬಸವ ತತ್ವಕ್ಕೆ ವಿರೋಧವಾಗಿರುವ ಬ್ರಾಹ್ಮಣ್ಯದ ಆಚರಣೆಗೆ ಜೋತು ಬಿದ್ದವು. ಆಶ್ಚರ್ಯವೆಂದರೆ ವಿರಕ್ತ ಹಾಗು ಪಂಚಪೀಠ ಎರಡೂ ಪರಂಪರೆಯ ಮಠಗಳಿಗೆ ಜಾತಿ ಜಂಗಮರೇ ಪೀಠಸ್ಥರಾದರು. ಶ್ರೀಮಂತ ಹಾಗು ಬಡ ಲಿಂಗಾಯತರ ದೇಣಿಗೆ, ದಾಸೋಹದಿಂದ ಮಠಗಳು ಬಲಶಾಲಿಯಾಗಿ ಬೆಳೆದವು.
ಮಠಗಳು ಶಿಕ್ಷಣೋದ್ಯಮ, ಬಡ್ಡಿ ವ್ಯವಹಾರ, ಮತ್ತಿತರ ವ್ಯಾಪಾರ ಕೇಂದ್ರಗಳಾದವು. ಧರ್ಮಪ್ರಚಾರ, ಬಸವ ತತ್ವವನ್ನು ಮಠಗಳು ಮರೆತು ಕಾರ್ಪೋರೇಟ್ ಉದ್ಯಮಗಳಾಗಿ ರೂಪಾಂತರಗೊಂಡವು. ಎರಡೂ ಪರಂಪರೆಯ ಮಠಗಳ ಯಜಮಾನಿಕೆ ಜಾತಿ ಜಂಗಮರ ನಿಯಂತ್ರಣಕ್ಕೆ ಹೋಯಿತು. ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಜಾತಿ ಜಂಗಮರು ಮಠಗಳು ಹಾಗು ಇಡೀ ಲಿಂಗಾಯತ ಸಮಾಜದ ಫಲಾನುಭವಿಗಳಾದರು. ಕಾಲಾನಂತರದಲ್ಲಿ ಲಿಂಗಾಯತ ಮಠಗಳಿಗೆ ಜಾತಿ ಜಂಗಮರು ಮಾತ್ರ ಮಠಾಧೀಶರಾಗಬೇಕು ಎನ್ನುವ ಕಡ್ಡಾಯ ನಿಯಮ ರೂಪಿಸಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮಠಗಳಿಗೆ ವಟುಗಳನ್ನು ತಯ್ಯಾರಿಸುವ ತರಬೇತಿ ಶಾಲೆ ಆರಂಭಿಸಲಾಯಿತು. ಅದು ವಚನೋಕ್ತವಾಗಿರದೆ ಆಗಮೋಕ್ತವಾಗಿದ್ದು, ಕನ್ನಡವನ್ನು ಕಡೆಗಣಿಸಿ ಸಂಸ್ಕೃತದಲ್ಲಿ ತರಬೇತಿ ನೀಡಲಾರಂಭಿಸಿತು. ಇದರಿಂದ ಲಿಂಗಾಯತ ತತ್ವ ಸಿದ್ಧಾಂತಗಳು ಹಾಗು ಆಚರಣೆಗಳು ಶೈವೀಕರಣ, ವೈದಿಕೀರಣಗೊಂಡವು. ಲಿಂಗಾಯತ ಸಮಾಜ ಅಶುದ್ಧೀಕರಣಗೊಂಡು ಹಾದಿ ಬಿಡಲು ಮಠಗಳೇ ನೇರವಾಗಿ ಹೊಣೆಯಾದವು. ಮಠಾಧೀಶರು ಧರ್ಮ ಪ್ರಚಾರ ಮರೆತು ಐಶಾರಾಮಿ ಜೀವನ ನಡೆಸುವುದು ಕಂಡು ಲಿಂಗಾಯತ ಸಮಾಜದಲ್ಲಿ ಅನೇಕ ಪ್ರಶ್ನೆಗಳು ಎದ್ದವು. ಲಿಂಗಾಯತ ಮಠಗಳಿಗೆ ಜಾತಿ ಜಂಗಮರು ಪೀಠಸ್ಥರಾದರೆ, ಮಠದ ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ, ಆರ್ಥಿಕ ವ್ಯವಹಾರದ ಆಯಕಟ್ಟಿನ ಸ್ಥಾನಗಳು ಮೇಲ್ವರ್ಗದ ಜನರು ಆವರಿಸಿದರು. ಈ ಧರ್ಮವನ್ನು ಕಟ್ಟಿದ, ಬೆಳೆಸಿದ, ಮತ್ತು ರಕ್ಷಿಸಿದ ಕುಂಬಾರ, ಕಂಬಾರ, ನೇಕಾರ, ಹಡಪದ, ಮಡಿವಾಳ ಮುಂತಾದ ಕಾಯಕ ವರ್ಗದ ಜನರು ನಿರ್ಲಕ್ಷಕ್ಕೆ ಒಳಗಾದರು.
ಇದನ್ನೂ ಓದಿ ಲೇಖನ ಸರಣಿ | ಪಂಚಮಸಾಲಿ ಸಮುದಾಯ: ಇತಿಹಾಸದ ಹಾದಿ ಮತ್ತು ಇಂದಿನ ತಲ್ಲಣಗಳು- ಭಾಗ 1
ಈ ನಿರ್ಲಕ್ಷದ ಕಾರಣದಿಂದ ಕೊಡೆಕಲ್ಲು ಬಸವಣ್ಣ, ಸಿದ್ಧಪ್ಪಯ್ಯಾ ಪರಂಪರೆ, ಮುಂದೆ ಸಿದ್ಧಾರೂಢ ಹಾಗು ಶಿವಾನಂದರ ಪರಂಪರೆಗಳು ಲಿಂಗಾಯತ ಧರ್ಮದಿಂದ ವಿಮುಖವಾದವು. ಜಗಮೇತರರು ಹಾಗು ಪಂಚಮಸಾಲಿಗಳಾಗಿದ್ದ ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು ಬಸವ ತತ್ವ ಪ್ರಚಾರದ ಧ್ವಜವನ್ನು ಹಿಡಿದು ಲಿಂಗಾಯತ ಧರ್ಮದ ಬಸವ ಧರ್ಮ ಪೀಠ ಸ್ಥಾಪಿಸಿದ ಮೇಲೆ ವಿರಕ್ತ ಮಠಗಳಿಗೆ ಬಸವ ತತ್ವ ಪ್ರಚಾರ ಮಾಡುವುದು ಅನಿವಾರ್ಯವಾಯಿತು. ಜಂಗಮೇತರರು ಸಮರ್ಥವಾಗಿ ಮಠ ಸ್ಥಾಪಿಸಿ ಬಸವ ತತ್ವ ಪ್ರಚಾರ ಮಾಡಬಲ್ಲರು ಎನ್ನುವುದು ರುಜುವಾತು ಆದಂತೆ ಅನೇಕ ಜಂಗಮೇತರ ಭಕ್ತ ವರ್ಗದ ಸಾಧಕರು ಮಠಾಧೀಶರಾಗಹತ್ತಿದರು. ಇದಕ್ಕಿಂತ ಅನೇಕ ದಶಕಗಳ ಹಿಂದೆ ಲಿಂಗಾಯತ ಉಪ ವರ್ಗಗಳು ಪಂಚಪೀಠಗಳ ಕಪಟತನ, ಜಾತಿ ಶ್ರೇಷ್ಠತೆಯ ವಿರುದ್ಧ ತಿರುಗಿ ಬಿದ್ದವು. ಅದರ ಪರಿಣಾಮದಿಂದ ಗುಳೇದಗುಡ್ಡದಲ್ಲಿ ಶ್ರೀಮದ್ ಜಗದ್ಗುರು ಹಿಮವತ್ ಕೇದಾರ ಏಕೋರಾಮ ಲಿಂಗಾಯತ ನೇಕಾರ ಪೀಠ ತಲೆ ಎತ್ತಿತ್ತು. ಶರಣ ಜೇಡರ ದಾಸಿಮಯ್ಯನವರ ಮಗ ಏಕೋರಾಮನನ್ನು ಏಕೋರಾಮಾರಾಧ್ಯ ಎಂದು ಹೆಸರು ಬದಲಾಯಿಸಿ ವೀರಶೈವರು ಕೇದಾರ ಪೀಠ ಸೃಷ್ಠಿಸಿದ್ದರು. ನೇಕಾರ ಪೀಠದ ಸ್ಥಾಪನೆಯಿಂದ ಲಿಂಗಾಯತ ನೇಕಾರ ವರ್ಗದವರು ಪಂಚಪೀಠಗಳಿಂದ ದೂರ ಸರಿದರು. ಆನಂತರ ಇನ್ನೊಬ್ಬ ಶರಣ ಮರುಳ ಸಿದ್ಧರ ಹೆಸರಲ್ಲಿ ಮರುಳಾರಾಧ್ಯ ಎಂದು ಹೆಸರು ಬದಲಾಯಿಸಿ ಪಂಚಪೀಠದವರು ಉಜ್ಜಯಿನಿ ಪೀಠವನ್ನು ಸ್ಥಾಪಿಸಿದ್ದರು.
