ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದುಕೊಂಡರೆ ಸಾಲದು. ಉದ್ಯಮ ಕ್ಷೇತ್ರದ ಬದಲಾವಣೆಗಳಿಗೆ ಅನುಗುಣವಾಗಿ ತಾಂತ್ರಿಕ ಕೌಶಲ, ದೂರದೃಷ್ಟಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಡೀಪ್ಟೆಕ್ ನಿರ್ದೇಶಕ ಹಾಗೂ ಉದ್ಯಮಿ ವಿನಾಯಕ್ ಅಂಬರೀಷ್ ನಂಜುಂಡಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್ಎಸ್ಐಟಿ) ಕ್ಯಾಂಪಸ್ನ ಜಿ.ಪಿ. ನೆಕ್ಸಸ್ ಸಭಾಂಗಣದಲ್ಲಿ ಗುರುವಾರ ನಡೆದ ಎಂಬಿಎ, ಎಂಸಿಎ ಮತ್ತು ಎಂಟೆಕ್ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಮಾಡುವ ಗುರಿ ಹೊಂದುವುದರ ಜತೆಗೆ, ತಮ್ಮ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿ ಗಳಿಸಬೇಕು. ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳನ್ನು ಕಲಿಯುವುದು, ವಿಭಿನ್ನ ಕ್ಷೇತ್ರಗಳ ಜ್ಞಾನ ಪಡೆದುಕೊಳ್ಳುವುದು ಹಾಗೂ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಉದ್ಯಮ ವಲಯದಲ್ಲಿ ನಿರಂತರವಾಗಿ ಬದಲಾವಣೆಗಳಾಗುತ್ತಿದ್ದು, ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಮೂಲಕ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಮಹಂತೇಶ್ ಎಂ. ನಡಕಟ್ಟಿ ಮಾತನಾಡಿ, ಭಾರತದ ಆರ್ಥಿಕ ಪ್ರಗತಿಯಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಮಹತ್ವದ ಕೊಡುಗೆ ನೀಡಿವೆ ಎಂದರು.
ಒಂದು ದಶಕದ ಹಿಂದೆ ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಇಂದು ಐದನೇ ಸ್ಥಾನಕ್ಕೆ ಏರಿದೆ. ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ತಾಂತ್ರಿಕ ಶಿಕ್ಷಣ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ, ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳು (ಪಿಎಲ್ಐ) ಹಾಗೂ ಆತ್ಮನಿರ್ಭರ ಭಾರತ್ನಂತಹ ಉಪಕ್ರಮಗಳು ದೇಶದ ಉತ್ಪಾದನಾ ವಲಯ ಮತ್ತು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಉತ್ತೇಜನ ನೀಡಿವೆ. ಸ್ಟಾರ್ಟ್ಅಪ್ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಯುವಜನರಿಗೆ ಉದ್ಯೋಗಾವಕಾಶಗಳ ಜತೆಗೆ ಉದ್ಯಮಗಳನ್ನು ಆರಂಭಿಸುವ ಅವಕಾಶಗಳೂ ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಹೊಸ ಆಲೋಚನೆಗಳ ಮೂಲಕ ಉದ್ಯಮಶೀಲತೆಯತ್ತಲೂ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಡೀನ್ ಡಾ. ರೇಣುಕಲತಾ ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ದಿವ್ಯಪ್ರಭಾ, ಪ್ರವೇಶಾತಿ ವಿಭಾಗದ ಮುಖ್ಯಸ್ಥ ಡಾ. ಸಿ.ಎಸ್. ರವೀಂದ್ರ ಸಾಗರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಅನುರಾಧಾ ಜಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಬಿ. ನಾಗಾರ್ಜುನ ಸ್ವಾಗತಿಸಿದರು.
ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಅಭಿಷೇಕ್ ಸಿ.ಎಸ್., ಸಾನಿಯಾ ಖಾನ್ ಮತ್ತು ಲಿಖಿತಾ ಆರ್. ಅವರು ಕ್ಯಾಂಪಸ್ನಲ್ಲಿ ನಡೆಯುವ ತಂಡದ ಯೋಜನೆಗಳು, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸ್ಪರ್ಧಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಕಲಿಕೆಯ ಅವಕಾಶಗಳ ಪರಿಚಯ ಮಾಡಿಕೊಟ್ಟರು.




