ಜಮೀರ್- ಸಿದ್ದರಾಮಯ್ಯ ನಡುವೆ ಬಿರುಕು; ಕಾಂಗ್ರೆಸ್ ಎಡವುತ್ತಿರುವುದೆಲ್ಲಿ?

Date:

ಪರಮ ಆಪ್ತರೆಂದೇ ಪರಿಗಣಿತರಾಗಿರುವ ಜಮೀರ್ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ನಿಧಾನಕ್ಕೆ ಬಯಲಾಗುತ್ತಿದೆ. "ಅವನು ನನ್ನ ವಿರುದ್ಧವೇ ದಾವಣಗೆರೆಯಲ್ಲಿ ಕೆಲಸ ಮಾಡಿದ್ದಾನೆ" ಎಂದು ಸಿದ್ದರಾಮಯ್ಯನವರು ಸಿಡಿಮಿಡಿಗೊಂಡಿರುವ ವಿಡಿಯೋ ವೈರಲ್ ಆಗಿದೆ.

“ಜಮೀರ್ ಅಹ್ಮದ್ ಖಾನ್ ತನ್ನ ಸಮುದಾಯದ ಪರ ನಿಂತಿದ್ದೇ ಮಹಾಪರಾಧವಾಯಿತೆ? ಕಾಂಗ್ರೆಸ್ ಪಕ್ಷದೊಳಗೆ ಅಲ್ಪಸಂಖ್ಯಾತರ ಪರವಾಗಿ ಯಾರೂ ದನಿ ಎತ್ತದೆ ಇದ್ದಾಗ ಜಮೀರ್ ಮಾತನಾಡಿದ್ದೇ ತಪ್ಪೇ?” ಎಂದು ಮುಸ್ಲಿಂ ಸಮುದಾಯ ಕೇಳಲು ಆರಂಭಿಸಿದೆ.

- Advertisement -

ಪರಮ ಆಪ್ತರೆಂದೇ ಪರಿಗಣಿತರಾಗಿರುವ ಜಮೀರ್ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ನಿಧಾನಕ್ಕೆ ಬಯಲಾಗುತ್ತಿದೆ. “ಅವನು ನನ್ನ ವಿರುದ್ಧವೇ ದಾವಣಗೆರೆಯಲ್ಲಿ ಕೆಲಸ ಮಾಡಿದ್ದಾನೆ” ಎಂದು ಸಿದ್ದರಾಮಯ್ಯನವರು ಸಿಡಿಮಿಡಿಗೊಂಡಿರುವ ವಿಡಿಯೋ ವೈರಲ್ ಆಗಿದೆ. ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಜಮೀರ್ ಅವರಿಗೆ ಸಚಿವ ಸ್ಥಾನ ದೊರಕಿಸಬೇಕು ಎಂದು ಮನವಿ ಮಾಡಲು ಜಮೀರ್ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಸಮಾಧಾನ ಹೊರಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಇದನ್ನು ಓದಿದ್ದೀರಾ? ಜಮೀರ್ ಅವರದ್ದು ಎನ್ನಲಾದ ಆಡಿಯೊ ವೈರಲ್ ಹಿಂದೆ ಯಾರಿದ್ದಾರೆ?

ಸಿದ್ದರಾಮಯ್ಯ ಮತ್ತು ಜಮೀರ್ ನಡುವೆ ಮನಸ್ತಾಪ ಉಂಟಾಗಿರುವುದು ಹಾಗೂ ಜಮೀರ್ ಅವರಿಗೆ ಮೊದಲ ಸುತ್ತಿನ ಖಾತೆ ಹಂಚಿಕೆಯಲ್ಲಿ ಸ್ಥಾನ ಸಿಗದೆ ಇರುವುದು ಹಲವು ರಾಜಕೀಯ ಚರ್ಚೆಗಳಿಗೆ ಆಸ್ಪದ ನೀಡಿದೆ. ಈ ಬಿರುಕು ದೊಡ್ಡದಾದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

