ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರೊಂದಿಗೆ ಡಾ. ಕೆ. ಪುಟ್ಟಸ್ವಾಮಿಯವರು 'ಕಲ್ಲರಳಿ ಹೂವ್ವಂತೆ' ಎಂಬ ಕೃತಿರಚನೆಗಾಗಿ 2004ರಲ್ಲಿ ನಡೆಸಿದ ಸಂದರ್ಶನ. ಕೆಟಿ ಇಲ್ಲದ ಈ ಹೊತ್ತಿನಲ್ಲಿ ಅವರ ಚಿಂತನಾಲಹರಿ ಈ ದಿನ ಓದುಗರಿಗಾಗಿ..
ನಿಮ್ಮ ಬ್ಯಾಲದ ಬದುಕು, ಮುಂಬಯಿಯ ಜೀವನ ನಿಮ್ಮ ವ್ಯಕ್ತಿತ್ವದ ಮೇಲೆ ಬೀರಿರುವ ಪ್ರಭಾವ ಎಂಥದು?
ಬಾಲ್ಯ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಇಂದಿಗೂ ಅದೊಂದು ಬಗೆಯ ಎಡೆಬಿಡದ ಸಂಗಾತಿಯೆಂದೇ ಹೇಳಬೇಕು. ನಾನು ಹುಟ್ಟಿದ್ದು, ಬೆಳೆದದ್ದು ನಾಗರಿಕತೆಗೆ ದೂರವಾದ ಹಳ್ಳಿಯಲ್ಲಿ. ಆದರೆ ಅಲ್ಲಿ ಪ್ರಾಕೃತಿಕ ಸೊಬಗು ಸಮೃದ್ಧವಾಗಿತ್ತು. ಹಳ್ಳಿಗರೊಡನೆ ನನ್ನ ಬಾಲ್ಯದಲ್ಲಿ ಒಂದು ಬಗೆಯ ಸಂಬಂಧವಿತ್ತು. ಅದು ಸರಳವಾಗಿತ್ತು. ಆಗ ಬಣ್ಣಗಳ ವಿನ್ಯಾಸ ನನ್ನ ಮನಸ್ಸನ್ನು ತುಂಬಿಕೊಳ್ಳುತ್ತಿದ್ದವು. ನಾ ಕಂಡ ಅಮೋಘವಾದ ಭೂ ದೃಶ್ಯಗಳು ಇನ್ನೂ ನೆನಪಿಂದ ಮಾಸಿಲ್ಲ. ಯಾವುದಕ್ಕೂ ಕೊರತೆಯಿರಲಿಲ್ಲ.
ಮುಂಬಯಿ ನನಗೆ ಇನ್ನೊಂದು ತುದಿಯ ಬದುಕನ್ನು ತೆರೆದು ತೋರಿಸಿತು. ಅಲ್ಲಿಯೂ ಅನೇಕ ಜನರ ಜೊತೆ ಕಾಲಕಳೆದಿದ್ದೇನೆ. ಅನುಭವ ಪಡೆದಿದ್ದೇನೆ. ಮತ್ತೆ ಮರಳಿ ಹಾಸನಕ್ಕೆ ಬಂದಾಗ ಮತ್ತೊಂದು ಬಗೆಯ ಜನರು ಪರಿಚಯವಾದರು. ಅವರ ಒಡನಾಟ ಬೇರೊಂದು ಲೋಕವನ್ನು ತೋರಿತು. ಆ ನಂತರ ಚಳವಳಿಗಳಲ್ಲಿ ಕೆಲಸ ಮಾಡಿದ್ದು, ಹೋರಾಟದಲ್ಲಿ ಭಾಗಿಯಾಗಿದ್ದು, ಗಾಂಧಿ, ಲೋಹಿಯಾ, ಅಂಬೇಡ್ಕರ್‌ರವರನ್ನು ಅಧ್ಯಯನ ಮಾಡಿದ್ದು… ಹೀಗೆ ಒಟ್ಟು ಇಡೀ ನನ್ನ ಬದುಕಿನ ಅನುಭವಗಳು ನನ್ನನ್ನು ಮುನ್ನಡೆಸಿರಬಹುದು. ನನ್ನ ಬದುಕಿಗೆ ನಾನು ಋಣಿ.
ಒಟ್ಟು ನಿಮ್ಮ ಚಿತ್ರಕಲೆಯ ವೃತ್ತಿಬದುಕನ್ನು ನೀವೇ ಅವಲೋಕಿಸಿಕೊಂಡಾಗ ನಿಮಗೇನನಿಸುತ್ತದೆ?
ಇಡೀ ನನ್ನ ವೃತ್ತಿಬದುಕಿನಲ್ಲಿ ನಾನು ಕಂಡ ನನ್ನ ಸುತ್ತಮುತ್ತಲಿನ ಜನರನ್ನು ನನ್ನ ಕ್ಯಾನ್ವಾಸಿನಲ್ಲಿ ದಾಖಲಿಸಿದ್ದೇನೆಂದುಕೊಂಡಿದ್ದೇನೆ. ಬಹುಶಃ ಕರ್ನಾಟಕದ ಯಾವೊಬ್ಬ ಕಲಾವಿದನೂ ಈ ರೀತಿ ತನ್ನ ಪರಿಸರದ, ತಾನು ಕಂಡು ಒಡನಾಡಿದ ಜನರ ಬದುಕನ್ನು, ನನ್ನಷ್ಟು ದಾಖಲಿಸಿರಲಾರರು ಎಂದು ಭಾವಿಸಿದ್ದೇನೆ. ನಾನು ಬಡವರು, ಕಾರ್ಮಿಕರು, ರೈತರು, ದಲಿತರನ್ನೇ ಚಿತ್ರಿಸಿರಬಹುದು. ಆದರೆ ನಾನೆಲ್ಲೂ ಬಡತನ, ದಾರಿದ್ರ್ಯವನ್ನು ವೈಭವೀಕರಿಸಿಲ್ಲ. ಜನ ಅವರು ಸಹಜ ಪರಿಸರದಲ್ಲೂ ಹೇಗಿರುವರೊ ಹಾಗೆ ಅವರೆಲ್ಲರ ಸೌಂದರ್ಯಾನುಭೂತಿಯ ಜೊತೆಗೆ ಚಿತ್ರಿಸಿದ್ದೇನೆ.

ಮತ್ತೊಂದು ಲಕ್ಷಣವೆಂದರೆ ನಾನು ಶಾಲೆಯಲ್ಲಿ ಹೇಳಿಕೊಟ್ಟ, ವಿಧಾನದಲ್ಲಾಗಲೀ, ಯೂರೋಪಿಯನ್ ಶೈಲಿಯಲ್ಲಾಗಲೀ, ಬಣ್ಣಗಳ ವಿನ್ಯಾಸವನ್ನು ಬಳಸಿಲ್ಲ. ಅದನ್ನು ಪ್ರಜ್ಞಾಪೂರ್ವಕವಾಗಿಯೇ ನಿರಾಕರಿಸಿದ್ದೇನೆ. ಜನ ತಮ್ಮ ಪರಿಸರದಲ್ಲಿ ಬಳಸುವ ಸ್ಥಳೀಯ ಬಣ್ಣದ ವಿನ್ಯಾಸವನ್ನೇ ಬಳಸಿದ್ದೇನೆ. ನನ್ನ ಚಿತ್ರಕಲೆಯಲ್ಲಿ ಇವೆಲ್ಲ ನಾನು ತಂದ ಸುಧಾರಣೆಗಳು. ನಮ್ಮ ಪರಂಪರೆಯಿಂದ ಬಂದ ಜಾನಪದೀಯ ಆಶಯಗಳು ಮತ್ತು ಆಧುನಿಕತೆಯ ಪಲ್ಲಟಗಳು. ಅವುಗಳ ಜೊತೆಗಿನ ಅನುಸಂಧಾನ ಸಹ ನನ್ನ ಕಲಾಭಿವ್ಯಕ್ತಿಯಲ್ಲಿ ಕಾಣಿಸಿಕೊಂಡಿರಬಹುದೇನೋ.
ನೀವು ರೈತ ಸಂಘ, ದಲಿತ ಸಂಘರ್ಷ ಸಮಿತಿ, ಇತ್ತೀಚೆಗೆ ಬಿ.ಎಸ್.ಪಿ. ಹೀಗೆ ಅನೇಕ ಜನಾಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೀರಿ. ಈ ಚಳವಳಿಗಳು ನಿಮ್ಮ ವ್ಯಕ್ತಿತ್ವ ಮತ್ತು ಚಿತ್ರಕಲೆಯ ಮೇಲೆ ಪ್ರಭಾವ ಬೀರಿವೆಯೇ?
ಖಂಡಿತವಾಗಿ. ಇವೆಲ್ಲವೂ ನನಗೆ ಅನೇಕ ಜನರ ಜೊತೆ ಒಡನಾಟವನ್ನು ಕಲ್ಪಿಸಿಕೊಟ್ಟಿವೆ. ಅದಕ್ಕಾಗಿ ನಾನು ಕೃತಜ್ಞ. ಜನರ ನೋವು, ನಲಿವು, ಅವರು ತೋರಿಸಬಲ್ಲ ಪ್ರೀತಿ, ಅವರು ಬದುಕುತ್ತಿರುವ ಸನ್ನಿವೇಶ ಇತ್ಯಾದಿಗಳನ್ನು ನೋಡುವ ಪಡೆಯುವ ಅವಕಾಶವನ್ನು ರೈತ ಸಂಘ ತಂದುಕೊಟ್ಟಿತು. ಅದೇ ರೀತಿ ಈ ದೇಶದ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಓದಿ, ಕೇಳಿ ತಿಳಿದುಕೊಂಡಿದ್ದೆ. ಆದರೆ ಡಿ.ಎಸ್.ಎಸ್.ನಲ್ಲಿರುವಾಗ ಆ ಕ್ರೌರ್ಯದ ಪ್ರಮಾಣ ಯಾವ ಬಗೆಯದು ಎಂಬುದು ನನಗೆ ಅರ್ಥವಾಯಿತು. ಕ್ರೌರ್ಯ ಎಂದರೆ ದೈಹಿಕವಾಗಿ ನೀಡುವ ಹಿಂಸೆಯೇ ಆಗಿರಬೇಕೆಂದಿಲ್ಲ. ಕಣ್ಣಿನ ನೋಟದಲ್ಲಿ, ಬಾಯಿಯ ಮಾತಿನಲ್ಲಿ, ಕೈಯ ಸಂಜ್ಞೆಯಲ್ಲಿ ಆ ಕ್ರೌರ್ಯವಿದೆ. ‘ಗೌಡ’ ಎಂದು ಕರೆದಾಗ, ಬ್ರಾಹ್ಮಣರನ್ನು ‘ಬುದ್ಧಿಯವರೇ’ ಎಂದು ಸಂಬೋಧಿಸುವಾಗ ಉಕ್ಕುವ ಗೌರವ ಮತ್ತು ಭಕ್ತಿ, ‘ಹೊಲೆಯರೇ’ ಎಂದು ಬಹುವಚನದಲ್ಲಿ ಕರೆದಾಗ ಅದರ ಹಿಂದಿರುವ ವ್ಯಂಗ್ಯ, ನಿಂದನೆಯ ಧ್ವನಿಯನ್ನು ತಿಳಿದರೆ ನನ್ನ ಮಾತು ಅರ್ಥವಾಗುತ್ತದೆ.

ಈ ರೀತಿಯ ಅನುಭವಗಳು ನಿಮ್ಮ ಚಿತ್ರಕಲೆಯ ಮೇಲೆ ಪ್ರಭಾವ ಬೀರಿವೆಯೇ?
ಇಲ್ಲ. ನಾನು ಪ್ರಜ್ಞಾಪೂರ್ವಕವಾಗಿಯೇ ಅದನ್ನು ನಿವಾರಿಸಿಕೊಂಡಿದ್ದೇನೆ. ಯಾಕೆ ಅಂದರೆ, ಒಮ್ಮೆ ಒಂದು ಚಳವಳಿಯ ಸಿದ್ದಾಂತ ನಿಮ್ಮ ಕಲೆಯನ್ನು ನಿಯಂತ್ರಣಗೊಳಿಸಿದರೆ ಅಲ್ಲಿಗೆ ಅದಕ್ಕೊಂದು ಚೌಕಟ್ಟು ಬೀಳುತ್ತದೆ. ನಿಮ್ಮ ಕಲೆಗೊಂದು ಮಿತಿ ಹೇರಿದಂತಾಗುತ್ತದೆ. ನಾನು ಮೊದಲು ಮನುಷ್ಯ. ನಾನು ಈ ದೇಶದ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ಮನುಷ್ಯ ಸಹ. ನನಗೆ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಾದ ಕರ್ತವ್ಯವೂ ಇದೆ. ಇವೆಲ್ಲ ಒಟ್ಟಾರೆಯಾಗಿ ನನ್ನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಾಗಾಗಿ ನನ್ನ ಕಲೆ ಅಂತಿಮವಾಗಿ ನನ್ನದೆ ವಿಶಿಷ್ಟತೆಯನ್ನೊಳಗೊಳ್ಳುತ್ತದೆ. ಚಳವಳಿಯ ಸಿದ್ಧಾಂತಗಳನ್ನು ಹೇಳಿದರೆ ಅದು ಪ್ರಚಾರ ಸಾಮಗ್ರಿಯಾಗುತ್ತದೆ. ಒಂದು ಕರಪತ್ರಕ್ಕೂ, ಶ್ರೇಷ್ಠ ಸಾಹಿತ್ಯ ಕೃತಿಗೂ ಇರುವಷ್ಟೆ, ಅಂತರ ಒಂದು ಪ್ರಚಾರ ಸಾಮಗ್ರಿಗೂ, ಕಲಾಕೃತಿಗೂ ಇರುತ್ತದೆ.
ಅಲ್ಲ. ಈಗ ರೈತರ ಸಮಸ್ಯೆಗಳಿವೆ. ದಲಿತರ ಸಮಸ್ಯೆಗಳಿವೆ. ಅವುಗಳ ಬಗ್ಗೆ ನಿಮ್ಮ ಕೃತಿಗಳಲ್ಲಿ ನೀವು ಪ್ರತಿಕ್ರಿಯಿಸಲು ಸಾಧ್ಯವಿಲ್ಲವೇ?
I can react only on general terms. ಈಗ ಕಂಬಾಲಪಲ್ಲಿಯ ದುರಂತವಾಯಿತು. ಅದನ್ನು ನಾನು ಕೃತಿಯಲ್ಲಿ ಬಿಂಬಿಸಲಾರೆ. But I may explore the roots of such tragedies. I would not call it as a tragedy. ಅದೊಂದು ಬರ್ಬರ ಕೃತ್ಯ. ಅದರ ಹಿಂದಿನ ಕಾರಣಗಳನ್ನು ಹುಡುಕುವ ಪ್ರಯತ್ನ ನನ್ನದು.
ಚಿತ್ರಕಲಾಕೃತಿಗಳ ಬೆಲೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕ್ಕಿರುವ ಮೌಲ್ಯ ನೋಡಿದರೆ ಅವೆಂದೂ ಜನಸಾಮಾನ್ಯರ ಎಟುಕಿಗೆ ನಿಲುಕುವುದೇ ಇಲ್ಲ. ಹಾಗಾಗಿ ಈ ಚಿತ್ರಕಲೆ ಸಮುದಾಯದ ಸಂಸ್ಕೃತಿಯಾಗಿ ಬೆಳೆಯಲು ಸಾಧ್ಯವಿಲ್ಲ. ಹಾಗೆ ಬೆಳೆಯಬಹುದಾದ ಸಾಧ್ಯತೆಗಳೇನಾದರೂ ಇವೆಯೇ?
ಚಿತ್ರಕಲೆ ಎನ್ನುವುದು ಹಲವಾರು ಶತಮಾನಗಳಿಂದ ಅಲ್ಪಸಂಖ್ಯಾತರ ಸ್ವತ್ತಾಗಿಯೇ ಉಳಿದಿದೆ. ಅದಕ್ಕೊಂದು ಐತಿಹಾಸಿಕ ಪರಂಪರೆಯೇ ಇದೆ. ಕಲಾವಿದ ಬದುಕಬೇಕಾದರೆ ಕೃತಿಗಳ ಮಾರಾಟವಾಗಬೇಕು. ವಿಚಿತ್ರವೆಂದರೆ ಅದನ್ನು ಪೋಷಿಸುತ್ತಾ ಬಂದವರು ಶ್ರೀಮಂತ ವರ್ಗದವರು. Reproduction ಮೂಲಕ ಎಲ್ಲರನ್ನೂ ತಲುಪಲು ಸಾಧ್ಯತೆಯಿದೆ. ಅದು ಶ್ರೀಮಂತರ ಸ್ವತ್ತು ಎಂದ ಮಾತ್ರಕ್ಕೆ ಚಿತ್ರಕಲೆ ಎಂದೂ ಶ್ರೀಮಂತರ ಪರ ಅಲ್ಲ. ಚಿತ್ರಕಲೆಯ ರಸಗ್ರಹಣದ ವಿಧಾನಗಳು ಬದಲಾದಾಗ ಈ ರೀತಿಯ ಗೊಂದಲಗಳು ನಿವಾರಣೆಯಾಗುತ್ತವೆ. ಈಗ ಟಿ.ವಿ. ಜನಪ್ರಿಯ ಮಾಧ್ಯಮವಾಗಿದೆ. ಕಲಾರಸಗ್ರಹಣವನ್ನು ಆ ಮೂಲಕ ಸಮರ್ಥವಾಗಿ ಮಾಡುವ ವಿಧಾನ ಜನಪ್ರಿಯವಾಗಬೇಕು. ಶಿಕ್ಷಣ ಮಾಧ್ಯಮದಲ್ಲೂ ಅದು ಬರಬೇಕು. ಎಲ್ಲಿಯವರೆಗೆ ಜನರು ಕಲೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವು ಜನರಿಂದ ದೂರವೇ ಉಳಿಯುತ್ತವೆ. ಚಿತ್ರಕಲೆಯನ್ನು ಗ್ರಹಿಸಲು ನಮ್ಮ ಮನೆಗಳಲ್ಲೇ ಕೊಂಡು ಅವುಗಳನ್ನು ತಂದು ಹಾಕಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಒಮ್ಮೆ ಚಿತ್ರಕಲೆಯನ್ನು ಗ್ರಹಿಸುವ ವಿಧಾನಗಳನ್ನು ಅರಿತ ಮೇಲೆ ಆಗ ಅದು ಸಮುದಾಯದ ಸಂಸ್ಕೃತಿಯಾಗಿ ಬೆಳೆಯಬಹುದು.
ಈಗ ಎಲ್ಲೆಲ್ಲೂ ಜಾಗತೀಕರಣ ದೊಡ್ಡ ಸವಾಲಾಗಿ ಕಾಡುತ್ತಿದೆ. ಇದು ನಮ್ಮ ಸಂಸ್ಕೃತಿಯನ್ನೇ ನೊಣೆಯಬಹುದೆಂಬ ಆತಂಕವಿದೆ. ನಮ್ಮ ಚಿತ್ರಕಲೆಯೂ ಜಾಗತೀಕರಣಕ್ಕೆ ಸಿಕ್ಕಿ ನಾಶವಾಗುವ ಅಪಾಯವಿದೆಯೇ?
ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂಸ್ಕೃತಿಗಳು ಇತರೆ ಸಂಸ್ಕೃತಿಗಳ ದಾಳಿಗೆ ಸಿಕ್ಕು ನಾಮಾವಶೇಷವಾಗುವ ಪ್ರಕ್ರಿಯೆ ಹೊಸದೇನಲ್ಲ. ಇದನ್ನು ಮೊದಲು ಮನಗಾಣಬೇಕು. ಮಾಯಾ, ಇಂಕಾ, ಅಜ್‌ಟೆಕ್ ಸಂಸ್ಕೃತಿಗಳು ನಾಶವಾಗಿವೆ. ಆಫ್ರಿಕನ್ ಬುಡಕಟ್ಟು ವಸಾಹತು ದಾಳಿಗೆ ಸಿಕ್ಕು ನಾಶವಾಗಿದೆ. ಆಸ್ಟ್ರೇಲಿಯದಲ್ಲಿ ತಮ್ಮ ಕಳೆದುಹೋದ ಸಂಸ್ಕೃತಿಯನ್ನು ಮೂಲ ವಾಸಿಗಳು ಈಗ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಬಲಶಾಲಿಯಾದ ಸಂಸ್ಕೃತಿ ಅದು ಆರ್ಥಿಕ ಪ್ರಧಾನವಾದ ಮಾರುಕಟ್ಟೆ ಸಂಸ್ಕೃತಿಯೂ ಆಗಿರಬಹುದು-ದುರ್ಬಲವಾದದನ್ನು ಮೆಟ್ಟಿ ನಿಲ್ಲುತ್ತದೆ. ಮೈನರ್ ಸಿವಿಲಿಜೇಷನ್ಸ್ ಎಲ್ಲಾ ನಾಶವಾಗಿವೆ. ಜಾಗತೀಕರಣ ನಿಲ್ಲಿಸಲಾಗದ ಕ್ರಿಯೆಯಾಗಿ ಮಾರ್ಪಟ್ಟಿದೆ. ಅದು ಪೂರ್ಣ ಪ್ರಮಾಣದಲ್ಲಿ ಸಂಭವಿಸುತ್ತದೆ. ಸಾಂಸ್ಕೃತಿಕವಾಗಿ ನಾವು ಶಿಥಿಲಗೊಳ್ಳುವ ಅಪಾಯವೂ ಇದೆ. ಇಡೀ ವಿಶ್ವ ಒಂದು ಹಳ್ಳಿಯಾಗುವುದನ್ನು ನಾವು ಕನಿಸಿದ್ದೆವು. ಆದರೆ ಈ ಹಳ್ಳಿ ನಮ್ಮ ಹಳ್ಳಿಯಂತೆಯೇ ಒಂದು ಜಾತಿ ವ್ಯವಸ್ಥೆಯ ಹಳ್ಳಿಯಾಗುವ ಸಂಭವವಿದೆ. ಇಂಥ ಹಳ್ಳಿಯನ್ನು ನಾವು ಕನಸಿರಲಿಲ್ಲ.

ಇದರ ಜೊತೆಗೆ ಜಾಗತೀಕರಣದ ಬಗ್ಗೆ ನಮಗೂ ಒಂದು ಸ್ಪಷ್ಟವಾದ ಕಲ್ಪನೆಯಿಲ್ಲ. ಅಥವಾ ತಪ್ಪು ಕಲ್ಪನೆಯನ್ನೇ ತುಂಬಿಕೊಂಡು ತಪ್ಪು ಅಭಿಪ್ರಾಯಕ್ಕೆ ಬರುತ್ತಿದ್ದೇವೆ. In the absence of proper data, information and statisticst is too early to draw any conclusion. ಯಾಕೆ ಅಂದರೆ ಇಡೀ ಅಮೆರಿಕ ಸಂಸ್ಥಾನದ ಸಮಸ್ತ ಜನರೆಲ್ಲರೂ ಒಕ್ಕೊರಲಿನಿಂದ ಜಾಗತೀಕರಣದ ಮೂಲಕ ತೃತೀಯ ಜಗತ್ತನ್ನು ದಾಸರನ್ನಾಗಿ ಮಾಡಿಕೊಳ್ಳುತ್ತಿದ್ದಾರೆಂಬ ರೀತಿಯಲ್ಲಿ ನಾವು ಅದನ್ನು ಪರಿಭಾವಿಸಿಕೊಂಡಿದ್ದೇವೆ. ವಾಸ್ತವವಾಗಿ ಅದು ಹಾಗಿರಲು ಸಾಧ್ಯವಿಲ್ಲ. ಜಾಗತೀಕರಣದ ನೀತಿಗಳಿಗೆ ಅಮೆರಿಕದಲ್ಲೇ ದೊಡ್ಡ ಪ್ರತಿರೋಧವಿದೆ. ಚಾಮ್‌ಸ್ಕಿ ಒಂದು ಪ್ರಾತಿನಿಧಿಕ ಧ್ವನಿ ಅಷ್ಟೆ. ಜಾತೀಕರಣದ ಪ್ರಕ್ರಿಯೆಯಿಂದ ಅಮೆರಿಕದ ಕೆಲವು ವರ್ಗಕ್ಕೆ ತೊಂದರೆಯಾಗಿರುವುದು ನಿಜ. ಹಾಗೆಯೇ ಯೂರೋಪಿನ ಸಮುದಾಯದ ಕೆಲವು ಭಾಗಕ್ಕೆ ಪೆಟ್ಟು ಬಿದ್ದಿದೆ. ಕಳೆದ ಬಾರಿ ವಿಶ್ವ ರೈತರ ಒಕ್ಕೂಟದ ಸಭೆ ರಾಮನಗರದ ಜಾನಪದ ಲೋಕದಲ್ಲೂ ನಡೆಯಿತು. ಜಾಗತೀಕರಣದಿಂದ ಯಾರಿಗೆ ಲಾಭವಾಗುತ್ತದೆಂದು ನಾವು ತಿಳಿದಿದ್ದೆವೋ, ಅಂದರೆ ಅಮೆರಿಕಾ, ಯುರೋಪಿನ ಹಲವು ರಾಷ್ಟ್ರಗಳು, ಮೆಕ್ಸಿಕೋ ಮುಂತಾದ ರಾಷ್ಟ್ರಗಳಿಂದಲೇ ರೈತರು ಸಮಸ್ಯೆ ಹೊತ್ತು ತಂದಿದ್ದರು. ನಮ್ಮಲ್ಲಿ ಜಾತಿಯ ಪ್ರಶ್ನೆ ಇರುವಂತೆಯೇ ಅಮೆರಿಕದಲ್ಲೂ ಇನ್ನೂ Race prejudice ಇದೆ. ಇಲ್ಲಿಯ ಕೃಷಿ ಬೀಜದ ಸಮಸ್ಯೆ ಅನೇಕ ದೇಶದಲ್ಲೂ ಇದೆ. ಹಾಗಾದಾಗ ಜಾಗತೀಕರಣದಿಂದ ಲಾಭ ಪಡೆಯುವವರ, ನಷ್ಟ ಹೊಂದುವವರ ಧ್ರುವೀಕರಣ ಜಾಗತಿಕ ಮಟ್ಟದಲ್ಲಿ ಆಗುವ ಸಾಧ್ಯತೆಯಿದೆ. ಜಾನಪದ ಲೋಕದಲ್ಲಿ ನಡೆದ ಆ ಬಗೆಯ ಚರ್ಚೆ ಸಂವಾದಗಳು ಯಾವುದೇ ಮಾಧ್ಯಮದಲ್ಲಿ ಬರಲಿಲ್ಲ, ನಿಜ. ಆದರೆ ಒಂದು ವಿರೋಧದ ಪ್ರಕ್ರಿಯೆ ಗರಿಗಟ್ಟಿಕೊಳ್ಳುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಇದು ಅಸಂಭವನೀಯ ಎಂದು ಕಾಣಬಹುದು. ಗಾಂಧೀಜಿ ಚಳವಳಿಗೆ ಧುಮುಕಿದಾಗ ಕಾಂಗ್ರೆಸ್ ಹುಟ್ಟಿ 31 ವರ್ಷವಾಗಿತ್ತು. ಗಾಂಧೀಜಿ ಸ್ವಾತಂತ್ರ್ಯ ತಂದುಕೊಡಬಹುದೆಂದು ಯಾರೂ ನಂಬಿರಲಿಲ್ಲ. ಹಾಗೆಯೇ ಆ ಅಸಂಭವವೂ ಒಂದು ದಿನ ದೊಡ್ಡ ಆಂದೋಲನದ ರೂಪ ಪಡೆಯಬಹುದು. ತಾತ್ವಿಕವಾಗಿ ಯಾವುದೇ ವ್ಯವಸ್ಥೆ ತನ್ನ ಹುಟ್ಟಿನೊಡನೆ ನಾಶದ ಬೀಜಗಳನ್ನು ಇಟ್ಟುಕೊಳ್ಳದೆ ಜನ್ಮ ತಾಳುವುದಿಲ್ಲ. ನಮ್ಮ ಚಿತ್ರಕಲೆಯ ಅವಸಾನದ ಬಗ್ಗೆ ನನಗಂತೂ ಈ ಹಿನ್ನೆಲೆಯಲ್ಲಿ ನಂಬಿಕೆ ಬರುವುದಿಲ್ಲ. ಆದರೆ ನಿಜವಾದ ಅಪಾಯವಿರುವುದು ವಿಜ್ಞಾನ-ತಂತ್ರಜ್ಞಾನದ ಅಪಬಳಕೆಯಲ್ಲಿ. ಹೆಚ್ಚುತ್ತಿರುವ ಶಸ್ತ್ರ ಸಂಗ್ರಹ, ಅಮೆರಿಕದವರು ವಿನಾಶಕಾರಿ ಅಸ್ತ್ರಗಳಿಗೆ ವ್ಯಯಿಸುತ್ತಿರುವ ಹಣ, ಮಾಡುತ್ತಿರುವ ಪ್ರಯೋಗ, ತಲೆಕೆಟ್ಟ, ಬಡ ರಾಷ್ಟ್ರಗಳು- ಇರಾನ್, ಪಾಕಿಸ್ತಾನ, ಭಾರತ- ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆಸುತ್ತಿರುವ ಪೈಪೋಟಿ ಇಡೀ ವಿಶ್ವವನ್ನೇ ಒಂದು ಕಾಲಕ್ಕೆ ನಾಶಗೊಳಿಸಬಹುದು.
ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದ ಅನುಭವ ನಿಮಗಿದೆ. ಅವೆಲ್ಲವೂ ವೈಫಲ್ಯದ ಹಾದಿ ಹಿಡಿದದ್ದು ಏಕೆ?
ರೈತ ಸಂಘ ಚಳವಳಿಯ ಕಾವು ತಗ್ಗಿರುವುದು ನಿಜ. ದ.ಸಂ.ಸ. ಹಲವಾರು ಹೋಳುಗಳಾಗಿರುವುದೂ ನಿಜ. ಅದು ಅನಿವಾರ್ಯವಾಗಿತ್ತು. ರೈತ ಸಂಘ ಆರಂಭದಲ್ಲಿ ಗ್ರಾಮೀಣ ಜನರ ಬದುಕಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡಿತು. ಓಟು ತೆಗೆದುಕೊಂಡು ಶಾಸಕನಾದ ಮಹಾನುಭಾವ ಮತ್ತೊಂದು ಚುನಾವಣೆವರೆಗೆ ಊರಿಗೆ ಬರುತ್ತಿರಲಿಲ್ಲ. ಜನರಿಗೆ ತಮ್ಮ ನಿಜವಾದ ಹಕ್ಕುಗಳ ಪರಿಚಯವೇ ಇರಲಿಲ್ಲ. ಜನಪ್ರತಿನಿಧಿಯ ಕೊರಳಪಟ್ಟಿಯನ್ನು ಹಿಡಿದು ಕೇಳುವ ಹಕ್ಕು ಜನರಿಗಿದೆಯೆಂಬುದು ಗೊತ್ತಾಗಿದ್ದೇ ರೈತ ಸಂಘದಿಂದ. ಆರಂಭದಲ್ಲಿ ರೈತಸಂಘ ರಾಜಕೀಯ ನಿಲುವು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿತ್ತು. ನಂತರ ಪಕ್ಷವಾಗಿ ಪರಿವರ್ತಿತವಾಯಿತು. ರೈತ ಸಂಘ ಕಲಿಸಿದ ಪಾಠದಿಂದಾಗಿ ಶಾಸಕರು, ಜನ ಪ್ರತಿನಿಧಿಗಳು ಜನ ಸಂಪರ್ಕವಿರಿಸಿಕೊಳ್ಳಲು ತೊಡಗಿದ್ದರು. ರೈತ ಸಂಘ ಪಕ್ಷ ರಾಜಕಾರಣಕ್ಕಿಳಿದಾಗ ಸಹಜವಾಗಿಯೇ ಸುಲಭವಾಗಿ ಅಧಿಕಾರ ಸಿಗುವ ತಾಣಕ್ಕೆ ಕಾರ್ಯಕರ್ತರು ತೆರಳಿದರು. ಇತರೆ ಪಕ್ಷಗಳೂ ಆಮಿಷ ಒಡ್ಡಿದವು. ಜೊತೆಗೆ ಹೊಸ ಸಮಸ್ಯೆಗಳು ಎದುರಾದವು. ಅವುಗಳನ್ನು ಎದುರಿಸುವ ಸಿದ್ಧತೆಯೇ ಇರಲಿಲ್ಲ.
ಇದನ್ನು ಓದಿದ್ದೀರಾ?: ಖ್ಯಾತ ಹಿರಿಯ ಕಲಾವಿದ ಕೆ ಟಿ ಶಿವಪ್ರಸಾದ್ ಇನ್ನಿಲ್ಲ
ಇದೇ ರೀತಿ ದ.ಸಂ.ಸ. ಸಹ. ಮೊದಲು ಸ್ವಾಭಿಮಾನ ಮೂಡಿಸುವ ಗ್ರಾಮದ ಕಟ್ಟ ಕಡೆಯ ದಲಿತ ತಲೆಯೆತ್ತಿ ಬಾಳುವಂತೆ ಮಾಡುವ ಧೈಯದಿಂದ ದ.ಸಂ.ಸ. ಆರಂಭವಾಯಿತು. ಹೆಚ್ಚಾಗಿ ವಿದ್ಯಾರ್ಥಿಗಳು ಅದರ ಬಲವಾಗಿದ್ದರು. ಭೂಹೀನರಿಗೆ ಭೂಮಿ ಕೊಡಿಸುವ, ಅವರಿಗೆ ದಕ್ಕಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡುವ, ದೌರ್ಜನ್ಯವಾದಾಗ ಅವರಿಗೆ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಹೋರಾಡುವ ಮೂಲಕ ದ.ಸಂ.ಸ. ಗಟ್ಟಿಯಾಯಿತು. ಕ್ರಮೇಣ ನಗರವಾಸಿ ದಲಿತ ನೌಕರಶಾಹಿ ಈ ಬಲವನ್ನು ತಮ್ಮ ಉಳಿವಿಗಾಗಿ ಬಳಸಿಕೊಂಡಿತು.
ಗ್ರಾಮೀಣ ದಲಿತರು ದೂರವಾದರು. ಅನಂತರ ಕಾರ್ಯಕರ್ತರಿಗೂ ಪಕ್ಷರಾಜಕಾರಣದ ರುಚಿ ಹತ್ತಿತು. ಗ್ರಾಮೀಣ ದಲಿತ ಅನಾಥವಾದ. ನೌಕರಶಾಹಿಯನ್ನು ಗಟ್ಟಿಗೊಳಿಸುತ್ತಾ, ಪರಸ್ಪರ ಅವಲಂಬಿಸುತ್ತಾ, ಕಾಂಗ್ರೆಸ್, ದಳ, ಬಿ.ಎಸ್.ಪಿ, ಬಿ.ಜೆ.ಪಿ.ಯಲ್ಲಿ ಈ ಶಕ್ತಿ ಹಂಚಿ ಹೋಯಿತು. ಆದರೆ ಎರಡೂ ಬಣದಲ್ಲಿ ಈಗ ಹೊಸ ಆಲೋಚನೆಯ ಬಿಸಿರಕ್ತದ ತರುಣರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈಗ ಬರುತ್ತಿರುವ ಖಾಸಗೀಕರಣ, ಉದಾರವಾದಿ ನೀತಿಗಳು, ಜಾಗತೀಕರಣದ ಸವಾಲುಗಳನ್ನು ಎದುರಿಸಲು ಹೊಸ ಪರಿಕರಗಳೊಂದಿಗೆ ಅವರು ಸಿದ್ದರಾಗಲೇಬೇಕಾದ ಅನಿವಾರ್ಯವಿದೆ.

ಈಗ ದಲಿತರ ಸಮಸ್ಯೆಗಳು ತುಂಬಾ ಸಂಕೀರ್ಣಗೊಳ್ಳುತ್ತಿವೆ. ಅವರಿಗೆ ಪ್ರಾತಿನಿಧ್ಯ ಸಿಗುತ್ತಿದ್ದ ಕ್ಷೇತ್ರಗಳೆಂದರೆ ಒಂದು ರಾಜಕೀಯ, ಮತ್ತೊಂದು ಸರ್ಕಾರಿ ಉದ್ಯೋಗ ಕ್ಷೇತ್ರ. ಖಾಸಗೀಕರಣದ ಭರಾಟೆಯಲ್ಲಿ ನೌಕರಿ ನೇಮಕಾತಿ ಕಡಿಮೆಯಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ಇತರ ಜಾತಿಗಳಂತೆ ದಲಿತರ ರಾಜಕೀಯವೂ ಮನೆತನದ ಸ್ವತ್ತಾಗುತ್ತಿದೆ. ಜೊತೆಗೆ ದಲಿತರಲ್ಲೇ ಎಡ-ಬಲ ಎಂದು ಒಡೆದು ಅವರ ಸಂಖ್ಯಾಬಲದ ಸಾಮರ್ಥ್ಯವೂ ಕುಸಿದಿದೆ. ಇಂಥ ಸಮಯದಲ್ಲೂ ಅವರ ವಿಮೋಚನೆಗೆ ದಾರಿ ಯಾವುದಿರಬಹುದು?
ಯಾವುದೇ ಸಮಸ್ಯೆಗೆ ಪರಿಹಾರವಿದ್ದೇ ಇರುತ್ತದೆ. In fact there are hundred ways of solving it. But we have to explore them. ಅದಕ್ಕೂ ಮೊದಲು ಎಲ್ಲಿ ತಪ್ಪಾಗಿದೆ ಅನ್ನೋದನ್ನೂ ಹುಡುಕಬೇಕು. ದಲಿತರಿಗೆ ನೀಡಿದ ಉದ್ಯೋಗದಲ್ಲಿ ಮೀಸಲಾತಿ ಅವಕಾಶ ಕೆಲವು ನಿಬಂಧನೆಗೊಳಪಡಬೇಕಿತ್ತು. ಈಗ ಮೀಸಲಾತಿ ಅವಕಾಶ ಬಳಸಿಕೊಂಡು ಉದ್ಯೋಗ ಪಡೆದವನ ಮಗನೇ ತನ್ನದೇ ಕುಲದ ಗ್ರಾಮೀಣ ದಲಿತ ಅಭ್ಯರ್ಥಿಗೆ ಎದುರಾಳಿಯಾಗಿ ಅವನ ವಿಮೋಚನೆಗೆ ಅಡ್ಡವಾಗುತ್ತಿರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕನಿಷ್ಠ ಇಂತಿಷ್ಟು ವೇತನ ಪಡೆಯುವ ದಲಿತರ ಮಕ್ಕಳಿಗೆ ಮೀಸಲಾತಿ ನಿರಾಕರಿಸಿದ್ದರೆ ಅವಕಾಶವಂಚಿತರಿಗೆ ವಿಮೋಚನೆಯ ಹಾದಿಯಾದರೂ ದೊರೆಯುತ್ತಿತ್ತು. ಇಂದಿನ ಪಕ್ಷರಾಜಕಾರಣ ಮತ್ತು ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಜಾತಿಯವರು ರಾಜಕೀಯವನ್ನು ವಂಶ ಪಾರಂಪರ್ಯ ವೃತ್ತಿಯನ್ನಾಗಿ ಸ್ವೀಕರಿಸಿರುವುದರಿಂದ ದಲಿತರನ್ನು ಮಾತ್ರವೇ ಟೀಕಿಸುವ ಅಗತ್ಯವಿಲ್ಲ. ವಂಶಾಡಳಿತಕ್ಕೆ ಸಾಮೂಹಿಕವಾಗಿ ಕೊನೆ ಹಾಡಿದಾಗ ಅದು ಇಲ್ಲಿಯೂ ನಾಶವಾಗುತ್ತದೆ. ಇನ್ನು ದಲಿತರಲ್ಲಿ ಎಡ-ಬಲ ಎಂದು ಒಡೆದಿರುವ ಬಗ್ಗೆ ಆತಂಕಪಡುವ ಕಾರಣವಿಲ್ಲ. ಈ ವಿಭಜನೆಯಿಂದ ಯಾರಿಗೆ ನಷ್ಟವಾಗುತ್ತಿತ್ತೋ ಅವರು ಎಬ್ಬಿಸಿರುವ ಆತಂಕವಿದು. ಇದು ಈಗಲೇ ವಿಭಜನೆಗೊಂಡಿದ್ದು ಒಳ್ಳೆಯದಾಯಿತು. ಮುಂದೂಡಿದ್ದರೆ ಮತ್ತಷ್ಟು ಅಪಾಯದ ಸಾಧ್ಯತೆಯಿತ್ತು. ಜಾತಿಯ ಗುಣಲಕ್ಷಣವನ್ನು ಗ್ರಹಿಸುವ ಪ್ರಕ್ರಿಯೆ ಇದು. ಇಲ್ಲದಿದ್ದರೆ ತಮ್ಮ ಸ್ಥಾನವೇನು ಎಂದು ಅವರಿಗೆ ಅರ್ಥವಾಗುತ್ತಿರಲಿಲ್ಲ.
ದೇಶದಲ್ಲಿ ಹಿಂದೆಂದಿಗಿಂತಲೂ ಕೋಮುವಾದ ಈಗ ಹೆಚ್ಚು ಘನೀಕೃತವಾಗುತ್ತಿದೆ. ಕೋಮವಾದಿಗಳನ್ನು ವಿರೋಧಿಸಿದ್ದವರೇ ಅಧಿಕಾರಕ್ಕಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ಬೆಳವಣಿಗೆಗಳು ಯಾವ ಹಂತ ಮುಟ್ಟಬಹುದು?
ಒಂದು ದೃಷ್ಟಿಯಲ್ಲಿ ದುರ್ಬಲವಾಗುತ್ತಿರುವ ಬಿ.ಜೆ.ಪಿ. ಕೊನೆಯ ಅಸ್ತ್ರವನ್ನಾಗಿ ಈಗ ಕೋಮುವಾದವನ್ನು ಭರ್ಜರಿಯಾಗಿ ಪ್ರಯೋಗಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಬಿ.ಜೆ.ಪಿ. ಜೊತೆ ಮೈತ್ರಿ ಮಾಡಿಕೊಂಡರು. ಇದೂ ಸಹ ಹೊಸ ಬೆಳವಣಿಗೆ ಅಲ್ಲ. ವಿ.ಪಿ. ಸಿಂಗ್ ಬಿ.ಜೆ.ಪಿ. ಬೆಂಬಲ ಪಡೆದಿದ್ದರು. ಜನತಾಪಕ್ಷ ಉದಯವಾದದ್ದೇ ಜನಸಂಘದ ಸಖ್ಯದೊಡನೆ. ಒಮ್ಮೆ ಉಗ್ರ ಸಮಾಜವಾದಿಗಳೆನಿಸಿಕೊಂಡಿದ್ದವರು ಬಿ.ಜೆ.ಪಿ.ಯ ಧೃತರಾಷ್ಟ್ರ ಆಲಿಂಗನದಲ್ಲಿ ಸಿಕ್ಕಿದ್ದಾರೆ. ಹಾಗಾಗಿ ಮಾಯಾವತಿಯೊಬ್ಬರನ್ನೇ ಟೀಕಿಸುವ ಅಗತ್ಯವಿಲ್ಲ. ಬಹುಶಃ ರಾಜಕೀಯದ ಚದುರಂಗದಾಟದಲ್ಲಿ ನೀತಿಯ ನೆಲೆ ಪಲ್ಲಟವಾಗಿದೆ. ಜನರ ಆಶೋತ್ತರಗಳಿಗೆ ಮಿಡಿಯುವ ಹೃದಯಕ್ಕಿಂತಲೂ ಅಧಿಕಾರ ಹಿಡಿಯುವ ಚತುರತೆಯ ಕೈ ಮೇಲಾಗುತ್ತಿದೆ. ರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲದೆಂಬ ಮಿಥ್ಯ ಇದಕ್ಕೆ ಕಾರಣವಿರಬಹುದು. ವೈಯಕ್ತಿಕವಾಗಿ ನಾನು ಗುರಿ ಮತ್ತು ಅದನ್ನು ತಲುಪುವ ವಿಧಾನ ಶುದ್ದವಾಗಿರಬೇಕೆಂದು ನಂಬಿರುವವನು. ಅದಕ್ಕಾಗಿಯೇ ಉತ್ತರ ಪ್ರದೇಶದಲ್ಲಿ ಮಾಯಾವತಿ ಬಿ.ಜೆ.ಪಿ. ಜೊತೆ ಸೇರಿದಾಗ ನಾನು ಬಿ.ಎಸ್.ಪಿ. ಸಂಪರ್ಕ ಕಡಿದುಕೊಂಡೆ. ಈ ಎಲ್ಲಾ ಬೆಳವಣಿಗೆಗಳು ಯಾವ ಹಂತ ಮುಟ್ಟಬಹುದು, ಯಾವ ತಿರುವು ಪಡೆಯಬಹುದು ಎಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಕಾಯ್ದು ನೋಡಬೇಕಷ್ಟೆ.

ಶಿವಪ್ರಸಾದ್, ನಮಗೆ ತಿಳಿದಮಟ್ಟಿಗೆ ನೀವು ಧರ್ಮ, ದೇವರಲ್ಲಿ ನಂಬಿಕೆಯಿಟ್ಟವರಲ್ಲ. ಆದರೂ ಇತ್ತೀಚೆಗೆ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಪತ್ರಿಕೆಗಳಲ್ಲಿ ಹೇಳಿದ್ದೀರಿ. ನಿಮಗೆ ಧರ್ಮ ತರಬಹುದಾದ ಸಮಾನತೆ, ಸ್ಥಿರತೆ ಬಗ್ಗೆ ನಂಬಿಕೆ ಇದೆಯೇ?
ವೈಯಕ್ತಿಕ ಮಟ್ಟದಲ್ಲಿ ನಾವು ಯಾವುದೇ ಧರ್ಮವನ್ನು ಆಚರಿಸದೇ ಇರುವುದು ಸಾಧ್ಯ. ಆದರೆ ಸಾಮೂಹಿಕ ಮಟ್ಟದಲ್ಲಿ ಅದು ಸಾಧ್ಯವಿಲ್ಲವೆಂದು ನನ್ನ ಅಭಿಪ್ರಾಯ. ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದು ಹೇಳಿಕೊಳ್ಳುವ ನಾವು ಎಲ್ಲಾ ಧರ್ಮದ ವಿರುದ್ದವೂ ಸಮರ ಸಾರಿರುತ್ತೇವೆ. ಆ ರೀತಿ ಸಮರ ಸಾರುವ ಅಗತ್ಯವೂ ಇಲ್ಲ, ಸಾಧುವೂ ಅಲ್ಲ. ಇದನ್ನೆಲ್ಲ ಕೂಲಂಕಷವಾಗಿ ಚರ್ಚಿಸಿ, ಅಂಬೇಡ್ಕರ್ ದೇವರನ್ನು ನಂಬದ ಹೆಚ್ಚು ಮಾನವೀಯವಾದ ಬೌದ್ಧ ಧರ್ಮವನ್ನು ಆರಿಸಿಕೊಂಡರು. ಬಹುಶಃ ಗಾಂಧೀಜಿಯವರೂ ಈ ನಿಟ್ಟಿನಲ್ಲಿ ಸಾಗಿದ್ದರೆ ಭಾರತದ ಕತೆ ಬೇರೆಯೇ ಆಗಿರುತ್ತಿತ್ತು. ಧರ್ಮ ಅನ್ನೋದು ಜನಕ್ಕೆ ಒಂದು ಆಸರೆ ಎಂದೇ ಅಂಬೇಡ್ಕರ್ ನಂಬಿದ್ದರು. ನನಗೆ ನಂಬಿಕೆಯಿದೆಯೋ ಇಲ್ಲವೋ, ಸಮುದಾಯದ ದೃಷ್ಟಿಯಿಂದ ನಾನು ಹೆಚ್ಚು ಮಾನವೀಯವಾದ ಧರ್ಮವನ್ನು ಆರಿಸಿಕೊಂಡಿದ್ದೇನೆ. ನಾನು ಬುದ್ಧ, ಗಾಂಧಿ, ಅಂಬೇಡ್ಕರ್‌ರವರ ವಿಚಾರಧಾರೆಯಿಂದಲೂ ಪ್ರಭಾವಿತನಾಗಿದ್ದೇನೆ.
ಕೊನೆಯದಾಗಿ, ನಿಮಗೆ ಅತ್ಯಂತ ಇಷ್ಟವಾದ ನಿಮ್ಮ ಕೃತಿ ಯಾವುದು?
‘ಹುಲಿ’ ಸರಣಿಯ ಚಿತ್ರಗಳು ನನಗೆ ಅತ್ಯಂತ ಸಂತೋಷ ನೀಡಿವೆ. ಅದೊಂದು ಬಗೆಯ ರಸಾನುಭೂತಿ ನೀಡಿವೆ. ಅವುಗಳಲ್ಲಿ ಜಾನಪದೀಯ ಅಂಶವಿದೆ. ಆಧುನಿಕತೆಗೆ ಪ್ರತಿಕ್ರಿಯೆಯಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯ ಮೃಗನಾಗುವ, ಕೋಡಂಗಿಯಾಗುವ, ಕ್ರೂರವಾಗುವ ವಿವಿಧ ರೂಪಗಳಿವೆ. ಕುರೂಪಿಯಾದ ಮನುಷ್ಯ ಹುಲಿಯಷ್ಟೇ ಸುಂದರನೂ ಆಗಬೇಕೆಂಬ ಬಯಕೆಯೂ ಅಲ್ಲಿದೆ. ಅದು ನನಗೇ ಒಂದು ಬಗೆಯ ಮಿಸ್ಟಿಕ್ ಅನುಭವ ಕೊಟ್ಟ ಕೃತಿ ಸರಣಿ. ಇನ್ನು ಹೆಚ್ಚು ಹೇಳದಿರುವುದೇ ಒಳ್ಳೆಯದು.





