ಇತಿಹಾಸವನ್ನು ಸಂಘಪರಿವಾರ ಹೇಗೆ ತಿರುಚುತ್ತದೆ ಎಂಬುದಕ್ಕೆ ಈ ಪ್ರಕರಣ Classic Example. ‘ನೆಹರೂ ಅವರೇ ಆರ್‌ಎಸ್‌ಎಸ್‌ಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರು’ ಎಂಬ ನಕಲಿ ಇತಿಹಾಸ ರಚನೆಯಾಗಿದ್ದು 2018ರಲ್ಲಿ!
ಆರ್‌ಎಸ್‌ಎಸ್ ಅಂದರೆ ‘ರಾಷ್ಟ್ರೀಯ ಸುಳ್ಳರ ಸಂಘ’ ಎಂದು ದಾಖಲಿಸಿದವರು ಆರ್‌ಎಸ್‌ಎಸ್ ನೊಂದಿಗೆ ಸುದೀರ್ಘ ಒಡನಾಟದಲ್ಲಿದ್ದ ಎ.ಕೆ.ಸುಬ್ಬಯ್ಯನವರು. ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿದ್ದ ಸುಬ್ಬಯ್ಯ ಅವರು ಬರೆದ ‘ಆರ್‌ಎಸ್‌ಎಸ್ ಅಂತರಂಗ’ ಕೃತಿಯು ಸಂಘಪರಿವಾರದ ಅಸಲಿ ಉದ್ದೇಶಗಳನ್ನು ಬಯಲಿಗೆಳೆದಿತ್ತು. ಆರ್‌ಎಸ್‌ಎಸ್ ಎಂದರೆ ಸುಳ್ಳರ ಸಂಘ ಎನ್ನುವ ಸುಬ್ಬಯ್ಯನವರ ಮಾತು ಇತಿಹಾಸದುದ್ದಕ್ಕೂ ಅನೇಕ ಸಲ ಸಾಬೀತಾಗಿದೆ.
ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸುವುದು ಆರ್‌ಎಸ್‌ಎಸ್ ನವರಿಗೆ ಕರಗತವಾದ ವಿದ್ಯೆ. ಅವರು ಇತಿಹಾಸವನ್ನು ತಿರುಚುವುದಷ್ಟೇ ಅಲ್ಲ, ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ 1963ರ ಗಣರಾಜ್ಯೋತ್ಸವ ಪಥಸಂಚಲನದ ಪ್ರಕರಣ ಒಂದು Classic Example.
ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್‌ನ ಕಾನೂನು ಮಾನ್ಯತೆಗಳನ್ನು ಪ್ರಶ್ನಿಸಿ, ಅದರ ಚಟುವಟಿಕೆಯ ಬಗ್ಗೆ ಎದ್ದಿರುವ ಗೊಂದಲಗಳನ್ನು ಮುಖ್ಯವಾಗಿಟ್ಟುಕೊಂಡು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದ ತಕ್ಷಣ ಸಂಘಿ ಪಡೆ ಮುಗಿಬಿದ್ದಿತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಢಗೆ ಸೇರಿದಂತೆ ಹಲವು ಬಿಜೆಪಿ ಬೆಂಬಲಿಗರು ಈ ಸುಳ್ಳನ್ನು ಹೇಳತೊಡಗಿದರು. ಆದರೆ ಬಿಜೆಪಿಯವರು ಹೇಳುವ ಅರ್ಧಸತ್ಯಗಳನ್ನು ನಂಬಿಕೊಂಡರೆ, ಇತಿಹಾಸಕ್ಕೆ ಅಪಚಾರ ಎಸಗಿದಂತೆ.
