ದೇಶದ ಭವಿಷ್ಯದ ನಾಯಕರಾಗಿ ಹೊರಹೊಮ್ಮಿರುವ ರಾಹುಲ್ ಗಾಂಧಿ ಅವರು ಟೀಕೆಗಳ ನಡುವೆಯೂ ಎದೆಗುಂದದೆ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಿರುವ ನಾಯಕ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಶೇಷ ಚೇತನರಿಗೆ ಸಹಾಯಕ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವ ಹಾಗೂ ಜನರ ನೋವಿಗೆ ಸ್ಪಂದಿಸುವ ಮಾನವೀಯ ಹೃದಯದ ನಾಯಕ ರಾಹುಲ್ ಗಾಂಧಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿಗೊಂಡ ಜನಪರ ಯೋಜನೆಗಳಿಂದ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದಿದೆ ಎಂದು ಹೇಳಿದರು.
ವಿರೋಧ ಪಕ್ಷಗಳು ಬಡವರ ಅಭಿವೃದ್ಧಿಗಿಂತ ಶ್ರೀಮಂತರ ಏಳಿಗೆಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವೇ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ರಾಜಕೀಯ ಶಕ್ತಿ ಎಂದು ಅಭಿಪ್ರಾಯಪಟ್ಟರು. ಬಡವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಕಾಂಚನ್ ವಹಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 75 ಮಂದಿ ವಿಶೇಷ ಚೇತನರಿಗೆ ಶ್ರವಣ ಸಾಧನ, ಕಮೋಡ್ ವೀಲ್‌ಚೇರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಕಚ್ ಸೇರಿದಂತೆ ವಿವಿಧ ಸಹಾಯಕ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹರಿ ಪ್ರಸಾದ್ ರೈ, ಎಂ.ಎ. ಗಫೂರ್, ಕೇಶವ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ನರಸಿಂಹಮೂರ್ತಿ, ಸದಾನಂದ ಕಾಂಚನ್, ಹಬೀಬ್ ಅಲಿ, ಕುಶಾಲ್ ಶೆಟ್ಟಿ, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ಗಣೇಶ್ ನೆರ್ಗಿ, ಸಜ್ಜನ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಹಮ್ಮದ್, ಸೂರಜ್ ಕಲ್ಮಾಡಿ, ಸೌರಭ್ ಬಲ್ಲಾಳ್, ಸುರೇಶ್ ಶೆಟ್ಟಿ ಬನ್ನಂಜೆ, ರಾಘವೇಂದ್ರ ಎನ್., ಮಮತಾ ಶೆಟ್ಟಿ, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಕಿಶನ್ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






