ಕಳೆದ ಒಂದು ದಶಕದ ಮೋದಿ ಸರ್ಕಾರದ ಆರ್ಥಿಕ ನೀತಿಯು ‘ಬಂಡವಾಳಶಾಹಿಗಳಿಗೆ ಬೆಣ್ಣೆ, ರೈತರಿಗೆ ಸುಣ್ಣ’ ಎಂಬ ತಾರತಮ್ಯದ ಅಡಿಪಾಯದ ಮೇಲೆ ನಿಂತಿದೆ. ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಎನ್ಪಿಎ ಸುಲಭವಾಗಿ ಲೆಕ್ಕದ ಪುಸ್ತಕದಿಂದ ಅಳಿಸಿಹೋಗುತ್ತಿರುವಾಗ, ಅದೇ ಲೆಕ್ಕದ ಪುಸ್ತಕದಲ್ಲಿರುವ ಕೆಲವು ಸಾವಿರಗಳ ಸಾಲದ ಬಾಕಿ ರೈತನ ಉಸಿರನ್ನೇ ಶಾಶ್ವತವಾಗಿ ಅಳಿಸುತ್ತಿದೆ. ಈ ಕಟು ವಾಸ್ತವವು, ನವ ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಕಾರ್ಪೊರೇಟ್ಗಳು ಮತ್ತು ಬಂಡವಾಳಶಾಹಿಗಳು ಮಾತ್ರ ಲಾಭದ ಫಲಾನುಭವಿಗಳಾಗಿದ್ದು, ದೇಶಕ್ಕೆ ಅನ್ನ ನೀಡುವ ರೈತರು ಮಾತ್ರ ಸಾಲ, ಕಣ್ಣೀರು ಮತ್ತು ಸಾವಿನ ಸುಳಿಯಲ್ಲಿ ಅನಾಥರಾಗಿದ್ದಾರೆ
ಒಂದು ಕಡೆ ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯಿತಿಯ ಮಳೆ ಸುರಿಸುತ್ತಿರುವ ಕೇಂದ್ರ ಸರ್ಕಾರ, ಬಿಕ್ಕಟ್ಟಿನಲ್ಲಿರುವ ಕೃಷಿ ವಲಯದ ಬಗ್ಗೆ ತೋರಿರುವ ನಿರ್ಲಕ್ಷ್ಯ ನಿಜಕ್ಕೂ ಆಘಾತಕಾರಿಯಾಗಿದೆ. ಕಾರ್ಪೊರೇಟ್ ವಲಯಕ್ಕೆ 9.87 ಲಕ್ಷ ಕೋಟಿ ರೂ. ವಿನಾಯಿತಿ ನೀಡಿರುವ ಇದೇ ಅವಧಿಯಲ್ಲಿ, ಕೃಷಿ ವಲಯಕ್ಕೆ ಹಾಗೂ ರೈತರಿಗೆ ಸಿಕ್ಕಿರುವ ಸಾಲದ ಪರಿಹಾರ ಕೇವಲ 1.67 ಲಕ್ಷ ಕೋಟಿ ರೂಪಾಯಿ ಮಾತ್ರ. ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿ ಗಮನಿಸಿದರೂ, ಬ್ಯಾಂಕುಗಳು ಕಾರ್ಪೊರೇಟ್ ಕಂಪನಿಗಳ 3.20 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದರೆ, ಕೃಷಿ ಮತ್ತು ಪೂರಕ ವಲಯಕ್ಕೆ ಸಿಕ್ಕಿದ್ದು ಕೇವಲ 1.18 ಲಕ್ಷ ಕೋಟಿ ರೂ. ಮಾತ್ರ. ಅಂದರೆ, ನೇರ ಲೆಕ್ಕಾಚಾರದಲ್ಲಿ ನೋಡಿದರೆ, ದೇಶದ ಅನ್ನದಾತ ರೈತರಿಗೆ ಹೋಲಿಸಿದರೆ ಕಾರ್ಪೊರೇಟ್ ಕುಳಗಳಿಗೆ ಬ್ಯಾಂಕುಗಳು ಬರೋಬ್ಬರಿ ಮೂರು ಪಟ್ಟು ಹೆಚ್ಚು ವಿನಾಯಿತಿ ನೀಡಿವೆ.
ಬಿರುಬಿಸಿಲು, ಸುರಿಯುವ ಮಳೆ ಎನ್ನದೆ ಮಣ್ಣಿನೊಂದಿಗೆ ಮಣ್ಣಾಗಿ ದುಡಿಯುವ ಅನ್ನದಾತನ ಬದುಕು ಇಂದು ಕೇವಲ ಸಾಲದ ಸುಳಿಯಲ್ಲಿ ನಲುಗಿ ಹೋಗಿಲ್ಲ, ಬದಲಾಗಿ ಆತನ ಕೊರಳಿಗೆ ನೇಣುಹಗ್ಗವಾಗಿ ಬಿಗಿಯುತ್ತಿದೆ. ಒಂದೆಡೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯಿಲ್ಲ, ಇನ್ನೊಂದೆಡೆ ಹವಾಮಾನ ವೈಪರೀತ್ಯದ ಹೊಡೆತ; ಇವೆರಡರ ನಡುವೆ ಕೃಷಿ ಪರಿಕರಗಳ ಏರುತ್ತಿರುವ ವೆಚ್ಚವನ್ನು ಸರಿದೂಗಿಸಲಾಗದೆ ಬ್ಯಾಂಕುಗಳ ಮೊರೆ ಹೋಗುವ ರೈತ ಅಕ್ಷರಶಃ ಪ್ರಾಣಭೀತಿಯಲ್ಲಿ ಬದುಕುತ್ತಿದ್ದಾನೆ. ಕೇವಲ ಐವತ್ತು ಸಾವಿರವೋ ಅಥವಾ ಒಂದು ಲಕ್ಷ ರೂಪಾಯಿಯೋ ಬೆಳೆಸಾಲ ಮಾಡಿದ ಸಣ್ಣ ರೈತನ ಮನೆಗೆ ಬ್ಯಾಂಕುಗಳು ಮುಲಾಜಿಲ್ಲದೆ ನೋಟಿಸ್ ಅಂಟಿಸುತ್ತವೆ. ಆತನ ಟ್ರ್ಯಾಕ್ಟರ್ ಜಪ್ತಿ ಮಾಡಿ, ಊರವರ ಮುಂದೆ ಸಾರ್ವಜನಿಕವಾಗಿ ಮಾನ ಹರಾಜು ಹಾಕಿ ಆತನನ್ನು ಸಾವಿನ ಕೂಪಕ್ಕೆ ನೂಕುತ್ತಿವೆ. ಭಾರತವು ವಿಶ್ವಗುರುವಾಗುವ ಹಾದಿಯಲ್ಲಿದೆ ಎಂದು ಕೇಂದ್ರ ಸರ್ಕಾರ ನಿರಂತರವಾಗಿ ಬೆನ್ನು ತಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲೇ, ದೇಶಕ್ಕೆ ಅನ್ನ ಹಾಕುವ ಮಣ್ಣಿನ ಮಕ್ಕಳ ನೈಜ ಹಾಗೂ ಕರಾಳ ದುರವಸ್ಥೆ ಇದಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಆಧಾರದ ಮೇಲಿನ ವಿಶ್ಲೇಷಣೆಗಳು ಎದೆಗುಂದಿಸುವಂತಿವೆ. ಮೋದಿ ಸರ್ಕಾರ ಅಧಿಕಾರದಲ್ಲಿದ್ದ 2014-2022ರ ಅವಧಿಯಲ್ಲಿ ಕೃಷಿ ವಲಯದಲ್ಲಿ ಬರೋಬ್ಬರಿ 1,00,474 ಆತ್ಮಹತ್ಯೆಗಳು ನಡೆದಿವೆ. ಅಂದರೆ, ಈ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಪ್ರತಿದಿನ ಸರಾಸರಿ 30 ರೈತರು ಕೃಷಿ ಬಿಕ್ಕಟ್ಟು ಮತ್ತು ಸಾಲದ ಬಾಧೆಗೆ ನೊಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದು ಕೇವಲ ಅಂಕಿ-ಅಂಶವಲ್ಲ, ಸರ್ಕಾರದ ಕೃಷಿ ವಿರೋಧಿ ನೀತಿಗಳಿಗೆ ಬಲಿಯಾದ ಅಮಾಯಕ ಜೀವಗಳ ಲೆಕ್ಕಾಚಾರ.
ಈ ಸಾಲಮನ್ನಾದ ಅಗಾಧತೆಯನ್ನು ದೇಶದ ಜನಸಂಖ್ಯೆ, ರೈತರ ಸಂಖ್ಯೆ ಮತ್ತು ಕಾರ್ಪೊರೇಟ್ಗಳ ಸಂಖ್ಯೆಯ ನಿರ್ದಿಷ್ಟ ಅಂಕಿ-ಅಂಶಗಳೊಂದಿಗೆ ಹೋಲಿಸಿದಾಗ, ಸರ್ಕಾರದ ‘ದ್ವಂದ್ವ ನೀತಿ’ಯ ಅಮಾನವೀಯ ಮುಖ ಮತ್ತಷ್ಟು ಬೆತ್ತಲಾಗುತ್ತದೆ. ಸರ್ಕಾರದ ಕೃಷಿ ಗಣತಿ ಮತ್ತು ಅಧಿಕೃತ ದತ್ತಾಂಶಗಳ ಪ್ರಕಾರ, ದೇಶದಲ್ಲಿ ಸರಿಸುಮಾರು 14 ರಿಂದ 15 ಕೋಟಿ ರೈತ ಕುಟುಂಬಗಳಿವೆ (ಕೃಷಿ ಕೂಲಿಕಾರ್ಮಿಕರನ್ನು ಸೇರಿಸಿದರೆ ಈ ಸಂಖ್ಯೆ 60 ಕೋಟಿಗೂ ಅಧಿಕ). ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳ ಪ್ರಕಾರ ದೇಶದಲ್ಲಿ ನೋಂದಾಯಿತ ಕಂಪನಿಗಳ ಸಂಖ್ಯೆ ಸುಮಾರು 15-16 ಲಕ್ಷವಿದ್ದರೂ, ಬ್ಯಾಂಕುಗಳ ಲಕ್ಷಾಂತರ ಕೋಟಿ ರೂಪಾಯಿಗಳ ‘ರೈಟ್-ಆಫ್’ ಲಾಭವನ್ನು ಪಡೆಯುತ್ತಿರುವುದು ಕೇವಲ 100 ರಿಂದ 500ರ ಒಳಗಿರುವ ಬೆರಳೆಣಿಕೆಯ ಬೃಹತ್ ಕಾರ್ಪೊರೇಟ್ ಕುಳಗಳು ಮಾತ್ರ.
ಅಂದರೆ, ದೇಶದ 15 ಕೋಟಿ ರೈತರಿಗೆ ಸಿಗುತ್ತಿರುವುದು ಬರೀ ಕವಡೆ ಕಾಸು; ಆದರೆ ಬೆರಳೆಣಿಕೆಯಷ್ಟು ಉದ್ಯಮಿಗಳಿಗೆ ಲಕ್ಷಾಂತರ ಕೋಟಿಗಳನ್ನು ಧಾರೆ ಎರೆಯಲಾಗುತ್ತಿದೆ. ಇನ್ನೊಂದೆಡೆ, ಸಾಲದ ಹೊರೆ ಮತ್ತು ಸತತ ಬರಗಾಲದಿಂದ ಕೃಷಿಯಲ್ಲಿ ಭವಿಷ್ಯ ಕಾಣದ ಕೋಟ್ಯಂತರ ಕೃಷಿಕರು ಅನಿವಾರ್ಯವಾಗಿ ಗುಳೇ ಹೋಗುತ್ತಿದ್ದಾರೆ. ದತ್ತಾಂಶಗಳು ಮತ್ತು ಅಧ್ಯಯನಗಳ ಪ್ರಕಾರ, ದೇಶದಲ್ಲಿ ಪ್ರತಿದಿನ ಸರಾಸರಿ 2,000ಕ್ಕೂ ಹೆಚ್ಚು ರೈತರು ಕೃಷಿ ವೃತ್ತಿಯನ್ನೇ ತ್ಯಜಿಸುತ್ತಿದ್ದು, ಭೂಮಿ ಕಳೆದುಕೊಂಡು ದಿನಗೂಲಿ ಅರಸಿ ಮಹಾನಗರಗಳ ಕೊಳೆಗೇರಿಗಳತ್ತ ವಲಸೆ ಹೋಗುತ್ತಿದ್ದಾರೆ. 15 ಕೋಟಿ ರೈತರ ಬದುಕನ್ನು ಬೀದಿಗೆ ತಳ್ಳಿ, ಕೇವಲ ನೂರಾರು ಬಂಡವಾಳಶಾಹಿಗಳ ಸಂಪತ್ತನ್ನು ರಕ್ಷಿಸುತ್ತಿರುವ ಈ ವ್ಯವಸ್ಥೆಯು ಎಂತಹ ದೊಡ್ಡ ವಿಪರ್ಯಾಸ.
ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಸುಧಾರಿಸುವ ಬದಲು ಮತ್ತಷ್ಟು ಬಿಗಡಾಯಿಸುತ್ತಿರುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ. 2022ರ ದತ್ತಾಂಶದ ಪ್ರಕಾರ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಅಥವಾ ಕೃಷಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆ ವರ್ಷ 11,290 ಕೃಷಿ ವಲಯದ ಆತ್ಮಹತ್ಯೆಗಳು ವರದಿಯಾಗಿದ್ದವು. ಕಳೆದ ವರ್ಷದ ಎನ್ಸಿಆರ್ಬಿ ದತ್ತಾಂಶವು ಕೃಷಿ ವಲಯದ ಬಿಕ್ಕಟ್ಟಿನ ಭೀಕರತೆಯನ್ನು ಬಿಚ್ಚಿಟ್ಟಿದ್ದು, ದೇಶಾದ್ಯಂತ 10,546 ಕೃಷಿ ವಲಯದ ಆತ್ಮಹತ್ಯೆಗಳು ಸಂಭವಿಸಿವೆ. ಕನ್ನಡಿಗರಿಗೆ ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ದೇಶದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳ ಪೈಕಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ನಮ್ಮ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಕೃಷಿ ವಲಯ ತೀವ್ರ ಸಂಕಷ್ಟದಲ್ಲಿದೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿ.
ಪಂಜಾಬ್ನಿಂದ ಹಿಡಿದು ಕರ್ನಾಟಕದವರೆಗೆ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣ ‘ಸಾಲದ ಸುಳಿ ಮತ್ತು ಸರ್ಕಾರದ ನಿರ್ಲಕ್ಷ್ಯ’. ದಿನೇ ದಿನೇ ಗಗನಕ್ಕೇರುತ್ತಿರುವ ಕೃಷಿ ಪರಿಕರಗಳ ಬೆಲೆ, ಹವಾಮಾನ ವೈಪರೀತ್ಯದಿಂದ ಉಂಟಾಗುವ ನಿರಂತರ ಬೆಳೆ ನಷ್ಟ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದಿರುವುದು ರೈತರನ್ನು ಆರ್ಥಿಕವಾಗಿ ಹೈರಾಣಾಗಿಸಿದೆ. ಸಾಂಸ್ಥಿಕ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಸಿಗದೆ, ಖಾಸಗಿ ಲೇವಾದೇವಿಗಾರರ ಮೊರೆ ಹೋಗಿ ಅಸಲು-ಬಡ್ಡಿ ತೀರಿಸಲಾಗದೆ ರೈತರು ನರಳುತ್ತಿದ್ದಾರೆ. ಬೆಳೆ ನಷ್ಟದ ಸಂದರ್ಭದಲ್ಲಿ ಸರ್ಕಾರ ನೀಡುವ ಪರಿಹಾರವೂ ಏನೇನೂ ಸಾಲದಾಗಿದ್ದು, ಸಾಲದ ಕೂಪದಲ್ಲಿ ಸಿಲುಕಿದ ಅನ್ನದಾತ ಅನಿವಾರ್ಯವಾಗಿ ಸಾವಿನ ಕದ ತಟ್ಟುತ್ತಿದ್ದಾನೆ.
ತಮ್ಮ ಸಂಪೂರ್ಣ ಸಾಲಮನ್ನಾ ಮಾಡುವಂತೆ, ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಾತ್ಮಕ ಖಾತರಿ ನೀಡುವಂತೆ ಆಗ್ರಹಿಸಿ ಲಕ್ಷಾಂತರ ರೈತರು ಚಳಿ, ಮಳೆ, ಬಿಸಿಲೆನ್ನದೆ ದೆಹಲಿಯ ಗಡಿಗಳಲ್ಲಿ ತಿಂಗಳುಗಟ್ಟಲೆ ಐತಿಹಾಸಿಕ ಪ್ರತಿಭಟನೆ ನಡೆಸಿದರು. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರ ಸಾಲಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ತನ್ನ ಮುಂದಿಲ್ಲ ಎಂದು ಸಂಸತ್ತಿನಲ್ಲಿ ಕಡ್ಡಿ ತುಂಡರಿಸಿದಂತೆ ನಿರ್ದಾಕ್ಷಿಣ್ಯವಾಗಿ ಹೇಳಿದೆ. ತಮ್ಮ ಕಾರ್ಪೊರೇಟ್ ಗೆಳೆಯರ ಪರವಾಗಿ ಬ್ಯಾಂಕುಗಳ ನಿಯಮಗಳನ್ನು ಸುಲಭವಾಗಿ ಸಡಿಲಿಸುವ, ರೈಟ್-ಆಫ್ ಮೂಲಕ ಅವರಿಗೆ ನಿರಾಳತೆ ಒದಗಿಸುವ ಸರ್ಕಾರ, ರೈತರ ಜೀವ ಉಳಿಸುವ, ಸಾಲಮನ್ನಾ ಮಾಡುವ ಬೇಡಿಕೆಗಳಿಗೆ ಮಾತ್ರ ಸಂಪೂರ್ಣವಾಗಿ ಕಿವುಡಾಗಿದೆ.
ಬ್ಯಾಂಕುಗಳ ವಸೂಲಾತಿ ಪ್ರಕ್ರಿಯೆ ಮತ್ತು ನಿಯಮಗಳಲ್ಲಿರುವ ತಾರತಮ್ಯವಂತೂ ದಿಗಿಲು ಹುಟ್ಟಿಸುವಂತಿದೆ. ಶ್ರೀಮಂತ ಕಾರ್ಪೊರೇಟ್ ಸಂಸ್ಥೆಗಳು, ಬೃಹತ್ ಉದ್ಯಮಿಗಳು ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರರಾದರೆ, ‘ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ ಕೋಡ್’ (IBC) ಅಡಿಯಲ್ಲಿ ಹೇರ್ಕಟ್ (Haircut) ಎಂಬ ಹೆಸರಿನಲ್ಲಿ ಭಾರಿ ರಿಯಾಯಿತಿ ನೀಡಿ ಅವರ ಆಸ್ತಿಗಳನ್ನು ಮತ್ತು ಕಂಪನಿಗಳನ್ನು ದಿವಾಳಿಯಿಂದ ರಕ್ಷಿಸಲಾಗುತ್ತದೆ. ಬ್ಯಾಂಕುಗಳು ಈ ಬಂಡವಾಳಶಾಹಿಗಳ ನಿಯಮಗಳಿಗೆ ತಕ್ಕಂತೆ ಬಾಗಿ ಮಂಡಿಯೂರುತ್ತವೆ. ತಾಂತ್ರಿಕವಾಗಿ ‘ರೈಟ್-ಆಫ್’ ಎಂದರೆ ಕಾನೂನಾತ್ಮಕ ಸಾಲಮನ್ನಾ ಅಲ್ಲ, ಅದೊಂದು ಲೆಕ್ಕಪತ್ರದ ಕ್ರಮ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತವಾದರೂ, ವಾಸ್ತವದಲ್ಲಿ ಇದು ಕಾರ್ಪೊರೇಟ್ ಸುಸ್ತಿದಾರರ ಮೇಲಿನ ಹೊರೆ ಇಳಿಸುವ ಮತ್ತು ಅವರನ್ನು ಬಚಾವು ಮಾಡುವ ತಂತ್ರವೇ ಆಗಿದೆ.
ಕಳೆದ ಒಂದು ದಶಕದ ಮೋದಿ ಸರ್ಕಾರದ ಆರ್ಥಿಕ ನೀತಿಯು ‘ಬಂಡವಾಳಶಾಹಿಗಳಿಗೆ ಬೆಣ್ಣೆ, ರೈತರಿಗೆ ಸುಣ್ಣ’ ಎಂಬ ತಾರತಮ್ಯದ ಅಡಿಪಾಯದ ಮೇಲೆ ನಿಂತಿದೆ. ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಎನ್ಪಿಎ ಸುಲಭವಾಗಿ ಲೆಕ್ಕದ ಪುಸ್ತಕದಿಂದ ಅಳಿಸಿಹೋಗುತ್ತಿರುವಾಗ, ಅದೇ ಲೆಕ್ಕದ ಪುಸ್ತಕದಲ್ಲಿರುವ ಕೆಲವು ಸಾವಿರಗಳ ಸಾಲದ ಬಾಕಿ ರೈತನ ಉಸಿರನ್ನೇ ಶಾಶ್ವತವಾಗಿ ಅಳಿಸುತ್ತಿದೆ. ಈ ಕಟು ವಾಸ್ತವವು, ನವ ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಕಾರ್ಪೊರೇಟ್ಗಳು ಮತ್ತು ಬಂಡವಾಳಶಾಹಿಗಳು ಮಾತ್ರ ಲಾಭದ ಫಲಾನುಭವಿಗಳಾಗಿದ್ದು, ದೇಶಕ್ಕೆ ಅನ್ನ ನೀಡುವ ರೈತರು ಮಾತ್ರ ಸಾಲ, ಕಣ್ಣೀರು ಮತ್ತು ಸಾವಿನ ಸುಳಿಯಲ್ಲಿ ಅನಾಥರಾಗಿದ್ದಾರೆ.