‘1963ರ ಗಣರಾಜ್ಯೋತ್ಸವ ಪರೇಡ್‌ಗೆ ಆರ್ಎಸ್ಎಸ್‌ನವರನ್ನು ನೆಹರೂ ಆಹ್ವಾನಿಸಿದ್ದರು’ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಪತ್ರಕರ್ತ, ಇತಿಹಾಸತಜ್ಞ ‘ಧೀರೇಂದ್ರ ಕೆ. ಝಾ’ ಅವರು ಈ ಹಿಂದೆಯೇ ಸತ್ಯಾಂಶಗಳನ್ನು ಹೊರಗಿಟ್ಟಿದ್ದಾರೆ. ‘ಗಾಂಧೀಸ್ ಅಸಾಸಿನ್: ದ ಮೇಕಿಂಗ್ ಆಫ್ ನಾಥೂರಾಮ್ ಗೋಡ್ಸೆ ಅಂಡ್ ಹಿಸ್ ಐಡಿಯಾ ಆಫ್ ಇಂಡಿಯಾ’, ‘ಗೋಲ್ವಾಲ್ಕರ್: ದ ಮಿತ್ ಬಿಹೈಂಡ್ ದ ಮ್ಯಾನ್, ದ ಮ್ಯಾನ್ ಬಿಹೈಂಡ್ ದ ಮಷಿನ್’ ಥರದ ಖ್ಯಾತ ಕೃತಿಗಳನ್ನು ಬರೆದಿರುವ ಝಾ ಅವರು, 2023ರ ಜನವರಿ 17ರಂದು ‘ಕ್ಯಾರವಾನ್’ನಲ್ಲಿ ಪ್ರಕಟಿಸಿರುವ ಲೇಖನ ಸಂಘಿಗಳ ಸುಳ್ಳುಗಳನ್ನು ಅನಾವರಣ ಮಾಡುತ್ತದೆ.
“ಆರ್‌ಎಸ್‌ಎಸ್‌ಗೆ ನೆಹರೂ ಆಹ್ವಾನ ನೀಡಿದ್ದರು ಎಂಬ ಪ್ರಚಾರವು ಇತಿಹಾಸಕ್ಕೆ ಸುಳ್ಳನ್ನು ಸೇರಿಸುವ ಪ್ರಯತ್ನ” ಎನ್ನುತ್ತಾರೆ ಝಾ. ಸಂಗ್ರಹವಾಗಿರುವ ದಾಖಲೆಗಳು ಇಂತಹ ನಿರೂಪಣೆಗಳನ್ನು ಅಲ್ಲಗಳೆದು, ವಿಭಿನ್ನ ಸಂಗತಿಗಳನ್ನು ತಿಳಿಸುತ್ತವೆ ಎನ್ನುವ ಅವರು, ಇತಿಹಾಸದ ಸತ್ಯಗಳನ್ನು ಶೋಧಿಸಿದ್ದಾರೆ.
1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್‌ಎಸ್‌ಎಸ್‌ನ ಕೆಲವು ಸದಸ್ಯರು, ತಮ್ಮ ಪೂರ್ಣ ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ಆದರೆ ಇದು ಪ್ರತಿ ವರ್ಷದಂತೆ ನಡೆಯುವ ಮಿಲಿಟರಿ ಪರೇಡ್ ಆಗಿರಲಿಲ್ಲ. 1962ರ ಚೀನಾ-ಭಾರತ ಯುದ್ಧದಿಂದ ಉಂಟಾದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ನಾಗರಿಕರ ಪರೇಡ್ ಆಗಿತ್ತು.
“ರಾಷ್ಟ್ರೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಆರ್‌ಎಸ್‌ಎಸ್ ವಹಿಸಿದ ಪಾತ್ರವನ್ನು ಗುರುತಿಸಿ, 1963ರ ಗಣರಾಜ್ಯೋತ್ಸವ ಪರೇಡ್‌ಗೆ ಬರುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪಂಡಿತ್ ನೆಹರೂ ಆಹ್ವಾನಿಸಿದರು” ಎಂದು ಆರ್‌ಎಸ್‌ಎಸ್ ಮಾಧ್ಯಮ ತಂಡದ ಸದಸ್ಯ ರತನ್ ಶಾರದಾ ಅವರು 2018ರ ತಮ್ಮ ‘ಆರ್‌ಎಸ್‌ಎಸ್ 360’ ಪುಸ್ತಕದಲ್ಲಿ ಬರೆದರು. (ಆರ್‌ಎಸ್‌ಎಸ್‌ನ ಕುರಿತು ಹಲವು ನಕಲಿ ಕಥೆಗಳನ್ನು ಹರಿಬಿಟ್ಟ ಕೃತಿ ಇದು ಎಂಬುದನ್ನು ಗಮನಿಸಬಹುದು.)
