ಡಾ. ಶಿವಾನಂದ ಜಾಮದಾರ ಅವರು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಅದರ ಇತಿಹಾಸದ ಕುರಿತು ಸಾರ್ವಜನಿಕವಾಗಿ ಧ್ವನಿಯೆತ್ತುವ ಮೂಲಕ ಪ್ರಮುಖ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಲಿಂಗಾಯತ ಧರ್ಮ ಹಾಗೂ ಶರಣರ ತತ್ವಗಳ ಕುರಿತು ನಿರಂತರವಾಗಿ ಸಂವಾದ, ಸಂದರ್ಶನ, ಉಪನ್ಯಾಸಗಳನ್ನು ನಡೆಸುತ್ತಿರುತ್ತಾರೆ.
ಲಿಂಗಾನಂದ ಸ್ವಾಮಿಗಳು ಬಸವ ತತ್ವಕ್ಕೆ ಹಾಕಿದ ಭದ್ರ ಬುನಾದಿಯ ಮೇಲೆ ಅನೇಕ ಜನ ಬಸವವಾದಿಗಳು ಮುಂದಿನ ದಿನಗಳಲ್ಲಿ ಈ ಉದಾತ್ ಲಿಂಗಾಯತ ಧರ್ಮವನ್ನು ಅನುಸರಿಸಿದರು. ಡಾ. ಫ. ಗು. ಹಳಕಟ್ಟಿಯವರು ವಚನಗಳು ಹುಡುಕಿ ಸಂಪಾದಿಸಿದ ನಂತರ ಸಿದ್ಧಾಂತ ಶಿಖಾಮಣಿ ಎನ್ನುವ ಖೊಟ್ಟಿ ಸಂಸ್ಕೃತ ಗ್ರಂಥ ಹಿಡಿದುಕೊಂಡು ಲಿಂಗಾಯತರ ತಲೆಯ ಮೇಲೆ ಹೇರಿದ್ದ ವೀರಶೈವ ದುಷ್ಟ ಶಕ್ತಿಗಳು ಭಯಭೀತವಾದವು. ಬಸವ ಪ್ರಣೀತ ವಿರಕ್ತ ಮಠಗಳಿಗೆ ವಟುಗಳನ್ನು ತಯ್ಯಾರಿಸುವ ಶಿವಯೋಗ ಮಂದಿರ ಕನ್ನಡದಲ್ಲಿ ವಚನಾಧಾರಿತ ತರಬೇತಿ ನೀಡುವ ಬದಲು, ಮತ್ತು ಈ ಮಠಗಳು ಮುಂದೆ ತಮ್ಮ ಸಾಮಾನ್ಯ ಭಕ್ತರಿಗೆ ವಚನಾಧಾರಿತ ತತ್ವ ಭೋದನೆ ಮಾಡುವ ಬದಲು ಶರಣರು ತಿರಸ್ಕರಿಸಿದ ಸಂಸ್ಕೃತ ಭಾಷೆಯ ಆಗಮಾಧಾರಿತ ಸಿದ್ಧಾಂತ, ಆಚರಣೆಗಳ ಪರಿಚಯ ಮಾಡಿಸಿದವು. ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿಯನ್ನು ನಿರಾಕರಿಸಿದ ಬಸವಣ್ಣನವರ ಶರಣ ಸಂಸ್ಕೃತಿಯ ಮನೆಗಳಲ್ಲಿ “ಯಜ್ಞೇನು ಯಜ್ಞಂತು ದೇವಾ, ಆಗಮಾಂತು ದೇವಾ…” ಎನ್ನುವ ಶೈವರ ಸಂಸ್ಕೃತ ಮಂತ್ರಗಳು ರಾಜಾರೋಷವಾಗಿ ಮೊಳಗಲಾರಂಭಿಸಿದವು. ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪ ಮೊದಲ್ಗೊಂಡು ಉಳಿವಿಯ ಚೆನ್ನಬಸವಣ್ಣನವರ ಕ್ರಿಯಾ ಸಮಾಧಿ ಮುಂತಾದ ಎಲ್ಲಾ ಶರಣ ಸ್ಮಾರಕಗಳಲ್ಲಿ ಜಂಗಮರು ಅರ್ಚನೆ ಪೂಜೆಯ ನೆಪದಲ್ಲಿ ಪೌರೋಹಿತ್ಯ ಸ್ಥಾಪಿಸಿ ಲಿಂಗಾಯತ ಧರ್ಮದಲ್ಲಿ ದಲ್ಲಾಳಿ ಪದ್ದತಿ ಆರಂಭಿಸಿ ವಚನ ಧರ್ಮವನ್ನು ಕುಲಗೆಡಿಸಿದರು.
ದೇಹಾಲಯ ಸಂಸ್ಕೃತಿಯ ಲಿಂಗಾಯತ ಧರ್ಮದಲ್ಲಿ ದೇವಾಲಯ ಸಂಸ್ಕೃತಿ ಆರಂಭಗೊಂಡು ವೀರಶೈವ ಜಾತಿ ಜಂಗಮರು ದಲ್ಲಾಳಿ ಅರ್ಚಕ ಪದ್ದತಿ ಹುಟ್ಟುಹಾಕಿದರು. ಲಿಂಗಾನಂದ ಸ್ವಾಮಿಗಳು ಕೈಕೊಂಡ ಜಾಗೃತಿಯ ಪರಿಣಾಮದಿಂದ ಈ ಎಲ್ಲಾ ವೈದಿಕ ಹಾಗು ಆಗಮಿಕ ವೀರಶೈವ ಅಸಂಗತಗಳು ಅಪಾಯಕ್ಕೆ ಸಿಲುಕುತ್ತವೆ ಎನ್ನುವ ಆತಂಕದಿಂದ ವೀರಶೈವ ಜಾತಿ ಜಂಗಮರು ಗಲಿಬಿಲಿಗೊಂಡರು. ಹನ್ನೆರಡನೆಯ ಶತಮಾನದಲ್ಲಿ ಬ್ರಾಹ್ಮಣರು ಕಂಗಾಲಾಗಿ ಪ್ರತಿಕ್ರಾಂತಿ ಮಾಡಿದಂತೆ ಈ ಕಾಲದಲ್ಲಿ ಜಾತಿ ಜಂಗಮರು ಬಸವವಾದಿಗಳ ಕುರಿತು ಅಪಪ್ರಚಾರ ಆರಂಭಿಸಿದರು. ಸಾಂಪ್ರದಾಯವಾದಿ ಜಾತಿ ಜಂಗಮರಿಗೆ ವೈದಿಕರ ಬೆಂಬಲ ದೊರಕಿತು. ಇತ್ತೀಚಿಗೆ ಕೆಲವು ಹಿಂದುತ್ವವಾದಿ, ಕೋಮುವಾದಿ, ರಾಜಕೀಯ ಪ್ರೇರಿತ ಸಂಘಟನೆಗೆ ಮಾರಿಕೊಂಡ ಕಾವಿ ಶನಿಸಂತಾನಗಳು ಬಸವವಾದಿಗಳನ್ನು ಬಸವ ತಾಲಿಬಾನಿಗಳಿಗೆಂದು ಕರೆದು ವಿಕೃತ ಆನಂದ ಪಡೆಯುತ್ತಿವೆ. ಅಂತಹ ಶನಿಸಂತಾನಗಳನ್ನು ವೀರಶೈವ ಜಾತಿ ಜಂಗಮರು ಬೆಂಬಲಿಸುತ್ತಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ತಮ್ಮಿಂದ ಅನೇಕ ಮಂದಿರಗಳ ಅರ್ಚಕ ಹುದ್ದೆ ಕಿತ್ತುಕೊಂಡಿದ್ದ ಜಾತಿ ಜಂಗಮರ ಕೃತ್ಯವನ್ನು ಮರೆತವರಂತೆ ನಟಿಸಿ, ಹಿತಚಿಂತಕರಂತೆ ವರ್ತಿಸುತ್ತಾ, ವೈದಿಕರು ಜಾತಿ ಜಂಗಮರನ್ನು ಲಿಂಗಾಯತ ಮುಖ್ಯ ವಾಹಿನಿಯಿಂದ ದೂರ ಮಾಡಿ ಸೇಡು ತೀರಿಸಿಕೊಂಡರು. ಇನ್ನೊಂದು ಕಡೆ ವೈದಿಕರ ರಾಜಕೀಯ ಪಕ್ಷವನ್ನು ಸದಾ ಬೆಂಬಲಿಸಿದರೂ ಜಾತಿ ಜಂಗಮರ ಪರಿಶಿಷ್ಟ ವರ್ಗದ ಬೇಡ ಜಂಗಮ ಮೀಸಲಾತಿ ಬೇಡಿಕೆಗೆಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಬ್ರಾಹ್ಮಣರು ಉಪಾಯದಿಂದ ತಿರಸ್ಕರಿಸಿದರು.

ಇಡಬ್ಲ್ಯೂಎಸ್ ಮೀಸಲಾತಿಯ ವಿರುದ್ಧ ನಲವತ್ತಕ್ಕೂ ಹೆಚ್ಚು ಅರ್ಜಿಗಳನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಸುಲಭವಾಗಿ ನೀಗಿಕೊಂಡ ಬ್ರಾಹ್ಮಣರು ಮನಸ್ಸು ಮಾಡಿದ್ದರೆ ಬೇಡ ಜಂಗಮರ ಪರಿಶಿಷ್ಟ ಮೀಸಲಾತಿ ಬೇಡಿಕೆ ಸುಲಭವಾಗಿ ಈಡೇರಿಸಬಹುದ್ದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಒಂದು ಕಡೆ ಜಾತಿ ಜಂಗಮರನ್ನು ಎತ್ತಿಕಟ್ಟಿ ಇಡೀ ಲಿಂಗಾಯತ ಧರ್ಮೀಯರಿಗೆ ಸಿಗಬಹುದಾದ ಅಲ್ಪಸಂಖ್ಯಾತ ಸೌಲಭ್ಯದಿಂದ ವಂಚಿಸಿದ ವೈದಿಕರು ಇನ್ನೊಂದು ಕಡೆ ಜಾತಿ ಜಂಗಮರ ಪರಿಶಿಷ್ಟ ಬೇಡ ಜಂಗಮ ಮೀಸಲಾತಿಯ ಕನಸನ್ನು ನುಚ್ಚುನೂರು ಮಾಡಿದರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ವೈದಿಕರು ತಮ್ಮ ಕನಸಿನ ಬ್ರಾಹ್ಮಣ ನಿಯಂತ್ರಿತ ಹಿಂದುತ್ವದ ರಾಜಕೀಯ ಅಧಿಕಾರವನ್ನು ಪಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರು. ಅಖಂಡ ಲಿಂಗಾಯತರ ವಿರಾಟ ರಾಜಕೀಯ ಶಕ್ತಿಯನ್ನು ಛಿದ್ರಗೊಳಿಸಿ ಲಿಂಗಾಯತರನ್ನು ದುರ್ಬಲಗೊಳಿಸಲು ಸಂಘದ ಬ್ರಾಹ್ಮಣರು ಕಳೆದ ನಾಲ್ಕು ದಶಕಗಳಿಂದ ಬೇರೆ ಬೇರೆ ಆಯಾಮಗಳಲ್ಲಿ ಕಾರ್ಯ ಮಾಡುತ್ತಿದ್ದಾರೆ. ೧೯೯೦-೯೧ ರಲ್ಲಿ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಅಮಾನುಷವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ಲಿಂಗಾಯತ ಧರ್ಮಿಯರ ಕಾಂಗ್ರೆಸ್ ವಿರುದ್ಧದ ಸಿಟ್ಟನ್ನು ಬಿಜೆಪಿ ಚಾಣಾಕ್ಷತನದಿಂದ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭವಾಗಿ ಪರಿವರ್ತಿಸುವ ಕಾರ್ಯ ಆರಂಭಿಸಿತು.
ಅದರ ಜೊತೆಗೆ ಲಿಂಗಾಯತರ ರಾಜಕೀಯ ಅಸ್ಮಿತೆಯನ್ನು ನಾಶಗೊಳಿಸಿ ಅವರನ್ನು ಹಿಂದುತ್ವದ ಹಿಡಿತಕ್ಕೆ ತರಲು ಲಿಂಗಾಯತ ಮಠ ಹಾಗು ಶಿಕ್ಷಣ ಸಂಸ್ಥೆಗಳು ನಾಶ ಮಾಡುವ ಕಾರ್ಯಗಳು ಆರಂಭಗೊಂಡವು. ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಲಿಂಗಾಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸಂಸ್ಥೆಯ ಹೆಸರಿನಲ್ಲಿ ವೀರಶೈವ ಪದ ಸೇರಿಸಲು ಬ್ರಾಹ್ಮಣ ಸಂಘ ಒತ್ತಡ ಹೇರಿತು. ಅದಕ್ಕೆ ಸಾಕ್ಷಿ ಎನ್ನುವಂತೆ ಶತಮಾನಗಳ ಹಿಂದೆ ಭಕ್ತ ವರ್ಗದ ಬೀಳೂರು ಗುರುಬಸವ ಮಹಾಸ್ವಾಮಿಗಳು ಕಟ್ಟಿದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವೀರಶೈವ ಶಬ್ದ ಒಳನುಸುಳಿತು. ಲಿಂಗಾಯತ ಮಠಾಧೀಶರನ್ನು ನೈತಿಕವಾಗಿ ಕುಗ್ಗಿಸುವ, ಶ್ರೀಮಂತ ಲಿಂಗಾಯತ ಶಿಕ್ಷಣ ಸಂಸ್ಥೆಯುಳ್ಳ ರಾಜಕಾರಣಿಗಳನ್ನು ಬಿಜೆಪಿಗೆ ಸೆಳೆಯುವ, ಲಿಂಗಾಯತ ಮಠಗಳನ್ನು ಹಿಂದುತ್ವದ ಪ್ರಚಾರಕ್ಕೆ ಬಳಸುವ, ಮೀಸಲಾತಿಯ ಆಶೆ ತೋರಿಸಿ ಲಿಂಗಾಯತ ಉಪ ವರ್ಗಗಳನ್ನು ವ್ಯವಸ್ಥಿತವಾಗಿ ಒಡೆಯುವ ಕಾರ್ಯಗಳು ತೀವ್ರವಾದವು. ಮಠಗಳಿಗೆ ಅನುದಾನಗಳ ಆಮಿಷ ತೋರಿಸಿಲಾಯಿತು. ಹೀಗೆ, ಬ್ರಾಹ್ಮಣರು ವ್ಯವಸ್ಥಿತವಾಗಿ ಲಿಂಗಾಯತರನ್ನು ಒಡೆದು ಒಗೆದರು. ಲಿಂಗಾಯತರು ಇದರಿಂರ ಹೊರಬಂದು ಲಿಂಗಾಯತ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆಂದರೆ ಲಿಂಗಾಯತರು ವೈದಿಕರ ರಾಜಕೀಯ ಪಕ್ಷದಿಂದ ದೂರಸರಿಯಬೇಕು, ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮುಂದುವರೆಸಬೇಕು. ಒಡೆದು ಹೋಗಿರುವ ಲಿಂಗಾಯತರನ್ನು ಮತ್ತೆ ಒಂದುಗೂಡಿಸಬೇಕು. ಲಿಂಗಾಯತರು ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಗುರುತಿಸಿಕೊಳ್ಳದೆ ಲಿಂಗಾಯತ ಅಸ್ಮಿತೆಯ ರಕ್ಷಣೆಯನ್ನು ಗೌರವಿಸುವ ರಾಜಕೀಯ ಪಕ್ಷವನ್ನು ಬೆಂಬಲಿಸಬೇಕು, ಹಾಗು ಬಸವ ಸಿದ್ಧಾಂತವನ್ನು ಹಿಂದುತ್ವದ ಸಿದ್ಧಾಂತದ ಚೌಕಟ್ಟಿಗೆ ಸೇರಿಸಲು ಪ್ರಯತ್ನಿಸುವ, ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ನಾಶಗೊಳಿಸಲು ಪ್ರಯತ್ನಿಸುವ ಮತ್ತು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯ ಬೇಡಿಕೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳನ್ನು ಒಗ್ಗಟ್ಟಿನಿಂದ ಸೋಲಿಸುವುದು ಲಿಂಗಾಯತರ ಆದ್ಯತೆಯಾಗಬೇಕು.
ಲಿಂಗಾಯತ ಪಂಚಮಸಾಲಿ ಉಪವರ್ಗದ ಮತ್ತೊಬ್ಬ ಅಪೂರ್ವ ವಿದ್ವಾಂಸ ಎಂದರೆ ನಿವೃತ್ತ ಐಎಎಸ್ ಅಧಿಕಾರಿ ಹಾಗು ಸಮಸ್ತ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರು. ಜಾಮದಾರ್ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಲಿಂಗಾಯತ ಪಂಚಮಸಾಲಿ ಮನೆತನದಲ್ಲಿ ಹುಟ್ಟಿದರು. ತಮ್ಮ ಸ್ನಾತಕೋತ್ತರ ಪದವಿಯ ನಂತರ ಕೆಲ ದಿನ ಉಪನ್ಯಾಸಕರಾಗಿ ಕಾರ್ಯ ಮಾಡಿ, ಆನಂತರ ಅಮೆರಿಕದಲ್ಲಿ ಅಪರಾಧ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಭಾರತೀಯ ಆಡಳಿತ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಡಳಿತ ಸೇವೆ ಆರಂಭಿಸಿ ಕರ್ನಾಟಕ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾಗಿ ಇವರು ಮಾಡಿದ ಕಾರ್ಯ ಮತ್ತು ಕಠಿಣ ಆಡಳಿತಕ್ಕೆ ವಿಶ್ವ ಬ್ಯಾಂಕ್ ಕೂಡ ಮೆಚ್ಚುಗೆ ಸೂಚಿಸಿದೆ. ಲಿಂಗಾಯತರ ಶ್ರದ್ಧಾಕೇಂದ್ರ ಕೂಡಲಸಂಗಮ ಕ್ಷೇತ್ರವನ್ನು ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬಸವನಬಾಗೇವಾಡಿಯ ಬಸವ ಜನ್ಮಸ್ಮಾರಕ, ಬಸವಕಲ್ಯಾಣದ ಎಲ್ಲಾ ಶರಣ ಸ್ಮಾರಕಗಳು ರೂಪಿಸುವಲ್ಲಿ ಇವರ ಕೊಡುಗೆ ಅನನ್ಯ. ಸರ್ಕಾರಿ ಸೇವೆಯಲ್ಲಿರುವಾಗ ಯಾವ ರಾಜಕಾರಣಿಗಳ ಒತ್ತಡಕ್ಕೆ ಮಣಿಯದಿರುವುದು ಇವರ ವಿಶೇಷತೆ. ತಮ್ಮ ಸೇವಾ ನಿವೃತ್ತಿಯ ನಂತರ ಲಿಂಗಾಯತ ಧರ್ಮಕ್ಕೆ ಸೇರಿದ ಇತರ ಐಎಎಸ್, ಐಪಿಎಸ್ ಅಧಿಕಾರಿಗಳಂತೆ ವರ್ಷಕ್ಕೊಂದು ರಾಜಕೀಯ ಪಕ್ಷಗಳನ್ನು ಬದಲಾಯಿಸುತ್ತಾ, ರಾಜಕಾರಣಿಗಳ ಭಟ್ಟಂಗಿಯಾಗಿ ರಾಜಕೀಯ ಸ್ಥಾನಮಾನಗಳಿಗೆ ಬಲಿಯಾಗಲಿಲ್ಲ.
೧೫೦ ವರ್ಷಗಳಷ್ಟು ಹಳೆಯದಾದ ಲಿಂಗಾಯತ ಧರ್ಮಕ್ಕೆ ಸಾಂವಿಧಾನ ಮಾನ್ಯತೆಯ ಹೋರಾಟ ೨೦೧೭ ರಲ್ಲಿ ಮತ್ತೆ ಆರಂಭವಾದಾಗ ಆ ಐತಿಹಾಸಿಕ ಹೋರಾಟದ ಪ್ರಮುಖ ರೂವಾರಿಗಳಲ್ಲಿ ಡಾ ಜಾಮದಾರ್ ಪ್ರಮುಖವಾಗಿ ಗುರುತಿಸಿಕೊಂಡರು. ಶತಮಾನಗಳಷ್ಟು ಹಳೆಯ ಸಂಸ್ಥೆಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಪಡೆಯುವಲ್ಲಿ ನಿರಾಸಕ್ತಿ ತೋರಿದ್ದಲ್ಲದೆ ಧರ್ಮ ಮಾನ್ಯನೆಯನ್ನು ಕೊನೆಯ ಹಂತದಲ್ಲಿ ಪ್ರಬಲವಾಗಿ ವಿರೋಧಿಸಿದಾಗ ಅದರಿಂದ ಬೇಸತ್ತು, ಅದಕ್ಕೆ ಸಮರ್ಥ ಪರ್ಯಾಯವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಎಂಬ ಹೊಸ ಪ್ರಾತಿನಿಧಿಕ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಅದರ ಸಂಸ್ಥಾಪಕ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಅನೇಕ ಅಪರೂಪದ ದಾಖಲೆಗಳನ್ನು ಕಾನೂನಾತ್ಮಕ ದೃಷ್ಟಿಕೋನದಲ್ಲಿ ಸಂಗ್ರಹಿಸಿದ್ದಾರೆ ಹಾಗು ಅದರ ಕುರಿತು ಅನೇಕ ಚಿಂತನಶೀಲ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ. ಲಿಂಗಾಯತ ಧರ್ಮವನ್ನು ವಿರೋಧಿಸುವ ವೈದಿಕರು ಮತ್ತವರ ಸಾಂಸ್ಕೃತಿಕ, ಹಾಗು ರಾಜಕೀಯ ವೇದಿಕೆ, ವೀರಶೈವ ಪಂಚಪೀಠಗಳು ಮತ್ತು ಇತರ ಪಟ್ಟಭದ್ರ ಶಕ್ತಿಗಳು ಒಡ್ಡುವ ಪ್ರತಿಯೊಂದು ತೊಡಕು ಹಾಗು ಸವಾಲುಗಳನ್ನು ಮುಂಚಿತವಾಗಿಯೇ ಊಹಿಸಿ ಅವಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಮತ್ತು ಪರಿಹಾರ ಕಂಡುಕೊಳ್ಳುವಲ್ಲಿ ಡಾ. ಜಾಮದಾರ ನಿಪುಣರು. ಡಾ ಕಲಬುರಗಿಯವರು ತಮ್ಮ ಸಂಶೋಧನೆಯ ಮೂಲಕ ಹೇಗೆ ವೀರಶೈವ ಹಾಗು ವೈದಿಕ ದುಷ್ಟ ಶಕ್ತಿಗಳ ನಿದ್ರಾಭಂಗ ಮಾಡಿದ್ದರೊ ಅದೇ ಮಾದರಿಯಲ್ಲಿ ಡಾ ಜಾಮದಾರ ಕೂಡ ಈ ಪಟ್ಟಭದ್ರ ಶಕ್ತಿಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ.
ಡಾ. ಶಿವಾನಂದ ಜಾಮದಾರ ಅವರು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಅದರ ಇತಿಹಾಸದ ಕುರಿತು ಸಾರ್ವಜನಿಕವಾಗಿ ಧ್ವನಿಯೆತ್ತುವ ಮೂಲಕ ಪ್ರಮುಖ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಲಿಂಗಾಯತ ಧರ್ಮ ಹಾಗೂ ಶರಣರ ತತ್ವಗಳ ಕುರಿತು ನಿರಂತರವಾಗಿ ಸಂವಾದ, ಮಾಧ್ಯಮಗಳಿಗೆ ಸಂದರ್ಶನ ನೀಡುವಿಕೆ ಮತ್ತು ಉಪನ್ಯಾಸಗಳನ್ನು ನಡೆಸುತ್ತಿರುತ್ತಾರೆ. ಇತ್ತೀಚೆಗೆ ಆರ್‌ಎಸ್‌ಎಸ್ ಮತ್ತು ಇತರ ಸಂಘಟನೆಗಳು ಲಿಂಗಾಯತ ಸಿದ್ಧಾಂತವನ್ನು ಬಲವಾಗಿ ವಿರೋಧಿಸುವ ಮತ್ತು ತಿರುಚುವ ಕುಕೃತ್ಯಗಳಲ್ಲಿ ತೊಡಗಿರುವುದನ್ನು ವಿರೋಧಿಸಿ, ಲಿಂಗಾಯತ ಧರ್ಮದ ಇತಿಹಾಸವನ್ನು ವೈದಿಕತೆಯಿಂದ ಪ್ರತ್ಯೇಕವಾಗಿ ಪ್ರತಿಪಾದಿಸುವ ವಿಚಾರಗಳ ಮೂಲಕ ಅವರು ಚರ್ಚೆಯಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲಿ ಯಾರೊಂದಿಗೂ ರಾಜಿಯಾಗದೆ ತಾವು ನಂಬಿದ ಸಿದ್ಧಾಂತಗಳನ್ನು ಧೈರ್ಯವಾಗಿ ಪ್ರತಿಪಾದಿಸುತ್ತಾರೆ. ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಾನಮಾನ, ಅಥನಾ ಹುದ್ದೆಗಳಿಗೆ ಮಹತ್ವ ಕೊಡದೆ, ಎಲ್ಲಾ ಬಗೆಯ ಸರ್ಕಾರಿ ಹುದ್ದೆ, ವಿವಿಧ ಸಮಿತಿಗಳ ಹುದ್ದೆ, ಮತ್ತು ಪ್ರಶಸ್ತಿಗಳನ್ನು ಸ್ವಯಂ ನಿರಾಕರಿಸುವ ನಿರ್ಧಾರದೊಂದಿಗೆ ಲಿಂಗಾಯತ ಧರ್ಮದ ಅಸ್ಮಿತೆಯ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ೨೦೧೭-೧೮ ರ ಲಿಂಗಾಯತ ಚಳುವಳಿಯ ಸಂದರ್ಭದಲ್ಲಿ ಮೋದಿ ಸರ್ಕಾರ ಜಾಮದಾರ್ ಅವರನ್ನು ಕೇಂದ್ರ ಮಟ್ಟದ ಒಂದು ಸಂಸ್ಥೆಯ ಉನ್ನತ ಹುದ್ದೆಯ ಆಮೀಷ ಒಡ್ಡಿದಾಗ ಅದನ್ನು ಯಾವ ಮುಲಾಜಿಲ್ಲದೆ ನಿರಾಕರಿಸಿದ್ದರು.
ಇದನ್ನೂ ಓದಿ ಬಸವವಾದಿಗಳನ್ನು ತಾಲಿಬಾನಿಗಳಿಗೆ ಹೋಲಿಸಿದ ಹಿಂದುತ್ವ ಪ್ರೇರಿತ ʼಅಸಲಿ ತಾಲಿಬಾನಿʼಗಳು
ನಿವೃತ್ತಿಯ ನಂತರದ ತಮ್ಮ ಪಿಂಚಣಿ, ಕೌಟುಂಬಿಕ ಗಳಿಕೆ, ಪೂರ್ವಜರ ಆಸ್ತಿ, ಸ್ವಯಾರ್ಜಿತ ಆಸ್ತಿ ಎಲ್ಲವನ್ನು ಇಟ್ಟುಕೊಂಡು ಆರಾಮವಾಗಿ ಇರಬಹುದಾಗಿದ್ದರೂ, ತಮ್ಮ ಸ್ವಚ್ಛ ಮತ್ತು ದಕ್ಷ ಇಮೇಜ್ ಬಲದಿಂದ ಯಾವುದಾದರೂ ರಾಜಕೀಯ ಸ್ಥಾನ ಮಾನ ಹೊಂದಬಹುದಾಗಿದ್ದರೂ, ಅದೆಲ್ಲವನ್ನು ದೂರವಿರಿಸಿ ಲಿಂಗಾಯತ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಯಾವ ಆಶೆ ಆಮೀಷಗಳಿಲ್ಲದೆ ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಲಿಂಗಾಯತ ಧರ್ಮಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸರ್ ಕಂಬಳಿ ಸಿದ್ಧಪ್ಪನವರು ಮತ್ತು ಅರಟಾಳ್ ರುದ್ರಗೌಡರು ಮಾಡಿದ ಕಾರ್ಯಗಳಿಗೆ ಸರಿಸಮನಾದ ಕಾರ್ಯಗಳನ್ನು ಡಾ. ಜಾಮದಾರ ಮಾಡಿದ್ದಾರೆ. ಲಿಂಗಾಯತ ಧರ್ಮವು ಹೇಗೆ ಅವೈದಿಕ ಮತ್ತು ಸ್ವತಂತ್ರ ಧರ್ಮ ಎಂದು ನಿರೂಪಿಸಲು ಸಾವಿರಾರು ಅಪರೂಪದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಡಾ. ಜಾಮದಾರ್ ಅವರ ಈ ಅನುಪಮ ಕಾರ್ಯದಿಂದ ಹತಾಶೆಗೊಂಡ ವೈದಿಕ ಹಾಗು ವೀರಶೈವ ದುಷ್ಟ ಶಕ್ತಿಗಳು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ರಾಜಕೀಯ ಪಕ್ಷವೊಂದಕ್ಕೆ ಮಾರಿಕೊಂಡ ಅಜ್ಞಾನಿ ಹಾಗು ಗುಲಾಮ ಕಾವಿಧಾರಿಗಳು ಮತ್ತು ಒಂದಿಬ್ಬರು ಅನಾಗರಿಕ ಲಿಂಗಾಯತ ರಾಜಕೀಯ ಪುಡಾರಿಗಳು ಡಾ ಜಾಮದಾರ್ ಅವರನ್ನು ಅನಾಗರಿಕ ಭಾಷೆಯಲ್ಲಿ ನಿಂದಿಸಿದ್ದಾರೆ. ಇದು ವೈದಿಕ ಮತ್ತು ವೀರಶೈವ ದುಷ್ಟ ಶಕ್ತಿಗಳ ಹತಾಶೆಯ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಆದರೆ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ತಡೆಯುವುದಾಗಲಿ, ಲಿಂಗಾಯತ ಜಾಗೃತಿ ಅಭಿಯಾನ ತಡೆಯುವುದಾಗಲಿ, ಬಸವ ತತ್ವ ತಿರುಚಿ ಅದಕ್ಕೆ ಜನಿವಾರ ತೊಡಿಸುವುದಾಗಲಿ ಈಗ ಅಷ್ಟು ಸುಲಭದ ಕಾರ್ಯವಲ್ಲ ಎನ್ನುವುದನ್ನು ಈ ದುಷ್ಟ ಶಕ್ತಿಗಳು ಅರಿತುಕೊಳ್ಳಬೇಕಾಗಿದೆ.
ಮುಂದುವರೆಯುವುದು..

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ



