ನುಡಿ ನಮನ | ದಿಟ್ಟ ಮಹಿಳೆ ಇಂದಿರಮ್ಮ

Date:

ಲಂಕೇಶ್ ಪತ್ರಿಕೆ ಪ್ರಾರಂಭಿಸಿದ ಮೇಲೆ ಅದು ಹೊರಬಂದ ದಿನದ ಸಮಾರಂಭ ಮಾಡುತ್ತಿದ್ದರು. ಹಾಗೇ ಮಾರ್ಚ್ 8 ರಂದು ಅವರ ಹುಟ್ಟುಹಬ್ಬವಿರುತ್ತಿತ್ತು. ಈ ಸಮಾರಂಭ ಪತ್ರಿಕೆ ಆಫೀಸು ಅಥವಾ ತೋಟದಲ್ಲಿ ನಡೆಯುತ್ತಿತ್ತು. ನಾಡಿನ ಮೂಲೆಮೂಲೆಯಿಂದ ಲಂಕೇಶ್ ಬಳಗ ಬರುತ್ತಿತ್ತು. ಅಲ್ಲೆಲ್ಲೂ ಇಂದಿರಮ್ಮ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲದೆ ಲಂಕೇಶರಿಗೆ ಮುಜುಗರವಾಗುವ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

- Advertisement -

ಇಂದಿರಾ ಲಂಕೇಶ್ ಎಂಬ ದಿಟ್ಟ ಮಹಿಳೆ ತೀರಿಕೊಂಡಿದ್ದಾರೆ. ಲಂಕೇಶರಂತಹ ಸುಂದರ ಯುವಕನನ್ನು ಕೈ ಹಿಡಿದ ಇಂದಿರಾ ತನ್ನ ಸಂಸಾರ ಸುಕೋಮಲವಾಗಿ ಸಾಗುತ್ತದೆಂದು ಭಾವಿಸಿದ್ದರು. ಆದರೆ ಯಾರ ಅಂಕೆಗೂ ಸಿಕ್ಕದ ಲಂಕೇಶರೊಟ್ಟಿಗೆ ಏಗುವುದು ಅಷ್ಟು ಸುಲಭವಲ್ಲ ಎಂಬುದು ಕ್ರಮೇಣ ಅರಿವಾಗತೊಡಗಿತು. ಇಂಟರ್ ಮೀಡಿಯಟ್‍ವರೆಗೂ ಓದಿದ್ದ ಇಂದಿರಾ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿದ್ದರು. ಆಗ ಲಂಕೇಶ್ ಅವರನ್ನು ನೋಡಲು ಬಂದಾಗ ಇಂಗ್ಲಿಷ್ ಎಂ.ಎ. ಮಾಡಿದ್ದರು. ಹುಡುಗನನ್ನು ನೋಡಿದ ಇಂದಿರಾ ತಾನು ಮದುವೆಯಾಗುವುದಾದರೆ ಆ ಹುಡುಗನನ್ನೇ ಆಗುದೆ ಎಂದು ಹಲವರ ಬಳಿ ಹೇಳಿಕೊಂಡಿದ್ದರು. ಅವರ ತಂದೆ ಅಷ್ಟರಲ್ಲಾಗಲೆ ಅವರಿವರ ಬಳಿ ಲಂಕೇಶರ ಬಗ್ಗೆ ಮಾಹಿತಿ ಸಂಗ್ರಹಿಸಿ ಹುಡುಗ ಸರಿಯಿಲ್ಲವಂತೆ ನೋಡು ಯೋಚನೆ ಮಾಡು ಎಂದು ಎಚ್ಚರಿಕೆ ಕೊಟ್ಟರು. ಆದರೂ ಇಂದಿರಾ ನಾನು ಅವನನ್ನೇ ಮದುವೆಯಾಗುತ್ತೇನೆ ಎಂದು ಹಟ ಮಾಡಿದರು. ನಿನ್ನಿಷ್ಟ ಆದರೆ ಮುಂದೆ ನನ್ನಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂದರು. ಅದಕ್ಕೆ ಇಂದಿರಾ ಆಯ್ತು ಎಂದು ಕಷ್ಟವೊ ಸುಖವೊ ಕಟ್ಟಿಕೊಂಡವನ ಜೊತೆ ಬಾಳುವೆ ಮಾಡುವೆ ಎಂಬ ತೀರ್ಮಾನ ತೆಗೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಲಂಕೇಶ್ ಕೆಟ್ಟವರೇನಲ್ಲ ತನ್ನ ನಡವಳಿಕೆಯಿಂದಲೇ ಹೆಂಡತಿಯನ್ನು ತಿದ್ದುವವರಾಗಿದ್ದರು. ಆದರೂ ಮಧ್ಯಮ ವರ್ಗದ ಮಹಿಳೆಯರ ಹುಸಿ ನಡವಳಿಕೆಗಳಿಗೆ ಸ್ಪಂದಿಸದವರಾಗಿದ್ದರು. ಅಂದರೆ ವಾಕ್ ಹೊರಟರೆ ತಮ್ಮ ಶಿಷ್ಯರು ಇರಲೇಬೇಕು. ಹೆಂಡತಿ ಜೊತೆಗಿಂತಲೂ ಶಿಷ್ಯರ ಜೊತೆ ಹರಟುತ್ತಿದ್ದರು. ಬೆಂಗಳೂರಿಗೆ ಬಂದ ಮೇಲೆ ಅವರ ಶಿಷ್ಯ ಪಡೆ ಬೆಳೆಯಿತು. ಹರಿಹರಪ್ರಿಯ, ಕಿ.ರಂ. ನಾಗರಾಜ್, ಟಿ.ಎನ್. ಸೀತಾರಾಮ, ಶೂದ್ರ ಶ್ರೀನಿವಾಸ್, ಅಗ್ರಹಾರ, ಪ್ರಸನ್ನ, ಕೊಂಡಜ್ಜಿ ಮೋಹನ್ ಹೀಗೆ ಪ್ರತಿ ವರ್ಷ ಅಸಂಖ್ಯ ಗೆಳೆಯರು ಬಂದು ಸೇರ್ಪಡೆಯಾಗುತ್ತಿದ್ದರು.

ಲಂಕೇಶ್‍ಗೆ ಸಂಸಾರಕ್ಕಿಂತಲೂ ಶಿಷ್ಯ ಪಡೆಯ ನಿರ್ವಹಣೆ ಬಹುಮುಖ್ಯವಾಗಿ ಕಾಣುತ್ತಿತ್ತು. ಇಂದಿರಾ ಅಷ್ಟರಲ್ಲಾಗಲೇ ಮೂರು ಮಕ್ಕಳ ತಾಯಿಯಾಗಿ ಅವರ ನಿರ್ವಹಣೆಯಲ್ಲಿದ್ದರು. ಲಂಕೇಶ್ ಅದಾಗಲೇ ನಾಟಕ ಬರೆದು ಆಡಿಸತೊಡಗಿದ್ದರು. ಅದು ನವ್ಯದ ಅಬ್ಬರದ ಕಾಲ. ಬೆಂಗಳೂರಲ್ಲಿ ಘಟಾನುಘಟಿ ನಾಟಕಕಾರರಾದ ಕಂಬಾರ್, ಕಾರ್ನಾಡ್, ಲಂಕೇಶರ ನಾಟಕೋತ್ಸವ ಜರುಗಿತು. ಆಗ ಇಂದಿರಮ್ಮ ಸಂಕ್ರಾಂತಿ ನಾಟಕದ ಸೆಟ್‍ಗೆ ಧನಸಹಾಯ ಮಾಡಿದ್ದಲ್ಲದೆ ಗಂಡನ ನಾಟಕೋತ್ಸವದಲ್ಲಿ ಭಾಗಿಯಾದರು. ನಾಟಕ ಮುಗಿದ ಮೇಲೆ ಹಾಕಿದ ಹಣ ವಾಪಸು ಬರುವುದರ ಬದಲು ಸೆಟ್‍ನ ಸಾಮಗ್ರಿ ಮನೆಗೆ ಬಂದು ಬಿದ್ದವು. ಲಂಕೇಶ್‍ಗೆ ಇದರಿಂದ ಏನೂ ಅನ್ನಿಸದಿದ್ದರೂ ವ್ಯವಹಾರಸ್ಥರ ಮಗಳಾದ ಅವರಿಗೆ ಇದೇನಿಂಗೆ ಅನ್ನಿಸಿತು. ಲಂಕೇಶ್‍ಗೆ ಸಂಸಾರದಲ್ಲಿ ನಿಗಾ ವಹಿಸುವುದಕ್ಕಿಂತ ಸಾಂಸ್ಕೃತಿಕ ಲೋಕ ಬಹಳ ಮುಖ್ಯವಾಗಿತ್ತು.

ಅವರಾಗಲೇ ಹುಡುಗರಿಗೆ ಪಾಠ ಮಾಡುವುದರಲ್ಲಿ ಉತ್ಸಾಹ ಕಳೆದುಕೊಂಡಿದ್ದರು. ಇದನ್ನರಿತ ಇಂದಿರಾ ಬದುಕಲು ಲಂಕೇಶರನ್ನು ನೆಚ್ಚುವಂತಿಲ್ಲ ಏನಾದರೂ ಮಾಡಬೇಕೆಂದು ಸೀರೆ ವ್ಯಾಪಾರಕ್ಕೆ ತೊಡಗಿದ್ದರು. ಶಾಲಾ ಕಾಲೇಜಿನಲ್ಲಿ ಪಾಠ ಮಾಡುವ ಮಹಿಳೆಯರಿಗೆ ಕಂಚಿಯಿಂದ ತಂದ ಒಳ್ಳೆ ರೇಷ್ಮೆ ಸೀರೆಗಳನ್ನು ಮಾರಿ ಸಂಬಳದ ಸಮಯಕ್ಕೆ ಹೋಗಿ ಹಣ ಪಡೆಯುತ್ತಿದ್ದರು. ಅದೇ ಸಮಯಕ್ಕೆ ಲಂಕೇಶ್ ಪಲ್ಲವಿ ಸಿನಿಮಾ ತೆಗೆದು ಮೊದಲ ಚಿತ್ರಕ್ಕೆ ನಿರ್ದೇಶಕನ ಬೆಸ್ಟ್ ಸಿನಿಮಾ ಎಂದು ಪ್ರಶಸ್ತಿ ಪಡೆದರು. ದೆಹಲಿಗೆ ಪ್ರಶಸ್ತಿ ಪಡೆಯಲು ಹೋಗಬೇಕಾದರೆ ನಿರ್ಮಾಪಕಿಯೂ ಆಗಿದ್ದ ಇಂದಿರಾ ಅಲ್ಲದೆ ಪಲ್ಲವಿಯ ನಟಿಯನ್ನು ಕರೆದೊಯ್ದಿದ್ದರು. ಇಂತಹ ಹಲವಾರು ಕಿರಿಕಿರಿಯನ್ನು ಲಂಕೇಶರಿಂದ ಅನುಭವಿಸಿದರೂ, ಇಂದಿರಮ್ಮ ಬಹಳ ಸಹನೆಯಿಂದಿದ್ದರು. ಲಂಕೇಶ್ ಕಾಲೇಜಿಗೆ ರಜೆ ಹಾಕಿ ಮೇಲಿಂದ ಮೇಲೆ ಮೂರು ಸಿನಿಮಾ ತೆಗೆದು ಕಡೆಗೆ ಎಲ್ಲಿಂದಲೊ ಬಂದವರು ಚಿತ್ರ ತೆಗೆದು ನಂತರ ಕಾಲೇಜಿನ ಕೆಲಸಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಬಂದರು. ಇಂದಿರಮ್ಮ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ಗೌರಿ ಜಗಳ ಮಾಡಿದಳು. ಆದರೆ ಲಂಕೇಶ್ ಎಂದೂ ತಮ್ಮ ಹಟದಿಂದ ಹಿಂದೆ ಸರಿದವರಲ್ಲ. ರಾಜೀನಾಮೆ ಬರೆದು ಬಂದರು. ನನಗೊಂದಿಷ್ಟು ಊಟ ಕೊಡಿ ನಿಮ್ಮನ್ನು ಇನ್ನೇನು ಕೇಳುವುದಿಲ್ಲ ಎಂದರು.

ದಿಟ್ಟ ಮಹಿಳೆಯಾದ ಇಂದಿರಮ್ಮ ಗಂಡನನ್ನು ಸಾಕುವ ಹೊಣೆ ಹೊತ್ತರು. ಆಗಲೇ ಅವರ ಸಂಚಾರಿ ಸೀರೆ ವ್ಯಾಪಾರ ಮಯೂರ ಮ್ಯಾಚಿಂಗ್ ಸೆಂಟರ್ ಎಂದು ಬಸವನಗುಡಿಯಲ್ಲಿ ಪ್ರಾರಂಭಗೊಂಡಿತು. ಇತ್ತ ಲಂಕೇಶ್ ಒಂದೆರಡು ಡಾಕ್ಯುಮೆಂಟರಿ ಮಾಡಿದರು. ಅದರಿಂದ ಬಂದ ಹಣ ಕೂಡಿಸಿ, ಪತ್ರಿಕೆ ತೆಗೆಯುವ ಜಾಹೀರಾತು ನೀಡಿದರು. ಕರ್ನಾಟಕದ ಮೂಲೆಮೂಲೆಯಿಂದ ಪತ್ರಿಕಾ ಏಜೆಂಟರಿಂದ ಡಿಪಾಸಿಟ್ ಹರಿದುಬಂತು. ಅದಾಗಲೇ ಲಂಕೇಶ್ ಪ್ರಜಾವಾಣಿ ಪತ್ರಿಕೆಗೆ ಕಾಲಂ ಬರೆದಿದ್ದರಿಂದ ಅದು ಖ್ಯಾತಿಯನ್ನು ತಂದುಕೊಟ್ಟಿತ್ತು. ಆದ್ದರಿಂದ ಪತ್ರಿಕೆ ಪ್ರಾರಂಭವಾಯ್ತು. ಬದುಕಲು ಕುಟುಂಬದ ಆಶ್ರಯ ಕೇಳಿದ್ದ ಲಂಕೇಶ್ ಕೆಲವೇ ತಿಂಗಳಲ್ಲಿ ಹಲವು ಕುಟುಂಬಗಳಿಗೆ ಆಶ್ರಯ ಕೊಡುವಂತಾದರು.

ಲಂಕೇಶ್ ಪತ್ರಿಕೆಯ ಪ್ರಸಾರ ಪ್ರತಿವಾರ ಸಾವಿರಗಟ್ಟಲೆ ಏರುತ್ತಾ ಹೋಗಿ, ಕಡೆಗೆ ಒಂದೂವರೆ ಲಕ್ಷ ತಲುಪಿತು. ಇತ್ತ ಇಂದಿರಮ್ಮನವರ ಮಯೂರ ಮ್ಯಾಚಿಂಗ್ ಸೆಂಟರ್ ಕೂಡ ನಾಲ್ಕೈದು ಜನ ಸಿಬ್ಬಂದಿಯೊಡನೆ ನಡೆಯುವಂತಾಯ್ತು. ಆದರೂ ಆಗೊಮ್ಮೆ ಇಂದಿರಮ್ಮ ಲಂಕೇಶರನ್ನು ದುಡ್ಡು ಕೇಳಲಾಗಿ “ದುಡ್ಡಿಲ್ಲ ಸಕ್ರ್ಯುಲೇಶನ್ ಕಡಿಮೆಯಿದೆ” ಎಂದು ಇಂದಿರಮ್ಮನಿಗೆ ಸುಳ್ಳು ಹೇಳಿದ್ದರು. ಲಂಕೇಶರಾಗಲಿ ಇಂದಿರಮ್ಮನಾಗಲಿ ತಮ್ಮ ವೃತ್ತಿಯಲ್ಲಿನ ಲಾಭ ನಷ್ಟದ ಕುರಿತು ಚರ್ಚಿಸುವವರಾಗಿರಲಿಲ್ಲ. ಅವರ ದಾರಿಗಳೇ ಕವಲೊಡೆದಿದ್ದವು. ಇಂದಿರಮ್ಮನವರ ಸೀರೆ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಅದರಿಂದ ಹೊಟ್ಟೆಕಿಚ್ಚುಪಟ್ಟ ಯಾರೋ ಅಂಗಡಿಯ ಮುಂದೆ ಮಾಟ ಮಂತ್ರ ಮಾಡಿ ನಿಂಬೆಹಣ್ಣು, ಮೆಣಸಿನಕಾಯಿ ಇಟ್ಟು ಹೋಗಿದ್ದರು. ಬೆಳಿಗ್ಗೆ ಬಂದು ನೋಡಿದ ಇಂದಿರಮ್ಮ ಅದನ್ನು ಕಾಲಿನಿಂದ ಒದ್ದು ಒಳಗೆ ನಡೆದಿದ್ದರು. ಅಂತಹ ದಿಟ್ಟೆ ಅವರು.

ಲಂಕೇಶರು ತಮ್ಮ ಸಹಾಯಕರ ಸಲಹೆಯಂತೆ ಬಸವನಗುಡಿಯಲ್ಲೇ ಸೈಟು ತೆಗೆದುಕೊಂಡು ಪತ್ರಿಕೆಗೆ ಹೊಸ ಆಫೀಸು ಕಟ್ಟಿಸತೊಡಗಿದರು. ಅದೇ ಸಮಯಕ್ಕೆ ಹುಳಿಮಾವಿನ ಮರ ತೋಟ ತೆಗೆದುಕೊಂಡು ಅದರೊಳಗೆ ಮನೆ ಕಟ್ಟಿಸಿದರು. ಅದಕ್ಕೂ ಮೊದಲು ಹೊಸಕೆರೆ ಬಳಿ ಸೈಟು ತೆಗೆದುಕೊಂಡು ಮನೆ ಕಟ್ಟಿಸಿ ಅದಕ್ಕೆ “ನವಿಲು” ಎಂದು ಹೆಸರು ಮಡಗಿದರು. ಇತ್ತ ಇಂದಿರಮ್ಮನವರೂ ಸ್ಪರ್ಧೆಗೆ ಬಿದ್ದಂತೆ ರಾಜರಾಜೇಶ್ವರ ನಗರದಲ್ಲಿ ಗೌರಿಗಾಗಿ ಮನೆ ಕಟ್ಟಿಸಿ ಅದಕ್ಕೆ ʼಮಾನುಷಿʼ ಎಂದು ಹೆಸರಿಟ್ಟರು. ಅದರ ಪ್ರಾರಂಭೋತ್ಸವಕ್ಕೆ ಹೋದಾಗಲೇ ಗೌರಿ ಮನೆ ಎಂದು ಗೊತ್ತಾಗಿದ್ದು. ಇದೇ ರೀತಿ ಕವಿತಾಗೆ ಮನೆ ಕಟ್ಟಿದಾಗಲೂ ಲಂಕೇಶ್‍ಗೆ ಗೊತ್ತಿರಲಿಲ್ಲ. ಆ ಮನೆಯೊಳಗೆ ತಾವಿರುವ ವ್ಯವಸ್ಥೆಯ ರೂಮು ಕಟ್ಟಿಸಿದರು. ಅದಲ್ಲದೆ ಇಂದಿರಮ್ಮನೂ ನೆಲಮಂಗಲದ ಬಳಿ ಐದು ಎಕರೆ ಜಮೀನು ತೆಗೆದುಕೊಂಡು ತೋಟ ಮಾಡಿ ಅದರೊಳಗೆ ಮನೆಯನ್ನೂ ಕಟ್ಟಿದರು. ದಕ್ಷಿಣ ಕನ್ನಡದ ಹಳೆ ಮನೆಗಳ ಬಾಗಿಲು ಕಿಟಕಿ ಕಂಬ ತಂದು ಕಟ್ಟಿರುವುದರಿಂದ ಅದೊಂದು ಕಲಾಕೃತಿಯಂತಿದೆ. ಹೀಗೆ ಆಸ್ತಿ ಮಾಡುವುದರಲ್ಲಿ ಸ್ಪರ್ಧೆಗೆ ಬಿದ್ದವರಂತೆ ಇಂದಿರಾ ಲಂಕೇಶ್ ಪರಸ್ಪರ ಮೆಚ್ಚುಗೆ ಮತ್ತು ಹೆಮ್ಮೆಯಿಂದ ಇರುವಾಗ ಮಕ್ಕಳೆಲ್ಲ ಅವರಿಷ್ಟದಂತೆ ಮದುವೆಯಾದರು. ಈ ಸಂಸಾರದ ವಿಷಯದಲ್ಲಿ ಲಂಕೇಶ್ ನೆಪ ಮಾತ್ರವಾದರೆ ಇಂದಿರಾ ಎಲ್ಲ ಜವಾಬ್ದಾರಿಯನ್ನು ನಿಭಾಯಿಸುವ ದಿಟ್ಟ ಮಹಿಳೆಯಾಗಿ ರೂಪುಗೊಂಡರು. ಇಂದಿರಮ್ಮ ಇದ್ದಾಳೆಂದರೆ ಅವಳೆಲ್ಲವನ್ನು ನೋಡಿಕೊಳ್ಳುತ್ತಾಳೆಂದು ಲಂಕೇಶ್ ನಿರಾಳವಾಗತೊಡಗಿದರು.

ಲಂಕೇಶ್ ಪತ್ರಿಕೆ ಪ್ರಾರಂಭಿಸಿದ ಮೇಲೆ ಅದು ಹೊರಬಂದ ದಿನದ ಸಮಾರಂಭ ಮಾಡುತ್ತಿದ್ದರು. ಹಾಗೇ ಮಾರ್ಚ್ 8 ರಂದು ಅವರ ಹುಟ್ಟುಹಬ್ಬವಿರುತ್ತಿತ್ತು. ಈ ಸಮಾರಂಭ ಪತ್ರಿಕೆ ಆಫೀಸು ಅಥವಾ ತೋಟದಲ್ಲಿ ನಡೆಯುತ್ತಿತ್ತು. ನಾಡಿನ ಮೂಲೆಮೂಲೆಯಿಂದ ಲಂಕೇಶ್ ಬಳಗ ಬರುತ್ತಿತ್ತು. ಅಲ್ಲೆಲ್ಲೂ ಇಂದಿರಮ್ಮ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲದೆ ಲಂಕೇಶರಿಗೆ ಮುಜುಗರವಾಗುವ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಲಂಕೇಶರಿಗೆ ಹೊಸ ಬಟ್ಟೆ ಬೇಕಾದರೆ ಅವರೇ ತಂದು ಹಳೆ ಬಟ್ಟೆ ಸಮೇತ ಟೈಲರಿಗೆ ಕೊಟ್ಟು ಹೊಲಿಸಿ ತಂದು, ಲಂಕೇಶರ ಕಪಾಟಿನಲ್ಲಿಡುತ್ತಿದ್ದರು. ಅವನ್ನು ಲಂಕೇಶ್ ತೆಗೆದು ಹಾಕಿಕೊಂಡು ಟೈಲರ್ ಬಗ್ಗೆ ಏನಾದರೂ ಕಾಮೆಂಟ್ ಮಾಡುತ್ತಿದ್ದರೇ, ಹೊರತು ಇಂದಿರಮ್ಮನಿಗೆ ಯಾವ ಮೆಚ್ಚುಗೆಯ ಮಾತನ್ನೂ ಆಡುತ್ತಿರಲಿಲ್ಲ, ತಾನು ಹೊಲಿಸಿದ ಡ್ರಸ್ಸು ನೋಡಿ ಇಂದಿರಮ್ಮ ಮುಗುಳು ನಕ್ಕರೆ ಲಂಕೇಶ್ ಕಡೆಯಿಂದ ಯಾವ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಅವರ ದಾಂಪತ್ಯ ಮಾಗಿ ಒಂದು ರೀತಿಯ ಮೌನದಿಂದಲೇ ಮುಂದುವರಿದಿದ್ದವು. ಬಂದ ಕೆಲಸವಾಯ್ತು ಎಂಬಂತೆ ಲಂಕೇಶ್ ನಿರ್ಗಮಿಸಿದರು. ಆಗ ಕೂಡ ಇಂದಿರಮ್ಮ ಮಯೂರ ಮ್ಯಾಚಿಂಗ್ ಸೆಂಟರ್‍ಗೆ ಮಾಲು ತರಲು ಹೋಗಿದ್ದರು.

ಲಂಕೇಶ್ ತೀರಿಕೊಂಡ ನಂತರ ಗೌರಿ, ದೆಹಲಿಯಿಂದ ಬಂದು ಪತ್ರಿಕೆಯ ಜವಾಬ್ದಾರಿ ಹೊತ್ತುಕೊಂಡು ಸಂಪಾದಕಿಯಾದರು. ಕವಿತ ಚಿತ್ರ ನಿರ್ದೇಶಕಿಯಾದರು. ಎರಡು ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತಿದ್ದ ಇಂದಿರಮ್ಮ ಕವಿತಾ ಮನೆಯಲ್ಲಿದರು. ಆಗ ಕವಿತ ನಾನೊಂದು ಮಗು ಮಾಡಿಕೊಳ್ಳುತ್ತೇನೆ ಸಿಂಗಲ್ ಪೇರೆಂಟಾಗಿ ಮಗು ಸಾಕುತ್ತೇನೆ ಎಂದಳು. ಅದಾಗಲೇ ಗರ್ಭಿಣಿಯೂ ಆಗಿದ್ದಳು. ಆಗ ಇಂದಿರಮ್ಮ ಬಹಳ ಖುಷಿಯಿಂದ ಸಂಭ್ರಮಪಟ್ಟರು. ಆಗ ಇಶಾ ಹುಟ್ಟಿದಳು. ಕವಿತಾ ಸಿನಿಮಾದಲ್ಲಿ ಬಿಜಿಯಾಗಿದ್ದು ಗೌರಿ ಪತ್ರಿಕೆ ಜವಾಬ್ದಾರಿ ನಿರ್ವಹಿಸುತ್ತಿದ್ದರಿಂದ ಇಂದಿರಮ್ಮ ಮೊಮ್ಮಗಳು ಇಶಾ ನೋಡಿಕೊಳ್ಳುವ ಜವಾಬ್ದಾರಿ ಹೊತ್ತರು. ಇಶಾ ಅಜ್ಜಿಯನ್ನು ತುಂಬಾ ಹಚ್ಚಿಕೊಂಡದ್ದಲ್ಲದೆ ಗೌರಿಯನ್ನು ಅವ್ವ ಎಂದು ಕರೆಯುತ್ತಿದ್ದಳು. ಒಂದು ರೀತಿ ಕವಿತಾಳಿಗಿಂತಲೂ ಅಜ್ಜಿ ಅವ್ವನನ್ನು ಹಚ್ಚಿಕೊಂಡಳು. ಆಗ ಗೌರಿಯ ಹತ್ಯೆಯಾಯ್ತು. ಎಲ್ಲರಿಗಿಂತಲೂ ದುಃಖ ಅನುಭವಿಸಿದ್ದು ಆ ಎಳೆಯ ಮನಸ್ಸು. ತನ್ನ ಕಣ್ಮುಂದೆಯೇ ಮಗಳ ಹತ್ಯೆಯಾದ ದೃಶ್ಯದಿಂದ ಇಂದಿರಮ್ಮ ಮಗಳನ್ನು ನೆನೆಸಿಕೊಂಡು ಆಗಾಗ್ಗೆ ಅಳುತ್ತಿದ್ದರು. ಅವರು ವಯೋಸಹಜ ಒತ್ತಡದಿಂದ ತೀರಿಕೊಂಡಾಗ ಅವರ ಪ್ರೀತಿ ಪಾತ್ರ ಮೊಮ್ಮಗಳಾದ ಇಶಾ ಸಂಸಾರದ ಎಲ್ಲ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಇಂದಿರಮ್ಮ ತೀರಿಕೊಳ್ಳುವ ಮೂರು ದಿನ ಮುಂಚೆ ಫೋನು ಮಾಡಿ ಗೌಡ್ರೆ ಹೇಗಿದ್ದೀರಿ ಎಂದರು. ನಾನು ಚೆನ್ನಾಗಿದ್ದೀನಿ, ನೀವು ಹೇಗಿದಿರ? ಎಂದೆ. ನಾನು ಆರಾಮಾಗಿದ್ದೀನಿ ಎಂದವರು, ಮುಂದಿನ ಮೂರೇ ದಿನದಲ್ಲಿ ಹೊರಟುಹೋದರು. ಕಡೆಗಳಿಗೆಯಲ್ಲಿ ನನಗ್ಯಾಕೆ. ಫೋನು ಮಾಡಿದ್ದರು ಎಂಬುದನ್ನು ಅರ್ಥೈಸಲಾಗುತ್ತಿಲ್ಲ.

chandre gowda
ಬಿ ಚಂದ್ರೇಗೌಡ
+ posts

ಹಿರಿಯ ಲೇಖಕ, ಲಂಕೇಶ್‌ ಒಡನಾಡಿ

ಪೋಸ್ಟ್ ಹಂಚಿಕೊಳ್ಳಿ:

ಬಿ ಚಂದ್ರೇಗೌಡ
ಬಿ ಚಂದ್ರೇಗೌಡ
ಹಿರಿಯ ಲೇಖಕ, ಲಂಕೇಶ್‌ ಒಡನಾಡಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ...

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...