ಸಂಗ್ರಹವಾಗಿರುವ ದಾಖಲೆಗಳು ಹೇಳುವ ಸತ್ಯಗಳನ್ನು ನಾವು ನೋಡಬಹುದು. “ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರು ಪರೇಡ್‌ನಲ್ಲಿ ಸೇರಿಕೊಂಡರು. ಚೀನಾದ ವಿಶ್ವಾಸಘಾತುಕತನ ಮತ್ತು ಆಕ್ರಮಣದ ವಿರುದ್ಧ ಹಾಗೂ ಭಾರತದ ಗೌರವ, ಸಮಗ್ರತೆಯನ್ನು ಕಾಪಾಡುವ ತಮ್ಮ ಸಂಕಲ್ಪವನ್ನು ತೋರಿಸುವ ನಿಟ್ಟಿನಲ್ಲಿ ಘೋಷಣೆಗಳನ್ನು ಕೂಗಿದರು” ಎಂದು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯು 1963ನೇ ಇಸವಿಯ ಜನವರಿ 28ರ ಆವೃತ್ತಿಯಲ್ಲಿ ವರದಿ ಮಾಡಿದೆ.
“ಈ ವರ್ಷ ಸಶಸ್ತ್ರ ಪಡೆಗಳ ಪರೇಡ್ ಸಣ್ಣ ಪ್ರಮಾಣದಲ್ಲಿತ್ತು. ಹೆಚ್ಚಿನ ಪಡೆಗಳು ಚೀನಾದ ವಿರುದ್ಧ ಕಾದಾಡುತ್ತಿವೆ ಎಂದು ಜನರಿಗೆ ಪರೇಡ್ ನೆನಪಿಸಿತು. ರಾಷ್ಟ್ರೀಯ ತುರ್ತುಪರಿಸ್ಥಿತಿ, ಆರ್ಥಿಕ ಬಿಕ್ಕಟ್ಟಿನ ಕಾರಣ ಆಡಂಬರ ಮತ್ತು ವೈಭವ ಪರೇಡ್‌ನಲ್ಲಿ ಇರಲಿಲ್ಲ” ಎನ್ನುತ್ತದೆ ವರದಿ. ಕ್ಯಾಬಿನೆಟ್ ಸಹೋದ್ಯೋಗಿ ಮತ್ತು ಸಂಸತ್ ಸದಸ್ಯರ ತಂಡವನ್ನು ನೆಹರೂ ಮುನ್ನಡೆಸಿದರು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಪರೇಡ್‌ಗಳನ್ನು ಆಯೋಜಿಸುವ ಹೊಣೆಗಾರಿಕೆ ಹೊಂದಿರುವ ರಕ್ಷಣಾ ಸಚಿವಾಲಯವು ಪರೇಡ್ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡುವ ಬಗ್ಗೆ ಅಂದು ಯೋಚಿಸಿತ್ತು. ಆದರೆ ನಾಗರಿಕರ ಪರೇಡ್ ಪರಿಕಲ್ಪನೆ ಬಗ್ಗೆ ನೆಹರೂ ಪ್ರಸ್ತಾಪಿಸಿದರು. 1962ರ ಡಿಸೆಂಬರ್ 10ರಂದು ರಕ್ಷಣಾ ಸಚಿವ ವೈ.ಬಿ. ಚವಾಣ್ ಅವರಿಗೆ ವಿವರವಾದ ಟಿಪ್ಪಣಿಯನ್ನು ನೆಹರೂ ಅವರು ಬರೆದಿದ್ದರು. ಗಣರಾಜ್ಯೋತ್ಸವ ಆಚರಣೆ ಕೈಬಿಡುವುದನ್ನು ವಿರೋಧಿಸಿದ್ದ ನೆಹರೂ, ನಾಗರಿಕರ ಪರೇಡ್ ಪರಿಕಲ್ಪನೆಯನ್ನು ವಿವರವಾಗಿ ತಿಳಿಸಿದ್ದರು.
“ಗಣರಾಜ್ಯೋತ್ಸವ ಸಮಾರಂಭವು ಎಲ್ಲ ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು ಎಂದು ನಾನು ಒಪ್ಪುತ್ತೇನೆ. ದೇಶದ ವಿವಿಧ ಭಾಗಗಳಿಂದ ಸೈನ್ಯದ ತುಕಡಿಗಳು ದೆಹಲಿಗೆ ಬರಬಾರದೆಂಬುದು ಸರಿ, ಆದರೆ ಯಾವುದೇ ಪರೇಡ್ ಇರಬಾರದೆಂದು ಹೇಳುತ್ತಿರುವುದು ಏಕೆಂದು ನನಗೆ ಅರಿವಾಗುತ್ತಿಲ್ಲ. ದೆಹಲಿಯಲ್ಲಿಯೇ ಇರುವ ಕೆಲವು ಸೈನಿಕ ಪಡೆಗಳನ್ನು ಮಾತ್ರ ಒಳಗೊಂಡು, ನಾಗರಿಕರು ಭಾಗವಹಿಸಿದ ಪರೇಡ್ ಮಾಡಬಹುದು. ಇದರಲ್ಲಿ ನಮ್ಮ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು. ಗೃಹರಕ್ಷಕ ದಳಗಳು, ಎನ್‌ಸಿಸಿ, ಖಂಡಿತವಾಗಿಯೂ ಅಲ್ಲಿಯೇ ಇರುತ್ತವೆ, ಜೊತೆಗೆ ದೆಹಲಿಯಲ್ಲಿರುವ ಯಾವುದೇ ಇತರ ಸ್ವಯಂಸೇವಕ ಘಟಕಗಳು ಸಹ ಬರುತ್ತವೆ. ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳು, ದೆಹಲಿಯಲ್ಲಿರುವ ಹಲವಾರು ಇತರ ಸಂಘಟನೆಗಳು ಇದರಲ್ಲಿ ಭಾಗಿಯಾಗಬಹುದು. ಈ ಎಲ್ಲ ವ್ಯಕ್ತಿಗಳನ್ನು ಒಗ್ಗೂಡಿಸುವ ಅಗತ್ಯವಿಲ್ಲ. ಅವರು ಹೆಜ್ಜೆ ಹಾಕದಿದ್ದರೂ ಪರವಾಗಿಲ್ಲ. ಪರೇಡ್‌ಗಾಗಿ ತರಬೇತಿ ನೀಡಬೇಕಾಗಿಲ್ಲ. ಅವರು ಸಾಮೂಹಿಕವಾಗಿ ಮೆರವಣಿಗೆ ಮಾಡಬೇಕಷ್ಟೇ. ಇದು ಬಹಳ ಒಳಿತನ್ನು ಮಾಡುತ್ತದೆ. ಪರೇಡ್‌ನಲ್ಲಿ ಭಾಗಿಯಾಗುವವರ ಮೇಲೂ ಮತ್ತು ಅದನ್ನು ನೋಡುವವರ ಮೇಲೂ ಬಲವಾದ ಪರಿಣಾಮ ಬೀರುತ್ತದೆ ಎಂದು ನನಗೆ ಸ್ಪಷ್ಟವಾಗಿ ಅನಿಸುತ್ತಿದೆ..” – ಹೀಗಿತ್ತು ನೆಹರೂ ಟಿಪ್ಪಣಿ.
ಈ ಲೇಖನ ಓದಿದ್ದೀರಾ?: ಚುನಾವಣೆಗಳಲ್ಲಿ ಸೋಲುವ ಭೀತಿಯಲ್ಲಿ ಬಿಜೆಪಿ; ಕುತಂತ್ರಗಳೇ ಕೊನೆಯ ಆಯ್ಕೆ!
ಮರುದಿನ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಪರೇಡ್ ನಡೆಸಬಾರದೆಂಬ ಸಲಹೆ ಬರುತ್ತದೆ. “ನನಗೆ ಆ ವಿಚಾರ (ಪರೇಡ್) ಇಷ್ಟವಿಲ್ಲ. ಆದರೆ ನಾವು ಮಿಲಿಟರಿ ಕಾರ್ಯಕ್ರಮ ಕಡಿಮೆ ಮಾಡಿ, ಅದನ್ನು ನಾಗರಿಕರ ಕಾರ್ಯಕ್ರಮವಾಗಿ ಪರಿವರ್ತಿಸಿ ಪರೇಡ್ ಮಾಡೋಣ. ಸಂಸತ್ತಿನ ಸದಸ್ಯರೂ ಒಂದು ಬ್ಲಾಕ್‌ನಲ್ಲಿ ಇದ್ದು, ಪರೇಡ್‌ನಲ್ಲಿ ಭಾಗಿಯಾಗಬೇಕೆಂದು ಕೋರಬೇಕು” ಎಂದಿದ್ದರು ನೆಹರೂ. 19 ಜನವರಿ 1963ರಂದು ತಮ್ಮ ಆಪ್ತ ಕಾರ್ಯದರ್ಶಿ ಕೇಶೋರಾಮ್ ಅವರಿಗೆ ಬರೆದ ಟಿಪ್ಪಣಿಯಲ್ಲಿ, “ಪರೇಡ್‌ನಲ್ಲಿ ಕನಿಷ್ಠ ಒಂದು ಲಕ್ಷ ಜನ ಇರಬೇಕು” ಎಂದು ನೆಹರೂ ಒತ್ತಿ ಹೇಳಿದ್ದರು.