“ಜಮೀರ್ ಅವರ ಹೆಸರು ಮೊದಲ ಸುತ್ತಿನ ಸಚಿವರ ಲಿಸ್ಟ್‌ನಲ್ಲೇ ಅಂತಿಮವಾಗಿತ್ತು. ಆದರೆ ಪ್ರಭಾವಿ ನಾಯಕರೊಬ್ಬರು ಅದನ್ನು ತಡೆಹಿಡಿದರು” ಎಂಬ ಚರ್ಚೆಗಳು ಎದ್ದಿರುವ ಹೊತ್ತಿನಲ್ಲೇ, ಸಿದ್ದರಾಮಯ್ಯನವರ ಅಸಮಾಧಾನವೂ ಅದಕ್ಕೆ ತಳುಕು ಹಾಕಿಕೊಳ್ಳುತ್ತಿದೆ. ಆದರೆ ಈ ಒಡಕು ಕಾಂಗ್ರೆಸ್ ಪಕ್ಷಕ್ಕೂ ಮತ್ತು ಮುಸ್ಲಿಂ ಸಮುದಾಯದೊಳಗೂ ಯಾವ ಪರಿಣಾಮಗಳನ್ನು ಉಂಟು ಮಾಡಬಲ್ಲದು ಎಂಬುದನ್ನು ನೋಡಬೇಕಾಗುತ್ತದೆ.

ದಾವಣಗೆರೆ ಚುನಾವಣೆಗೆ ಮುನ್ನ ಜಮೀರ್ ಅವರು ಪಕ್ಷದೊಳಗೆ ಪ್ರಾತಿನಿಧ್ಯದ ದನಿ ಎತ್ತಿದ್ದರು ಎನ್ನುತ್ತವೆ ಮೂಲಗಳು.

“ದಾವಣೆಗೆರೆಯಲ್ಲಿ 84,000 ಮುಸ್ಲಿಂ ಮತದಾರರಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೆ ನಾವು ಗೆಲ್ಲುತ್ತೇವೆ. ಮುಸ್ಲಿಂ ಕಡಿಮೆ ಸಂಖ್ಯೆಯಲ್ಲಿದ್ದರೆ ಕಷ್ಟವಾಗುತ್ತದೆ. ಈವರೆಗೆ ಶಾಮನೂರು ಶಿವಶಂಕರಪ್ಪನವರನ್ನು ಸಮುದಾಯ ಬೆಂಬಲಿಸುತ್ತಾ ಬಂದಿತ್ತು. ಅವರು ತೀರಿ ಹೋಗಿದ್ದಾರೆ. ಸಮುದಾಯಕ್ಕೆ ಆ ಸೀಟ್ ಬಿಟ್ಟುಕೊಡಿ ಎಂದು ಪಕ್ಷದ ಆಂತರಿಕ ಸಭೆಯಲ್ಲಿ ಜಮೀರ್ ಆಗ್ರಹಿಸಿದ್ದರು. ದೆಹಲಿಯ ವೀಕ್ಷಕರೂ ಈ ಸಂದರ್ಭದಲ್ಲಿ ಹಾಜರಿದ್ದರು” ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಆ ನಂತರದಲ್ಲಿ ಜಮೀರ್ ಅವರ ಮೇಲೆ ಪಕ್ಷದ ನಾಯಕರು ಕೆಂಗಣ್ಣು ಬಿಟ್ಟಂತೆ ಕಾಣುತ್ತದೆ. ಎಲ್ಲ ಪಕ್ಷದೊಳಗೂ ತಮ್ಮತಮ್ಮ ಜಾತಿಗಳ ಪರ ರಾಜಕಾರಣಿಗಳು ದನಿ ಎತ್ತುವುದು ಸರ್ವೇ ಸಾಮಾನ್ಯ. ಆದರೆ ಜಮೀರ್ ಅವರನ್ನು ಈ ಕಾರಣಕ್ಕೆ ವಿಚಿತ್ರವಾಗಿ ನಡೆಸಿಕೊಳ್ಳುತ್ತಿರುವುದು ಏತಕ್ಕೆ ಎಂಬುದು ಸಮುದಾಯದ ಪ್ರಶ್ನೆ.

“ಜಮೀರ್ ಅವರನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರೇ ತಿರಸ್ಕಾರದಿಂದ ನೋಡಿದರು. ‘ಆತ ಪ್ರಚಾರಕ್ಕೆ ಬರದಿದ್ದರೇನಂತೆ ಬಿಡ್ರಿ, ಅವನ್ಯಾವನು?’ ಎಂದು ಅಸಡ್ಡೆಯ ಮಾತನಾಡಿದರು. ಇದು ಜಮೀರ್ ಅವರ ಸ್ವಾಭಿಮಾನಕ್ಕೆ ಪೆಟ್ಟು ನೀಡಿತ್ತು. ಆದರೂ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕೊನೆಯಲ್ಲಿ ಹೋಗಿ ಪ್ರಚಾರವನ್ನೂ ಮಾಡಿದ್ದರು” ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸುತ್ತವೆ. ಈ ಎಲ್ಲ ಬೆಳವಣಿಗೆಗಳ ಕಾರಣ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಗೆಲುವಿನ ಅಂತರ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತದೆ. ಹೊಸ ಸಂಪುಟ ರಚನೆಯ ಸಂದರ್ಭದಲ್ಲಿ ಜಮೀರ್ ಅವರದ್ದು ಎನ್ನಲಾದ ಆಡಿಯೊ ವೈರಲ್ ಆಗುತ್ತದೆ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ಮುಸ್ಲಿಂ ನಾಯಕತ್ವವನ್ನು ಬಲಿಕೊಡಲಾಗುತ್ತಿದೆಯೇ ಎಂಬ ಆತಂಕವಂತೂ ಸಮುದಾಯದೊಳಗೆ ಇದೆ.

“ಮುಸ್ಲಿಂ ಶಾಸಕರೊಳಗೆ ಮೂರು ಗುಂಪುಗಳನ್ನು ಮಾಡಿದ್ದು ಯಾರು? ಕಾಂಗ್ರೆಸ್ಸಿನ ಹಿರಿಯ ನಾಯಕರೇ ಈ ಒಡಕಿಗೆ ಕಾರಣ. ಜಮೀರ್ ಅವರಿಗೆ ಸಮುದಾಯದೊಂದಿಗೆ ಗಾಢ ಒಡನಾಟವಿದೆ. ಅದನ್ನು ಕಾಂಗ್ರೆಸ್ ಅಲ್ಲಗಳೆದರೆ, ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ” ಎನ್ನುತ್ತಾರೆ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್.

2012ರ ವಿಧಾನ ಪರಿಷತ್ ಚುನಾವಣೆಯನ್ನು ನೆನಪಿಸಿಕೊಳ್ಳುವ ಹನೀಫ್ ಅವರು, “ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದ ಭೈರತಿ ಸುರೇಶ್ ಅವರನ್ನು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಅವರ ವಿರುದ್ಧ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಯಾರು? ಇದೇ ಸಿದ್ದರಾಮಯ್ಯನವರು ತಾನೇ? ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲವೇ? ಸಮುದಾಯದ ಪರ ನಿಂತು ಬಂಡಾಯ ಎದ್ದಿದ್ದು ತಪ್ಪೇ? ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂದು ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಅವರು ಕೆಪಿಸಿಸಿ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿದರು. ಇದಕ್ಕೆ ಅವಕಾಶ ಕೊಟ್ಟವರು ಯಾರು? ಪಕ್ಷದ ಒಳಗಿನ ಬಿಕ್ಕಟ್ಟನ್ನು ಶಮನ ಮಾಡುವುದು ಬಿಟ್ಟು, ಈ ರೀತಿ ಪತ್ರಿಕಾಗೋಷ್ಠಿಗೆ ಅವಕಾಶ ನೀಡಿದ್ದು ಕೂಡ ಪ್ರಮಾದವಲ್ಲವೇ” ಎಂದು ಪ್ರಶ್ನಿಸುತ್ತಾರೆ.

ಮುಂದುವರಿದು, “ಎಸ್‌ಡಿಪಿಐ ಪರ ಪರೋಕ್ಷವಾಗಿ ಜಮೀರ್ ಬೆಂಬಲ ನೀಡಿರಬಹುದು. ಇಂತಹ ಕೆಲಸಗಳನ್ನು ಎಲ್ಲ ರಾಜಕಾರಣಿಗಳು ಸಾಮಾನ್ಯವಾಗಿ ಮಾಡುತ್ತಾರೆ. ಕಾಂಗ್ರೆಸ್ ನೊಳಗೆ ಪಕ್ಷ ವಿರೋಧಿ ಚಟುವಟಿಕೆ ಹೊಸದೇನಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಜಿ. ಪರಮೇಶ್ವರ್ ಅವರ ಸೋಲಿನಲ್ಲಿ ಪಾತ್ರ ವಹಿಸಿರಲಿಲ್ಲವೇ? ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಅವರನ್ನು ಮನೆಗೆ ಕಳುಹಿಸಿರಲಿಲ್ಲವೇ? ಜಮೀರ್ ಅವರು ತನ್ನ ಸ್ವಂತಕ್ಕಾಗಿ ಇಂತಹ ಕೆಲಸ ಮಾಡಿದ್ದಾರಾ? ಇಲ್ಲ. ಸಮುದಾಯಕ್ಕಾಗಿ ದನಿ ಎತ್ತಿದ್ದಾರೆ. ಪಕ್ಷದೊಳಗೆ ಸಮುದಾಯದ ಪರ ದನಿ ಎತ್ತುವವರೇ ಇಲ್ಲ. ಇದ್ದದ್ದು ಇವರೊಬ್ಬರೇ” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

ಇದನ್ನು ಓದಿದ್ದೀರಾ? ಶ್ರೀಮಂತ ಸಿಎಂಗಳ ಪಟ್ಟಿ | ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ, ಮೊದಲ ಸ್ಥಾನ ಯಾರಿಗೆ?

ಜಮೀರ್ ಅವರನ್ನು ಪಕ್ಷ ಹೊರದೂಡಿದರೆ ಆಗುವ ಪರಿಣಾಮಗಳನ್ನು ಹನೀಫ್ ವಿವರಿಸುತ್ತಾರೆ. “ಮುಸ್ಲಿಂ ಯುವಕರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ ಎಂದು ಎಚ್ಚೆತ್ತುಕೊಂಡಿದ್ದಾರೆ. ತಾವು ಕೊಟ್ಟ ಭರವಸೆಗಳನ್ನು ತಮ್ಮ ಅಧಿಕಾರವಧಿಯಲ್ಲಿ ಸಿದ್ದರಾಮಯ್ಯನವರು ಈಡೇರಿಸಲಿಲ್ಲ. ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಲಿಲ್ಲ. ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲಿಲ್ಲ. ಮತಾಂತರ ನಿಷೇಧ ಕಾಯ್ದೆ ಯಥಾಸ್ಥಿತಿಯಲ್ಲೇ ಇದೆ. ಕಾಂಗ್ರೆಸ್ ಬಗ್ಗೆ ಮುಸ್ಲಿಂ ಸಮುದಾಯ ಸಮಾಧಾನ ಹೊಂದಿಲ್ಲ. ಇವರು ಮೋಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ದಟ್ಟವಾಗುತ್ತಿದೆ. ಮುಸ್ಲಿಮರು ಏನು ಹೇಳಿದರೂ ಕೇಳುತ್ತಾರೆ ಎಂದು ಭಾವಿಸುವುದು ತಪ್ಪು. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೇ ಇದರ ಪರಿಣಾಮಗಳನ್ನು ಕಾಂಗ್ರೆಸ್ ಎದುರಿಸಬಹುದು. ಉದಾಹರಣೆಗೆ ಬೆಂಗಳೂರು ಸೆಂಟ್ರಲ್‌ನಲ್ಲಿ 30 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಕಾಂಗ್ರೆಸ್ ನವರು ಮುಸ್ಲಿಮರಿಗೆ 10 ಸೀಟ್ ಕೊಟ್ಟರೆ, 10ರಲ್ಲಿಯೂ ಅವರನ್ನು ಗೆಲ್ಲಿಸುತ್ತಾರೆ. ಉಳಿದ ಕ್ಷೇತ್ರಗಳಲ್ಲಿ ತಮಗೆ ಬೇಕಾದವರನ್ನು ಗೆಲ್ಲಿಸುತ್ತೇವೆ ಎಂದು ಸಮುದಾಯ ನಿರ್ಧರಿಸಿದರೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳುತ್ತದೆ. ಮುಸ್ಲಿಂ ಸಮುದಾಯದ ಒಳಗೆ ಚರ್ಚೆಯಾಗುತ್ತಿರುವ ಈ ವಿಚಾರ ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಮೈಮರೆತು ಕೂತಿದ್ದಾರೆ” ಎಂದು ಎಚ್ಚರಿಸುತ್ತಾರೆ.

“ಸಿದ್ದರಾಮಯ್ಯನವರು ತಮ್ಮ ಸಮುದಾಯದ ವ್ಯಕ್ತಿಗಳ ಪರ ನಿಲ್ಲಬಹುದು. ಜಮೀರ್ ತಮ್ಮ ಸಮುದಾಯದ ಪರ ನಿಲ್ಲಬಾರದೆ? ಈವರೆಗೆ ಸಿದ್ದರಾಮಯ್ಯನವರ ಪರವಾಗಿಯೇ ಜಮೀರ್ ಕೆಲಸ ಮಾಡಿದ್ದಲ್ಲವೇ?” ಎಂದು ಕೇಳುತ್ತಾರೆ.

‘ಸಮುದಾಯವೇ ಅಂತಿಮ ಹೈಕಮಾಂಡ್’

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ರಾಯಚೂರು ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕರಾಗಿ ಕೆಲಸ ಮಾಡಿರುವ ಹ್ಯಾರೀಸ್ ಸಿದ್ಧಿಕಿ ಅವರು ಈ ಬೆಳವಣಿಗೆಗಳನ್ನು ಸಮುದಾಯ ಹೇಗೆ ನೋಡುತ್ತಿದೆ ಎಂದು ‘ಈದಿನ’ದ ಜತೆ ಹಂಚಿಕೊಂಡಿದ್ದಾರೆ.

“ಜಮೀರ್ ಹಾಗೂ ಮುಸ್ಲಿಂ ನಾಯಕರೆಲ್ಲ ಸೇರಿ 2023ರಲ್ಲಿ ಇದೇ ಸಿದ್ದರಾಮಯ್ಯನವರಿಗಾಗಿಯೇ ಶೇ.100ರಷ್ಟು ಮುಸ್ಲಿಮರನ್ನು ಒಗ್ಗಟ್ಟು ಮಾಡಿದರು. ಜಮೀರ್ ಅವರು ಮುಂದಾಳತ್ವ ವಹಿಸಿದ್ದರು. ಮುಸ್ಲಿಮರು ಈ ಪರಿಯಲ್ಲಿ ಒಂದಾಗದಿದ್ದರೆ ಕನಿಷ್ಠ 75 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿತ್ತು. ಇದನ್ನು ಸಿದ್ದರಾಮಯ್ಯನವರು ಪರಿಗಣನೆಗೆ ತೆಗೆದುಕೊಳ್ಳಬೇಕು. ಒಂದು ಘಟನೆ ಅವರ ವಿರುದ್ಧ ಆಗಿರಬಹುದು. ಸಮುದಾಯದಿಂದ ಒತ್ತಡ ಇದ್ದಿದ್ದರಿಂದ ಜಮೀರ್ ಆ ನಿಲುವು ತಾಳಬೇಕಾಯಿತು. ಸಮುದಾಯ, ಜನಸಾಮಾನ್ಯರು ಪಕ್ಷಕ್ಕಿಂತ ಮುಖ್ಯ ಎಂಬುದು ನೆನಪಿರಲಿ. ಅವರೇ ಅಂತಿಮ ಹೈಕಮಾಂಡ್” ಎಂದು ಅಭಿಪ್ರಾಯಪಡುತ್ತಾರೆ.

“ಜಮೀರ್ ಅವರ ರಾಜಕೀಯ ರೀತಿಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರಲ್ಲಿ ನಾನೂ ಒಬ್ಬ. ಆದರೆ ಅವರು ಸಮುದಾಯದ ಮಾಸ್ ಲೀಡರ್ ಎಂಬುದು ನಿಜ” ಎನ್ನುವ ಅವರು, “ಮುಸ್ಲಿಂ ನಾಯಕತ್ವದೊಳಗೆ ಕಾಂಗ್ರೆಸ್ ಪಕ್ಷ ವಿಭಜನೆ ಮಾಡುತ್ತಿದೆ ಎಂದು ಸಮುದಾಯ ಭಾವಿಸಿದೆ. ರಾಜೀಸಂಧಾನ ಮಾಡಬೇಕಿದ್ದವರು ಎಡವಿದ್ದಾರೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

“ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಗೆ ವೋಟ್ ಹಾಕಲು ಹೇಳಿದ್ದರು. ಅದು ಪಕ್ಷ ವಿರೋಧಿಯಲ್ಲವೇ? ಎನ್ ಎಸ್ ಬೋಸರಾಜ್ ವಿರುದ್ಧ ಮೂವರು ದೂರು ನೀಡಿದ್ದರು. ಬೋಸರಾಜ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಬರೀ ಜಬ್ಬಾರ್, ಸಲೀಂ, ರಿಜ್ವಾನ್, ಜಮೀರ್- ಇವರಷ್ಟೇ ಕ್ರಮ ತೆಗೆದುಕೊಳ್ಳಲು ಸಿಗುತ್ತಾರಾ? ಬೇರೆಯವರು ಸಿಗುವುದಿಲ್ಲವೇ? ಈ ಸಮುದಾಯ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪರವಾಗಿದೆ. ಆದರೂ ಕ್ರಮ ತೆಗೆದುಕೊಳ್ಳುತ್ತೀರಿ ಎಂದರೆ ಏನರ್ಥ?” ಎಂದು ಪ್ರಶ್ನಿಸುತ್ತಾರೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...