ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದ್ದರೂ ಊಟ-ಉಪಹಾರದ ಪ್ಲೇಟ್‌ಗಳ ಸಂಖ್ಯೆ ಮಾತ್ರ 200ಕ್ಕೆ ಸೀಮಿತವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಯರಗಟ್ಟಿ ತಾಲೂಕು ಕೇಂದ್ರವಾಗಿದ್ದು, ಪ್ರತಿದಿನ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸುತ್ತಾರೆ. ಅದರಲ್ಲೂ ಬಸ್ ನಿಲ್ದಾಣದಲ್ಲಿಯೇ ಇಂದಿರಾ ಕ್ಯಾಂಟಿನ್ ಇರುವುದರಿಂದ ಪ್ರಯಾಣಿಕರಿಗೂ ಅನುಕೂಲವಾಗಿದೆ. ಆದರೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ಯಾಂಟಿನ್‌ಗೆ ಬರುತ್ತಿರುವುದರಿಂದ 200 ಪ್ಲೇಟ್ ಊಟ ಮತ್ತು ಉಪಹಾರ ಯಾವುದಕ್ಕೂ ಸಾಲುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಇಂದಿರಾ ಕ್ಯಾಂಟಿನ್‌ಗೆ ಅವಲಂಬಿತರಾಗಿದ್ದಾರೆ. ಆದರೆ ಕೆಲವರು ತಡವಾಗಿ ಬಂದರೆ ಉಪಹಾರ ಅಥವಾ ಊಟ ಖಾಲಿಯಾಗಿರುತ್ತದೆ. ಹಣ ಕೊಟ್ಟು ಊಟ ಪಡೆಯುವ ವ್ಯವಸ್ಥೆ ಇದ್ದರೂ ಆಹಾರ ಸಿಗದೆ ವಾಪಸ್ ತೆರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಈ ದಿನ.ಕಾಮ್ ಜತೆ ಮಾತನಾಡಿ, “ನಾವು ಪ್ರತಿದಿನ ಯರಗಟ್ಟಿಗೆ ಕಾಲೇಜಿಗೆ ಬರುತ್ತೇವೆ. ಕಡಿಮೆ ದರದಲ್ಲಿ ಊಟ-ಉಪಹಾರ ಸಿಗುತ್ತಿರುವುದು ನಮಗೆ ತುಂಬಾ ಅನುಕೂಲ. ಆದರೆ ಕೆಲವೊಮ್ಮೆ ಬರುವಷ್ಟರಲ್ಲಿ ಊಟ ಅಥವಾ ಉಪಹಾರ ಮುಗಿದಿರುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ಲೇಟ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.
ಕೂಲಿ ಕಾರ್ಮಿಕರಿಗೂ ಸಮಸ್ಯೆ
ಕೂಲಿ ಕಾರ್ಮಿಕ ದುರ್ಗಪ್ಪ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ನಾವು ದಿನಗೂಲಿ ಕೆಲಸ ಮಾಡುತ್ತೇವೆ. ಊಟಕ್ಕಾಗಿ ಇಂದಿರಾ ಕ್ಯಾಂಟಿನ್‌ಗೆ ಬರುತ್ತೇವೆ. ಕೆಲಸ ಮುಗಿಸಿ ಕೆಲವೊಮ್ಮೆ ತಡವಾಗಿ ಬಂದರೆ ಊಟ ಸಿಗುವುದಿಲ್ಲ. ಬಡ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಊಟ-ಉಪಹಾರ ನೀಡಬೇಕು” ಎಂದು ಹೇಳಿದರು.