ಈ ಸಮಯದಲ್ಲಿ ಆರ್‌ಎಸ್‌ಎಸ್ ಸ್ಥಿತಿ ಹೇಗಿತ್ತೆಂದು ನೋಡಬೇಕಾಗುತ್ತದೆ. 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ನಿಷೇಧ ತೆರವಾಗಿದ್ದರೂ ಅದರ ವಿಶ್ವಾಸಾರ್ಹತೆ ಸಾರ್ವಕಾಲಿಕವಾಗಿ ಕೆಳಮಟ್ಟಕ್ಕೆ ಕುಸಿದಿತ್ತು. ಇಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್‌ಗೆ ಈ ಪರೇಡ್ ಅವಕಾಶದ ಕಿಟಕಿಯಾಗಿ ಕಂಡಿತು.
ನೆಹರೂ ಅವರು ನಂತರದಲ್ಲಿ ಬಹಿರಂಗಪಡಿಸಿದಂತೆ, ದೆಹಲಿಯಿಂದ ಮಾತ್ರವಲ್ಲದೆ ನೆರೆಯ ಪ್ರದೇಶಗಳಿಂದಲೂ ತನ್ನ ಸದಸ್ಯರನ್ನು ಸಜ್ಜುಗೊಳಿಸಲು ತೀವ್ರ ಪ್ರಯತ್ನಗಳನ್ನು ಆರ್‌ಎಸ್‌ಎಸ್ ಮಾಡಿತ್ತು. ಫೆಬ್ರವರಿ 4, 1963ರಂದು, ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ವರದಿ ಮಾಡಿರುವ ಪ್ರಕಾರ, “ಎರಡು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು, ಸಂಘಟನೆಯ ಸಮವಸ್ತ್ರ (ಬಿಳಿ ಶರ್ಟ್, ಖಾಕಿ ನಿಕ್ಕರ್, ಬೆಲ್ಟ್, ಕಪ್ಪು ಟೋಪಿ ಮತ್ತು ಬೂಟು) ಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು”. ಹೆಚ್ಚಿನವರು ದೆಹಲಿ ಮೂಲದವರೇ ಇದ್ದರು.
ಈ ಕುತಂತ್ರಗಳ ಬಗ್ಗೆ ನೆಹರೂ ಅವರಿಗೆ ತಿಳಿದಿತ್ತು. 1963ರ ಜನವರಿ 27ರಂದು ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ನೆಹರೂ, “ಕೆಲವು ಕಾಂಗ್ರೆಸ್ಸಿಗರು ಒಂದು ದಿನ ಮೊದಲು ನನ್ನ ಬಳಿಗೆ ಬಂದು, ಆರ್‌ಎಸ್‌ಎಸ್‌ನವರು ಗಾಝಿಯಾಬಾದ್, ಮೀರತ್ ಮತ್ತು ಇತರ ಸ್ಥಳಗಳಲ್ಲಿ ಸಮವಸ್ತ್ರದಿಂದ ಕೂಡಿದ ತಮ್ಮ ಜನರನ್ನು ಒಂದೆಡೆ ಸೇರಿಸುತ್ತಿದ್ದಾರೆ. ನಮ್ಮಲ್ಲಿ ಅಷ್ಟೊಂದು ಸಮವಸ್ತ್ರಗಳಿಲ್ಲ’ ಎಂದು ಹೇಳಿದರು. ಅದಕ್ಕೆ ನಾನು, ‘ನೋಡಿ, ಆರ್‌ಎಸ್‌ಎಸ್ ಒಳಗೆ ಬರುವುದನ್ನು ನಾನು ತಡೆಯಲು ಸಾಧ್ಯವಿಲ್ಲ, ಯಾವುದನ್ನೂ ತಡೆಯುವುದು ತಪ್ಪು’ ಎಂದು ಹೇಳಿದೆ” ಎನ್ನುತ್ತಾರೆ.
“ನಾಗರಿಕರ ಮೆರವಣಿಗೆಯಲ್ಲಿ ಭಾಗವಹಿಸಲು ನಾಗರಿಕರಿಗೆ ಯಾವುದೇ ಡ್ರೆಸ್ ಕೋಡ್ ನಿಗದಿಪಡಿಸಿಲ್ಲ. ಅಲ್ಲದೆ, ಯಾವುದೇ ಬ್ಯಾಂಡ್‌ಗಳಿಗೆ ಅವಕಾಶವಿಲ್ಲ. ಆದರೆ ಯಾವುದೇ ಉಡುಗೆ ಅಥವಾ ಸಮವಸ್ತ್ರದಲ್ಲಿ ಬರಬಹುದು ಅಥವಾ ಬರದೆಯೂ ಇರಬಹುದು, ನಾನು ಅದನ್ನು ತಡೆಯಲು ಸಾಧ್ಯವಿಲ್ಲ” ಎಂದು ಪ್ರಸ್ತಾಪಿಸಿದ್ದನ್ನೂ ನೆಹರೂ ಹೇಳಿಕೊಳ್ಳುತ್ತಾರೆ.
ಇಪ್ಪತ್ತೈದು ಸಾವಿರ ಆರ್‌ಎಸ್‌ಎಸ್ ಸದಸ್ಯರು ಬರುತ್ತಾರೆ ಎಂಬ ವದಂತಿ ಇತ್ತು. ಆದರೆ ಕೇವಲ ಎರಡು ಸಾವಿರ ಜನರು ಮಾತ್ರ ಬಂದರು ಎಂದು ನೆಹರೂ ಹೇಳುತ್ತಾರೆ. “ನಾವು ಅವರನ್ನು ತಡೆಯಲು ಸಾಧ್ಯವಿಲ್ಲ” ಎಂಬುದು ಅವರ ಪ್ರಜಾತಾಂತ್ರಿಕ ನಡೆಯಾಗಿಯೂ ತೋರುತ್ತದೆ.
“ಜನರು ಬರುವವರೆಗೂ ಮಾತ್ರ ವಿಷಯ ಸರ್ಕಾರದ ಕೈಯಲ್ಲಿತ್ತು. ಅದಾದ ನಂತರ ಅದು ನೇರವಾಗಿ ಸರ್ಕಾರದ ಕೈಯಲ್ಲಿರಲಿಲ್ಲ. ಅದನ್ನು ಮೇಯರ್‌ಗೆ (ನೂರುದ್ದೀನ್ ಅಹ್ಮದ್) ಹಸ್ತಾಂತರಿಸಲಾಗಿತ್ತು. ಮೇಯರ್ ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದರು.”
ಆರ್‌ಎಸ್‌ಎಸ್‌ನವರು ಸಂಘದ ಕೇಂದ್ರ ಕಾರ್ಮಿಕ ಘಟಕವಾದ ಭಾರತೀಯ ಮಜ್ದೂರ್ ಸಂಘದ ಸದಸ್ಯರಾಗಿ ಪರೇಡ್‌ನಲ್ಲಿ ಭಾಗವಹಿಸಿರಬಹುದು. ಅವರು ಯಾವುದೇ ಬ್ಯಾನರ್ ಆಗಲೀ, ಫಲಕಗಳನ್ನಾಗಲೀ, ಮುಖ್ಯವಾಗಿ ಸಂಘಟನೆಯ ಕೇಸರಿ ಧ್ವಜವನ್ನಾಗಲೀ ಹಿಡಿದಿರಲಿಲ್ಲ. ಆರ್‌ಎಸ್‌ಎಸ್ ತಂಡವು ಬೃಹತ್ ಜನಸಂದಣಿಯಲ್ಲಿ ಬೆರೆತು ಹೋಗಿತ್ತು. ಏಕೆಂದರೆ ಜನರು ಮುಕ್ತವಾಗಿ ಪಾಲ್ಗೊಳ್ಳಲು ಸರ್ಕಾರ ಅವಕಾಶ ನೀಡಿತ್ತು.
ಆರ್‌ಎಸ್‌ಎಸ್‌ನವರು ಪೂರ್ಣ ಸಮವಸ್ತ್ರದೊಂದಿಗೆ ಪರೇಡ್‌ನಲ್ಲಿ ಭಾಗಿಯಾಗಿದ್ದರೂ, ಹೆಚ್ಚಿನ ಪತ್ರಿಕೆಗಳು ಅದನ್ನು ಫೋಕಸ್ ಮಾಡದೆ ಇದ್ದದ್ದಕ್ಕೆ ಅಲ್ಲಿದ್ದ ಅಪಾರ ಜನಸ್ತೋಮವೂ ಕಾರಣವಾಗಿತ್ತು. ಆದರೆ ‘ಹಿಂದೂಸ್ತಾನ್’ ಹಿಂದಿ ದಿನಪತ್ರಿಕೆ ಮಾತ್ರ ನಾಗರಿಕರ ಪರೇಡ್‌ನಲ್ಲಿ ಭಾಗವಹಿಸಿರುವ ಆರ್‌ಎಸ್‌ಎಸ್‌ನ ಛಾಯಾಚಿತ್ರವನ್ನು ಪ್ರಕಟಿಸಿತ್ತು. 1963ರ ಜನವರಿ 28ರ ಆವೃತ್ತಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಸಂಬಂಧಿಸಿದ ಫೋಟೋಗಳಿಗೆ ಪುಟವನ್ನು ಮೀಸಲಿಟ್ಟಿತ್ತು. ಅದರಲ್ಲಿ ಆರ್‌ಎಸ್‌ಎಸ್ ಫೋಟೋ ಬಳಸಲಾಗಿತ್ತು.
ಈ ಫೋಟೋದ ಕುರಿತು ಬರೆಯುತ್ತಾ, ಧೀರೇಂದ್ರ ಕೆ. ಝಾ, “ಫೋಟೋದಲ್ಲಿರುವ ಅತ್ಯಂತ ಗಮನಾರ್ಹವಾದ ಅಂಶವೆಂದರೆ- ಆರ್‌ಎಸ್‌ಎಸ್ ಕಾರ್ಯಕರ್ತರು ತಮ್ಮ ಕೇಸರಿ ಧ್ವಜದ ಬದಲಿಗೆ ರಾಷ್ಟ್ರಧ್ವಜವನ್ನು ಹಿಡಿದಿದ್ದರು. ಜನರ ಸಮ್ಮತಿಯನ್ನು ಪಡೆಯುವ ಹತಾಶೆಯ ಅಗತ್ಯಕ್ಕೆ ಬಿದ್ದ ಆರ್‌ಎಸ್‌ಎಸ್, ರಾಷ್ಟ್ರಧ್ವಜವನ್ನು ಹಿಡಿದದ್ದು ಬಹುಶಃ ಇದೇ ಮೊದಲ ಸಂದರ್ಭ. ಅಲ್ಲಿಯವರೆಗೆ, ಆರ್‌ಎಸ್‌ಎಸ್ ತ್ರಿವರ್ಣ ಧ್ವಜವನ್ನು ತಿರಸ್ಕರಿಸಿತ್ತು. ಹೀಗಾಗಿ ನೆಹರೂ ಅವರು ಆರ್‌ಎಸ್‌ಎಸ್‌ನವರನ್ನು ಆಹ್ವಾನಿಸಿ, ಪ್ರತ್ಯೇಕ ತುಕಡಿಯಾಗಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಕೋರಿದ್ದರು ಎಂಬುದು ಸುಳ್ಳು. ಇಂತಹ ನಕಲಿ ಪ್ರತಿಪಾದನೆಗೆ ಇರುವ ಏಕೈಕ ಸಾಕ್ಷ್ಯವೆಂದರೆ- ಅಂದು ಪ್ರಕಟವಾಗಿರುವ ಆ ಫೋಟೋವಷ್ಟೇ” ಎನ್ನುತ್ತಾರೆ.
ಮೊದಲ ಸಲ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ದೇಶದ ಸಾರ್ವಭೌಮತೆಯನ್ನು ಸಾಂಕೇತಿಕವಾಗಿಯಾದರೂ ಆರ್‌ಎಸ್‌ಎಸ್ ಪ್ರದರ್ಶಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಬೇಕೋ? ಅಥವಾ ಪರೇಡ್‌ನಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ನೆಹರೂ ಅವಕಾಶ ನೀಡಿದ್ದನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಕುತಂತ್ರ ನೋಡಿ ಅಳಬೇಕೋ?- ನೀವೇ ನಿರ್ಧರಿಸಿ.



