ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ಪಂದ್ಯಗಳಲ್ಲಿ ಅವರ ಆಡುವ ಕುರಿತಂತೆ ದೈನಂದಿನ ಆಧಾರದ ಮೇಲೆ ತಪಾಸಣೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ 2026ನೇ ಆವೃತ್ತಿಯಲ್ಲಿ ಸತತ ಎರಡನೇ ಪಂದ್ಯಕ್ಕೂ ಹಾರ್ದಿಕ್ ಗೈರಾಗಿದ್ದರಿಂದ ಅಭಿಮಾನಿಗಳಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಜಯವರ್ಧನೆ ಈ ಮೂಲಕ ಉತ್ತರಿಸಿದ್ದಾರೆ.
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡ 2 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತ್ತು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಜಯವರ್ಧನೆ ಮಾತನಾಡಿದರು.
“ಹಾರ್ದಿಕ್ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದನ್ನು ಸರಿಪಡಿಸಲು ವೈದ್ಯಕೀಯ ತಂಡ ಶ್ರಮಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಅವರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ. ಪರಿಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ಅವರನ್ನು ಕಣಕ್ಕಿಳಿಸಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ನಾವು ಬಯಸಲಿಲ್ಲ. ಅವರು ದಿನೇದಿನೇ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ, ತದನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದು ವಿವರಿಸಿದರು. ಹಾರ್ದಿಕ್ ಅವರ ಗೈರಿನಲ್ಲಿ ಸೂರ್ಯಕುಮಾರ್ ಯಾದವ್ ಸತತ ಎರಡನೇ ಬಾರಿಗೆ ತಂಡವನ್ನು ಮುನ್ನಡೆಸಿದ್ದರು.
ಇದನ್ನು ಓದಿದ್ದೀರಾ? IPL ಆಟಗಾರರಿಗೆ ‘ಹನಿ ಟ್ರ್ಯಾಪ್’ ಭೀತಿ: ಬಿಸಿಸಿಐನಿಂದ ಹೈಅಲರ್ಟ್, ಮಾಲೀಕರಿಗೂ ಎಚ್ಚರಿಕೆ
ಈ ಬಾರಿಯ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಲಖನೌ ಸೂಪರ್ ಜೈಂಟ್ಸ್ ನಂತರ ಟೂರ್ನಿಯಿಂದ ನಿರ್ಗಮಿಸಿದ ಎರಡನೇ ತಂಡ ಎಂಬ ಬೇಸರದ ದಾಖಲೆ ಐದು ಬಾರಿಯ ಚಾಂಪಿಯನ್ ಮುಂಬೈ ಪಾಲಾಗಿದೆ. ಇದುವರೆಗೆ ಒಟ್ಟು 11 ಪಂದ್ಯಗಳನ್ನು ಆಡಿರುವ ತಂಡ, ಕೇವಲ 3 ಪಂದ್ಯಗಳಲ್ಲಿ ಮಾತ್ರ ಜಯಶಾಲಿಯಾಗಿದ್ದು, ಬರೋಬ್ಬರಿ 8 ಪಂದ್ಯಗಳಲ್ಲಿ ಸೋಲನುಭವಿಸಿದೆ.
ತಂಡದ ಒಟ್ಟಾರೆ ನಿರಾಶಾದಾಯಕ ಪ್ರದರ್ಶನದ ಕುರಿತು ಪ್ರತಿಕ್ರಿಯಿಸಿದ ಜಯವರ್ಧನೆ, “ಈ ಋತು ತೀವ್ರ ನಿರಾಸೆ ಮೂಡಿಸಿದೆ. ನಮಗೆ ಸಿಕ್ಕ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದೆವು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ನಮ್ಮ ಪ್ರದರ್ಶನದಲ್ಲಿ ನಿರಂತರತೆ ಇರಲಿಲ್ಲ. ಪ್ಲೇ-ಆಫ್ ತಲುಪುವ ಸ್ಪರ್ಧೆಯಲ್ಲಿ ಉಳಿಯಲು ನಮಗೆ ಕೇವಲ ಎರಡು ಅಥವಾ ಮೂರು ಗೆಲುವುಗಳ ಅಗತ್ಯವಿತ್ತು. ಆದರೆ ಆ ಗೆಲುವುಗಳನ್ನು ಸಾಧಿಸುವಲ್ಲಿ ನಾವು ಎಡವಿದೆವು” ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.