500 ಪ್ಲೇಟ್‌ಗೆ ಹೆಚ್ಚಿಸಿ
ಕರ್ನಾಟಕ ರಕ್ಷಣಾ ವೇದಿಕೆ ಯರಗಟ್ಟಿ ತಾಲೂಕು ಅಧ್ಯಕ್ಷ ರಫಿಕ್ ಡಿ.ಕೆ. ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಇಂದಿರಾ ಕ್ಯಾಂಟಿನ್ ಯೋಜನೆಯಿಂದ ಬಡವರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ ಯರಗಟ್ಟಿ ತಾಲೂಕು ಕೇಂದ್ರವಾಗಿರುವುದರಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. 200 ಪ್ಲೇಟ್ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ 500 ಪ್ಲೇಟ್‌ಗಳಿಗೆ ಪ್ರಮಾಣ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
ಮಹಾನಾಯಕ ಅಂಬೇಡ್ಕರ್ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸಂಘಟನೆಯ ಬಾಬು ಚೆನ್ನಮೆತ್ರಿ ಅವರು ಈದಿನ.ಕಾಮ್ ಜತೆ ಮಾತನಾಡಿ, “ಬಡವರು, ಕಾರ್ಮಿಕರು ಮಾತ್ರವಲ್ಲದೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರೂ ಕ್ಯಾಂಟಿನ್ ಬಳಸುತ್ತಿದ್ದಾರೆ. ತಾಲೂಕು ಕೇಂದ್ರಕ್ಕೆ 200 ಪ್ಲೇಟ್ ಊಟ-ಉಪಹಾರ ಸಾಕಾಗುವುದಿಲ್ಲ. ಸರ್ಕಾರ ಕೂಡಲೇ ಪ್ರಮಾಣ ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.

ಇಂದಿರಾ ಕ್ಯಾಂಟಿನ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ತಲಾ 200 ಪ್ಲೇಟ್‌ಗಳ ಮಿತಿ ಇದೆ.
ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಸಾಧ್ಯವಾದಷ್ಟು ಹೆಚ್ಚುವರಿ ಜನರಿಗೂ ಊಟ-ಉಪಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಯರಗಟ್ಟಿಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆದರೆ ಯೋಜನೆಯ ಉದ್ದೇಶ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವುದಾದರೆ, ಬೇಡಿಕೆ ಇರುವ ಕಡೆ ಆಹಾರದ ಪ್ರಮಾಣವೂ ಹೆಚ್ಚಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಹೀಗಾಗಿ ಯರಗಟ್ಟಿ ಇಂದಿರಾ ಕ್ಯಾಂಟಿನ್‌ನ ಊಟ-ಉಪಹಾರದ ಪ್ಲೇಟ್‌ಗಳ ಸಂಖ್ಯೆಯನ್ನು 200ರಿಂದ 500ಕ್ಕೆ ಹೆಚ್ಚಿಸಿ, ಆಹಾರಕ್ಕಾಗಿ ಬರುವ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಖಾಲಿ ಕೈಯಲ್ಲಿ ಹಿಂದಿರುಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಇದೀಗ ಬಲವಾಗಿ ಕೇಳಿಬರುತ್ತಿದೆ.
ಇಂದಿರಾ ಕ್ಯಾಂಟಿನ್ ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಮಹತ್ವದ ಯೋಜನೆಯಾಗಿದೆ. ಆದರೆ ಯರಗಟ್ಟಿಯಲ್ಲಿ ಜನರ ಬೇಡಿಕೆಗೆ ತಕ್ಕಷ್ಟು ಊಟ-ಉಪಹಾರ ಸಿಗದಿರುವುದು ಸಮಸ್ಯೆಯಾಗಿದೆ. ಹೀಗಾಗಿ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, 200 ಪ್ಲೇಟ್‌ಗಳ ಮಿತಿಯನ್ನು 500ಕ್ಕೆ ಹೆಚ್ಚಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರ ಬೇಡಿಕೆಗೆ ಸ್ಪಂದಿಸಿ ಇಂದಿರಾ ಕ್ಯಾಂಟಿನ್‌ನ ಸೌಲಭ್ಯ ಎಲ್ಲರಿಗೂ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕಿದೆ.