ಇದನ್ನೂ ಓದಿ ಪಂಚಮಸಾಲಿಗಳ ‘ಫಜೀತಿ’: ಧರ್ಮದರ್ಶಿ ಬಿ ಸಿ ಉಮಾಪತಿಯವರು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವರೇ?
ಮರುಳಸಿದ್ಧರನ್ನು ವೀರಶೈವರು ಅಪಹರಿಸಿದ್ದು ಸಹಿಸಿಕೊಳ್ಳದೆ ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಸಾದರ ಉಪ ವರ್ಗವು ತರಳಬಾಳು ಸದ್ಧರ್ಮ ಪೀಠವನ್ನು ಸ್ಥಾಪಿಸಿತು. ಇದರಿಂದ ಅತ್ಯಂತ ಶ್ರೀಮಂತ ಸಾದರ ಉಪವರ್ಗವು ಪಂಚಪೀಠಗಳಿಂದ ದೂರ ಸರಿಯಿತು. ಈ ಬೆಳವಣಿಯಿಂದ ಲಿಂಗಾಯತ ಭಕ್ತ ವರ್ಗದ ಮೇಲೆ ನಿಯಂತ್ರಣ ಹಾಗು ಯಜಮಾನಿಕೆ ಹೊಂದಿದ್ದ ಪಂಚ ಪೀಠದ ಜಾತಿ ಜಂಗಮರ ಪ್ರಭಾವವು ಕುಂಟಿತಗೊಳ್ಳಲಾರಂಭಿಸಿತು. ಅಲ್ಲಿಯವರೆಗೆ ಕೇವಲ ಜಾತಿ ಜಂಗಮರು ಮಾತ್ರ ಗುರುವಾಗಬಲ್ಲರು ಎನ್ನುವ ಸುಳ್ಳನ್ನು ನಂಬಿಸಿ ಭಕ್ತ ವರ್ಗವನ್ನು ಶೋಷಿಸುತ್ತಿದ್ದ ವೀರಶೈವ ಪಂಚ ಪೀಠಗಳಿಗೆ ಭಾರೀ ಹೊಡೆತ ಬಿದ್ದಿತು. ಇದರಿಂದ ಪ್ರೇರಣೆಗೊಂಡು ಉಳಿದ ಲಿಂಗಾಯತ ಉಪ ವರ್ಗಗಳು ತಮ್ಮ ತಮ್ಮ ಉಪ ವರ್ಗದ ಪ್ರತ್ಯೇಕ ಪೀಠಗಳನ್ನು ಸ್ಥಾಪಿಸಿದವು. ಚಿತ್ರದುರ್ಗದ ಶಿವಮೂರ್ತಿ ಶರಣರು ಎಲ್ಲಾ ಲಿಂಗಾಯತ ಉಪ ವರ್ಗಗಳ ಪೀಠ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಉಪವರ್ಗದಲ್ಲಿಯೂ ತಮ್ಮದೇ ಪೀಠ ಸ್ಥಾಪಿಸಬೇಕೆಂಬ ಯೋಚನೆಗಳು ಆರಂಭಗೊಂಡವು. ಆಗ ವೀರಶೈವ ಪಂಚಪೀಠಗಳು ಅಕ್ಷರಶಃ ನಲುಗಿ ಹೋದವು. ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಸಂಪನ್ಮೂಲವಾಗಿದ್ದರು. ಹೇಗಾದರೂ ಮಾಡಿ ಪಂಚಮಸಾಲಿ ಪೀಠ ಆಗದಂತೆ ತಡೆಯುವ ಎಲ್ಲಾ ಹುನ್ನಾರಗಳು ವೀರಶೈವ ಪಂಚಪೀಠಗಳು ಆರಂಭಿಸಿದವು.
ಮುಂದುವರೆಯುವುದು…

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ





