ವೀರಶೈವ ಮತ ಮತ್ತು ಲಿಂಗೋದ್ಭವ ಪಂಚಾಚಾರ್ಯರ ಹುಸಿ ಕಥಾನಕವನ್ನು ಅನುಮಾನವಿಲ್ಲದೆ, ಕಣ್ಣು ಮುಚ್ಚಿಕೊಂಡು ನಂಬುವವರು ಮತ್ತು ಇತರರಿಗೆ ನಂಬಿಸಲು ಯತ್ನಿಸುವವರು ತಮ್ಮ ಪೂರ್ವಜರು ಲಿಂಗಾಯತರಿಗೆ ಮಾಡಿರುವ ಅನ್ಯಾಯಗಳಿಗೆ ಸಾಕ್ಷಿ, ದಾಖಲೆ ಮತ್ತು ಪುರಾವೆಗಳನ್ನು ಕೇಳುವ ಧೈರ್ಯ ತೋರಿಸುವುದು ನಿಜವಾಗಿಯೂ ನಾಚಿಕೆಗೇಡು. ಅನ್ಯಾಯ ಮಾಡುವವರು ಸಾಕ್ಷಿಗಳನ್ನು ಜೀವಂತ ಇಡುವುದಿಲ್ಲ. ಹಾಗೆಯೇ ಮೇಲ್ನೋಟದ ಸತ್ಯಗಳಿಗೆ ಸಾಕ್ಷಿಗಳ ಅಗತ್ಯವಿರುವುದಿಲ್ಲ.
ವರ್ತಮಾನದ ಪಂಚಮಸಾಲಿ ಪೀಠಗಳ ಗೊಂದಲಕಾರಿ ಬೆಳವಣಿಗೆಗಳ ಕುರಿತು ಈ ದಿನ.ಕಾಮ್ ಜನಪ್ರಿಯ ಡಿಜಿಟಲ್ ಮಾಧ್ಯಮದಲ್ಲಿ ನನ್ನ ಸರಣಿ ಲೇಖನಗಳು ಪ್ರಕಟವಾಗುತ್ತಿರುವುದು ನೀವೆಲ್ಲ ಬಲ್ಲಿರಿ. ಈ ಸರಣಿ ಲೇಖನಗಳಿಂದ ಆಗುತ್ತಿರುವ ಅನೇಕ ಹುದುಗಿ ಹೋಗಿರುವ ಮತ್ತು ಗೊತ್ತಿದ್ದರೂ ಹೇಳಲು ಆಗದಿರುವ ಐತಿಹಾಸಿಕ ಸತ್ಯ ಸಂಗತಿಗಳ ಅನಾವರಣವು ತಪ್ಪಿತಸ್ಥರಲ್ಲಿ ತಲ್ಲಣ ಸೃಷ್ಟಿಸಿರುವುದು ಸಹಜವಾದದ್ದು. ನನ್ನ ಈ ಸರಣಿ ಲೇಖನಗಳು ಸಾರ್ವಜನಿಕವಾಗಿ ಲಭ್ಯ ಇರುವುದರಿಂದ ಅನೇಕರು ಸಾರ್ವಜನಿಕವಾಗಿಯೇ ತಮ್ಮ ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ, ಇದು ಅವರ ಪ್ರಬುದ್ಧ ನಡೆ. ಆದರೆ ಇನ್ನು ಕೆಲವು ಅಪರಿಚಿತರು ನನ್ನ ವೈಯಕ್ತಿಕ ವಾಟ್ಸಪ್ ಗೆ ತಮ್ಮ ಪ್ರತಿಕ್ರಿಯೆಗಳನ್ನು ತಂದು ಕಸದಂತೆ ಸುರಿಯುತ್ತಿರುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ, ಇದು ಒಬ್ಬರ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಸಂಗತಿ. ಇಂತವರು ಲಿಂಗಾಯತ ಸಮಾಜದಲ್ಲಿ ನಡೆಯುವ ಬೇರೆ ಯಾವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸದೆ ಮೌನವಾಗಿರುತ್ತಾರೆ, ಆದರೆ selective ಆಗಿ ಕೇವಲ ವೀರಶೈವ ಜಾತಿ ಜಂಗಮರ ಅಸ್ತಿತ್ವಕ್ಕೆ ಕುತ್ತು ಬಂದಾಗ ಮಾತ್ರ ಮೈಮೇಲೆ ಭೂತ ಬಂದವರಂತೆ ಎದ್ದು ಬಡಬಡಿಸುತ್ತಾ ಪ್ರತಿಕ್ರಿಯಿಸುತ್ತಾರೆ. ಇಂತವರು ಸದಾ ವೀರಶೈವರ ಒಳಿತಿನ ಕುರಿತು ಮಾತ್ರ ಚಿಂತಿಸುತ್ತಾ ಲಿಂಗಾಯತರ ಒಗ್ಗಟ್ಟಿನ ಮಾತನಾಡುತ್ತಾರೆ. ಆದರೆ ಅವರ ಪಕ್ಷಪಾತದ ಒಲವು ಮಾತ್ರ ಕೇವಲ ವೀರಶೈವರ ಕಡೆಗೆ ವಾಲಿರುತ್ತದೆ. ವಿಜಯಪುರ ವಿಷಯ ಬಂದಾಗ ಬಂಥನಾಳ ಸ್ವಾಮಿಗಳನ್ನು ಸ್ಮರಿಸಲಿಲ್ಲ ಎಂದು ಮರುಗುವ ಇವರಿಗೆ ಬೀಳೂರು ಗುರುಬಸವ ಸ್ವಾಮಿಗಳು ಜ್ಞಾಪಕಕ್ಕೆ ಬರುವುದಿಲ್ಲ.
ಲಿಂಗಾನಂದ ಸ್ವಾಮಿಗಳ ಕುರಿತು ವಿವರವಾಗಿ ಬರೆದದ್ದು ಕೆಲವರ ನಿದ್ರೆ ಕಳೆದಿದೆ ಎನ್ನುವುದನ್ನು ನಾನು ಬಲ್ಲೆ. ಶತಮಾನಗಳಿಂದ ಒಳಗಿನವರಿಂದಲೇ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿರುವ ಮುಗ್ಧ ಲಿಂಗಾಯತರಿಗೆ ಇತಿಹಾಸದಲ್ಲಿ ಹುದುಗಿ ಹೋಗಿರುವ ಅನೇಕ ಸತ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ತಿಳಿಸುವಲ್ಲಿ ನನ್ನ ಈ ಸರಣಿ ಲೇಖನಗಳು ಕೊಂಚ ಮಟ್ಟಿಗೆ ಯಶಸ್ಸು ಕಂಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಯಾವುದಕ್ಕೂ ನನ್ನ ಲೇಖನಗಳಿಗೆ ಪ್ರತಿಕ್ರಿಯಿಸಿದ ಇವರೆಲ್ಲರಿಗೂ ಅನಂತ ಶರಣು ಶರಣಾರ್ಥಿಗಳು ತಿಳಿಸುತ್ತೇನೆ. ನನ್ನ ಇಡೀ ಸರಣಿ ಲೇಖನಗಳು ಕೇವಲ ವೀರಶೈವ ಜಾತಿ ಜಂಗಮರು ಲಿಂಗಾಯತರಿಗೆ ಮಾಡಿದ ಅನ್ಯಾಯದ ಸುತ್ತ ಸುತ್ತಿರುವುದನ್ನು ಕೆಲವರು ಅರ್ಧ ಸರಿಯಾಗಿ, ಅರ್ಧ ತಪ್ಪಾಗಿ ಗುರುತಿಸಿದ್ದಾರೆ. ಸತ್ಯದ ಅನಾವರಣವು ಅನ್ಯಾಯಕ್ಕೆ ಒಳಗಾದವರಿಗಿಂತ ಅನ್ಯಾಯ ಮಾಡಿದವರು ಬೇಗ ಗುರುತಿಸುತ್ತಾರೆ ಮತ್ತು ಅದರಿಂದ ಅವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಪಂಚಮಸಾಲಿ ಉಭಯ ಪೀಠಗಳ ಹುಟ್ಟು, ಬೆಳವಣಿಗೆ ಹಾಗು ಇಂದಿನ ಪೂರ್ವ ನಿರ್ಧಾರಿತ ಗೊಂದಲಗಳಿಗೆ ಯಾರು ಕಾರಣವಾಗಿದ್ದಾರೊ ಆ ಜನರ ಸುತ್ತ ಈ ಸರಣಿ ಲೇಖನಗಳು ಸಹಜವಾಗಿ ಸುತ್ತುತ್ತವೆ ಎನ್ನುವ ಸತ್ಯವನ್ನು ಯಾರೂ ಅಲ್ಲಗಳೆಯಲಾರರು. ಈ ಸರಣಿಯಲ್ಲಿ ಪಂಚಮಸಾಲಿ ಪೀಠಗಳ ಅವನತಿಯ ಮುಖ್ಯ ಕಾರಣಗಳ ಕುರಿತು ಬರೆಯುವುದು ಇನ್ನೂ ಬಾಕಿ ಇದೆ. ಲಿಂಗಾಯತ ಧರ್ಮಕ್ಕಾಗಿ ಕೆಲಸ ಮಾಡಿದ ಪಂಚಮಸಾಲಿ ಉಪವರ್ಗದ ಪುಣ್ಯ ಪುರುಷರ ಪರಿಚಯ ಮತ್ತು ಪಂಚಮಸಾಲಿಗಳೂ ಸೇರಿದಂತೆ ಸಮಸ್ತ ಲಿಂಗಾಯತರ ಹಿತಶತ್ರುಗಳ ಪರಿಚಯ ಈ ವರೆಗಿನ ಲೇಖನಗಳು ಮಾಡಿಸಿವೆ.
ಕೆಲವು ಐತಿಹಾಸಿಕ ಸತ್ಯ ಸಂಗತಿಗಳು ಸಾಕ್ಷ್ಯ ಮತ್ತು ಪುರಾವೆಗಳನ್ನು ತಮ್ಮ ಗರ್ಭದಲ್ಲಿ ಹುದುಗಿಸಿಕೊಂಡು ಜೀರ್ಣಿಸಿಕೊಳ್ಳುತ್ತವೆ. ಏಕೆಂದರೆ ಆತ ಸಾಕ್ಷ್ಯಗಳು ಉಳಿದುಕೊಂಡರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುವ ಕಾರಣದಿಂದ. ಸಾಕ್ಷಿ, ಪುರಾವೆ, ದಾಖಲೆಗಳು ಇಲ್ಲವೆಂದ ಮಾತ್ರಕ್ಕೆ ಆ ಸಂಗತಿ ಅಥವಾ ಘಟನೆ ನಡೆದೇಯಿಲ್ಲ ಅಥವಾ ಇತಿಹಾಸದಲ್ಲಿ ಅನ್ಯಾಯಗಳು ನಡೆದೇ ಇಲ್ಲ ಎಂದು ವಾದಿಸುವುದು ಮೂರ್ಖತನವಾಗುತ್ತದೆ. ಅದರಲ್ಲೂ ವೀರಶೈವ ಮತ ಮತ್ತು ಲಿಂಗೋದ್ಭವ ಪಂಚಾಚಾರ್ಯರ ಹುಸಿ ಕಥಾನಕವನ್ನು ಅನುಮಾನವಿಲ್ಲದೆ, ಕಣ್ಣು ಮುಚ್ಚಿಕೊಂಡು ನಂಬುವವರು ಮತ್ತು ಇತರರಿಗೆ ನಂಬಿಸಲು ಯತ್ನಿಸುವವರು ತಮ್ಮ ಪೂರ್ವಜರು ಲಿಂಗಾಯತರಿಗೆ ಮಾಡಿರುವ ಅನ್ಯಾಯಗಳಿಗೆ ಸಾಕ್ಷಿ, ದಾಖಲೆ ಮತ್ತು ಪುರಾವೆಗಳನ್ನು ಕೇಳುವ ಧೈರ್ಯ ತೋರಿಸುವುದು ನಿಜವಾಗಿಯೂ ನಾಚಿಕೆಗೇಡು. ಅನ್ಯಾಯ ಮಾಡುವವರು ಯಾವಾಗಲು ಸಾಕ್ಷಿಗಳನ್ನು ಜೀವಂತ ಇಡುವುದಿಲ್ಲ. ಹಾಗೆಯೇ ಮೇಲ್ನೋಟದ ಸತ್ಯಗಳಿಗೆ ಸಾಕ್ಷಿಗಳ ಅಗತ್ಯವಿರುವುದಿಲ್ಲ. ನಿನ್ನೆ ನಮ್ಮ ಮೊದಲ ರಾತ್ರಿ ಆಯಿತು ಎಂದು ಹೇಳಿದ ನವ ದಂಪತಿಗಳಿಗೆ, ಅದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದಂತೆ ಈ ವೀರಶೈವವಾದಿಗಳ ವಿತಂಡವಾದ. ಒಟ್ಟಾರೆ ನಾನು ಈ ಸರಣಿ ಲೇಖನಗಳನ್ನು ಪಂಚಮಸಾಲಿ ಉಪ ವರ್ಗವೂ ಒಳಗೊಂಡಂತೆ ಇಡೀ ಲಿಂಗಾಯತ ಧರ್ಮಿಯರ ಹಿತಾಸಕ್ತಿ ಮತ್ತು ಲಿಂಗಾಯತರ ಅವನತಿಯ ಪ್ರಮುಖ ಐತಿಹಾಸಿಕ ಕಾರಣಗಳನ್ನು ಕೇಂದ್ರವಾಗಿಸಿಕೊಂಡು ಬರೆಯುತ್ತಿದ್ದೇನೆ. ಹಿಂದೆ ಆಗಿರುವ ತಪ್ಪುಗಳನ್ನು ಸಂಬಂಧಪಟ್ಟವರು ಅಥವಾ ಅವರ ಇಂದಿನ ಫಲಾನುಭವಿ ವಾರಸುದಾರರು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಎಲ್ಲಾ ಲಿಂಗಾಯತರು ಒಗ್ಗಟ್ಟಿನಿಂದ ಮುನ್ನೆಡೆಯಬೇಕು ಎನ್ನುವ ಮಾತನ್ನು ನಾನು ತಪ್ಪಿತಸ್ಥರ ಸಂತತಿಯಿಂದ ನಿರೀಕ್ಷಿಸುತ್ತಿದ್ದೇನೆ. ಆದರೆ, ಆ ತರಹದ ಯಾವ ಪ್ರತಿಕ್ರಿಯೆಯೂ ಇದುವರೆಗೆ ಬಂದಿಲ್ಲ.
ಬದಲಾಗಿ, ವೀರಶೈವವಾದಿಗಳು ತಮ್ಮ ಹಿರಿಯರು ಮಾಡಿದ ತಪ್ಪುಗಳನ್ನು ಜಾತಿ ಅಭಿಮಾನದಿಂದ ಸಮರ್ಥಿಕೊಳ್ಳುತ್ತಿದ್ದಾರೆಯೇ ವಿನಃ ಅವರ ತಪ್ಪಿಗೆ ಪ್ರಾಯಶ್ಚಿತ ಪಟ್ಟು ಲಿಂಗಾಯತರನ್ನು ಒಗ್ಗೂಡಿಸುವ ಮಾತು ಅವರು ಆಡುತ್ತಿಲ್ಲ. ಲಿಂಗಾಯತ ಧರ್ಮದ ವಿಘಟನೆಗೆ ಕಾರಣರಾದವರ ಕುರಿತು ಸಮಸ್ತ ಲಿಂಗಾಯತರು ಇಂದು ತಿಳಿದುಕೊಳ್ಳುವ ಅಗತ್ಯವಿದೆ. ಹಿಂದೆ ಏನೇನು ಬೆಳವಣಿಗಳು ಆಗಿವೆ, ಏತಕ್ಕಾಗಿ ಆಗಿವೆ, ಯಾರು ಅದರ ಹೊಣೆಗಾರರು ಎನ್ನುವ ಕುರಿತು ಸಮಗ್ರವಾಗಿ ಲಿಂಗಾಯತರ ಅರಿವಿಗೆ ಬರಲಿ ಮತ್ತು ಆ ಮೂಲಕ ಇನ್ನು ಮುಂದೆ ಲಿಂಗಾಯತರು ಎಚ್ಚರಗೊಂಡು ಆ ತರಹದ ತಪ್ಪುಗಳು ಮಾಡದಿರಲಿ ಎನ್ನುವುದು ನನ್ನ ಬರವಣಿಗೆಯ ಉದ್ದೇಶವಾಗಿದೆ. ಇತಿಹಾಸದಲ್ಲಿ ಲಿಂಗಾಯತರ ಅಥವಾ ವೀರಶೈವರ ಪೂರ್ವಜರು ತಿಳಿದೊ, ತಿಳಿಯದೆಯೋ ಮಾಡಿದ ತಪ್ಪುಗಳನ್ನು ಮುಂದುವರೆಸಬಾರದು ಎನ್ನುವುದು ನನ್ನ ಕಳಕಳಿ. ಲಿಂಗಾಯತ ಧರ್ಮ ಈಗಾಗಲೇ ಸಾಕಷ್ಟು ಪೆಟ್ಟು ತಿಂದಿದೆ. ಲಿಂಗಾಯತ ಉಪ ವರ್ಗಗಳ ಕಾಯಕ ಪ್ರಧಾನ ಶ್ರಮ ಜೀವಿಗಳು ಜಂಗಮ ಉಪ ವರ್ಗವನ್ನು ಹೂವಿನಂತೆ ತಲೆ ಮೇಲಿಟ್ಟುಕೊಂಡು ಸಾಕಿವೆ, ಹೊಟ್ಟೆಗೆ ಹಿಟ್ಟು, ಮೈಗೆ ಬಟ್ಟೆ, ಉಪಜೀವನಕ್ಕೆ ಧಾನ್ಯ, ಖರ್ಚಿಗೆ ದಕ್ಷಿಣೆ ರೂಪದ ಹಣ ಕೊಟ್ಟು ‘ಗುರುವಿನ ಮಕ್ಕಳು ಅನ್ಯರ ಬಳಿ ದುಡಿಯಬಾರದು’ ಎನ್ನುವ ಉದಾತ್ತ ಕಳಕಳಿಯಿಂದ ತಾವು ಉಪವಾಸವಿದ್ದು ಜಾತಿ ಜಂಗಮರನ್ನು ಮಕ್ಕಳಂತೆ ಸಲುಹಿದ್ದಾರೆ.
ಜಂಗಮರ ಹೊಲಸು ಪಾದ ತೊಳೆದು ನೀರು ಕುಡಿದಿದ್ದಾರೆ, ತಿಳಿಯದೆಯೊ, ಅಜ್ಞಾನದಿಂದಲೊ ತಮ್ಮ ಹಿರಿಯರ ಗೌರವಾನ್ವಿತ ಮತ್ತು ಘನತೆಯುಳ್ಳ ಪಾರ್ಥಿವ ಲಿಂಗ ಶರೀರದ ಮೇಲೆ ಅಜ್ಞಾನಿ, ಮತ್ತು ನಿಷ್ಪ್ರಯೋಜಕ ಜಂಗಮರ ಪಾದ ಇರಿಸಿಕೊಂಡಿದ್ದಾರೆ, ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸಿದ್ದಾರೆ. ಇಷ್ಟಿದಾಗ್ಯೂ ಜಂಗಮರು ಪರಿಶಿಷ್ಟ ಬೇಡಜಂಗಮರಾಗಲು ಹೊರಟು ಅಖಂಡ ಲಿಂಗಾಯತ ಧರ್ಮವನ್ನು ಒಡೆಯುತ್ತಿದ್ದಾರೆ ಮತ್ತು ಜಂಗಮ ಪದಕ್ಕೆ ದ್ರೋಹಬಗೆಯುತ್ತಿದ್ದಾರೆ. ಅಲ್ಲದೆ, ಬಡ ಲಿಂಗಾಯತರ ಮಕ್ಕಳಿಗೆ ಅಲ್ಪಸಂಖ್ಯಾತರ ಸೌಲಭ್ಯ ಸಿಗುವುದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಜಂಗಮರಿಗೆ ಪರಿಶಿಷ್ಟರ ಮೀಸಲಾತಿ ನೀಡಬೇಕೆಂದು ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಪಂಚಪೀಠಗಳ ಐದು ಜನ ಜಾತಿ ಜಂಗಮರು ಪತ್ರ ಬರೆದಿದ್ದರು. ಅದೇ ಐದು ಜನ ಜಾತಿ ಜಂಗಮರು ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯ ಸಿಗುವುದನ್ನು ವಿರೋಧಿಸುತ್ತಿದ್ದಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯ ನೀಡಬೇಡಿ ಎಂದು ಪ್ರಧಾನಿ ಮೋದಿಗೆ ಕರೆ ಮಾಡಿದ್ದು ನಾನೇ ಎಂದು ಕೇದಾರದ ರಾವಲ್(ಪ್ರಧಾನ ಅರ್ಚಕ) ಬಹಿರಂಗವಾಗಿ ಹೇಳಿಯಾಗಿದೆ. ವೀರಶೈವ ಮಹಾಸಭಾ ಅನೇಕ ವೇಳೆ ಅಲ್ಪಸಂಖ್ಯಾತರ ಸೌಲಭ್ಯಗಳಿಗೆ ಮನವಿ ಸಲ್ಲಿಸಿದಾಗ ಮೌನವಾಗಿದ್ದ ಪಂಚಪೀಠಗಳ ಜಾತಿ ಜಂಗಮರು ಬಸವಾನುಯಾಯಿ ಲಿಂಗಾಯತರು ಅದೇ ಪ್ರಯತ್ನ ಮಾಡಿದಾಗ ಧರ್ಮ ಒಡೆಯುತ್ತಿದ್ದಾರೆ ಎಂದು ನೆಲ ಮುಗಿಲು ಒಂದು ಮಾಡಿ ಹಲುಬುತ್ತಾರೆ.
ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 15 | ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವಕ್ಕಾಗಿ ಧ್ವನಿ ಎತ್ತಿದ ಡಾ ಜಾಮದಾರ
ವೀರಶೈವ ಮಹಾಸಭಾ ವೀರಶೈವರೂ ಒಳಗೊಂಡಂತೆ ಲಿಂಗಾಯತರು ಹಿಂದೂಗಳಲ್ಲ ಎಂದು ದಾವಣಗೆರೆಯ ತನ್ನ ಇತ್ತೀಚಿನ ಮಹಾ ಅಧಿವೇಶನದಲ್ಲಿ ಐತಿಹಾಸಿಕ ನಿರ್ಣಯ ಮಂಡಿಸಿದೆ, ಆದರೆ ಈ ಜಾತಿ ಜಂಗಮರು ಆಗ ಬಾಯಿ ತೆಗೆಯಲಿಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ಇಂತಂದೊಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದು ಶ್ಲಾಘನೀಯ ನಡೆ. ಲಿಂಗಾಯತರು ಹಿಂದೂಗಳಲ್ಲ ಎಂದು ಮಹಾಸಭಾ ತೆಗೆದುಕೊಂಡ ನಿರ್ಣಯದ ವಿರುದ್ಧ ಪಂಚಪೀಠಗಳ ಅಯ್ಯಗಳು ವೀರಶೈವ ಲಿಂಗಾಯತರು ಸನಾತನ ಬ್ರಾಹ್ಮಣ ಧರ್ಮದ ಭಾಗ ಎಂದು ಮಾತನಾಡುತ್ತಾರೆ. ಇಷ್ಟಿದ್ದಾಗ್ಯೂ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ, ಇದನ್ನು ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ ಎನ್ನುವ ಪಂಚಪೀಠಗಳ ಜಾತಿ ಜಂಗಮರ ಬೂಟಾಟಿಕೆಯ ಮಾತಿಗೆ ಯಾವ ಅರ್ಥವಿದೆ ಎನ್ನುವುದು ಚರ್ಚಾಸ್ಪದ ವಿಷಯ.
ಲಿಂಗಾಯತದಲ್ಲಿ ವೀರಶೈವದ ಕಲಬೆರಕೆ ಮಾಡಿ ಅಖಂಡ ಲಿಂಗಾಯತ ಧರ್ಮ ಒಡೆದ ಪಂಚ ಪೀಠಗಳ ಜಾತಿ ಜಂಗಮರು, ಇಂದಿಗೂ ವಿರಕ್ತ ಜಂಗಮರೊಂದಿಗೆ ಸರಿಸಮನಾದ ಪೀಠಗಳಲ್ಲಿ ಕೂಡುವುದನ್ನು ಒಪ್ಪುವುದಿಲ್ಲ, ವೀರಶೈವ ಮಠ ಪೀಠಗಳಿಗೆ ಲಿಂಗಾಯತ ಉಪ ವರ್ಗದ ವಟುಗಳನ್ನು ಮಠಾಧೀಶರನ್ನಾಗಿ ನೇಮಿಸುವುದಿಲ್ಲ. ಹಾಗಿದ್ದ ಮೇಲೆ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂದು ಒಪ್ಪುವುದಾದರೂ ಹೇಗೆ ಎಂದು ಲಿಂಗಾಯತರ ಮನೆಯ ಚಿಕ್ಕ ಮಕ್ಕಳು ಸಹ ಪ್ರಶ್ನಿಸುತ್ತಿದ್ದಾರೆ. ಅವರ ಪ್ರಶ್ನೆಗೆ ಈ ಪಂಚ ಪೀಠದ ಜಾತಿ ಜಂಗಮರು ಏನು ಉತ್ತರ ನೀಡಬಲ್ಲರು? ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ, ಭಿನ್ನ ಭಿನ್ನ ಎನ್ನುವುದು ಆಚರಣಾತ್ಮಕವಾಗಿಯು, ಸೈದ್ಧಾಂತಿಕವಾಗಿಯೂ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಇವರು ಭಂಡತನದಿಂದ ಎರಡೂ ಒಂದೇ ಎಂದು ಕಿರುಚುವುದು ಎಂತಹ ಹಾಸ್ಯಾಸ್ಪದ ಸಂಗತಿ ಅಲ್ಲವೆ!
ಮುಂದುವರೆಯುವುದು….

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ



